ಜೋಪಡಿ ‘ಟವರ್’ಗಳಿಗೆ ಕಡಿವಾಣ, ಪ್ರತೀ ತಿಂಗಳು 6,000 ಮೊಬೈಲ್ ಕಳ್ಳತನ!

Update: 2016-07-11 18:02 GMT

ಮುಂಬೈಯಲ್ಲಿ ಜೋಪಡಿ ಟವರ್‌ಗಳು
ಹೊಟ್ಟೆಪಾಡನ್ನು ಅರಸುತ್ತಾ ಮುಂಬೈಗೆ ಬರುವ ಲಕ್ಷಗಟ್ಟಲೆ ಜನರಲ್ಲಿ ಅನೇಕರು ಜೋಪಡಪಟ್ಟಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಆದರೆ ಈ ಜೋಪಡಪಟ್ಟಿಗಳೂ ಇಲ್ಲಿ ವಾಸಿಸುವವರಿಗೆ ಸಾವಿನ ಭಯವನ್ನು ಸದಾಕಾಲವೂ ಹುಟ್ಟಿಸುತ್ತಿವೆ. ಸಮುದ್ರ ತೀರಗಳಲ್ಲಿ, ಚಿಕ್ಕ ಪುಟ್ಟ ಗುಡ್ಡಗಳಲ್ಲಿ, ಖಾಲಿ ಮೈದಾನಗಳಲ್ಲಿ, ರೈಲ್ವೆ ಹಳಿಗಳ ಪಕ್ಕ ಅನಧಿಕೃತವಾಗಿ ನಿರ್ಮಿಸಿದ ಜೋಪಡಪಟ್ಟಿಗಳಲ್ಲಿನ ಜನ ಸಾವಿನ ದವಡೆಯಲ್ಲೇ ಬದುಕು ಸಾಗಿಸುತ್ತಾ ಬಂದಿದ್ದಾರೆ. ಅದು ಬೆಂಕಿಯ ಘಟನೆಗಳು ಆಗಿರಬಹುದು, ಜೋಪಡಿ ಕುಸಿತ, ಭೂಕುಸಿತ, ನೆರೆ, ವಿದ್ಯುತ್ ಶಾಕ್ ತಗಲುವುದು...... ಇಂತಹ ಘಟನೆಗಳ ಕಾರಣ ಇಲ್ಲಿ ಯಾವಾಗ ಸಾವಿನ ತಾಂಡವ ದೃಶ್ಯ ಕಾಣುವುದು ಎಂದು ಹೇಳಲು ಬರುವುದಿಲ್ಲ. ಇವುಗಳಲ್ಲಿ ಬಾಂದ್ರಾ ಪೂರ್ವದ ಬೆಹರಾಂಪಾಡಾ, ಗರೀಬ್ ನಗರ, ಜೆರಿಮೆರಿ, ಅಸಲ್ಫೆ, ಭಾಂಡುಪ್, ಖಾರ್...... ಈ ರೀತಿ ಕೊಲಬಾದಿಂದ ಮುಲುಂಡ್ ತನಕ ಮತ್ತು ಚರ್ಚ್‌ಗೇಟ್‌ನಿಂದ ದಹಿಸರ್ ತನಕ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸುಮಾರು 24 ಮನಪಾ ವಾರ್ಡ್‌ಗಳಲ್ಲಿ ಜೋಪಡಪಟ್ಟಿಗಳ ಸಂಖ್ಯೆ ವಿಪರೀತವಿದೆ. ಇದೇ ಜೂನ್ 30ರಂದು ಅಂಧೇರಿ ಪಶ್ಚಿಮದ ಜುಹೂ ಗಲ್ಲಿಯಲ್ಲಿನ ಒಂದು ಮನೆ ಬೆಂಕಿಗೆ ಆಹುತಿಯಾಗಿ 9 ಜನರು ಸಾವನ್ನಪ್ಪಿದ್ದಾರೆ. ಕಾಂದಿವಲಿ ಪೂರ್ವದ ದಾಮೂ ನಗರದ ಜೋಪಡಪಟ್ಟಿಯಲ್ಲಿ ಇತ್ತೀಚೆಗೆ ಬೆಂಕಿ ತಾಗಿ 2 ಸಾವಿರ ಜೋಪಡಿಗಳು ಸುಟ್ಟು ಬೂದಿಯಾಯಿತು. ಅದೇ ರೀತಿ ಬಾಂದ್ರಾ ಪೂರ್ವದ ಖೇರ್‌ವಾಡಿಯಲ್ಲೂ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದರು......
ಬಾಡಿಗೆ ಬಹಳ ಕಡಿಮೆ ಇರುವ ಕಾರಣ ಮಧ್ಯಮ - ಬಡ ವರ್ಗದ ಜನರು ಜೋಪಡ ಪಟ್ಟಿಗಳತ್ತ ಮುಖ ಮಾಡುತ್ತಾರೆ. ಹೀಗಾಗಿ ಉಪನಗರ ಗಳಾಚೆಗಿನ ಚಿಕ್ಕ ಚಿಕ್ಕ ಬೆಟ್ಟಗಳಲ್ಲೂ ಅಕ್ರಮ ರೀತಿಯಲ್ಲಿ ಜೋಪಡಿಗಳು ಏಳುತ್ತಿವೆ. ನಾಲೆಗಳ ತೀರಗಳಲ್ಲೂ ಅತಿಕ್ರಮಣವಾಗುತ್ತಿದೆ. ಜೋಪಡಿ ಮಾಲಕರು ಇನ್ನೊಂದು ಮಾಳಿಗೆ ಏರಿಸಿ ಅದನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಮರದ ಮತ್ತು ಸಿಮೆಂಟ್ ಶೀಟ್‌ಗಳ ಚಪ್ಪರದ 3-4 ಮಾಳಿಗೆಗಳ ಜೋಪಡಿ ಟವರ್‌ಗಳು ಇಂದು ಎಲ್ಲೆಡೆಯೂ ಪುಂಖಾನುಪುಂಖವಾಗಿ ಏಳುತ್ತಿವೆ. ಜೋಪಡ ಪಟ್ಟಿಗಳಲ್ಲಿ ನಡೆಯುತ್ತಿರುವ ಕಿರು ಉದ್ಯೋಗಗಳಲ್ಲಿ ವಿದ್ಯುತ್‌ನ್ನು ಹೆಚ್ಚಾಗಿ ಕಳ್ಳತನದಿಂದ ಪಡೆಯಲಾಗುತ್ತದೆ ಅಥವಾ ಗೃಹ ಮೀಟರ್‌ಗಳಿಂದ ಬಳಸುತ್ತಾರೆ. ಲೆಕ್ಕಕ್ಕಿಂತ ಹೆಚ್ಚಿದ ಏರಿಕೆಯ ಕಾರಣ ಕೆಲವೊಮ್ಮೆ ಇಂತಹ ಜೋಪಡಿಗಳು ಕುಸಿಯುತ್ತವೆ. ಕೆಲವೊಮ್ಮೆ ಮಾಡಿನ ತಗಡಿಗೆ ವಿದ್ಯುತ್ ಕರೆಂಟ್ ಹರಿದು ಒಳಗಿದ್ದವರು ಸಾವನ್ನಪ್ಪುತ್ತಾರೆ.
ಇದೀಗ ಜೋಪಡಿಗಳಲ್ಲಿ ನಿರ್ಮಿಸುತ್ತಿರುವ ಮಾಳಿಗೆಗಳ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಆದರೆ ಮುಂದಿನ ವರ್ಷ ಮನಪಾ ಚುನಾವಣೆ ಇರುವ ಕಾರಣ ಆಡಳಿತಕ್ಕೆ ಇದನ್ನು ಕೈಗೊಳ್ಳಲು ಕಷ್ಟವೂ ಆಗಲಿದೆ.
ಕಳೆದ ವಾರ ಮಾಸಿಕ ಸಮೀಕ್ಷಾ ಬೈಠಕ್‌ನಲ್ಲಿ ಮನಪಾ ಕಮಿಷನರ್ ಅಜಯ್ ಮೆಹ್ತಾ ಅವರು ಎಲ್ಲಾ 24 ವಾರ್ಡ್ ಆಫೀಸರ್‌ಗಳಿಗೆ ಸ್ಪಷ್ಟವಾಗಿ ಈ ಬಗ್ಗೆ ತಿಳಿಸುತ್ತಾ ಜೋಪಡಿಗಳ ಎತ್ತರ 14 ಅಡಿಗಿಂತ ಹೆಚ್ಚಿಗೆ ಇರಬಾರದು. ಇದಕ್ಕಾಗಿ ಎತ್ತರದ ಜೋಪಡಿಗಳ ಸೂಚಿಯನ್ನು ತಯಾರಿಸಲೂ ಹೇಳಿದ್ದಾರೆ. ಈ ಮಳೆಗಾಲದ ನಂತರ 14 ಅಡಿಗಿಂತ ಎತ್ತರದ ಜೋಪಡಿಗಳನ್ನು ಧ್ವಂಸ ಮಾಡಲು ನಿರ್ಧರಿಸಲಾಗಿದೆ. ಅಂಧೇರಿ ಜುಹೂನಲ್ಲಿ ಇತ್ತೀಚೆಗೆ ನಡೆದ ಜೋಪಡಿಗಳ ಬೆಂಕಿ ಘಟನೆಯನ್ನು ವೀಕ್ಷಿಸಿ ಬಂದ ನಂತರ ಕಮಿಷನರ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಾಂದ್ರಾದ ಬೆಹರಾಂ ಪಾಡಾದಲ್ಲಿ ಸ್ಕೈವಾಕ್‌ನ ಎತ್ತರದ ತನಕ ಜೋಪಡಿಗಳು ಏರಿರುವುದು ಕಂಡು ಬಂತು. ಇವುಗಳಲ್ಲಿ ಕೆಲವನ್ನು ಮಹಾನಗರ ಪಾಲಿಕೆ ಧ್ವಂಸಗೊಳಿಸಿದೆ. ಮಳೆಗಾಲದಲ್ಲಿ ಮಾನವೀಯ ದೃಷ್ಟಿಯಿಂದ ಮನಪಾ ಉಳಿದ ಜೋಪಡಿ ಧ್ವಂಸ ಕಾರ್ಯವನ್ನು ತಟಸ್ಥಗೊಳಿಸಿದೆಯಂತೆ.
ಮನಪಾ ಆಯುಕ್ತರು ಎಷ್ಟೇ ಹೇಳಲಿ, ಮುಂಬೈಯ ಈಗಿನ ಸ್ಥಿತಿಯಲ್ಲಿ ಜೋಪಡಿಗಳ ಸಂಖ್ಯೆಯನ್ನು ಕಂಡಾಗ ಕಾರ್ಯಾಚರಣೆ ಅಷ್ಟೊಂದು ಸುಲಭವಿಲ್ಲ. ಇಲ್ಲಿ ಜೋಪಡಿ ಕೆಡವಿ ಹಾಕಲು ಪೊಲೀಸ್ ಸುರಕ್ಷೆ ಕೂಡಾ ಬೇಕು. ಮನಪಾ ಅಧಿಕಾರಿಗಳಿಗೆ ಅಷ್ಟು ಸುಲಭದಲ್ಲಿ ಪೊಲೀಸ್ ಸುರಕ್ಷೆ ಕೂಡಾ ಸಿಗುವುದಿಲ್ಲ.
* * *
ಹೆಚ್ಚಿದ ಮೊಬೈಲ್ ಕಳ್ಳತನ
 ಮುಂಬೈಯ ಪಶ್ಚಿಮ ರೈಲ್ವೆಯ ಉಪನಗರ ರೈಲ್ವೆ ಸ್ಟೇಷನ್‌ಗಳಲ್ಲಿ ಒಂದಾದ ಮೀರಾ ರೋಡ್ ಮತ್ತು ವೈತರಣಾ ನಡುವೆ ಪ್ರತೀ ತಿಂಗಳು 6 ಸಾವಿರ ಮೊಬೈಲ್ ಕಳ್ಳತನದ ಘಟನೆಗಳು ನಡೆಯುತ್ತಿವೆ. ಎಲ್ಲಕ್ಕಿಂತ ಹೆಚ್ಚು ಮೊಬೈಲ್ ಕಳ್ಳತನವು ನಾಲಾಸೋಪಾರಾ ರೈಲ್ವೆ ಸ್ಟೇಷನ್‌ನಲ್ಲಿ ನಡೆಯುತ್ತದೆ. ಪ್ರಯಾಣಿಕರು ಕಿಕ್ಕಿರಿದು ತುಂಬಿರುವ ಸಮಯದಲ್ಲಿ ಮೊಬೈಲ್ ಕಳ್ಳರು ಒಳ ನುಗ್ಗುತ್ತಾರೆ. ಮತ್ತು ಮೊಬೈಲ್ ಕಳ್ಳತನ ಮಾಡುತ್ತಾರೆ. ಯಾರು ಮೊಬೈಲ್ ಕಳೆದುಕೊಳ್ಳುತ್ತಾರೋ ಅವರು ರೈಲ್ವೆ ಪೊಲೀಸ್ ಠಾಣೆಗಳಿಗೆ ಹೋದರೆ ಆ ಫಾರ್ಮ್‌ನಲ್ಲಿ ಮೊಬೈಲ್ ಕಂಪೆನಿಯ ಹೆಸರು, ನಂಬರ್, ದೂರು ನೀಡಿದವರ ಹೆಸರು, ವಿಳಾಸ ಬರೆಯಲು ಹೇಳುತ್ತಾರೆ. ನಂತರ ಒಂದು ಸರ್ಟಿಫಿಕೆಟ್ ನೀಡಿ ‘‘ನಿಮ್ಮ ಮೊಬೈಲ್ ಸರ್ಚ್‌ಗೆ ಹಾಕಲಾಗಿದೆ. ಪತ್ತೆಯಾದ ತಕ್ಷಣ ನಿಮಗೆ ಕಾಲ್ ಮಾಡುತ್ತೇವೆ’’ ಎನ್ನುತ್ತಾರೆ. ದೂರುದಾರ ಈ ಸರ್ಟಿಫಿಕೇಟ್ ಹಿಡಿದು ಮೊಬೈಲ್ ಗ್ಯಾಲರಿಗೆ ಹೋಗುತ್ತಾರೆ.
ಆದರೆ ಈ ಪೊಲೀಸ್ ಠಾಣೆಯಿಂದ ಎಷ್ಟೇ ದಿನಗಳು ಕಳೆದರೂ ಯಾವುದೇ ಕಾಲ್ ಬರುವುದಿಲ್ಲ.
ಈ ಮೊಬೈಲ್ ಕಳ್ಳರು ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಎಲ್ಲಿ ಸಿಸಿಟಿವಿ ಕ್ಯಾಮರಾ ಕಡಿಮೆ ಇದೆಯೋ ಅಲ್ಲೇ ನಿಂತು ರೈಲು ಬಂದಾಕ್ಷಣ ಒಳನುಗ್ಗುತ್ತಾರೆ.
ವಸಾ ಜಿಆರ್‌ಪಿಯ ವರಿಷ್ಠ ಪೊಲೀಸ್ ನಿರೀಕ್ಷಕ ವಸಂತ್ ಬಾಗ್ವೆ ತಿಳಿಸುವಂತೆ ‘‘ಮೀರಾರೋಡ್‌ನಿಂದ ವೈತರಣಾ ನಡುವೆ 8 ರೈಲ್ವೆ ಸ್ಟೇಷನ್‌ಗಳಿವೆ. ಈ 8 ರೈಲ್ವೆ ಠಾಣೆಗಳಲ್ಲಿರುವ ಒಟ್ಟು ಪೊಲೀಸರ ಸಂಖ್ಯೆ 150 ದಾಟಿಲ್ಲ. ಇವರಲ್ಲಿ ಅರ್ಧದಷ್ಟು ಪೊಲೀಸರು ಇನ್ನಿತರ ಕಾರ್ಯಗಳಲ್ಲಿರುತ್ತಾರೆ. ಅರ್ಥಾತ್ ಕೋರ್ಟ್‌ನ ಕೆಲಸ, ಕಂಪ್ಯೂಟರ್, ವಯರ್‌ಲೆಸ್ ರಿಪೋರ್ಟ್ ತಯಾರಿಸುವುದು, ಅಕೌಂಟ್, ಡೆತ್ ಕೇಸ್.... ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತಾರೆ. ವಾರದ ರಜೆಯಲ್ಲೂ ಕೆಲವರಿರುತ್ತಾರೆ. ಠಾಣೆಯಲ್ಲಿರುವ ಇಬ್ಬರು- ಮೂವರು ಪೊಲೀಸರು ಎಷ್ಟು ನಿಗಾ ಇರಿಸಬಹುದು?’’
* * *
ಹಾಜರಿ ಕಡಿಮೆ ಇರುವ ಮಕ್ಕಳಿಗಾಗಿ ಬಸ್ಸು ಸೇವೆ
ಮನೆಯಿಂದ ಶಾಲೆ ಬಹಳ ದೂರದಲ್ಲಿರುವ ಕಾರಣ ತರಗತಿಗೆ ಪ್ರತೀದಿನ ಹಾಜರಾಗಲು ಅನೇಕ ಬಡ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದ ಶಿಕ್ಷಣ ವಿಭಾಗದ ನಿರ್ದೇಶಕರು ಇದೀಗ ಇಂತಹ ಮಕ್ಕಳಿಗಾಗಿ ಬಸ್ಸು ಸೇವೆ ಆರಂಭಿಸಿದ್ದಾರೆ.
ದಕ್ಷಿಣ ಮುಂಬೈಯ ಮಂತ್ರಾಲಯದ ಸಮೀಪದ ಗಾಂಧಿ ಮೈದಾನದ ಬಳಿ ವಾಸಿಸುವ ಬಂಝಾರಾ ಸಮಾಜದ 13 ಮಕ್ಕಳು ಇದೀಗ ಜುಲೈ ಒಂದರಿಂದ ಮತ್ತೆ ಶಾಲೆಗೆ ಹೋಗಲು ಶುರುಮಾಡಿದ್ದಾರೆ. ಬಂಝಾರಾ ಸಮಾಜದ ಈ ಮಕ್ಕಳು ಧೋಬಿ ತಾಲಾವ್‌ನ ಮಹಾನಗರ ಪಾಲಿಕೆಯ ಲಾರ್ಡ್ ಹ್ಯಾರಿಶ್ ಸ್ಕೂಲ್‌ನಲ್ಲಿ ಓದುತ್ತಾರೆ. ಈ ಶಾಲೆ ಮನೆಯಿಂದ ಬಹಳ ದೂರದಲ್ಲಿರುವ ಕಾರಣ ಅನೇಕ ತರಗತಿಗಳಿಗೆ ಹಾಜರಾಗದೆ ಇತರ ವಿದ್ಯಾರ್ಥಿಗಳಿಗಿಂತ ಓದಿನಲ್ಲಿ ಹಿಂದುಳಿದಿದ್ದಾರೆ. ಇತ್ತೀಚೆಗೆ ಇದರ ಮಾಹಿತಿ, ಮಕ್ಕಳಿಗಾಗಿ ಕೆಲಸ ಮಾಡುವ ಸಂಸ್ಥೆ ‘ಪ್ರಥಮ್’ಗೆ ದೊರೆಯಿತು. ಅನಂತರ ಇಂತಹ ಮಕ್ಕಳ ಸರ್ವೆಯನ್ನು ಸಂಸ್ಥೆಯ ಮೂಲಕ ಶಿಕ್ಷಣ ವಿಭಾಗಕ್ಕೆ ನೀಡಲಾಯಿತು. ಈ ವಿಷಯವು ಸರ್ವ ಶಿಕ್ಷಣ ಅಭಿಯಾನದ ಟೀಮ್‌ಗೆ ತಲುಪುತ್ತಲೇ ಇದರ ತನಿಖೆ ಆರಂಭಿಸಲಾಯಿತು. ಹಾಗೂ ವರದಿಯನ್ನು ಶಿಕ್ಷಣ ವಿಭಾಗದ ಉಪ ನಿರ್ದೇಶಕರಿಗೆ ನೀಡಲಾಯಿತು. ನಂತರ ಈ ಎಲ್ಲಾ ಮಕ್ಕಳಿಗೆ ಪ್ರತೀದಿನ ಶಾಲೆಗೆ ಹೋಗಲು, ಶಾಲೆಯಿಂದ ಮನೆಗೆ ಬಿಡಲು ಬೆಸ್ಟ್ ಬಸ್ಸು ಸೇವೆ ಆರಂಭಿಸಲಾಯಿತು.
ಶಿಕ್ಷಣ ವಿಭಾಗದ ಅಧಿಕಾರಿಗಳ ಅನುಸಾರ ಆರ್‌ಟಿಇ ಪ್ರಕಾರ ಯಾವುದೇ ಮಗು ಒಂದು ತಿಂಗಳ ತನಕ ಶಾಲೆಗೆ ಬರದಿದ್ದರೆ ಔಟ್ ಆಫ್ ಸ್ಕೂಲ್‌ನ ಶ್ರೇಣಿಯಲ್ಲಿ ಎಣಿಸುತ್ತಾರೆ. ಗಾಂಧಿ ಮೈದಾನದ ಈ 13 ಮಕ್ಕಳು ಈ ಶ್ರೇಣಿಯಲ್ಲಿ ಬರುತ್ತಾರೆ. ಇದೀಗ ಬೆಸ್ಟ್ ಬಸ್ಸು ಸೇವೆ ಆರಂಭಿಸಿದ್ದರಿಂದ ಪ್ರತೀವರ್ಷ 84 ಸಾವಿರ ರೂ. ಶಿಕ್ಷಣ ವಿಭಾಗಕ್ಕೆ ಖರ್ಚು ಬರುತ್ತದೆಯಂತೆ.
***
ಗ್ಲ್ಯಾಮರ್ ಜಗತ್ತಿನ ಯುವತಿಯರ ಪೊಲೀಸ್ ಬಂಧನದ ಕತೆ
ಬಾಲಿವುಡ್ ಈ ದಿನಗಳಲ್ಲಿ ವಿವಿಧ ಕಾರಣಗಳಿಗಾಗಿ ಕೆಟ್ಟ ಹೆಸರು ಪಡೆಯುತ್ತಿದೆ. ಮುಂಬೈಯಲ್ಲಿ ಕಳೆದ ಹಲವು ತಿಂಗಳಲ್ಲಿ ಪೊಲೀಸರು ಅನೇಕ ಸೆಕ್ಸ್ ರ್ಯಾಕೆಟ್‌ಗಳನ್ನು ಬೆಳಕಿಗೆ ತಂದಿದ್ದಾರೆ. ಇದರಲ್ಲಿ ಫಿಲ್ಮ್ -ಟಿ.ವಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ನಟಿಯರು, ರೂಪದರ್ಶಿಗಳು ಒಳಗೊಂಡಿದ್ದರು. ಇದನ್ನು ಗಮನಿಸಿದರೆ ಸಿನೆಮಾ ಜಗತ್ತಿನಲ್ಲಿ ದೇಹ ವ್ಯಾಪಾರದ ದಂಧೆಯಲ್ಲಿರುವ ಬಳಗವು ಒಳ ನುಗ್ಗಿರು ವುದು ಚರ್ಚೆಯಾಗುತ್ತಿದೆ. ಕಲೆಯ ನೆಪದಲ್ಲಿ ಇವರೆಲ್ಲ ತಮ್ಮ ದಂಧೆ ನಡೆಸುತ್ತಿದ್ದಾರೆ. ಬಾಲಿವುಡ್-ಟಾಲಿವುಡ್‌ನಿಂದ ಹೊರಬಿದ್ದ ಈ ಕೊಳಕು ಹಾಲಿವುಡ್ ತನಕವೂ ತಲುಪುತ್ತಿದೆ. ಒಂದೊಮ್ಮೆ ಆರ್ಥಿಕವಾಗಿ ಬಡವರಿದ್ದ ಹುಡುಗಿಯರು ಈ ರ್ಯಾಕೆಟ್‌ನಲ್ಲಿ ಸಿಕ್ಕಿಬಿದ್ದಿದ್ದರೆ ಇಂದು ಹಣದ ಕೊರತೆ ಇಲ್ಲದ ಸ್ಥಿತಿವಂತ ಯುವತಿಯರೂ ಈ ದಂಧೆಯಲ್ಲಿರುವುದು ಕಳವಳದ ಸಂಗತಿಯಾಗಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಸ್ಟಾರ್ ಹೋಟೆಲ್‌ಗಳಲ್ಲಿ, ಜುಹೂ-ಲೋಖಂಡ್‌ವಾಲಾ ಜಂಕ್ಷನ್, ಮಲಾಡ್‌ನ ಮಾರ್ವೆ ರೋಡ್ ಮೊದಲಾದೆಡೆ ಬಂಗ್ಲೆಗಳನ್ನು ಶೂಟಿಂಗ್‌ಗೆ ಪಡೆಯಲಾಗುತ್ತದೆ. ಇಲ್ಲೆಲ್ಲ ಸಿ ಗ್ರೇಡ್‌ನ ಶೂಟಿಂಗ್ ನಡೆಯುತ್ತವೆ. ಇಲ್ಲೆಲ್ಲ ಈಸಿ ಮನಿಯ ಬೆನ್ನು ಹತ್ತಿದ ಕೆಲವು ನಟಿಯರು ದೇಹವ್ಯಾಪಾರಕ್ಕೆ ಇಳಿಯುತ್ತಾರೆ.
ಫಿಲ್ಮ್‌ಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮುಂಬೈಗೆ ಯುವತಿಯರನ್ನು ಕರೆತರುವ ದಲ್ಲಾಳಿಗಳು ಅನೇಕ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ಫ್ಯಾಷನ್ ಶೋಗಳಲ್ಲಿ ಇವರಿಗೆ ಪಾತ್ರ ಕೊಡಿಸಿ ಆಸೆ ಹುಟ್ಟಿಸುವುದೂ ಇದೆ. ಈ ರೀತಿಯಲ್ಲಿ ಇಂತಹ ನಟಿಯರನ್ನು ಅನಂತರ ದೇಹ ವ್ಯಾಪಾರದ ದಂಧೆಗೆ ನೂಕುವುದು ಅನೇಕ ವರುಷಗಳಿಂದ ನಡೆದೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News