×
Ad

ಸಮಾಜದ ದುರ್ಬಲ ವರ್ಗದವರ ನೋವನ್ನು ಕಣ್ಣಾರೆ ಕಂಡಿರುವುದು ಪ್ರೇರಣೆ: ಸಿದ್ದರಾಮಯ್ಯ

Update: 2016-07-17 13:22 IST

ಬೆಂಗಳೂರು, ಜು.17: ಅನ್ನಭಾಗ್ಯ, ಕ್ಷೀರಭಾಗ್ತ, ಶೂಭಾಗ್ಯ, ಕೃಷಿಭಾಗ್ಯ ಮುಂತಾದ ಯೋಜನೆಗಳಿಗೆ ನನ್ನ ಅನುಭವ ಹಾಗೂ ಸಮಾಜದ ದುರ್ಬಲ ವರ್ಗದವರ ನೋವನ್ನು ಕಣ್ಣಾರೆ ಕಂಡಿರುವುದು ಪ್ರೇರಣೆಯಾಗಿದೆ. ಆದ್ದರಿಂದಲೇ ಇಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ವಿಕಾಸಸೌಧದಲ್ಲಿಂದು ಏರ್ಪಡಿಸಿದ್ದ ಕರ್ನಾಟಕದ ಮುನ್ನಡೆ ಮುಖ್ಯಮಂತ್ರಿಗಳೊಡನೆ ಪತ್ರಕರ್ತರ ಸಂವಾದದಲ್ಲಿ ಮಾತನಾ‌ಡಿದ ಅವರು, ತಾವು ಬಾಲ್ಯದಲ್ಲಿ ಅನುಭವಿಸಿದ ನೋವು ಹಾಗೂ ಸಮಾಜದಲ್ಲಿದ್ದ ಬಡತನದ ಅನುಭವಗಳೇ ಇಂತಹ ಜನಪರ ಯೋಜನೆ ಜಾರಿಗೊಳಿಸಲು ನನ್ನನ್ನು ಪ್ರೇರೇಪಿಸಿದೆ.

ಸರಕಾರದ ಈ ಯೋಜನೆಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಅವರು ಇದನ್ನು ಹೇಳಿಕೊಳ್ಳುತ್ತಿಲ್ಲ. ಏಕೆಂದರೆ ಯೋಜನೆಯ ಫಲಾನುಭವಿಗಳು ಧ್ವನಿಯಿಲ್ಲದವರಾಗಿದ್ದಾರೆ. ಇಂತಹ ಧ್ವನಿ ಇಲ್ಲದವರಿಗೆ ಮಾಧ್ಯಮ ಧ್ವನಿಯಾಗಬೇಕು ಎಂದು ಹೇಳಿದರು.

ಮೈಸೂರಿನ ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ಅವರು, ಆ ಭಾಗದಲ್ಲಿ ಹಬ್ಬ- ಹರಿದಿನ ಅಥವಾ ನೆಂಟರು ಮನೆಗೆ ಬಂದಾಗ ಮಾತ್ರ ಅನ್ನ ಬೇಯಿಸಲಾಗುತ್ತಿತ್ತು. ಒಂದು ತುತ್ತು ಅನ್ನಕ್ಕಾಗಿ ಶ್ರೀಮಂತರ ಮನೆ ಎದುರು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಈ ಸ್ಥಿತಿ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ 1 ಕೋಟಿ 8 ಲಕ್ಷ ಕುಟುಂಬಕ್ಕೆ ಅನುಕೂಲವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ತಲೆದೂರಿದ್ದರು ಅನ್ನಭಾಗ್ಯ ಯೋಜನೆಯಿಂದಾಗಿ ಬರಗಾಲದ ಕೆಟ್ಟ ಪರಿಣಾಮ ಜನರ ಮೇಲೆ ಉಂಟಾಗಿಲ್ಲ. ಈ ಯೋಜನೆ ಇಲ್ಲದಿದ್ದರೆ ಜನರು ಊರು ಬಿಡುವ ಪರಿಸ್ಥಿತಿ ಉಂಟಾಗುತ್ತಿತ್ತು. ಜನರು ಊಟ ಇಲ್ಲದೆ ಸಾಯುವ ಪರಿಸ್ಥಿತಿಯು ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.

ಕಾಲೇಜು ಓದುವಾಗ ಹಾಸ್ಟೆಲ್‌ನಲ್ಲಿ ಉಳಿದು ಓದುವಷ್ಟು ಆರ್ಥಿಕವಾಗಿ ನಾನು ಸಬಲನಾಗಿರಲಿಲ್ಲ. ಆದ್ದರಿಂದ ಸ್ನೇಹಿತನ ಜೊತೆ ಬಾಡಿಗೆ ಕೊಠಡಿಯಲ್ಲಿ ನೆಲೆಸಿ ಡಿಗ್ರಿ ಓದಿದೆ. ಈ ಸಂದರ್ಭದಲ್ಲಿ ನಾನು ಅನುಭವಿಸಿದ ನೋವು ಇತರ ವಿದ್ಯಾರ್ಥಿಗಳಿಗೆ ಉಂಟಾಗಬಾರದು ಎಂಬ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೊಳಿಸಿದೆ. 87 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಿದೆ ಎಂದು ಹೇಳಿದ ಅವರು, ಕೃಷಿಭಾಗ್ಯ ಕೂಡ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು, ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಖುಷ್ಕಿ ಭೂಮಿ ಇದೆ. ಈ ಯೋಜನೆಯಿಂದ ಹೆಚ್ಚಿನ ಖುಷ್ಕಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿದೆ ಎಂದರು ಹೇಳಿದರು.

ಮೂರು ವರ್ಷಗಳ ಕಾಲ ಒಂದೇ ಚಪ್ಪಲಿಯನ್ನು ಬಳಸಿದೆ. ಶೂ ಖರೀದಿಸುವಷ್ಟು ಶ್ರೀಮಂತರಾಗಿರಲಿಲ್ಲ. ಬರಿಗಾಲಲ್ಲೂ ನಡೆದು ಶಾಲೆ ಹೋಗುತ್ತಿದೆ. ಆದ್ದರಿಂದ ಈಗಿನ ಮಕ್ಕಳಿಗೆ ಈ ನೋವು ಗೊತ್ತಾಗಬಾರದು ಎಂಬ ಉದ್ದೇಶದಿಂದ ಶೂಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಮ್ಮ ಬಾಲ್ಯದ ದಿನಗಳು ಮತ್ತು ಅನುಭವಗಳನ್ನು ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ದರಾಜು, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ, ಎಲ್.ಪ್ರಕಾಶ್, ಶಂಕರಪ್ಪ, ಸಚಿವ ಆಂಜನೇಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಂವಾದದ ಸಾರ
* ಮಾಧ್ಯಮಗಳಿಗೆ ಸರಕಾರವನ್ನು ಟೀಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.
* ಸರಕಾರದ ಪರವಾಗಿ ಬರೆಯಲು ಯಾವತ್ತೂ ಒತ್ತಾಯಿಸಿಲ್ಲ.
* ಸರಕಾರ ತಪ್ಪು ಮಾಡಿದಾಗ ಟೀಕೆ ಮಾಡುವ ಮತ್ತು ಸಲಹೆ ನೀ‌ಡುವ ಮುಕ್ತ ಸ್ವಾತಂತ್ರ್ಯ.
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ.
* 165 ಭರವಸೆಗಳಲ್ಲಿ 120 ಈ‌ಡೇರಿಕೆ, ಉಳಿದವು ಎರಡು ವರ್ಷದಲ್ಲಿ ಈಡೇರಿಸಲಾಗುವುದು.
* ವಾರ್ತಾ ಇಲಾಖೆಗೆ ಹೊಸ ಕಾಯಕಲ್ಪ.
* ಮುಂದಿನ ಎರಡು ವರ್ಷದಲ್ಲಿ ಸರಕಾರದ ಯೋಜನೆಗಳಿಗೆ ಹೆಚ್ಚಿನ ಪ್ರಚಾರ.
* ನೀರಾವರಿಗೆ 33 ಸಾವಿರ ಕೋಟಿ ರೂ. ಖರ್ಚು.
* ಬಿಜೆಪಿ ಅಧಿಕಾರಾವಧಿಯಲ್ಲಿ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ.

ಸತ್ಯಕ್ಕೆ ದೂರವಾದ ಸುದ್ದಿ
ಚಾಮುಂಡೇಶ್ವರಿ ದೇವಾಲಯಕ್ಕೆ ಚಪ್ಪಲಿ ಕಳಚಿದ್ದು ಬರಿ ಸಾಕ್ಸ್‌ನಲ್ಲೇ ತೆರಳಿ ಪೂಜೆ ಸಲ್ಲಿಸಿದ್ದೆ. ಆದರೆ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಚಪ್ಪಲಿ ಹಾಕಿಕೊಂಡೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಅಪಮಾನ ಮಾಡಿ ಅಪವಿತ್ರ ಮಾಡಿದ್ದಾರೆ ಎಂದು ಬರೆದವು. ಇದು ಕೂಡ ಸತ್ಯಕ್ಕೆ ದೂರವಾದ ಸಂಗತಿ. ಈ ಬಗ್ಗೆ ತಾವು ಸ್ಪಷ್ಟೀಕರಣ ಕೊಟ್ಟರು ಯಾರು ಸುದ್ದಿ ಪ್ರಕಟಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ರೀತಿ ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಕಾರಣದಿಂದ ಕಾರು ಬದಲಾಯಿಸಿದ್ದೇನೆ ಎಂದು ಸುಳ್ಳು ಸುದ್ದಿ ಪ್ರಕಟಿಸಲಾಯಿತು. ಕಾಗೆ ಕುಳಿತುಕೊಳ್ಳುವ ಎರಡು ತಿಂಗಳು ಮೊದಲೆ ಹೊಸ ಕಾರು ತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ಏನೆಲ್ಲಾ ಬರೆದವು. ಶನಿಕಾಟ ಆರಂಭವಾಗುತ್ತದೆ ಎಂದು ಕೂಡ ಬರೆಯಲಾಯಿತು. ಆದರೆ ಕಾಗೆ ಅನಿಷ್ಟದ ಪಕ್ಷಿ ಅಲ್ಲ. ತಿಥಿಯ ಸಂದರ್ಭದಲ್ಲಿ ತಿಥಿಗೆ ಇಟ್ಟ ಹಾಲು, ತುಪ್ಪವನ್ನು ಕಾಗೆ ತಿಂದ ಮೇಲೆಯೇ ನಾವೆಲ್ಲಾ ಎಲ್ಲರಿಗೂ ಹಂಚುತ್ತೇವೆ. ಆದ್ದರಿಂದ ಕಾಗೆ ಅನಿಷ್ಟ ಪಕ್ಷಿ ಅಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News