ಬಿಜೆಪಿ-ಜೆಡಿಎಸ್ ನೈತಿಕ ದಿವಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ
ಬೆಂಗಳೂರು, ಜು. 19: ನೈತಿಕವಾಗಿ ದಿವಾಳಿಯಾಗಿರುವ ಬಿಜೆಪಿ-ಜೆಡಿಎಸ್ ಮುಖಂಡರಿಗೆ ಕೆ.ಜೆ.ಜಾರ್ಜ್ ರಾಜೀನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರಿಗೆ ಕಲ್ಲು ಹೊಡೆಯುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿದಂತೆ 18 ಮಂದಿಯ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳಿವೆ. ಇಂತವರಿಗೆ ಜಾರ್ಜ್ ರಾಜೀನಾಮೆ ಕೇಳುವ ನೈತಿಕತೆ ಎಲ್ಲಿಯದು ಎಂದು ಪ್ರಶ್ನಿಸಿದರು.
ಗೋಸುಂಬೆ ಬಣ್ಣ ಬಯಲು : ತಮ್ಮ ಮೇಲೆ ಮೊಕದ್ದಮೆಗಳಿದ್ದು ಮತ್ತೊಬ್ಬರ ರಾಜೀನಾಮೆ ಕೇಳುವುದು ಯಾವ ನೈತಿಕತೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿ ಹಾಗೂ ಜೆಡಿಎಸ್‌ನ ಗೋಸುಂಬೆ ಬಣ್ಣವನ್ನು ಜನತೆ ಮುಂದೆ ಬಿಚ್ಚಿಡಲಾಗುವುದು. ಆದರೆ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡುತ್ತಿವೆ ಎಂದು ದೂರಿದರು.
ದ್ವಂದ್ವ ನೀತಿ: ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ರಾಜೀನಾಮೆ ಕೇಳದ ಬಿಜೆಪಿ ಜಾರ್ಜ್ ರಾಜೀನಾಮೆ ಕೇಳುತ್ತಿದೆ. ನಮಗೊಂದು ನ್ಯಾಯ ಅವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಸಂಪುಟದಲ್ಲಿನ 13ಮಂದಿ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಸ್ಮತಿ ಇರಾನಿ ಮೇಲೆ ರಸ್ತೆ ಅಪಘಾತದಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪವಿದೆ. ಉಮಾಭಾರತಿ ಮೇಲೆ ಎರಡು ಕೊಲೆ, 6 ಡಕಾಯಿತಿ ಸೇರಿದಂತೆ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.
ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ 19 ಮಂದಿ ಪೈಕಿ ಏಳು ಜನ ಕೇಂದ್ರ ಸಚಿವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದ ಸಿದ್ದರಾಮಯ್ಯ, ಶವವನ್ನಿಟ್ಟು ರಾಜಕೀಯ ಮಾಡಬಾರದೆಂದು ನಾವು ಇದನ್ನು ಪ್ರಶ್ನಿಸಲಿಲ್ಲ ಎಂದು ಸ್ಪಷ್ಟಣೆ ನೀಡಿದರು.
ನ್ಯಾಯಾಲಯದ ಮೇಲೆ ನಮಗೆ ಅಪಾರ ಗೌರವವಿದೆ. ಆ ಹಿನ್ನೆಲೆಯಲ್ಲಿ ಕೋರ್ಟ್ ಆದೇಶಕ್ಕೆ ತಲೆಬಾಗಿ ಜಾರ್ಜ್ ಸ್ವಯಂ ಪ್ರೇರಣೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಸಂಪುಟ ಸಹೋದ್ಯೋಗಿಗಳೇ ರಾಜೀನಾಮೆ ಅಂಗೀಕರಿಸದಂತೆ ಒತ್ತಡ ಹೇರಿದ್ದರು. ಆದರೂ, ನೈತಿಕತೆ ದೃಷ್ಟಿಯಿಂದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದರು.
ಸಿಬಿಐ ಅಗತ್ಯವಿಲ್ಲ: ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ಇಲ್ಲ. ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತನಿಖೆಯ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ. ಆ ನಂತರ ತಪ್ಪಿತಸ್ಥರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುರುಳಿಲ್ಲದ ಆರೋಪ: ತಮ್ಮ ವಿರುದ್ಧ ಹತ್ತು ಮೊಕದ್ದಮೆಗಳಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ, 2007ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಪಟ್ಟಂತೆ ಮೊಕದ್ದಮೆ ದಾಖಲಾಗಿದ್ದವು. 2008ರಲ್ಲೆ ಎಲ್ಲ ಪ್ರಕರಣಗಳು ಇತ್ಯರ್ಥವಾಗಿವೆ. ಆದರೂ, ನನ್ನ ವಿರುದ್ಧ ಗೂಬೆಕೂರಿಸುವ ಪ್ರಯತ್ನ ಮಾಡಿದ್ದಾರೆಂದು ಟೀಕಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅಪಪ್ರಚಾರ ಮಾಡುವ ಮೂಲಕ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದು, ಕಾಂಗ್ರೆಸ್ ಪಕ್ಷವೂ ಅದಕ್ಕೆ ಪ್ರತಿಯಾಗಿ ವಾಸ್ತವ ಸಂಗತಿಗಳನ್ನು ರಾಜ್ಯದ ಜನತೆಗೆ ತಿಳಿಸುವ ಕೆಲಸ ಮಾಡಲಿದೆ. ಆ ನಿಟ್ಟಿನಲ್ಲಿ ಪಕ್ಷ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಅವರು ತಿಳಿಸಿದರು.
ಅಮಾನತ್ತು ಅಗತ್ಯವಿಲ್ಲ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದ ಕೂಡಲೇ ಅಧಿಕಾರಿಗಳನ್ನು ಅಮಾನತ್ತು ಮಾಡುವ ಅಗತ್ಯವಿಲ್ಲ ಎಂದ ಅವರು, ಪ್ರಣಬ್ ಮೊಹಂತಿ, ಎ.ಎಂ.ಪ್ರಸಾದ್ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ಎ.ಮಂಜು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೇಲ್ಮನೆ ಸದಸ್ಯ ಗೋವಿಂದರಾಜು, ಹಿರಿಯ ಮುಖಂಡರಾದ ವಿ.ಆರ್.ಸುದರ್ಶನ್, ಬೋಸರಾಜು ಹಾಜರಿದ್ದರು.
ಕೆ.ಜೆ.ಜಾರ್ಜ್ ರಾಜೀನಾಮೆ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದೇನೆ. ಈ ಹಂತದಲ್ಲಿ ಆ ಖಾತೆಯನ್ನು ಬೇರೆಯವರಿಗೆ ವಹಿಸುವ ಪ್ರಶ್ನೆಯೇ ಇಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ