ಯಡಿಯೂರಪ್ಪರದು ಏಕ ಪಕ್ಷೀಯ ನಿರ್ಧಾರ: ಈಶ್ವರಪ್ಪ ಆರೋಪ
ಬೆಂಗಳೂರು, ಜು.1: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೋರ್ ಕಮಿಟಿಯ ಜೊತೆ ಚರ್ಚಿಸದೆ ಪದಾಧಿಕಾರಿಗಳನ್ನು ಏಕಪಕ್ಷೀಯವಾಗಿ ನೇಮಕ ಮಾಡಿರುವುದು ಸರಿಯಲ್ಲ. ಇದರಿಂದ ಪಕ್ಷದ ಶಿಸ್ತು ಹಾಗೂ ಸಂಘಟನೆಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಕ್ಷದ ಯಾರ ಮೇಲೂ ವೈಯಕ್ತಿಕ ದ್ವೇಷವೂ ಇಲ್ಲ, ಪ್ರೀತಿಯೂ ಇಲ್ಲ. ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಕೆಲವೊಮ್ಮೆ ಕಠಿಣವಾಗಿ ಮಾತನಾಡಬೇಕಾಗುತ್ತದೆ. ಯಡಿಯೂರಪ್ಪರ ನಿರ್ಧಾರಗಳ ಕುರಿತು ಪಕ್ಷದ ಹಿರಿಯ ಮುಖಂಡರ ಜೊತೆ ಮಾತನಾಡುತ್ತೇನೆ. ಇದನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ ಎಂದು ಸಮಜಾಯಿಷಿ ನೀಡಿದರು.
ಈಶ್ವರಪ್ಪ ಗೈರು: ಬಿ.ಎಸ್.ಯಡಿಯುರಪ್ಪ ನೇತೃತ್ವದಲ್ಲಿೆ ಬಿಜೆಪಿ ಪದಾಧಿಕಾರಿಗಳು, ಶಾಸಕರು, ಸಂಸದರನ್ನು ಒಳಗೊಂಡ ಸಭೆ ನಾಳೆ ನಡೆಯಲಿದೆ. ಆದರೆ, ಈ ಸಭೆಗೆ ಈಶ್ವರಪ್ಪ ಗೈರು ಹಾಜರಾಗಲಿದ್ದು, ಆ ಮೂಲಕ ಬಂಡಾಯದ ಬಿಸಿಯನ್ನು ಕೇಂದ್ರದ ಬಿಜೆಪಿ ನಾಯಕರಿಗೆ ಮುಟ್ಟಿಸಲಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಅಕ್ರಮ ಮರಳು ಕಳ್ಳ ಸಾಗಾಣಿಕೆ ನಡೆದಿರುವುದು ನಿಜವಾಗಿದೆ. ಇದರ ನೇತೃತ್ವವನ್ನು ಮಾಜಿ ಸಚಿವ ಎಚ್.ಸಿ.ಮಹದೇವಪ್ಪರವರ ಮಗನೆಂದು ಜಗಜ್ಜಾಹೀರಾಗಿದೆ. ಆದರೆ, ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಸಚಿವ ಮಹದೇವಪ್ಪ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಮರಳು ಗಣಿಗಾರಿಕೆಯನ್ನು ತಡೆಯಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ. ಹೀಗಾಗಿ ಮರಳು ದಂಧೆಕೋರರಿಗೆ ರಾಜಕೀಯ ಬೆಂಬಲವಿರುವುದು ವಾಸ್ತವವಾಗಿದೆ ಎಂದು ಅವರು ಆರೋಪಿಸಿದರು.