ದಲಿತರ ಮೇಲಿನ ದೌರ್ಜನ್ಯ: ಮೋದಿ ಮೌನದ ಹಿಂದಿನ ಮರ್ಮವೇನು : ಇಂದಿರಾ ಕೃಷ್ಣಪ್ಪ ಪ್ರಶ್ನೆ

Update: 2016-07-22 16:53 GMT

ಬೆಂಗಳೂರು, ಜು. 22: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳ ಬಗ್ಗೆ ಮೌನ ತಾಳುತ್ತಿರುವುದರ ಮರ್ಮವನ್ನು ಬಹಿರಂಗಪಡಿಸಬೇಕು ಎಂದು ಹಿರಿಯ ಚಿಂತಕಿ ಮತ್ತು ದಲಿತ ಪರ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಪ್ರಶ್ನಿಸಿದರು. ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಡಿಎಸ್‌ಎಸ್ ಸಂಘಟನೆ 3ನೆ ವರ್ಷದ ಧ್ವಜದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಮತಾ ಸಮಾಜ ಎಂಬ ಚಿಂತನಾಗೋಷ್ಠಿಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ದಲಿತರ ಸ್ವಾಭಿಮಾನದ ಸಂಕೇತವಾಗಿರುವ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಬಗ್ಗೆ ವಿದ್ವತ್ಪೂರ್ಣ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳ ಬಗ್ಗೆ ವೌನ ತಾಳುತ್ತಿರುವುದರ ಮರ್ಮವನ್ನು ಬಹಿರಂಗಪಡಿಸಬೇಕು ಎಂದು ಸವಾಲೆಸೆದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಸರಕಾರ ಸಾಕಷ್ಟು ಅನುದಾನ ನೀಡಿದೆ. ಈ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವ ಕಾರ್ಯವಾಗಬೇಕು. ಹಾಗೆಯೆ ಸರಕಾರಿ ಶಾಲೆಗಳ ರಕ್ಷಣೆಗೆ ದಲಿತ ಚಳವಳಿ ಹೋರಾಟವನ್ನು ಕೈಗತ್ತಿಕೊಳ್ಳಬೇಕು ಎಂದು ಕರೆ ನೀಡಿದರು.
    
ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್, ಗೌತಮ್ ಬುದ್ಧ, ಬಿ.ಕೃಷ್ಣಪ್ಪನವರ ಕಾಲಘಟ್ಟಗಳ ಅನುಗುಣವಾಗಿ ದಲಿತರ ಸ್ವಾತಂತ್ರ ಮತ್ತು ಹಕ್ಕುಗಳ ರಕ್ಷಣೆಗೆ ಜೀವನವನ್ನೇ ಮುಡುಪಾಗಿಟ್ಟು ಹೋರಾಟ ಮಾಡಿದ್ದರು. ಇವರ ಹೋರಾಟಗಳಿಂದಲೆ ನಾವು ಸಮಾಜದಲ್ಲಿ ತಲೆ ಎತ್ತಿ ಸುರಕ್ಷಿತವಾಗಿ ಓಡಾಡುತ್ತಿದ್ದೇವೆ. ಸಾಕಷ್ಟು ಸವಲತ್ತುಗಳನ್ನು ಅನುಭವಿಸುತ್ತಿದ್ದೇವೆ. ಆ ನಾಯಕರ ಆದರ್ಶಗಳನ್ನು ಇಂದಿನ ಯುವ ದಲಿತ ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಮುಂದುವರೆದು, ಆ ನಾಯಕರು ಎದುರಿಸಿದ ಕಷ್ಟಗಳು, ಸಮಸ್ಯೆಗಳನ್ನು ಇಂದಿನ ಯುವಕರು ವಿಮರ್ಶೆ ಮಾಡಿಕೊಂಡು ಬದ್ಧತೆಯಿಂದ ದಲಿತ ಚಳವಳಿಯನ್ನು ಮುನ್ನಡೆಸಬೇಕಿದೆ ಎಂದು ತಿಳಿಸಿದರು.
ದಲಿತ ಚಳವಳಿ ನನ್ನ ಪ್ರಧಾನ ತಾಯಿ. ಹೀಗಾಗಿ ನನ್ನ ಸಮುದಾಯದ ಮೇಲೆ ಹಲ್ಲೆ ದೌರ್ಜನ್ಯಗಳು ನಡೆದರೆ ಸಹಿಸಲಾಗದಷ್ಟು ಮನಸ್ಸಿಗೆ ಘಾಸಿಯಾಗುತ್ತದೆ. ನನ್ನಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದು ಬಿ.ಕೃಷ್ಣಪ್ಪನವರು. ಇವರ ಆದರ್ಶಗಳನ್ನು ಮೈಗೂಡಿಸಿಕೊಂಡು ದಲಿತ ಚಳವಳಿಯನ್ನು ಮುನ್ನಡೆಸುತ್ತಿದ್ದೇನೆ ಎಂದು ತಿಳಿಸಿದರು.
 ತ್ರಿವರ್ಣ ಧ್ವಜದಲ್ಲಿನ ಮಧ್ಯ ಭಾಗದಲ್ಲಿರುವ ಅಶೋಕಚಕ್ರ ದಮ್ಮದ ಪಳೆಯುಳಿಕೆ. ಈ ಚಕ್ರವನ್ನು ತ್ರಿವರ್ಣದಲ್ಲಿ ಅಳವಡಿಸಲು ಅಂಬೇಡ್ಕರ್ ಅವರು ಸಾಕಷ್ಟು ಹೋರಾಟವನ್ನೆ ಮಾಡಿದರು. ಈ ಚಕ್ರವನ್ನು ಅಳವಡಿಸಿದರೆ ದೇಶ ವಿಶ್ವಮನ್ನಣೆ ಸಿಗುತ್ತದೆ ಎಂದು ಪ್ರತಿಪಾದಿಸಿದರು. ಹಾಗೆಯೇ ವಿಶ್ವಮನ್ನಣೆಯನ್ನು ತ್ರಿವರ್ಣ ಧ್ವಜ ಗಳಿಸಿದೆ, ಆದರೆ ದೇಶದಲ್ಲಿ ಕೆಲ ಮೂಲಭೂತ ವರ್ಗಗಳು ಅಸಡ್ಡೆ ತೋರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
 ಡಿಎಸ್‌ಎಸ್‌ನ ರಾಜ್ಯ ಸಮಿತಿಯ ಸದಸ್ಯ ರುದ್ರಪ್ಪ ಹನಗವಾಡಿ ಮಾತನಾಡಿ, ಕೆಲ ದಲಿತ ನಾಯಕರು ಚಳವಳಿಗಳನ್ನು ಉದ್ಯಮವನ್ನಾಗಿ ಮಾಡಿಕೊಂಡು ರಾಷ್ಟ್ರೀಯ ನಾಯಕರಂತೆ ಪ್ರತಿಬಿಂಬಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಂಬೇಡ್ಕರ್ ಅವರ ಚಿಂತನೆ, ಸಿದ್ಧಾಂತಗಳ ವಿರೋಧ ನಡೆಯನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ ಅವರು, ದಲಿತ ಚಳವಳಿಗಾರರು ಅಂತಃಕರಣದ ಹೋರಾಟವನ್ನು ಮೈಗೂಡಿಸಕೊಳ್ಳಬೇಕು ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ, ಸದಸ್ಯರಾದ ಜೋತಪ್ಪ ಹೊಸಳ್ಳಿ, ಮಣಿಪಾಲ್ ರಾಜಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್ ಡಾಕುಳಿಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News