×
Ad

ಪೊಲೀಸ್ ಠಾಣೆಯಲ್ಲೇ ಮಹಿಳಾ ಪಿಎಸ್ಸೈ ಆತ್ಮಹತ್ಯೆಗೆ ಯತ್ನ

Update: 2016-07-19 19:28 IST

ಬೆಂಗಳೂರು, ಜು.19: ಡಿವೈಎಸ್ಪಿಗಳಾದ ಕಲ್ಲಪ್ಪ ಹಂಡಿಬಾಗ್, ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಗಳ ಬೆನ್ನಲ್ಲೇ ನಗರದ ಮಹಿಳಾ ಪಿಎಸ್ಸೈವೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ, ಠಾಣೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
 ಆತ್ಮಹತ್ಯೆಗೆ ಯತ್ನಿಸಿರುವ ಪಿಎಸ್ಸೈಯನ್ನು ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯ ರೂಪಾ ತಂಬದ ಎಂದು ಗುರುತಿಸಿದ್ದು, ಇಂದು ಮಧ್ಯಾಹ್ನ ಕರ್ತವ್ಯಕ್ಕೆಂದು ಬಂದ ಅವರು 23 ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಗೊತ್ತಾಗಿದೆ.
ಪಿಎಸ್ಸೈ ರೂಪಾ ತಂಬದ ಅವರನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಅವರ ಆಯೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
   ಪ್ರಕರಣದ ವಿವರ: ಇಂದು ಮಧ್ಯಾಹ್ನ ಕರ್ತವ್ಯಕ್ಕೆಂದು ರೂಪಾ ವಿಜಯನಗರ ಪೊಲೀಸ್ ಠಾಣೆಗೆ ಹಾಜರಾದರು. ಬಳಿಕ ಠಾಣಾಧಿಕಾರಿ ಸಂಜೀವ್‌ಗೌಡ ಅವರು ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಪ್ತಿಯಾಗಿದ್ದ ಮೊಬೈಲ್‌ಗಳ ಬಗ್ಗೆ ವಿವರ ನೀಡುವಂತೆ ಸೂಚಿಸಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ಮಾಹಿತಿ ನೀಡದ ಕಾರಣ ಜಪ್ತಿಯಾದ ಮೊಬೈಲ್ ದುರ್ಬಳಕೆ ಮಾಡಿರುವುದಾಗಿ ಠಾಣಾಧಿಕಾರಿ ಸಂಜೀವ್‌ಗೌಡ ಡೈರಿಯಲ್ಲಿ ಉಲ್ಲೇಖ ಮಾಡಿದ್ದರು ಎನ್ನಲಾಗಿದೆ.
ಬಳಿಕ ಠಾಣೆಯಿಂದ ಹೊರ ಬಂದ ರೂಪಾ ತಂಬದ, ನಿಮಗೆ ಬುದ್ಧಿ ಕಲಿಸುತ್ತೇನೆ, ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿಯಂತೆ ನಾನು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಂಡು, 23 ನಿದ್ರೆ ಮಾತ್ರೆ ಸೇವಿಸಿ ನಂತರ ಬೈಕ್‌ನಲ್ಲಿ ವಸತಿ ಗೃಹದ ಕಡೆ ತೆರಳಿದ್ದಾರೆ. ಮಾತ್ರೆ ಸೇವಿಸಿದ್ದನ್ನು ಕಂಡು ಗಾಬರಿಗೊಂಡ ಪೊಲೀಸರು ರೂಪಾ ಅವರನ್ನು ಹಿಂಬಾಲಿಸಿ ಹೋದಾಗ ವಸತಿ ಗೃಹದ ಬಳಿ ರೂಪಾ ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪತಿಯೊಂದಿಗೆ ಜಗಳ: ಇಂದು ಬೆಳಗ್ಗೆ ರೂಪಾ ತಂಗದ ಅವರು ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಠಾಣೆಗೆ ಹಾಜರಾಗಿದ್ದರು. ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಯತ್ನಕ್ಕೆ ಮುಂದಾಗಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News