ಮೋದಿ ಸರ್ಕಾರದಲ್ಲಿ ಗೋಮೂತ್ರಕ್ಕೆ ಅಚ್ಛೇದಿನ್!

Update: 2016-07-20 05:51 GMT

ಉತ್ತರ ಭಾರತದ ಎರಡು ಡಜನ್ ದನಗಳ ದೊಡ್ಡಿಯಲ್ಲಿ ಸುಶೀಲಾ ಕುಮಾರಿ ದೊಡ್ಡ ಅಲ್ಯುಮಿನಿಯಂ ಬೌಲ್ ಹಿಡಿದು ಅತೀ ಮುಖ್ಯ ಉತ್ಪನ್ನ ಸಂಗ್ರಹಿಸಲು ಸಿದ್ಧಳಾಗಿದ್ದಾಳೆ. ಅದೇ ಗೋಮೂತ್ರ! ಗೋವಿನ ಸೋಸಿದ ಮೂತ್ರಕ್ಕೆ ಈಗ ಭಾರತದಲ್ಲಿ ಹಾಲಿನಷ್ಟೇ ಬೆಲೆಯಿದೆ. ಸುಶೀಲಾ ಮತ್ತು ಇತರ ಕೆಲಸಗಾರರು 24 ಗಂಟೆಯೂ ನವದೆಹಲಿಯ ಪೂರ್ವಕ್ಕೆ 50 ಕಿ.ಮೀ. ದೂರದಲ್ಲಿರುವ ಭುಲಂದಶಹರ್‌ನ ಈ ಗೋವಿನ ದೊಡ್ಡಿಯಲ್ಲಿ ಗೋಮೂತ್ರ ಸಂಗ್ರಹಿಸುತ್ತಾರೆ. ನಿತ್ಯವೂ ಗೋವು 15ರಿಂದ 20 ಲೀಟರ್ ಮೂತ್ರ ಕೊಡುತ್ತದೆ. ಹೀಗೆ ಭಾರತದ ಹಸುವಿನ ಕತೆಯನ್ನು ವಿದೇಶಿ ಪತ್ರಿಕೆಗಳು ತೆರೆದಿಡುತ್ತಿವೆ. ವಿದೇಶಿ ಪತ್ರಿಕೆಗಳಲ್ಲಿ ಈಗ ಭಾರತದ ಹಸುವಿನ ಪುರಾಣವೇ ದೊಡ್ಡ ಸುದ್ದಿಯಾಗಿದೆ ಮತ್ತು ಮೋದಿ ಹೇಗೆ ಹಸುಜನ್ಯ ಉತ್ಪನ್ನಗಳ ಉದ್ಯಮಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದೂ ವಿದೇಶಿ ಪತ್ರಿಕೆಗಳು ಬರೆದಿವೆ. ಬ್ಲೂಮ್‌ಬರ್ಗ್ ಔದ್ಯಮಿಕ ಪತ್ರಿಕೆಯಲ್ಲಿ ಇತ್ತೀಚೆಗೆ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ. ಅದರ ವಿವರಗಳು ಈ ಕೆಳಗಿನಂತಿವೆ.

ಭಾರತೀಯ ತಳಿಯ ಗೋವುಗಳನ್ನು ಹಿಂದೂಗಳು ಪವಿತ್ರ ಎಂದು ಪರಿಗಣಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ವರ್ಷಗಳಲ್ಲಿ ಹಾಲು ಕೊಡುವ ಈ ಹಸುಗಳನ್ನು ರಕ್ಷಿಸಲು ಮತ್ತು ಅದರ ತ್ಯಾಜ್ಯದಿಂದ ತಯಾರಾಗುವ ಉತ್ಪನ್ನಗಳ ಉದ್ಯಮಕ್ಕೆ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಮೋದಿ ಸರ್ಕಾರ ಗೋವಿನ ದೊಡ್ಡಿಗಳಿಗೆ 5.8 ಬಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಿದೆ. ಗೋವನ್ನು ಆಹಾರಕ್ಕೆ ಕೊಲ್ಲುವುದು ಅಥವಾ ನೆರೆಯ ಬಾಂಗ್ಲಾದೇಶಕ್ಕೆ ಮಾರಾಟವಾಗದಂತೆ ತಡೆಯಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹಸುವಿನ ಮೂತ್ರದಿಂದ 30 ರೋಗಪರಿಹಾರ ಮಾಡಬಹುದು ಎನ್ನುತ್ತಾರೆ ಗೋ ವಿಜ್ಞಾನ ಅನುಸಂಧನ ಕೇಂದ್ರದ ಮುಖ್ಯ ಸಂಯೋಜಕ ಸುನೀಲ್ ಮನಿಸಿಂಗ್ಕಾ. ಇದು ಹಿಂದೂ ಸಂಘಟನೆಗಳ ಬೆಂಬಲಿತ ನಾಗಪುರದ ಹಸುವನ್ನು ಆಧರಿಸಿದ ಸಂಶೋಧನಾ ಸಂಸ್ಥೆ.

ಭುಲಂದಶಹರ್‌ನ ದೊಡ್ಡಿಯಲ್ಲಿ ಸುಶೀಲಾ ಮೂತ್ರ ಸಂಗ್ರಹಿಸುವಾಗ ಕೆಳಗೆ ಬಿದ್ದು ನಷ್ಟವಾಗದಂತೆ ಎಚ್ಚರವಹಿಸುತ್ತಾಳೆ. ಮೂತ್ರ ಸಂಗ್ರಹಿಸುವುದು ಬಹಳ ಕಷ್ಟದ ಕೆಲಸ. ದನ ಯಾವಾಗ ಮೂತ್ರ ಮಾಡುತ್ತದೆ ಎನ್ನುವುದೇ ತಿಳಿಯುವುದಿಲ್ಲ ಎನ್ನುವುದು ಇವರ ಚಿಂತೆ. ವಿಕಾಶ್ ಚಂದ್ರ ಗುಪ್ತಾ ಈ ದನದ ದೊಡ್ಡಿಯನ್ನು ಕಳೆದ ವರ್ಷ ಮೂತ್ರ ಉದ್ಯಮಕ್ಕಾಗಿಯೇ ಆರಂಭಿಸಿದ್ದಾರೆ. ಪ್ರಾಣಿಗಳ ಚಲನೆಯನ್ನು ಗುರುತಿಸಿ ಮೂತ್ರ ಸಂಗ್ರಹಿಸುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಮೂತ್ರವನ್ನು ಸೋಸಿ, ಕಶ್ಮಲಗಳನ್ನು ತೆಗೆದ ಮೇಲೆ ಅದನ್ನು ಪುಡಿಯ ರೂಪಕ್ಕೆ ತರಲಾಗುತ್ತದೆ ಅಥವಾ ದ್ರವ ರೂಪದಲ್ಲೇ ಹಲವು ವೈದ್ಯಕೀಯ ಮತ್ತು ಗಿಡಮೂಲಿಕೆಗಳ ಔಷಧಿ ತಯಾರಿಗೆ ಬಳಸಲಾಗುತ್ತದೆ.

ಆದರೆ ಹೀಗೆ ಹಸಿ ಮೂತ್ರವನ್ನು ಸೇವಿಸುವ ಕಾರಣದಿಂದ ಭಾರತದಲ್ಲಿ ಸಾಮಾನ್ಯವಾಗಿರುವ ಮೂರು ರೋಗಗಳ ಸೋಂಕು ದನದಿಂದ ಜನರಿಗೆ ತಗಲಬಹುದು ಎಂದು ಸಿಡ್ನಿ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನಿಗಳು ಹೇಳುತ್ತಾರೆ. ಲೆಪ್ಟೊಸ್ಟಿರೊಸಿಸ್ ಎನ್ನುವುದು ಭಾರತದ ದನಗಳಲ್ಲಿರುವ ರೋಗ. ಇದು ಮೆನಿಂಜಿಟೈಸ್ ಮತ್ತು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ನ್ಯುಮೋನಿಯ, ಜ್ವರ, ಉರಿಯೂತ ಮೊದಲಾದ ಸಮಸ್ಯೆಗಳೂ ಕಾಣಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹಿಂದೂವಾದಿ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಈಗಿನ ದನದ ರಕ್ಷಣೆಯ ಕ್ರಮಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಅವರು ಎತ್ತುಗಳನ್ನು ಕೊಲ್ಲಲು ಇರುವ ಅವಕಾಶವನ್ನೂ ತಡೆಯಲು ಹೇಳುತ್ತಾರೆ. ಎತ್ತುಗಳ ಜಾಗದಲ್ಲಿ ದನಗಳನ್ನೇ ಕೊಂದು ಸಾಗಿಸಲಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ಗೋಮೂತ್ರ ಖರೀದಿಸುವಲ್ಲಿ ಮುಖ್ಯ ವ್ಯಕ್ತಿ ಯೋಗ ಗುರು ಬಾಬಾ ರಾಮ್ ದೇವ್. ಇವರ ಸರಕುಗಳ ಉದ್ಯಮ ಸಾಮ್ರಾಜ್ಯ ಹಲವು ಬಹುರಾಷ್ಟ್ರೀಯ ಕಂಪೆನಿಗಳಿಗೆ ಸ್ಪರ್ಧೆ ನೀಡುತ್ತಿದೆ. ಕಚ್ಚಾವಸ್ತುಗಳಿಗಾಗಿ ರಾಮ್ ದೇವ್ ಕಂಪನಿ 1,50,000 ರೂಪಾಯಿಯನ್ನು ನಿತ್ಯವೂ ಪಾವತಿಸುತ್ತಿದೆ. ಪತಂಜಲಿಯ ಅತೀ ಹೆಚ್ಚು ಮಾರಾಟವಾಗುವ ವಸ್ತು ಮೂತ್ರದಿಂದ ತಯಾರಾದ ನೆಲ ಸ್ವಚ್ಛ ಮಾಡುವ ಗೋನೈಲ್ ಉತ್ಪನ್ನ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಆಚಾರ್ಯ ಬಾಲಕೃಷ್ಣ. ದಿನಕ್ಕೆ 20 ಟನ್ ಗೋನೈಲ್ ತಯಾರಿಸಿದರೂ ಬೇಡಿಕೆ ಪೂರೈಸಲು ಆಗುತ್ತಿಲ್ಲ ಎನ್ನುತ್ತಾರೆ ಬಾಲಕೃಷ್ಣ.

ಗುಜರಾತಿನ ದನದ ಗಿರ್ ತಳಿಯಲ್ಲಿ ಮೂತ್ರದಲ್ಲಿ ಸ್ವರ್ಣದ ಅಂಶ ಇರುವುದು ಪತ್ತೆಯಾಗಿದೆ ಎಂದು ಜುನಾಗಢದ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ವಿವಿಧ ಧರ್ಮಗಳ ಭಾರತದಲ್ಲಿ ಈ ದನದ ರಕ್ಷಣೆಯ ನಿಯಮಗಳು ಸಂಘರ್ಷಕ್ಕೂ ಕಾರಣವಾಗಿದೆ. ಮುಸ್ಲಿಂ ವ್ಯಕ್ತಿಯೊಬ್ಬ ದನ ಸಾಗಾಟ ಮಾಡಿದ್ದಕ್ಕಾಗಿ ಆತನಿಗೆ ಸೆಗಣಿ ತಿನ್ನಿಸಿದ ಘಟನೆ ಜೂನ್‌ನಲ್ಲಿ ಹರಿಯಾಣದಲ್ಲಿ ನಡೆದಿದೆ. ಉತ್ಪತ್ತಿ ಇಲ್ಲದ ದನಗಳನ್ನು ರಕ್ಷಿಸಲು ಸರ್ಕಾರ ರಾಷ್ಟ್ರೀಯ ಗೋಕುಲ ಮಿಷನ್ ಎನ್ನುವ ಕಾರ್ಯಕ್ರಮ ಆಯೋಜಿಸಿದೆ. ಮೋದಿ ಸರ್ಕಾರ ಗೋಶಾಲೆಗಳೆನ್ನುವ ದನದ ದೊಡ್ಡಿಗಳನ್ನೂ ಪ್ರೋತ್ಸಾಹಿಸುತ್ತಿದೆ. ರಾಜಸ್ಥಾನದ ಬಿಜೆಪಿ ಸರ್ಕಾರ ದನಗಳಿಗಾಗಿ ಗೋವ್ಯವಹಾರ ಎನ್ನುವ ಸಚಿವಾಲಯವನ್ನೇ ಆರಂಭಿಸಿದೆ. ದೇಶದ 2 ದಶಲಕ್ಷ ವಸತಿಹೀನ ಪ್ರಜೆಗಳಿಗಿಂತ ಈ ದನಗಳಿಗೆ ಹೆಚ್ಚು ಮಾನ್ಯತೆ ಇದೆ ಎಂದು ಟೀಕೆಗಳೂ ಬಂದಿವೆ.

ಕೃಪೆ: http://linkis.com/www.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News