‘ಕಲ್ಲಪ್ಪ ಆತ್ಮಹತ್ಯೆ’ ಪ್ರಸ್ತಾಪಿಸಿದ ಸಚಿವ ರೈ ಮೇಲೆ ಗೂಂಡಾಗಿರಿ: ಸಚಿವರ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು
ಬೆಂಗಳೂರು, ಜು. 12: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ರಮಾನಾಥ ರೈ, ‘ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆಗೆ ಯಾರು ಕಾರಣವೆಂಬುದು ಗೊತ್ತಿದೆ’ ಎಂಬ ಹೇಳಿಕೆ ವಿಧಾನಸಭೆಯಲ್ಲಿ ಭಾರೀ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು. ಅಲ್ಲದೆ, ರಮಾನಾಥ ರೈ ಹಾಗೂ ಬಿಜೆಪಿ ಸದಸ್ಯರ ನಡುವೆ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿ ‘ಗೂಂಡಾಗಿರಿ’ ಪ್ರದರ್ಶನಕ್ಕೂ ಸಾಕ್ಷಿಯಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪಾವಧಿ ಚರ್ಚೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಕೆ.ಜಿ. ಬೋಪಯ್ಯ, ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ ಚರ್ಚಿಸುತ್ತಿದ್ದರು. ಈ ವೇಳೆ ಸಚಿವ ರಮಾನಾಥ ರೈ ತಮ್ಮ ಸ್ಥಾನದಲ್ಲೇ ಕುಳಿತು ಏನೋ ಗೊಣಗಿದರು.
ಆನೆ ಓಡಿಸುವ ಕೆಲಸ ಮಾಡಿ: ಇದರಿಂದ ಕೆರಳಿದ ಬೋಪಯ್ಯ, ನೀವು ಮೊದಲು ನಮ್ಮ ಜಿಲ್ಲೆಗೆ ನುಗ್ಗಿರುವ ಆನೆಗಳನ್ನು ಓಡಿಸುವ ಕೆಲಸ ಮಾಡಿ. ಆನೆ ದಾಳಿಗೆ ಸಿಕ್ಕಿ 16 ಮಂದಿ ಸಾವನ್ನಪ್ಪಿದ್ದಾರೆಂದು ಛೇಡಿಸಿದರು. ನಿಮಗೆ ಮಾತನಾಡುವ ಚಟವಿದ್ದರೆ ಸ್ಪೀಕರ್ ಅನುಮತಿ ಪಡೆದು ಮಾತನಾಡಿ ಎಂದು ಸಲಹೆ ನೀಡಿದರು.
ಈ ಹಂತದಲ್ಲಿ ಎದ್ದುನಿಂತ ರಮಾನಾಥ ರೈ, ನಾನು ಆರು ಬಾರಿ ಈ ಮನೆಯ ಸದಸ್ಯನಾಗಿದ್ದೇನೆ. ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಬೇಕೆಂದು ನಾನು ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲವೆಂದು ಏರು ಧ್ವನಿಯಲ್ಲಿ ತಿರುಗೇಟು ನೀಡಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿತು.
ಬಂತು ಗೋಲ್ ಗುಂಬಝ್: ತಕ್ಷಣವೇ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ರಮಾನಾಥ ರೈ ಅವರು ಆರು ಬಾರಿ ಈ ಮನೆಯ ಸದಸ್ಯರಾಗಿದ್ದಾರೆ. ನಮ್ಮ ವಿಜಯಪುರದಲ್ಲಿ ಗೋಲ್ ಗುಂಬಝ್ 365 ವರ್ಷಗಳಿಂದಲೂ ಅಲ್ಲೇ ಇದೆ ಎಂದು ರೈ ಅವರನ್ನು ಚುಚ್ಚಿದರು.
ಇದರಿಂದ ಒಮ್ಮೆಗೆ ಆಕ್ರೋಶಿತರಾದ ಸಚಿವ ರಮಾನಾಥ ರೈ, ‘ಈ ಸದನದಲ್ಲಿ ಕುಳಿತು ಬ್ಲೂ ಫಿಲಂ ನೋಡಿದ ನಿಮ್ಮ ಯೋಗ್ಯತೆ ಏನೆಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಿಮ್ಮಂಥವರಿಂದ ಇಲ್ಲಿ ಪಾಠ ಕಲಿಬೇಕಾದ ಅಗತ್ಯ ನನಗಿಲ್ಲ’ ಎಂದು ವಾಗ್ಬಾಣ ಬಿಟ್ಟರು. ಹೀಗಾಗಿ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಕೋಲಾಹಲವನ್ನು ಸೃಷ್ಟಿಸಿದರು.
ರಾಜೀನಾಮೆ ಕೊಡಿಸಿ: ‘ತಾನು ಸದನದಲ್ಲಿ ತಪ್ಪು ಮಾಡಿದ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಿಮಗೆ ತಾಕ್ಕತ್ತಿದ್ದರೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ಹೆಸರು ಕೇಳಿಬಂದಿದ್ದು, ಈ ಕೂಡಲೇ ಅವರ ರಾಜೀನಾಮೆ ಕೊಡಿಸಿ’ ಎಂದು ಸವಾಲು ಹಾಕಿದರು.
‘ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಯಾರು ಕಾರಣರು ಎಂದು ಗೊತ್ತಿದೆ’ ಎಂದು ರಮಾನಾಥ ರೈ ಹೇಳುತ್ತಿದ್ದಂತೆ ಅವರ ಮೇಲೆ ಒಮ್ಮೆಗೆ ಮುಗಿಬಿದ್ದ ಬಿಜೆಪಿ ಸದಸ್ಯರು, ಅದೇನು ಕಥೆ ಸದನದಲ್ಲಿ ಬಹಿರಂಗಪಡಿಸಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ತಮ್ಮ ಆಸನದಲ್ಲಿ ಕುಳಿತಿದ್ದ ರಮಾನಾಥ ರೈ ಒಮ್ಮೆಗೆ ಉದ್ವಿಗ್ನತೆಗೆ ಒಳಗಾಗಿ ಬಿಜೆಪಿ ಸದಸ್ಯರ ವಿರುದ್ಧ ತೋಳೇರಿಸಿ, ಆಸನದಿಂದ ಹೊರ ಬರಲು ಯತ್ನಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ವಿಪಕ್ಷ ಸಚೇತಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಸ್ಪೀಕರ್ ಪೀಠದ ಮುಂದಿನ ಬಾವಿಗೆ ಬಂದರಲ್ಲದೆ, ರಮಾನಾಥ ರೈ ಅವರ ಆಸನದ ಬಳಿಗೆ ಧಾವಿಸಿ ಮಾತಿನ ಚಕಮಕಿಗೆ ಇಳಿದರು.
ಹೀಗಾಗಿ ಸಚಿವರಾದ ಎಚ್.ಕೆ.ಪಾಟೀಲ್, ಎಚ್.ಆಂಜನೇಯ, ಆರ್.ವಿ.ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಸದಸ್ಯರಾದ ವಸಂತ ಬಂಗೇರ, ಬೈರತಿ ಬಸವರಾಜು, ಸೋಮಶೇಖರ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ರಮಾನಾಥ ರೈ ಅವರ ನೆರವಿಗೆ ಧಾವಿಸಿದರು.
ಗೂಂಡಾಗಿರಿ ಮಾಡ್ತೀರಿ: ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾರ್ಷಲ್‌ಗಳೇ ಎಲ್ಲಿದ್ದೀರಿ, ಏನು ಮಾಡ್ತೀದ್ದೀರಿ. ಸಚಿವರ ಮೇಲೆ ಏಕಾಏಕಿ ನುಗ್ಗಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಅಬ್ಬರಿಸಿದರು. ಕೂಡಲೇ ಧಾವಿಸಿದ ಮಾರ್ಷಲ್‌ಗಳು ಬಿಜೆಪಿ ಸದಸ್ಯರನ್ನು ತಡೆದರು. ಇದರಿಂದ ಸದನದಲ್ಲಿ ಕೆಲ ಕ್ಷಣ ಅಕ್ಷರಶಃ ರಣರಂಗದ ಸ್ಥಿತಿ ನಿರ್ಮಾಣವಾಯಿತು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ ವಿಪಕ್ಷ ಸದಸ್ಯರು ಹಾಗೂ ಸಚಿವರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಆದರೆ, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದ್ದರಿಂದ ಕಲಾಪವನ್ನು ಮಧ್ಯಾಹ್ನದ ಭೋಜನ ವಿರಾಮಕ್ಕೆ ಮುಂದೂಡಿದರು.
‘ಮಂತ್ರಿಗಳ ಮೇಲೆ ಏಕಾಏಕಿ ಮುಗಿಬಿದ್ದು ಗೂಂಡಾಗಿರಿ ಮಾಡ್ತೀರೇನ್ರೀ.. ನಿಮಗೆ ಜವಾಬ್ದಾರಿ ಇದೆಯೇನ್ರೀ.. ಸ್ಪೀಕರ್ ಪೀಠದ ಮುಂದಿನ ಬಾವಿಯಲ್ಲಿ ಧರಣಿಯಲ್ಲಿದ್ದು, ಸಚಿವರ ಆಸನಕ್ಕೆ ನುಗ್ಗಿ ಜಗಳ ಮಾಡ್ತೀರಿ.. ನಿಮಗೇನಾದರೂ ಬುದ್ಧಿ ಇದೆಯೇ?’
-ಸಿದ್ದರಾಮಯ್ಯ ಮುಖ್ಯಮಂತ್ರಿ