ಬುರ್ಹಾನ್ ವಾನಿಯನ್ನು ಚೆ ಗುವೇರಾಗೆ ಹೋಲಿಸಿದ ಉಮರ್ ಖಾಲಿದ್

Update: 2016-07-11 08:54 GMT

ಹೊಸದಿಲ್ಲಿ, ಜು.11: ಇತ್ತೀಚೆಗೆ ಭದ್ರತಾ ಪಡೆಗಳಿಂದ ಹತನಾದ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಕ್ರಾಂತಿಕಾರಿಯೊಬ್ಬರಿಗೆ ಹೋಲಿಸಿ ದೇಶದ್ರೋಹದ ಆರೋಪದ ಮೇಲೆ ಈ ಹಿಂದೆ ಬಂಧಿತನಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

‘‘ನನ್ನ ಬಂದೂಕನ್ನು ಎತ್ತಿಕೊಂಡು ಗುಂಡು ಹೊಡೆಯುವವರು ಇರುವ ತನಕ ನಾನು ಬಿದ್ದರೂ ನನಗೆ ಚಿಂತೆಯಿಲ್ಲ. ಇದು ಚೆ ಗುವೇರಾ ಅವರ ಮಾತುಗಳು ಹಾಗೂ ಇದು ಬುರ್ಹಾನ್ ವಾನಿಯದ್ದೂ ಆಗಿರಬಹುದು’’ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಉಮರ್ ಪೋಸ್ಟ್ ಮಾಡಿದ್ದರೂ ಕೆಲವು ಗಂಟೆಗಳ ನಂತರ ಅವರು ಈ ಪೋಸ್ಟ್‌ನ್ನು ಡಿಲಿಟ್ ಮಾಡಿದ್ದಾರೆ.

ವಾನಿಯ ಶೌರ್ಯವನ್ನು ಶ್ಲಾಘಿಸಿದ ಉಮರ್ ‘‘ಬುರ್ಹಾನ್‌ಗೆ ಸಾವಿನ ಬಗ್ಗೆ ಭಯವಿರಲಿಲ್ಲ, ಗುಲಾಮಗಿರಿಯ ಬದುಕಿನ ಬಗ್ಗೆ ಆತನಿಗೆ ಭಯವಿತ್ತು. ಆತ ಅದಕ್ಕೆ ವಿರುದ್ಧವಾಗಿದ್ದ,ಆತ ಸ್ವತಂತ್ರ ಮನುಷ್ಯನಾಗಿ ಜೀವಿಸಬಯಸಿದ್ದ, ಆತ ಸ್ವತಂತ್ರ ಮನುಷ್ಯನಾಗಿಯೇ ಸಾವಿಗೀಡಾದ...’’ ಎಂದು ತಮ್ಮ ಪೋಸ್ಟ್ ನಲ್ಲಿ ಉಮರ್ ಬರೆದಿದ್ದರು.

ಉಮರ್‌ನ ಈ ಫೇಸ್ಬುಕ್ ಪೋಸ್ಟ್ ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಕ್ರೋಶ ವ್ಯಕ್ತಪಡಿಸಿದೆ. ‘‘ಈ ಹಿಂದೆ ಜೆಎನ್ ಯು ಕಾರ್ಯಕ್ರಮದಲ್ಲಿ ಅಫ್ಝಲ್ ಗುರುವನ್ನು ಬೆಂಬಲಿಸಿದ್ದ ಉಮರ್ ಖಾಲಿದ್ ಈಗ ಬುರ್ಹಾನ್ ಬಗ್ಗೆ ಕನಿಕರ ತೋರಿಸಿದ್ದಾರೆ. ಇದು ಆತನಿಗೆ ಉಗ್ರರೊಂದಿಗಿರುವ ಸಂಬಂಧಗಳ ಬಗ್ಗೆ ಹಾಗೂ ಆತ ಅವರನ್ನು ಬೆಂಬಲಿಸುವುದನ್ನು ಸೂಚಿಸುತ್ತದೆ. ಇಂತಹ ದೇಶದ್ರೋಹಿಗಳು ಉಗ್ರರಿಗಿಂತ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಆತನಿಗೆ ನೀಡಲಾದ ಜಾಮೀನನ್ನು ರದ್ದುಪಡಿಸಿ ಆತನಿಗೆ ಉಗ್ರರೊಂದಿಗೆ ಇರಬಹುದಾದ ಸಂಬಂಧಗಳನ್ನು ತನಿಖೆೆ ನಡೆಸಬೇಕೆದು ಜೆಎನ್‌ಯು ವಿದ್ಯಾರ್ಥಿ ಯೂನಿಯನ್‌ನ ಏಕೈಕ ಎಬಿವಿಪಿ ಸದಸ್ಯ ಸೌರಭ್ ಶರ್ಮ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News