ಲಂಕಾದಲ್ಲಿ ‘ಭಾರತವನ್ನು ಸುತ್ತುವರಿಯುವ’ ಯೋಜನೆ

Update: 2016-07-11 14:31 GMT

ಕೊಲಂಬೊ, ಜು. 11: ಚೀನಾವು ತನ್ನ ಮಹತ್ವಾಕಾಂಕ್ಷೆಯ ಸಾಗರ ಸಿಲ್ಕ್ ರಸ್ತೆ ಯೋಜನೆಯನ್ನು ಶ್ರೀಲಂಕಾದ ಅಭಿವೃದ್ಧಿ ಯೋಜನೆಗಳೊಂದಿಗೆ ತಳುಕು ಹಾಕಲಿದೆ. ಶ್ರೀಲಂಕಾವನ್ನು ಹಿಂದೂ ಮಹಾ ಸಾಗರದಲ್ಲಿ ನೌಕಾಯಾನ ಕೇಂದ್ರವನ್ನಾಗಿಸುವುದು ಇದರ ಉದ್ದೇಶವಾಗಿದೆ. ಭಾರತವನ್ನು ಸುತ್ತುವರಿಯಲು ಹಾಗೂ ಇಂಧನ ಸಮೃದ್ಧ ಪರ್ಸಿಯನ್ ಕೊಲ್ಲಿ ಮತ್ತು ಪೂರ್ವ ಚೀನಾದ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುವ ಸಮುದ್ರ ಮಾರ್ಗಗಳ ಉದ್ದಕ್ಕೂ ಇರುವ ಬಂದರುಗಳ ಮೇಲೆ ನಿಯಂತ್ರಣ ಹೊಂದುವ ಮಾರ್ಗ ಎಂಬುದಾಗಿ ಸಿಲ್ಕ್ ರಸ್ತೆಯನ್ನು ಪರಿಗಣಿಸಲಾಗಿದೆ.
‘‘ನಿಮ್ಮ ಐದು ವರ್ಷಗಳ ಅಭಿವೃದ್ಧಿ ಯೋಜನೆ ಸೇರಿದಂತೆ ನಮ್ಮ ಅಭಿವೃದ್ಧಿ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಸಮೀಕರಿಸುವುದಕ್ಕಾಗಿ ಸಾಗರ ಸಿಲ್ಕ್ ರಸ್ತೆ ನಿರ್ಮಾಣವನ್ನು ನಾವು ಆದ್ಯತೆಯಾಗಿ ಪರಿಗಣಿಸಿದ್ದೇವೆ. ಈ ಮೂಲಕ ನಾವು ಭವಿಷ್ಯದ ಸಹಕಾರದ ಸಮಗ್ರ ನೀಲ ನಕಾಶೆಯನ್ನು ರೂಪಿಸಬಹುದು ಹಾಗೂ ಹಿಂದೂ ಮಹಾ ಸಾಗರದಲ್ಲಿ ನೌಕಾಯಾನ ಕೇಂದ್ರವಾಗಿ ಹೊರಹೊಮ್ಮಲು ನಾವು ಶ್ರೀಲಂಕಾಗೆ ಸಹಾಯ ಮಾಡಬಹುದು’’ ಎಂದು ಶ್ರೀಲಂಕಾದ ವಿದೇಶ ಸಚಿವ ಮಂಗಲ ಸಮರವೀರರನ್ನು ಶುಕ್ರವಾರ ಭೇಟಿಯಾದ ಬಳಿಕ ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದರು.
 ಆದಾಗ್ಯೂ, ಶ್ರೀಲಂಕಾದೊಂದಿಗಿನ ಚೀನಾದ ಬಾಂಧವ್ಯ ಇತರ ಯಾವುದೇ ದೇಶವನ್ನು ಗಮನದಲ್ಲಿಟ್ಟುಕೊಂಡು ಹುಟ್ಟಿದ್ದಲ್ಲ ಎಂದು ವಾಂಗ್ ಹೇಳಿಕೊಂಡರು.
‘‘ನಮ್ಮ ಸಹಕಾರ ಇತರ ಯಾವುದೇ ಮೂರನೆ ದೇಶವನ್ನು ಗುರಿಯಾಗಿಸಿಯೂ ಇಲ್ಲ, ಇತರ ದೇಶಗಳೊಂದಿಗಿನ ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುವುದೂ ಇಲ್ಲ ಎಂಬ ಬಗ್ಗೆ ಚೀನಾ ಮತ್ತು ಶ್ರೀಲಂಕಾಗಳ ನಡುವೆ ಒಮ್ಮತವಿದೆ. ಸಮಾನ ಅಭಿವೃದ್ಧಿಯನ್ನು ಸಾಧಿಸುವ ಗುರಿಯೊಂದಿಗೆ ಈ ಪ್ರದೇಶದ ಇತರ ದೇಶಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು ನಾವು ತಯಾರಿದ್ದೇವೆ’’ ಎಂದರು.
150 ಕೋಟಿ ಡಾಲರ್ ಅಂದಾಜು ವೆಚ್ಚದ ಚೀನಾ ನೆರವಿನ ಬಂದರು ನಗರ ಯೋಜನೆಯನ್ನು ಪುನಾರಂಭಿಸಲು ಈ ವರ್ಷದ ಆದಿ ಭಾಗದಲ್ಲಿ ಶ್ರೀಲಂಕಾ ಚೀನಾಕ್ಕೆ ಅನುನೋದನೆ ನೀಡಿತ್ತು. ಯೋಜನೆಯು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ಮಾಡಲಿಕ್ಕಾಗಿ ಒಂದು ವರ್ಷ ಕಾಲ ಅದನ್ನು ನಿಲ್ಲಿಸಲಾಗಿತ್ತು. ಶ್ರೀಲಂಕಾದ ಪಶ್ಚಿಮ ಕರಾವಳಿಯಲ್ಲಿ ತುಂಬಿಸಲಾದ ನೆಲದಲ್ಲಿ ನಗರವನ್ನು ನಿರ್ಮಿಸುವ ಯೋಜನೆ ಅದಾಗಿದೆ. ನಗರದಲ್ಲಿ ಗಾಲ್ಫ್ ಕೋರ್ಸ್, ಮರೀನಾಗಳು (ಬಂದರುಗಳು), ಅಪಾರ್ಟ್‌ಮೆಂಟ್‌ಗಳು, ಹೊಟೇಲ್‌ಗಳು ಮತ್ತು ಮಾಲ್‌ಗಳು ನಗರದಲ್ಲಿ ತಲೆಯೆತ್ತಲಿವೆ.
ಈ ಯೋಜನೆಯು ಭಾರತದ ಕಳವಳಕ್ಕೆ ಕಾರಣವಾಗಿತ್ತು. ಈ ಪ್ರದೇಶದಲ್ಲಿ ಚೀನಾಕ್ಕೆ ಸಾರಾಸಗಟು ಭೂಒಡೆತನ ನೀಡಬಹುದು ಎಂಬುದು ಭಾರತದ ಕಳವಳಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News