ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣ : ಬಜರಂಗ ದಳದ ರಾಜ್ಯ ಸಮಿತಿ ಸದಸ್ಯನ ಬಂಧನ
ಬೆಂಗಳೂರು, ಜು. 16: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಿಗೂಢ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಜರಂಗ ದಳದ ಮುಖಂಡ ಪ್ರವೀಣ್ ಖಾಂಡ್ಯನ ಸಹಚರ ಬಜರಂಗ ದಳದ ರಾಜ್ಯ ಸಮಿತಿ ಸದಸ್ಯ ಬಸವನಹಳ್ಳಿಯ ನಿವಾಸಿ ಪ್ರದೀಪ್ ಎಂಬವನನ್ನು ಬಂಧಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 4ಗಂಟೆಯ ಸುಮಾರಿಗೆ ಇಲ್ಲಿನ ಸಿಐಡಿ ಕೇಂದ್ರ ಕಚೇರಿಯಲ್ಲಿ ಖಾಂಡ್ಯನ ಸಹಚರ ಪ್ರದೀಪ್‌ನನ್ನು ಬಂಧಿಸಲಾಗಿದ್ದು, ಆರೋಪಿ ಚಿಕ್ಕಮಗಳೂರಿನಲ್ಲಿ ಕ್ಯಾಂಟಿನ್‌ವೊಂದನ್ನು ನಡೆಸುತ್ತಿದ್ದಾರೆ. ಡಿವೈಎಸ್ಪಿ ಆತ್ಮಹತ್ಯೆ ಮತ್ತು ಅಪಹರಣ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಖಾಂಡ್ಯನಿಗೆ ಕೃತ್ಯ ಎಸಗಲು ಸಹಕರಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುವಕನ ಅಪಹರಣ ಪ್ರಕರಣ ಸಂಬಂಧ ಭಜರಂಗ ದಳ ರೂಪಿಸಿದ ಸಂಚಿಗೆ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಸವದತ್ತಿ ಸಮೀಪದಲ್ಲಿನ ತಮ್ಮ ಪತ್ನಿ ನಿವಾಸದಲ್ಲಿ ಜು.5ರಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣ ಸಿಐಡಿ ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ಸೇರಿ ಇನ್ನಿತರರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.