ಜು.25ರಂದು ಸಾರಿಗೆ ಬಂದ್?
ಬೆಂಗಳೂರು, ಜು. 23: ಕೆಎಸ್ಸಾರ್ಟಿಸಿ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜು.25ರಂದು ಸಾರಿಗೆ ಬಂದ್ ಮುಷ್ಕರ ನಡೆಸಲು ಕರೆ ನೀಡಿದ್ದರೂ, ಸದ್ಯಕ್ಕೆ ಎಸ್ಮಾ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕೆಲ ಕಾರ್ಮಿಕ ಸಂಘಟನೆಗಳು ಜು.25ರಂದು ಬಸ್ ಮುಷ್ಕರಕ್ಕೆ ಕರೆ ನೀಡಿವೆ. ಆದರೆ,ಇದರಿಂದ ಒಂದು ಕೋಟಿ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಅಲ್ಲದೆ, ಈಗಾಗಲೇ ಎರಡು ಬಾರಿ ವೇತನ ಹೆಚ್ಚಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ಕೆಎಸ್ಸಾರ್ಟಿಸಿ , ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ಸಾರಿಗೆ ನಿಗಮಗಳ ನೌಕರರಿಗೆ ಮೂಲ ವೇತನದ ಶೇ.10ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆದರೂ ಕೂಡ ಸಂಘಟನೆಗಳು ಒಪ್ಪುತ್ತಿಲ್ಲ. ಬೇಡಿಕೆ ಈಡೇರಿಸುವಷ್ಟು ಸಾರಿಗೆ ನಿಗಮಗಳು ಆರ್ಥಿಕವಾಗಿ ಸದೃಢವಾಗಿಲ್ಲ. ವಾಸ್ತವ ಪರಿಸ್ಥಿತಿಯನ್ನು ಕಾರ್ಮಿಕ ಸಂಘಟನೆಗಳು ಅರ್ಥ ಮಾಡಿಕೊಂಡು ಮುಷ್ಕರವನ್ನು ಕೈ ಬಿಡಬೇಕೆಂದು ಮನವಿ ಮಾಡಿದರು.
ಶೇ.10ರಷ್ಟು ವೇತನ ಹೆಚ್ಚಳ ಮಾಡುವುದರಿಂದ ವಾರ್ಷಿಕ 390 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತದೆ. ಮುಂದಿನ, ನಾಲ್ಕು ವರ್ಷಕ್ಕೆ 1550 ಕೋಟಿ ರೂ. ಹೊರೆಯಾಗಲಿದೆ. ಬೇಡಿಕೆಯಂತೆ ಶೇ.30ರಷ್ಟು ವೇತನ ಹೆಚ್ಚಳ ಮಾಡಬೇಕಾದರೆ 4ರಿಂದ 5ಸಾವಿರ ಕೋಟಿ ಹೆಚ್ಚುವರಿ ಹಣ ಬೇಕಾಗುತ್ತದೆ. ಇದನ್ನು ಭರಿಸಲು ಸಾರಿಗೆ ನಿಯಮಗಳಿಗೆ ಸಾಧ್ಯವಾಗುವುದಿಲ್ಲ. ಕಳೆದ ಬಾರಿಯೂ ಶೇ.10ರಷ್ಟೇ ವೇತನ ಪರಿಷ್ಕರಣೆ ಮಾಡಲಾಗಿತ್ತು ಎಂದು ವಿವರಿಸಿದರು.
ಶೇ.10ರಷ್ಟು ವೇತನ ಹೆಚ್ಚಳ ಮಾಡಿದರೂ ನೌಕರರಿಗೆ ವಾರ್ಷಿಕ 1740ರೂ.ನಿಂದ 6843ರೂ.ಗಳವರೆಗೂ ಅವರ ಮೂಲ ವೇತನಕ್ಕನುಗುಣವಾಗಿ ಹೆಚ್ಚಳವಾಗುತ್ತದೆ. ಕೇಂದ್ರ ಸರಕಾರ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿದರೆ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರಿಗೆ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.