ಯುರೋ ಕಪ್: ಪೋರ್ಚುಗಲ್ ಫೈನಲ್‌ಗೆ

Update: 2016-07-07 04:43 GMT

 ಲಿಯಾನ್(ಫ್ರಾನ್ಸ್), ಜು.7: ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನಾನಿ ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಪೋರ್ಚುಗಲ್ ತಂಡ ಯುರೋ ಕಪ್‌ನಲ್ಲಿ ವೇಲ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬುಧವಾರ ತಡರಾತ್ರಿ ಇಲ್ಲಿ ನಡೆದ ಸೆಮಿಫೈನಲ್‌ನ 50ನೆ ನಿಮಷದಲ್ಲಿ ಹೆಡರ್‌ನ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಯಶಸ್ವಿಯಾದ ರೊನಾಲ್ಡೊ ಪೋರ್ಚುಗೀಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಟೂರ್ನಿಯಲ್ಲಿ ತನ್ನ ಸಾಮರ್ಥ್ಯದಷ್ಟು ಆಡದೇ ಟೀಕೆಗೆ ಗುರಿಯಾಗಿದ್ದ ರೊನಾಲ್ಡೊ ಕೊನೆಗೂ ಪ್ರಮುಖ ಪಂದ್ಯದಲ್ಲಿ ಮಿಂಚಿದರು.

  ಮೂರು ನಿಮಿಷದ ಬಳಿಕ ನಾನಿ(53ನೆ ನಿಮಿಷ) ಪೋರ್ಚುಗಲ್‌ನ ಮುನ್ನಡೆಯನ್ನು 2-0ಗೆ ಏರಿಸಿದರು. ಈ ಮೂಲಕ 1958ರ ಬಳಿಕ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಫೈನಲ್‌ಗೆ ತಲುಪಬೇಕೆಂಬ ವೇಲ್ಸ್ ತಂಡದ ಕನಸು ಭಗ್ನವಾಯಿತು.

ಪೋರ್ಚುಗಲ್ ತಂಡ 2004ರಲ್ಲಿ ತವರು ನೆಲದಲ್ಲಿ ಯುರೋ ಕಪ್ ಫೈನಲ್‌ನಲ್ಲಿ ಗ್ರೀಸ್ ವಿರುದ್ಧ ಸೋತ ಬಳಿಕ ಇದೇ ಮೊದಲ ಬಾರಿ ಫೈನಲ್‌ಗೆ ತಲುಪಿದೆ. ಪೋರ್ಚುಗಲ್ ಪ್ರಸ್ತುತ ಟೂರ್ನಿಯಲ್ಲಿ ಇದೇ ಮೊದಲ ಬಾರಿ ನಿಗದಿತ 90 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ.

ಗುರುವಾರ ತಡರಾತ್ರಿ ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಸೆಣಸಲಿರುವ ಆತಿಥೇಯ ಫ್ರಾನ್ಸ್ ಅಥವಾ ಜರ್ಮನಿ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ.

ಹೈಲೈಟ್ಸ್

*ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್‌ನಲ್ಲಿ ಮೂರು ಸೆಮಿಫೈನಲ್‌ಗಳನ್ನು(2004, 2012, 2016) ಆಡಿದ ಮೊದಲ ಆಟಗಾರ.

*ರೊನಾಲ್ಡೊ ಯುರೋ ಚಾಂಪಿಯನ್‌ಷಿಪ್‌ನಲ್ಲಿ 20 ಪಂದ್ಯಗಳನ್ನು ಆಡಿದ್ದಾರೆ.

*ರೊನಾಲ್ಡೊ 50ನೆ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಯುರೋ ಕಪ್‌ನಲ್ಲಿ 9 ಗೋಲು ಬಾರಿಸಿದ್ದ ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದರು.

*ಪೋರ್ಚುಗಲ್ ಪ್ರಮುಖ ಟೂರ್ನಿಗಳಲ್ಲಿ ಏಳನೆ ಬಾರಿ ಸೆಮಿಫೈನಲ್‌ನಲ್ಲಿ ಆಡಿದ್ದು, ಎರಡನೆ ಗೆಲುವು ಇದಾಗಿದೆ. ವಿದೇಶಿ ನೆಲದಲ್ಲಿ ಚೊಚ್ಚಲ ಗೆಲುವು.

*ಪೋರ್ಚುಗಲ್ 2016ರ ಯುರೋ ಕಪ್‌ನಲ್ಲಿ ನಿಗದಿತ ಸಮಯದಲ್ಲಿ (90 ನಿಮಿಷ) ಮೊದಲ ಬಾರಿ ಗೆಲುವು ಸಾಧಿಸಿತು.

*ವೇಲ್ಸ್ ತಂಡ ಕಳೆದ 6 ಪಂದ್ಯಗಳಲಿ ಮೊದಲ ಬಾರಿ ಗೋಲು ಬಾರಿಸಲು ವಿಫಲವಾಯಿತು.

*2015ರ ಬಳಿಕ ವೇಲ್ಸ್ ತಂಡ ಆ್ಯರೊನ್ ರಾಮ್ಸೆ ಅನುಪಸ್ಥಿತಿಯಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News