×
Ad

ಈಗ ಕಾಂಗ್ರೆಸ್‌ಗೆ ಸಂಕಷ್ಟ , ರಾಹುಲ್‌ಗೆ ಅಗ್ನಿ ಪರೀಕ್ಷೆ

Update: 2025-12-06 09:11 IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Photo: PTI)

ಈಗ ಕಾಂಗ್ರೆಸ್‌ಗೆ ಸಂಕಷ್ಟ , ರಾಹುಲ್‌ಗೆ ಅಗ್ನಿ ಪರೀಕ್ಷೆ. ಹನ್ನೊಂದು ವರ್ಷಗಳ ಹಿಂದೆ, 2014ರಲ್ಲಿ ಬೀಸಿದ ರಾಜಕೀಯ ಬಿರುಗಾಳಿಗೆ ಸಿಕ್ಕಿ ಕಾಂಗ್ರೆಸ್ ಧೂಳೀಪಟವಾಗಿದೆ. ಧರ್ಮ ಮತ್ತು ಹಿಂದುತ್ವ ರಾಜಕಾರಣಕ್ಕೆ ಜೋತು ಬಿದ್ದ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವಲ್ಲಿ ಕೈ ಪಡೆ ಸೋತಿದೆ. ಗುಂಪುಗಾರಿಕೆ, ಭಿನ್ನಾಭಿಪ್ರಾಯ, ಕಿತ್ತಾಟದಿಂದ ಸೊರಗಿರುವ ಕಾಂಗ್ರೆಸ್‌ಗೆ ನಿಜಕ್ಕೂ ಸಂಕಷ್ಟ. ಈ ಬಿಕ್ಕಟ್ಟು ಪರಿಹಾರ ರಾಹುಲ್‌ಗೆ ಅಗ್ನಿ ಪರೀಕ್ಷೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರವಲ್ಲ, ಅಧಿಕಾರದಲ್ಲಿ ಇಲ್ಲದಿರುವ ರಾಜ್ಯಗಳಲ್ಲೂ ಕಿತ್ತಾಟ, ಗುಂಪುಗಾರಿಕೆ ಇದೆ. ಕರ್ನಾಟಕದಲ್ಲಿ ಒಳಗೊಳಗೇ ನಡೆಯುತ್ತಿದ್ದ ಶೀತಲ ಸಮರ ಬೀದಿಗೆ ಬಂದಿದೆ. ‘ಕುರ್ಚಿ‘ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ಸುಸೂತ್ರವಾಗಿ ಬಗೆಹರಿಸುವರೇ ರಾಹುಲ್ ಗಾಂಧಿ ಎಂಬ ಚರ್ಚೆ ಆರಂಭವಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದೊಳಗಿನ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ದಿಲ್ಲಿ ನಾಯಕರು ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ. ದಿಲ್ಲಿ ನಾಯಕರ ಸಲಹೆ ಮೇರೆಗೆ ಇಬ್ಬರೂ ನಾಯಕರು ಎರಡು ಉಪಾಹಾರ ಸಭೆ ನಡೆಸಿದ್ದಾರೆ. ಚರ್ಚೆ ಮಾಡಿದ್ದಾರೆ. ಇದರಿಂದ ಬಿಕ್ಕಟ್ಟು ಪರಿಹಾರ ಆಗದಿದ್ದರೂ, ಸ್ವಲ್ಪ ಕಾಲ ದೂಡಬಹುದು.

ಈಗ ಸಂಸತ್ ಅಧಿವೇಶನ ನಡೆಯುತ್ತಿದೆ. ಮುಂದಿನ ಸೋಮವಾರದಿಂದ (ಡಿ. 8) ವಿಧಾನ ಮಂಡಲ ಅಧಿವೇಶನ. ಮಹತ್ವದ ವಿಷಯಗಳು ದಿಲ್ಲಿ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಮಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಹೀಗೆ ಕಚ್ಚಾಡಿದರೆ ಪಕ್ಷ- ಸರಕಾರ ಮುಜುಗರ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ‘ಕದನ ವಿರಾಮ’ ಘೋಷಿಸುವಂತೆ ಪಕ್ಷದ ವರಿಷ್ಠರು ಸಿದ್ದರಾಮಯ್ಯ, ಶಿವಕುಮಾರ್‌ಗೆ ಕಿವಿ ಮಾತು ಹೇಳಿದ್ದಾರೆ. ನಾಯಕರ ಸಲಹೆಗೆ ಇಬ್ಬರೂ ಕಿವಿಗೊಟ್ಟು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದು ತಾತ್ಕಾಲಿಕ. ಮುಂದಿನ ವರ್ಷ ‘ಅಧಿಕಾರ ಗುದ್ದಾಟ‘ ಪುನಃ ಶುರುವಾಗಬಹುದು ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ.

2023ರ ಮೇನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದು ಸರಕಾರ ರಚಿಸಿದ ಸಮಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಸಿದ್ದರಾಮಯ್ಯನವರ ಜತೆ ಶಿವಕುಮಾರ್ ಟವೆಲ್ ಹಾಕಿದ್ದರು. ಅದೃಷ್ಟ ಶಿವಕುಮಾರ್ ಪರವಾಗಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಶಿವಕುಮಾರ್ ಅವರನ್ನು ಸಮಾಧಾನಪಡಿಸಲು ಉಪ ಮುಖ್ಯಮಂತ್ರಿ ಮಾಡಲಾಯಿತು. ಸಾಮಾನ್ಯವಾಗಿ ಇಬ್ಬರು ಅಥವಾ ಮೂವರು ಉಪ ಮುಖ್ಯಮಂತ್ರಿ ಇರುತ್ತಾರೆ. ಆದರೆ, ಸಿದ್ದರಾಮಯ್ಯ ಸರಕಾರದಲ್ಲಿ ಡಿಕೆಶಿ ಮಾತ್ರವೇ ಉಪ ಮುಖ್ಯಮಂತ್ರಿಯಾದರು. ಆ ಮೂಲಕ ‘ಪರ್ಯಾಯ ಪವರ್ ಸೆಂಟರ್’ ಸೃಷ್ಟಿಯಾಯಿತು. ಮೊದಲೇ ಕೆಪಿಸಿಸಿ ಅಧ್ಯಕ್ಷರು; ಉಪ ಮುಖ್ಯಮಂತ್ರಿ ಬೇರೆ. ಅಂದ ಮೇಲೆ ಕೇಳಬೇಕೇ? 2013- 2018ರವರೆಗಿನ ಸಿದ್ದರಾಮಯ್ಯನವರ ಆಡಳಿತಕ್ಕೂ, ಈಗಿನ ಅವರ ಸರಕಾರದ ಕಾರ್ಯವೈಖರಿಗೂ ಅಜಗಜ ವ್ಯತ್ಯಾಸವಾಗಲು ಇದೇ ಕಾರಣ.

2013ರಲ್ಲಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಬಳಿಕ ಅತ್ಯಲ್ಪ ಕಾಲ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯನವರಿಗೆ ಆಗ ಕೆಲಸ ಮಾಡಲು ಮುಕ್ತ ಅವಕಾಶವಿತ್ತು. ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಾಗಿದ್ದರು. ಶಿವಕುಮಾರ್ ಇಷ್ಟೊಂದು ಪ್ರಬಲವಾಗಿ ಬೆಳೆದಿರಲಿಲ್ಲ. ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು. ಸಂಪುಟ ದರ್ಜೆ ಸಚಿವ ಸ್ಥಾನವೂ ಅವರಿಗೆ ಸಿಕ್ಕಿತ್ತು. ಸಿದ್ದರಾಮಯ್ಯ ಅವರಿಗೆ ಡಿಕೆಶಿ ಈಗ ಸರಿಸಮಾನನಾಗಿ ಬೆಳೆದಿದ್ದಾರೆ. ಎರಡು ಪವರ್ ಸೆಂಟರ್‌ಗಳಿರುವುದರಿಂದ ಸರಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಸ್ವತಃ ಸಿದ್ದರಾಮಯ್ಯನವರೇ ಆಪ್ತರ ಬಳಿ ಈ ಮಾತು ಹೇಳಿಕೊಂಡಿದ್ದಾರೆ. ಕನಕಪುರದ ‘ಬಂಡೆ’ ಸಿದ್ದರಾಮಯ್ಯನವರ ದಾರಿಗೆ ಅಡ್ಡಿಯಾಗಿದೆ

ಇನ್ನು, ‘ಎರಡೂವರೆ ವರ್ಷದ ಅಧಿಕಾರ ಹಸ್ತಾಂತರ ಒಪ್ಪಂದ’ ಕುರಿತು ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ನವೆಂಬರ್ 20ರ ಬಳಿಕ ಶಿವಕುಮಾರ್ ಕುರ್ಚಿ ಹಿಡಿಯುವ ಪ್ರಯತ್ನವನ್ನು ಚುರುಕುಗೊಳಿಸಿದ್ದಾರೆ. ಇಂಥದೊಂದು ಒಪ್ಪಂದ ಆಗಿದೆಯೇ ಎನ್ನುವುದು ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಈ ಪ್ರಶ್ನೆ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರಿಗೂ ಕಾಡುತ್ತಿದೆ. ಅನೇಕರು ಸಿದ್ದರಾಮಯ್ಯ ಅವರನ್ನೇ ಖುದ್ದು ಕೇಳಿದ್ದಾರೆ. ಶಿವಕುಮಾರ್ ಪ್ರಕಾರ, ಐದಾರು ನಾಯಕರ ಸಮ್ಮುಖದಲ್ಲಿ ಆಗಿರುವ ಒಪ್ಪಂದ ಇದು. ಆ ನಾಯಕರು ಯಾರು , ಒಪ್ಪಂದ ಏರ್ಪಟ್ಟಾಗ ರಾಹುಲ್ ಅವರಿದ್ದರೇ ಎಂದು ಡಿಕೆಶಿ ಸ್ಪಷ್ಟಪಡಿಸಿಲ್ಲ. ಅಕಸ್ಮಾತ್ ಸಂಧಾನ ಸಭೆಯಲ್ಲಿ ರಾಹುಲ್ ಅವರಿದ್ದರೆ ಸಮಸ್ಯೆ ಪರಿಹಾರ ಜಟಿಲ ಆಗಬಹುದು.

ಬಿಹಾರ ಚುನಾವಣೆ ಮುಗಿಯುವವರೆಗೂ ರಾಹುಲ್ ಒಬಿಸಿ ರಾಜಕಾರಣ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಒಟ್ಟು ಜನಸಂಖ್ಯೆಯಲ್ಲಿ ಶೇ.64 ರಷ್ಟಿರುವ ಬಿಹಾರದಲ್ಲಿ ಒಬಿಸಿ ‘ಗೇಮ್ ಪ್ಲ್ಯಾನ್’ ಫಲ ಕೊಡಲಿಲ್ಲ. ‘ಇಂಡಿಯಾ ಬ್ಲಾಕ್‌‘ ಪಕ್ಷಗಳನ್ನು ಮತದಾರ ಬೆಂಬಲಿಸಲಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿತು. ಆರ್‌ಜೆಡಿಗೆ ಸಿಕ್ಕಿದ್ದು ಬರೀ 22 ಸ್ಥಾನ. ಕಾಂಗ್ರೆಸ್‌ಗೆ ದೊರೆತಿದ್ದು ಕೇವಲ ನಾಲ್ಕು ಸ್ಥಾನ. ಒಟ್ಟು 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಬಿಹಾರದಲ್ಲಿ ಕಹಿ ಅನುಭವ ಆದ ಬಳಿಕವೂ ರಾಹುಲ್ ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮಂತ್ರ ಜಪಿಸುವರೇ? ಈ ನಿಲುವಿಗೆ ಬದ್ಧವಾಗಿದ್ದರೆ ‘ಅಹಿಂದ’ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕದಲಿಸುವರೇ? ‘ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಮಾಡುತ್ತೇನೆ’ ಎಂದು ಡಿಕೆಶಿಗೆ ಮಾತು ಕೊಟ್ಟಿದ್ದರೆ, ಅದರಂತೆ ನಡೆದುಕೊಳ್ಳುವರೆ? ಇವೆರಡರಲ್ಲಿ ರಾಹುಲ್ ಯಾವ ದಾರಿ ತುಳಿಯಲಿದ್ದಾರೆ ಎನ್ನುವುದು ನಿಗೂಢ.

ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದು ಮೂರು ರಾಜ್ಯಗಳಲ್ಲಿ ಮಾತ್ರ. ಹಿಮಾಚಲ ಪ್ರದೇಶ. ತೆಲಂಗಾಣ ಮತ್ತು ಕರ್ನಾಟಕದಲ್ಲಿ. ಕೆಲವು ವರ್ಷಗಳ ಹಿಂದೆ 11 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಕ್ರಮೇಣ ಅನೇಕ ರಾಜ್ಯಗಳಲ್ಲಿ ಅಧಿಕಾರ ಕೈ ತಪ್ಪಿಹೋಯಿತು. ಈಗಿರುವ ಮೂರು ರಾಜ್ಯಗಳಲ್ಲೇ ಸಾಮಾಜಿಕ ಸಮತೋಲನ ಕಾಪಾಡಬೇಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ಹಿಮಾಚಲದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ರಜಪೂತ ಸಮಾಜದವರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಸರೇ ಸೂಚಿಸುವಂತೆ ರೆಡ್ಡಿ ಸಮುದಾಯದವರು. ಸಿದ್ದರಾಮಯ್ಯ ಹಿಂದುಳಿದ ಕುರುಬ ಜಾತಿಯವರು. ಜಾತ್ಯತೀತ ಜನತಾ ದಳದಿಂದ ಹೊರಬಂದ ಬಳಿಕ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮಾಜ ಸಂಘಟಿಸಲು ಪ್ರಯತ್ನಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ನ ಬೇರೆ ನಾಯಕರಿಗೆ ಹೋಲಿಸಿದರೆ ಅಹಿಂದ ಸಮುದಾಯದಲ್ಲಿ ಸಿದ್ದರಾಮಯ್ಯನವರ ಪ್ರಾಬಲ್ಯ ಹೆಚ್ಚಿದೆ. ಇಡೀ ಅಹಿಂದ ಸಮಾಜವೇ ಅವರ ಹಿಂದಿದೆ ಎಂದು ಹೇಳಲಾಗದು. ಇತ್ತೀಚೆಗೆ ಸಂಸ್ಥೆಯೊಂದು ಅಹಿಂದ ಸಮಾಜದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ನಾಯಕರು ಯಾರೆಂದು ಸಮೀಕ್ಷೆ ನಡೆಸಿತ್ತು. ಅದರಲ್ಲಿ ಸಿದ್ದರಾಮಯ್ಯನವರ ಗ್ರಾಫ್ ಉಳಿದವರಿಗಿಂತ ಕೊಂಚ ಮೇಲಿತ್ತು. ಇದು ಆರು ತಿಂಗಳ ಹಿಂದಿನ ಸಮೀಕ್ಷೆ. ಈ ಸಮೀಕ್ಷೆ ವಿಶ್ವಾಸಾರ್ಹವೇ ಎಂದು ಹೇಳುವುದು ಕಷ್ಟ. ಈಗ ಸಮೀಕ್ಷೆ ನಡೆದರೆ ಏನಾಗಬಹುದು ಎಂದು ಅಂದಾಜಿಸಲಾಗದು.

ರಾಜ್ಯ ನಾಯಕತ್ವ ಬದಲಾವಣೆ ಸಮಸ್ಯೆಯನ್ನು ರಾಹುಲ್ ಸುಸೂತ್ರವಾಗಿ ಪರಿಹರಿಸಿದರೆ ಅವರೊಬ್ಬ ಸಮರ್ಥ ನಾಯಕರಾಗಿ ಹೊರಹೊಮ್ಮಬಹುದು. ಏಕೆಂದರೆ, ಸಿದ್ದರಾಮಯ್ಯ, ಶಿವಕುಮಾರ್ ಅವರಿಗಿಂತಲೂ ರಾಹುಲ್‌ಗೆ ಈ ಬಿಕ್ಕಟ್ಟು ಹೆಚ್ಚು ತಲೆನೋವಾಗಿದೆ. ಅಕಸ್ಮಾತ್ ಇವರಿಬ್ಬರ ನಡುವೆ ಆಗಿದೆ ಎನ್ನಲಾದ ಒಪ್ಪಂದದಲ್ಲಿ ರಾಹುಲ್ ಭಾಗಿಯಾಗದಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ‘ನನ್ನ ಸಮ್ಮುಖದಲ್ಲಿ ಒಪ್ಪಂದ ಆಗಿಲ್ಲ’ ಎಂದು ಜಾರಿಕೊಳ್ಳಲು ಅವಕಾಶವಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ವಿಷಯವನ್ನು ಯಾಕೆ ಇಷ್ಟೊಂದು ಜಟಿಲ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇಷ್ಟೊತ್ತಿಗೆ ಏನಾದರೊಂದು ಹೇಳಬೇಕಿತ್ತು. ಒಪ್ಪಂದ ಆಗಿದೆಯೇ ಅಥವಾ ಆಗಿಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕಿತ್ತು.

ರಾಜ್ಯದ ಮತದಾರರು 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ. 135 ಕ್ಷೇತ್ರಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಗೆಲುವಿನಲ್ಲಿ ಬಹುತೇಕ ಎಲ್ಲ ನಾಯಕರ ಪರಿಶ್ರಮವೂ ಇದೆ. ಸಿದ್ದರಾಮಯ್ಯ ಅವರ ಜತೆ ಶಿವಕುಮಾರ್ ಹೆಗಲು ಕೊಟ್ಟಿದ್ದಾರೆ. ಈಗ ಕುರ್ಚಿಗಾಗಿ ನಡೆದಿರುವ ಕಿತ್ತಾಟದಿಂದ ಜನ ಬೇಸತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿಗೂ ಕಾಂಗ್ರೆಸ್ ನಾಯಕರು ಕಚ್ಚಾಡುವುದು ಬೇಕಿದೆ. ಇವರು ಕಿತ್ತಾಡಿದಷ್ಟು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಲಾಭವಾಗಲಿದೆ ಎನ್ನುವುದು ಅದರ ಲೆಕ್ಕಾಚಾರ. ‘ಕಾಂಗ್ರೆಸ್‌ನಲ್ಲಿ ದೋಸೆ ತೂತಾದರೆ, ಬಿಜೆಪಿಯಲ್ಲಿ ತವವೇ ತೂತು’. ಅಲ್ಲೂ ಬಿ.ವೈ. ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ.

‘ಮುಖ್ಯಮಂತ್ರಿ ಬದಲಾವಣೆ ಮುಂದೇನು’ ಎಂಬುದು ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡೆಸಿದ ಎರಡು ಉಪಾಹಾರ ಸಭೆಗಳಲ್ಲಿ ರಾಜಕಾರಣ ಚರ್ಚೆಯಾಗಿದೆ. ಮಂಗಳವಾರ ಬೆಳಗ್ಗೆ ಡಿಕೆಶಿ ಏರ್ಪಡಿಸಿದ್ದ ಉಪಾಹಾರ ಸಭೆಯಲ್ಲಿ ಮಹತ್ವದ ಚರ್ಚೆನಡೆದಿವೆ. ಒಂದು ಹಂತದಲ್ಲಿ, ಡಿಕೆಶಿ ಸಹೋದರ ಡಿ.ಕೆ. ಸುರೇಶ್ ತಮ್ಮ ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರಂತೆ. ರಾಹುಲ್ ಗಾಂಧಿ ಸೂಚಿಸಿದರೆ ತಕ್ಷಣವೇ ಅಧಿಕಾರ ತ್ಯಜಿಸುವುದಾಗಿ ಹೇಳಿದರಂತೆ. ಇವೆಲ್ಲವೂ ಅಂತೆ- ಕಂತೆಗಳು. ನಿಖರತೆ ಇಲ್ಲ. ಆದರೆ, ರಾಜಕೀಯ ಪಡಸಾಲೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.

ಸದ್ಯ ರಾಹುಲ್ ಮುಂದಿರುವುದು ಕರ್ನಾಟಕ ಕಾಂಗ್ರೆಸ್ ಸಮಸ್ಯೆ ಅಷ್ಟೇ ಅಲ್ಲ. ರಾಜಸ್ಥಾನದಲ್ಲೂ ಕಿತ್ತಾಟ ಇದೆ. ಮಧ್ಯ ಪ್ರದೇಶದಲ್ಲೂ ಜಗಳವಿದೆ. ಹರ್ಯಾಣದ ಬಗ್ಗೆ ಹೇಳುವುದೇ ಬೇಡ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಗುದ್ದಾಡುತ್ತಿದ್ದಾರೆ. ಈಚೆಗೆ ಅಜ್ಮೀರ್‌ನಲ್ಲಿ ಇವರಿಬ್ಬರ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರಿತು. ಮಧ್ಯ ಪ್ರದೇಶದಲ್ಲಿ 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಕೇವಲ 15 ತಿಂಗಳಲ್ಲಿ ಸರಕಾರ ಪತನವಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಮಾಧವರಾವ್ ಸಿಂದಿಯಾ ಅವರ ಪುತ್ರ ಜ್ಯೋತಿರಾದಿತ್ಯ ಸಿಂದಿಯಾ 22 ಶಾಸಕರ ಜತೆ ಬಿಜೆಪಿ ಸೇರಿದ್ದರಿಂದ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ಕೊಡಬೇಕಾಯಿತು. ಹರ್ಯಾಣದಲ್ಲೂ ಹೂಡಾ ಹಾಗೂ ಶೆಲ್ಜಾ ನಡುವಿನ ಕಿತ್ತಾಟದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಬಾರೀ ಬೆಲೆ ತೆರಬೇಕಾಯಿತು.

ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷ ಅನುಭವಿಸಿರುವ ಎಲ್ಲ ಸೋಲುಗಳನ್ನು ರಾಹುಲ್ ಅವರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಅಪ್ಪು- ಪಪ್ಪು ಎಂದೆಲ್ಲಾ ಲೇವಡಿ ಮಾಡಲಾಗುತ್ತಿದೆ. ಎರಡು ದಶಕಗಳಲ್ಲಿ ಕಾಂಗ್ರೆಸ್ ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅದು ಗೆದ್ದಿದ್ದು ಬರೀ 44 ಸ್ಥಾನ. ಐದು ವರ್ಷದ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 52 ಸ್ಥಾನ ಪಡೆದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದೆ. ಆನಂತರ ವಿವಿಧ ರಾಜ್ಯಗಳಲ್ಲಿ ಸೋಲುಂಡಿದೆ. ರಾಹುಲ್ ನಾಯಕತ್ವವನ್ನು ನೆಹರೂ, ಇಂದಿರಾ, ಸೋನಿಯಾ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, ಅವರ ಕಾಲ ಘಟ್ಟವೇ ಬೇರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕಾರಣ ಮಾಡುತ್ತಿರುವ ಕಾಲ ಘಟ್ಟ ಬೇರೆ. ಆ ಸಮಯದಲ್ಲಿ ಕಾಂಗ್ರೆಸ್‌ನಲ್ಲಿ ಬಹಳಷ್ಟು ನಂಬಿಕಸ್ಥ ನಾಯಕರಿದ್ದರು. ಈಗ ನಂಬಬಹುದಾದ ನಾಯಕರ ಸಂಖ್ಯೆ ಕಡಿಮೆಯಿದೆ. ಎಲ್ಲದಕ್ಕೂ ರಾಹುಲ್ ಅವರೊಬ್ಬರೇ ಹೆಗಲು ಕೊಡುತ್ತಿದ್ದಾರೆ. ಅವರ ವೇಗಕ್ಕೆ ಹೆಜ್ಜೆ ಹಾಕುವ ನಾಯಕರ ಸಂಖ್ಯೆ ಕಾಂಗ್ರೆಸ್‌ನಲ್ಲಿ ಕಡಿಮೆಯಿದೆ. ಅನೇಕ ದಕ್ಷ- ಸಮರ್ಥ ನಾಯಕರು ವಯಸ್ಸಿನ ಕಾರಣಕ್ಕೆ ಮನೆ ಸೇರಿದ್ದಾರೆ. ಕೆಲವರು ಎಲ್ಲ ಸೌಲಭ್ಯ ಸವಲತ್ತು ಅನುಭವಿಸಿ ಕಾಂಗ್ರೆಸ್‌ಗೆ ಕೈ ಕೊಟ್ಟು ಹೋಗಿದ್ದಾರೆ. ಒಂದಿಬ್ಬರು ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುಣಗಾನ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲು ಶಕ್ತಿ ಇಲ್ಲದ ಕೆಲವು ನಾಯಕರಿಗೆ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ. ಅವರು ಕೊಡುವ ವರದಿಗಳ ಮೇಲೆ ರಾಹುಲ್ ನಿರ್ಧಾರ ಮಾಡಬೇಕಿದೆ. ಇಂಥ ನಾಯಕರಿಗೇ ಕರ್ನಾಟಕದ ಹೊಣೆ ವಹಿಸಲಾಗಿದೆ. ಅವರು ಬೆಂಗಳೂರಿಗೆ ಬಂದು ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುವ ಕಸರತ್ತು ನಡೆಸಿದ ಮೇಲೆಯೇ ರಾಜಕಾರಣ ಹಳಸಿದ್ದು. ಅಲ್ಲಿವರೆಗೂ ಎಲ್ಲವೂ ಸರಿಯಿತ್ತು. ಪಾಪ ರಾಹುಲ್‌ಗೆ ಇದು ಅರ್ಥವಾಗಲಿಲ್ಲ. ರಾಜಕಾರಣದ ಒಳಸುಳಿಗಳು ಅವರಿಗೆ ಮನವರಿಕೆ ಆಗುವ ತನಕ ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News