ಪೇಚಿಗೆ ಸಿಲುಕಿದ ಆಝಾದ್

Update: 2016-07-16 17:43 GMT

ಪೇಚಿಗೆ ಸಿಲುಕಿದ ಆಝಾದ್ 
ಪ್ರಿಯಾಂಕಾ ಗಾಂಧಿ ವಾಧ್ರಾ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿರುವ ಗುಲಾಮ್ ನಬಿ ಆಝಾದ್‌ರನ್ನು ಅವರ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿ, ಒಂದು ತಾಸಿಗೂ ಹೆಚ್ಚು ಸಮಯ ಚರ್ಚಿಸಿದ್ದರು. ಅದೊಂದು ಗೌಪ್ಯ ಭೇಟಿಯಾಗಿತ್ತು. ಹೇಗೋ ಈ ವಿಷಯವು ಆಝಾದ್‌ರ ನಿವಾಸದಿಂದಲೇ ಪತ್ರಕರ್ತರೊಬ್ಬರಿಗೆ ಸುಳಿವು ಸಿಕ್ಕೇ ಬಿಟ್ಟಿತು. ಕೆಲವೇ ನಿಮಿಷಗಳಲ್ಲಿ ಆಝಾದ್‌ರ ನಿವಾಸದ ಮುಂದೆ ಮಾಧ್ಯಮ ಮಂದಿಯ ಜಾತ್ರೆಯೇ ನೆರೆದಿತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಮುಖ್ಯ ಪ್ರಚಾರಕಿಯಾಗಿ ಪ್ರಿಯಾಂಕಾ ಅವರನ್ನು ನೇಮಿಸುವ ಬಗ್ಗೆ ಶೀಘ್ರದಲ್ಲೇ ವಿದ್ಯುಕ್ತ ಘೋಷಣೆಯೊಂದನ್ನು ಹೊರಡಿಸುವ ಸಾಧ್ಯತೆಯಿದೆಯೆಂದು ಆನಂತರ ತಿಳಿಸಲಾಯಿತು. ಆದರೆ ಮಾತುಕತೆಯ ಸಂದರ್ಭದಲ್ಲಿ ಮಾಧ್ಯಮಮಂದಿಯ ಜಮಾವಣೆಯು ಪ್ರಿಯಾಂಕಾಗೆ ಇರಿಸುಮುರಿಸುಂಟು ಮಾಡಿತ್ತು ಹಾಗೂ ಈ ಬಗ್ಗೆ ಅವರು ನೇರವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರಹಸ್ಯ ಮಾತುಕತೆಯ ಬಗ್ಗೆ ಅಝಾದ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರೆಂದು ಕಾಂಗ್ರೆಸ್ ಪಕ್ಷದ ಒಂದು ವರ್ಗವು ಭಾವಿಸಿದೆ. ಆದರೆ ಆಝಾದ್ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಈ ಕುರಿತು ಯಾವುದೇ ತನಿಖೆಗೂ ತಾನು ಸಿದ್ಧವೆಂದು ಅವರು ಹೇಳುತ್ತಾರೆ. ಅದೇನೇ ಇರಲಿ. ಕೊನೆಗೂ, ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾಗೆ ಯಾವ ಪಾತ್ರವನ್ನು ನೀಡಲಾಗುವುದೆಂದು ಈವರೆಗೂ ಘೋಷಿಸಲಾಗಿಲ್ಲ.

ಕಿಶೋರ್ ವ್ಯೆಹರಚನೆಯಲ್ಲಿ ಎಡವಟ್ಟು?
    ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಅವರನ್ನು ಘೋಷಿಸಿದ ಬಳಿಕ ಪಕ್ಷದ ಚುನಾವಣಾ ವ್ಯೆಹ ತಜ್ಞ ಪ್ರಶಾಂತ್ ಕಿಶೋರ್ ಆ ಪಕ್ಷಕ್ಕೇ ಒಂದು ಹೊರೆಯಾಗಿ ಪರಿಣಮಿಸಿದ್ದಾರಂತೆ. ಇದಕ್ಕೂ ಮೊದಲು ಕಿಶೋರ್ ಅವರ ತಂಡವು ಪಕ್ಷದ ನಾಯಕರು ಹಾಗೂ ಶಾಸಕರಿಗೆ ಅಲ್ಪಾವಧಿಯ ನೋಟಿಸ್ ನೀಡಿ, ಕೂಡಲೇ ಲಕ್ನೋಗೆ ಬರಬೇಕೆಂದೂ ಆದೇಶಿಸುತ್ತಿತ್ತು ಮತ್ತು ಇತರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಮೂಲಕ ಉದ್ಧಟತನದಿಂದ ವರ್ತಿಸುತ್ತಿದೆಯೆಂದು ಸ್ಥಳೀಯ ನಾಯಕರು ದೂರುತ್ತಿದ್ದರು. ಕಿಶೋರ್ ಅವರ ಸೂಚನೆಯಂತೆಯೇ, ಕೇಂದ್ರ ನಾಯಕತ್ವವು ಸ್ಥಳೀಯ ನಾಯಕರ ಇಚ್ಛೆಗೆ ವಿರುದ್ಧವಾಗಿ, ಇತ್ತೀಚೆಗೆ ಶೀಲಾ ದೀಕ್ಷಿತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದು ಸ್ಥಳೀಯ ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಇಮ್ಮಡಿಗೊಳಿಸಿದೆ. ‘‘ದಿಲ್ಲಿಯಂತೆ, ಉತ್ತರಪ್ರದೇಶವನ್ನೂ ಶೀಲಾ ದೀಕ್ಷಿತ್ ಬದಲಾಯಿಸಲಿದ್ದಾರೆ’’ ಎಂಬ ಆಕರ್ಷಕ ಘೋಷಣೆಯನ್ನು ಕೂಡಾ ಕಿಶೋರ್ ಸಿದ್ಧಪಡಿಸಿದ್ದಾರೆ. ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್‌ಬಬ್ಬರ್‌ಗೆ ಭಡ್ತಿ ನೀಡಿದ್ದನ್ನೂ ರಾಜಕೀಯ ಪಂಡಿತರು ಹಾಗೂ ಮಾಧ್ಯಮಗಳು ಪ್ರಶ್ನಿಸಿದ್ದಾರೆ. 80ರ ಇಳಿವಯಸ್ಸಿನ ಈ ನಾಯಕಿಯು ಉತ್ತರಪ್ರದೇಶದಲ್ಲಿ ಹೇಗೆ ಕಾಂಗ್ರೆಸ್‌ಗೆ ಆಸ್ತಿಯಾಗುವರೆಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಪ್ರಾಯಶಃ ಕಿಶೋರ್ ಅವರ ಚುನಾವಣಾ ವ್ಯೆಹರಚನೆಯ ಬತ್ತಳಿಕೆಯಲ್ಲಿ ಈಗ ಕೆಲವೇ ಕೆಲವು ಅಸ್ತ್ರಗಳಷ್ಟೇ ಉಳಿದಿರಬೇಕು. ಆದರೆ, ಈಗಾಗಲೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಚರಮಗೀತೆಯನ್ನು ಹಾಡತೊಡಗಿದೆಯೆಂದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ.

 ಸುಪ್ರಿಯೋಗೆ ಹಿನ್ನಡೆ
ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಸಂಪುಟ ಪುನಾರಚನೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ನಜ್ಮಾ ಹೆಪ್ತುಲ್ಲಾರನ್ನು ಕೈಬಿಟ್ಟಿರುವ ಅವರು ಸಹಾಯಕ ಸಚಿವ ಹಾಗೂ ಹಿನ್ನೆಲೆ ಗಾಯಕ ಬಾಬುಲ್ ಸುಪ್ರಿಯೋ ಅವರನ್ನು ಹೆಚ್ಚು ಪ್ರಾಮುಖ್ಯತೆಯಿರುವ ನಗರಾಭಿವೃದ್ಧಿ ಇಲಾಖೆಯಿಂದ, ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆಗೆ ವರ್ಗಾಯಿಸಿದ್ದಾರೆ. ಮೋದಿಯವರು ಮೊದಲನೆ ಸುತ್ತಿನ ಸಂಪುಟ ಪುನಾರಚನೆಯನ್ನು ಘೋಷಿಸಿದ ಕೂಡಲೇ, ಸಚಿವ ಸುಪ್ರಿಯೋ ಟ್ವೀಟ್ ಮಾಡಿ, ತನ್ನ ಖಾತೆಯನ್ನು ಬದಲಾಯಿಸದೆ ಇದ್ದುದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದರು. ಆದರೆ ಅವರು ಅಷ್ಟು ಬೇಗನೆ ಪ್ರತಿಕ್ರಿಯಿಸಿದ್ದುದು ತಪ್ಪಾಗಿತ್ತು. ಯಾಕೆಂದರೆ ಎರಡನೆ ಸುತ್ತಿನಲ್ಲಿ ಅವರ ಖಾತೆಯೂ ಬದಲಾಗಿತ್ತು. ಆನಂತರ ಸುಪ್ರಿಯೋ ಮತ್ತೆ ಟ್ವೀಟ್ ಮಾಡಿ, ಇದೊಂದು ಸಂಪೂರ್ಣ ಅನಿರೀಕ್ಷಿತ ಬದಲಾವಣೆಯಾಗಿದ್ದು, ತನಗೆ ಸಂತಸ ತಂದಿದೆಯೆಂದು ಹೇಳಿದ್ದರು. ಆದರೆ ಶ್ರಮವಹಿಸಿ ಕೆಲಸ ಮಾಡದೆ ಇದ್ದುದಕ್ಕಾಗಿ ಹಾಗೂ ನಾಯ್ಡು ಜತೆ ಸಮನ್ವಯತೆಯಿಲ್ಲದೆ ಇದ್ದುದಕ್ಕಾಗಿ ಸುಪ್ರಿಯೋಗೆ ನೀಡಿದ ಶಿಕ್ಷೆ ಇದಾಗಿದೆಯೆಂಬುದು ಸ್ಪಷ್ಟ. ಇದೀಗ ಸುಪ್ರಿಯೋ ತನ್ನ ನೂತನ ಖಾತೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲಿದ್ದಾರೆಯೇ ಅಥವಾ ಅವರು ಕೇವಲ ಒಳ್ಳೆಯ ಹಾಡುಗಾರ ಮಾತ್ರವೇ ಆಗಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ನಾಯ್ಡು ವರ್ಗಾವಣೆ
   ಮಾನವ ಸಂಪನ್ಮೂಲಾಭಿವೃದ್ಧಿ ಖಾತೆಯಲ್ಲಿನ ಬದಲಾವಣೆಯು ಅಚ್ಚರಿಕರವೇನೂ ಅಲ್ಲದಿದ್ದರೂ, ಆಘಾತಕಾರಿಯೇನೂ ಆಗಿರಲಿಲ್ಲ. ಸಂಸದೀಯ ವ್ಯವಹಾರಗಳ ಸಚಿವಾಲಯದಿಂದ ವೆಂಕಯ್ಯ ನಾಯ್ಡು ಎತ್ತಂಗಡಿಯಾದ ವಿಷಯದಲ್ಲೂ ಹೀಗೆಯೇ ಹೇಳಬಹುದಾಗಿದೆ. ವೆಂಕಯ್ಯನಾಯ್ಡು ಸ್ವಭಾವತಃ ವಿನಯಶೀಲರಾಗಿದ್ದರೂ, ಸದನಗಳಲ್ಲಿ ಮಾತ್ರ ಅವರು ಪ್ರತಿಪಕ್ಷಗಳನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆಂದು ಅನೇಕಮಂದಿ ರಾಜ್ಯಸಭಾ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳಿಂದ ಬಲವಾದ ಒತ್ತಡ ಹೇರಿದ್ದೇ ಅವರ ಖಾತೆ ಬದಲಾವಣೆಗೆ ಕಾರಣವಾಯಿತೆಂದು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ. ನಗರಾಭಿವೃದ್ಧಿ ಖಾತೆಯ ಉಸ್ತುವಾರಿಯನ್ನೂ ಹೊಂದಿರುವ ನಾಯ್ಡು, ಕೆಲವು ನಿವೃತ್ತ ಸಂಸದರು ಸರಕಾರಿ ಬಂಗಲೆಗಳಲ್ಲಿ ವಾಸ್ತವ್ಯವನ್ನು ಮುಂದುವರಿಸುವುದನ್ನು ರದ್ದುಪಡಿಸಿದ್ದರು. ಇದರ ಪರಿಣಾಮವಾಗಿ ಅವರು ತಾವಿರುವ ಬಂಗಲೆಗಳನ್ನು ತೆರವುಗೊಳಿಸಬೇಕಾಗಿದೆ. ಇವರ ಪೈಕಿ ಕೆಲವು ನಾಯಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದುದರಿಂದ, ನಾಯ್ಡು ಕ್ರಮವು ಅನೇಕರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಅವರ ವಿರುದ್ಧ ದೂರುಗಳ ಮಹಾಪೂರವೇ ಹರಿದುಬಂದಾಗ, ಪ್ರಧಾನಿ ವಿಧಿಯಿಲ್ಲದೆ ಅವುಗಳಿಗೆ ಕಿವಿಗೊಡಲೇಬೇಕಾಯಿತು.


ಶಿವರಾಜ್‌ರ ‘ಆನಂದ ಸಚಿವಾಲಯ’ಕ್ಕೆ ಕೊನೆಗೂ ಕೇಂದ್ರದ ಸಮ್ಮತಿ
 ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಭೂತಾನ್ ದೇಶದಲ್ಲಿ ಇರುವ ಹಾಗೆ ತನ್ನ ಸಂಪುಟದಲ್ಲಿಯೂ ‘ಆನಂದ ಸಚಿವ ಖಾತೆ’ಯನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ಆದರೆ ಕೇಂದ್ರ ಸರಕಾರವು ಆರಂಭದಲ್ಲಿ ಈ ನೂತನ ಖಾತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರಿಸಿರಲಿಲ್ಲ. ಪ್ರಸ್ತಾಪಿತ ‘ಆನಂದ ವಿಭಾಗ್’ ಸಚಿವಾಲಯವನ್ನು ಸ್ಥಾಪಿಸಲು ತನ್ನ ಪಕ್ಷವೇ ಯಾಕೆ ತನಗೆ ಅನುಮತಿ ನೀಡುತ್ತಿಲ್ಲವೆಂಬುದನ್ನು ಇತರರಿಗೆ ವಿವರಿಸಲು ಸ್ವತಃ ಚೌಹಾಣ್ ಅವರೇ ಪ್ರಯಾಸಪಟ್ಟಿದ್ದರು. ಮೊದಲು ಬರ ಹಾಗೂ ಇದೀಗ ಪ್ರವಾಹದಿಂದ ತತ್ತರಿಸುತ್ತಿರುವ ಈ ರಾಜ್ಯದಲ್ಲಿ ಆನಂದ ಸಚಿವಾಲಯವನ್ನು ಸ್ಥಾಪಿಸಿದಲ್ಲಿ, ಬಿಜೆಪಿಯನ್ನು ಅಣಕಿಸಲು ಪ್ರತಿಪಕ್ಷಗಳಿಗೆ ಇನ್ನೊಂದು ಕಾರಣ ದೊರೆತಂತಾಗಬಹುದೆಂದು ಕೇಂದ್ರ ಸರಕಾರ ಭಾವಿಸಿತ್ತು. ಮಧ್ಯಪ್ರದೇಶವು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಫಲಿತಾಂಶಗಳನ್ನು ತಂದುಕೊಟ್ಟಿರುವುದರಿಂದ, ಅಲ್ಲಿ ಯಾವುದೇ ತಪ್ಪು ಸಂಭವಿಸುವುದು ಅದಕ್ಕೆ ಬೇಕಾಗಿರಲಿಲ್ಲ. ಆದರೆ ಚೌಹಾಣ್‌ಗೆ ಇದೊಂದು ತುಂಬಾ ಅಚ್ಚುಮೆಚ್ಚಿನ ಯೋಜನೆಯಾಗಿತ್ತು. ಹಾಗಾಗಿ ಕೊನೆಗೂ ಕೇಂದ್ರ ಅವರ ಹಂಬಲಕ್ಕೆ ಅಸ್ತು ಅಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News