ದುಬೈಯಲ್ಲಿ ಕೃತಕ ಮಳೆ ಸುರಿಸಲಾಯಿತೇ ?

Update: 2016-06-27 07:30 GMT

ಅಬುದಾಭಿ, ಜೂ.27: ಸಂಯುಕ್ತ ಅರಬ್ ಸಂಸ್ಥಾನದ ಹಲವು ಕಡೆ ಈ ವರ್ಷ ಮೋಡದ ಬಿತ್ತನೆ (ಕ್ಲೌಡ್ ಸೀಡಿಂಗ್) ಮೂಲಕ ಮಳೆ ಸುರಿಸಲಾಯಿತೇ ? ಅದು ಕೃತಕ ಮಳೆಯೇ ಎಂಬ ವಿಷಯದಲ್ಲಿ ನಾಗರಿಕರಿಗೆ ಹಲವು ಗೊಂದಲಗಳಿವೆ.

ಸಂಸ್ಥಾನದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಮೀಟರಾಲಜಿ ಎಂಡ್ ಸೀಸ್ಮಾಲಜಿ ಬೇಸಿಗೆಯ ಸಮಯದಲ್ಲಿ ಈ ವಿಧಾನವನ್ನು ವಾರಕ್ಕೆ ಕನಿಷ್ಠ ನಾಲ್ಕು ದಿನಗಳಲ್ಲಿ ಅನುಸರಿಸುತ್ತದೆ. ಆದರೆ ಚಳಿಗಾಲದಲ್ಲಿ ಈ ವಿಧಾನವನ್ನು ಅಷ್ಟೊಂದು ದಿನಗಳ ಕಾಲ ಅನುಸರಿಸಲಾಗುವುದಿಲ್ಲ.

ಈ ಕೇಂದ್ರ ಮೂಲಕ ಸಂಯುಕ್ತ ಅರಬ್ ಸಂಸ್ಥಾನ 1990 ರ ಕೊನೆಯ ಭಾಗದಲ್ಲಿ ಮೋಡಗಳ ಬಿತ್ತನೆ ಕಾರ್ಯ ಆರಂಭಿಸಿತ್ತು. ‘‘ಕೆಲವು ಮಂದಿ ನಾವು ಕೃತಕ ಮಳೆ ಸೃಷ್ಟಿಸುತ್ತಿದ್ದೇವೆಂದು ತಿಳಿಯುತ್ತಾರೆ. ಆದರೆ ಅದು ಸಾಧ್ಯವಿಲ್ಲ. ನಾವು ಕೇವಲ ಮೋಡಗಳಿಗೆ ಮಳೆ ತರಿಸಲು ಸಹಾಯ ಮಾಡುತ್ತೇವಷ್ಟೇ,’’ ಎಂದು ಕೇಂದ್ರದ ಮಳೆ ಹೆಚ್ಚಿಸುವಿಕೆ ಕಾರ್ಯಕ್ರಮದ ನಿರ್ದೇಶಕ ಅಲ್ಯ ಅಲ್ ಮಝ್ರಿವಿ ಹೇಳುತ್ತಾರೆ.

ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಡೆಸಿದ ಹಲವು ಒಪ್ಪಂದಗಳ ತರುವಾಯ ಈ ಪ್ರಕ್ರಿಯೆ 2001ರಿಂದ ನಿಯಮಿತವಾಯಿತು. ಕೇಂದ್ರವು ದೇಶದಾದ್ಯಂತ 90ಕ್ಕೂ ಸ್ವಯಂಚಾಲಿತ ಹವಾಮಾನ ಸ್ಟೇಶನ್‌ಗಳನ್ನು ಸ್ಥಾಪಿಸಿದೆ. ಮೋಡಗಳ ಬಿತ್ತನೆಯನ್ನು ಯಾವಾಗ ನಡೆಸಬಹುದೆಂಬ ನಿಖರ ಮಾಹಿತಿಯನ್ನು ಈ ಸ್ಟೇಶನ್‌ಗಳು ಒದಗಿಸುತ್ತವೆ. ಇವುಗಳ ಹೊರತಾಗಿ ಐದು ಸ್ಟೇಷನರಿ ವೆದರ್ ರಾಡಾರ್ ಹಾಗೂ ಒಂದು ಮೊಬೈಲ್ ರಾಡಾರ್ ಕೂಡ ಕಾರ್ಯಾಚರಿಸುತ್ತಿದ್ದು ಇವುಗಳು ಮಳೆ ತರಿಸುವ ಮೋಡಗಳನ್ನು ಗುರುತಿಸುತ್ತವೆ.

ಇಂತಹ ಮೋಡಗಳು ಗೋಚರಿಸಿದ ಕೂಡಲೇ ಕೇಂದ್ರದಲ್ಲಿರುವ ಆರು ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ವಿಮಾನಗಳಲ್ಲಿ ಒಂದು ವಿಮಾನವನ್ನು ಆಗಸಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ವಿಮಾನದ ಪೈಲಟ್ ಉಪ್ಪಿನಿಂದ ಕೂಡಿದ ಜ್ವಾಲೆಗಳನ್ನು ಮೋಡಗಳಲ್ಲಿ ಬಿಡುಗಡೆಗೊಳಿಸುತ್ತಾರೆ. ಇದರ ಪರಿಣಾಮ ಆ ಪ್ರದೇಶದಲ್ಲಿ ಮಳೆಯಾಗುತ್ತದೆ. ‘‘ನಾವು ಯಾವುದೇ ರಾಸಾಯನಿಕ ಉಪಯೋಗಿಸುವುದಿಲ್ಲ, ಕೇವಲ ಉಪ್ಪುಬಳಸುತ್ತಿರುವುದರಿಂದ ಈ ಪ್ರಕ್ರಿಯೆಯಿಂದ ಏನೂ ಹಾನಿಯಿಲ್ಲ,’’ಎಂದು ಅಲ್ ಮಖ್ರೌಝಿ ವಿವರಿಸುತ್ತಾರೆ.

ಈ ವಿಧಾನದಿಂದ ದೇಶದಲ್ಲಿ ಸುರಿಯುವ ಮಳೆಯ ಧೂಳಿನ ವಾತಾವರಣವಿರುವ ಪ್ರದೇಶಗಳಲ್ಲಿ ಪ್ರಮಾಣ 10 ರಿಂದ 15 ಶೇ. ಹೆಚ್ಚಾಗಿದ್ದರೆ ಇತರ ಕಡೆಗಳಲ್ಲಿ 30 ರಿಂದ 35 ಶೇ. ಹೆಚ್ಚಾಗಿದೆ.

ಕಳೆದ ಚಳಿಗಾಲದಲ್ಲಿ ಅಬುಧಾಬಿಯಲ್ಲಿ ಸಾಕಷ್ಟು ಮಳೆಯಾದಾಗ ಇದು ಕೃತಕ ಮಳೆಯೇ ಎಂದು ಹಲವರು ಪ್ರಶ್ನಿಸಿದ್ದರು. ಆದರೆ ಹೆಚ್ಚಿನ ಮಳೆ ಯಾವುದೇ ಸಹಾಯವಿಲ್ಲದೆ ಸುರಿದಿದ್ದರೂ ಹವಾಮಾನ ಪರಿಸ್ಥಿತಿ ಮೋಡಗಳ ಬಿತ್ತನೆಗೆ ಸಹಕಾರಿಯಾಗಿತ್ತು ಎಂದು ಕೇಂದ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News