ಕರ್ನಾಟಕ ಭವನದ ಕಾಮಗಾರಿ ಸ್ಥಗಿತ! ಮನಪಾ ಮಕ್ಕಳಿಗೂ ತರಬೇತಿ ಭಾಗ್ಯ

Update: 2016-07-25 18:06 GMT

ಹೊರನಾಡ ಕನ್ನಡಿಗರ ಮರ್ಯಾದೆ ಉಳಿಸಿ: ಎಚ್.ಬಿ.ಎಲ್.ರಾವ್
ಮಹಾರಾಷ್ಟ್ರ ಸರಕಾರದ ಅಂಗ ಸಂಸ್ಥೆಯಾದ ಸಿಡ್ಕೋ 19-6-2000 ರಲ್ಲಿ ವಾಶಿಯಲ್ಲಿ ಕರ್ನಾಟಕ ಸರಕಾರಕ್ಕೆ ಅದರದ್ದೇ ಆದ ಕಟ್ಟಡ ನಿರ್ಮಿಸಲು 2520 ಚದರ ಮೀಟರ್ ಸ್ಥಳ ಕೊಟ್ಟಿತ್ತು. ಖರೀದಿಯ ಹಣ 75,60,000/- ರೂಪಾಯಿ ಆಗಿತ್ತು. (ಈಗಿನ ಬೆಲೆ ಸುಮಾರು 30 ಕೋಟಿ ರೂಪಾಯಿ ಆಗಬಹುದು) ಆದರೆ ಕರ್ನಾಟಕ ಸರಕಾರ ಅನಂತರ ಈ ವಿಷಯವನ್ನು ಮರೆಯತೊಡಗಿತ್ತು. ಆದರೆ ದಶಕದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್.ಬಿ.ಎಲ್.ರಾವ್ ಅವರು ಇಲ್ಲಿ ಕರ್ನಾಟಕ ಭವನ ಕಟ್ಟಡಕ್ಕೆ ಪುನರ್ಜೀವಗೊಳಿಸುವ ಕೆಲಸವನ್ನು ಆರಂಭಿಸಿ ಆಗಿನ ಮಂತ್ರಿಯಾಗಿದ್ದ ಡಾ.ವಿ.ಎಸ್. ಆಚಾರ್ಯರನ್ನು ಸಂಪರ್ಕಿಸಿದ್ದರು. ಹಾಗೂ ಮುಂಬೈ ಕನ್ನಡಿಗರ ಪರವಾಗಿ ಅವರಿಗೆ ಈ ಕರ್ನಾಟಕ ಭವನದ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಮುಂದಿಟ್ಟು ಅವರಿಗೆ ಮನವರಿಕೆ ಮಾಡಿಸಿದರು. ನಂತರ ಈ ಹೊಣೆಗಾರಿಕೆಯನ್ನು ಕರ್ನಾಟಕ ಸರಕಾರವು ಪಿ.ಡಬ್ಲ್ಯೂ.ಡಿ ಮೂಲಕ ಮೈಸೂರ್ ಸೇಲ್ಸ್ ಇಂಟರ್‌ನೇಷನಲ್‌ಗೆ ವಹಿಸಿಕೊಟ್ಟಿತ್ತು. ಅನಂತರ ಕೆಲಸ ಆರಂಭಗೊಂಡಿದ್ದು ಮುಂಬೈ ಕನ್ನಡಿಗರು ಸಂತಸ ಪಟ್ಟಿದ್ದರು.
ಆದರೆ ಮೈಸೂರ್ ಸೇಲ್ಸ್ ಇಂಟರ್‌ನೇಷನಲ್ ಸಂಸ್ಥೆಯು ಐದು ಮಹಡಿಯ ಬದಲು ಮೂರು ಮಹಡಿಯವರೆಗೆ ಅರ್ಧ ಕೆಲಸ ಮಾಡಿ ನಿರ್ಮಾಣದ ಕೆಲಸವನ್ನು ಸ್ಥಗಿತಗೊಳಿಸಿದೆ ಎಂದು ಆಪಾದಿಸಿರುವ ಎಚ್.ಬಿ.ಎಲ್. ರಾವ್ ಇದೀಗ ಮತ್ತೆ ಕರ್ನಾಟಕ ಭವನದ ಕೆಲಸ ಮುಂದುವರಿ ಸುವಂತೆ ಹಾಗೂ ಐದು ಮಹಡಿಯ ಕಟ್ಟಡ ಶೀಘ್ರ ಪೂರ್ಣಗೊಳಿಸುವಂತೆ ಸರಕಾರವು ಮುಂದುವರಿಯಬೇಕು ಎಂದು ಕರ್ನಾಟಕದ ಹಲವಾರು ಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಎಚ್.ಬಿ.ಎಲ್. ರಾವ್ ಅವರ ಪತ್ರದಲ್ಲಿ ಹೇಳಿದಂತೆ ದಿನಾಂಕ 4-1-2013ರಂದು ಮಾಹಿತಿ ಹಕ್ಕು ನಿಯಮದ ಅಡಿ ಎಂ.ಎಸ್.ಐ.ಎಲ್.ಗೆ ಪತ್ರ ಬರೆದಿದ್ದರು. ಅದಕ್ಕೆ ಎಮ್.ಎಸ್.ಐ.ಎಲ್.ನಿಂದ 2-2-2013ರಂದು ಬಂದ ಉತ್ತರದಲ್ಲಿ 14 ತಿಂಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣ ಮುಗಿಯಬಹುದು ಎಂದು ತಿಳಿಸಲಾಗಿತ್ತು. ಆದರೆ ಈಗ 2016 ಬಂದರೂ ಏನೂ ಪ್ರಗತಿ ಕಾಣಲಿಲ್ಲ. ಈ 16 ವರ್ಷಗಳಲ್ಲಿ ಕಟ್ಟಡ ಐದು ಮಹಡಿಯನ್ನು ಕಾಣಲಿಲ್ಲ ಎನ್ನುವ ಬಗ್ಗೆ ಎಚ್.ಬಿ.ಎಲ್. ರಾವ್ ತೀವ್ರ ಬೇಸರ ಪಟ್ಟಿದ್ದಾರೆ.
‘‘ಈ ವಿಷಯಕ್ಕಾಗಿ ನನ್ನ ನಿವೃತ್ತಿ ವೇತನದ ಸಾಕಷ್ಟು ಹಣವನ್ನೂ ಮುಂಬೈ-ಬೆಂಗಳೂರು ಎಂದು ಓಡಾಟಕ್ಕಾಗಿ ಖರ್ಚು ಮಾಡಿದ್ದೇನೆ’’ ಎಂಬ ಮಾತನ್ನೂ ರಾವ್ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕದ ನಿಕಟ ಪೂರ್ವ ಅಧ್ಯಕ್ಷನಾಗಿ ಹೊರನಾಡ ಕನ್ನಡಿಗನೆನ್ನುವ ಅಭಿಮಾನದಿಂದ ಈ ವ್ಯಥೆ ಮತ್ತು ಕರುಣ ಕಥೆಯನ್ನು ಕರ್ನಾಟಕ ಸರಕಾರದ ಮಂತ್ರಿಗಳ ಮುಂದಿಟ್ಟಿದ್ದೇನೆ. ಇದು ವೈಯಕ್ತಿಕ ಕೆಲಸವಲ್ಲ, ಕರ್ನಾಟಕ ಭವನಕ್ಕೆ ಸಂಬಂಧಿಸಿದ ಕೆಲಸ ಎನ್ನುವ ರಾವ್ ಅವರು ಕಾಗೇರಿ ವಿಶ್ವೇಶ್ವರ ಹೆಗಡೆ, ಜಗದೀಶ್ ಶೆಟ್ಟರ್, ಶಾಸಕ ನಾರಾಯಣ ಗೌಡ, ಕೋಟ ಶ್ರೀನಿವಾಸ ಪೂಜಾರಿ, ಸಂಜಯ ಪಾಟೀಲ್ ಮೊದಲಾದವರಿಗೆ ಪತ್ರವನ್ನು ಕಳುಹಿಸಿದ್ದಾರೆ.
ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಮೂಲಕ ಶೀಘ್ರವೇ ವಾಶಿಯಲ್ಲಿ ಐದು ಮಹಡಿಯ ಕರ್ನಾಟಕ ಭವನವನ್ನು ನಿರ್ಮಿಸುವ ಕೆಲಸ ಆಗಲಿ, ಬೇಕಾದರೆ ಈಗಿನ ಸಂಸ್ಥೆಯನ್ನು ಬದಲಿಸಿ. ಇದು ಮುಂಬೈ ಕನ್ನಡಿಗರ ಮರ್ಯಾದೆ ಪ್ರಶ್ನೆ ಎಂದಿದ್ದಾರೆ ಎಚ್.ಬಿ.ಎಲ್. ರಾವ್

* * *

ಮನಪಾ ಚುನಾವಣೆಯಲ್ಲಿ ಬಿಜೆಪಿ ಗುರಿ 114 ಪ್ಲಸ್!
ಸಾಮ್ನಾದಲ್ಲಿ ಮತ್ತೆ ಉದ್ಧವ್ ಠಾಕ್ರೆಯ ಸಂದರ್ಶನ ಬಂದಿದೆ. ಮಾಡಿದ್ದು ಸಂಜಯ ರಾವತ್. ಬಾಳಾ ಠಾಕ್ರೆಯ ಸಂದರ್ಶನ ಕೂಡಾ ಇವರೇ ಮಾಡುತ್ತಿದ್ದವರು. (ಅದು ಯಾರ ಮಾತುಗಳು ಎಂದು ಕೆಲವರಿಗೆ ಗೊತ್ತು!) ಅದರಲ್ಲಿ ಉದ್ಧ್ದವ್ ಹೇಳಿದ್ದಾರೆ ರಾಜಕೀಯದಲ್ಲಿ ಶತ್ರುಗಳಿಲ್ಲ ನಿಜ. ಆದರೆ ಮಿತ್ರರೂ ಶಾಶ್ವತ ಇಲ್ಲ ಎಂದು ಇತ್ತೀಚೆಗೆ ಗೊತ್ತಾಯ್ತು ಎಂದು ಬಿಜೆಪಿ ಹೆಸರು ಹೇಳದೆ ಉತ್ತರಿಸಿದ್ದಾರೆ.

  
ಕಳೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್‌ನ ಘೋಷಣೆ ಹಾಕಿ ಚುನಾವಣಾ ಕಣಕ್ಕೆ ಇಳಿದಿತ್ತು. ಅದೇ ರೀತಿಯಲ್ಲಿ ಈಗ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 114 ಪ್ಲಸ್‌ನ ಗುರಿ ಇರಿಸಿದ್ದು ಮುಂದಿನ ಮೇಯರ್ ತನ್ನದೇ ಪಕ್ಷದಿಂದ ಆಯ್ಕೆಯಾಗುವವರೆಂದು ಘೋಷಿಸಿದೆ ಹಾಗೂ ಮುಂದಿನ ಮುಂಬೈ ಮನಪಾ ಚುನಾವಣೆಯನ್ನು ತಾನು ಸ್ವಂತ ಬಲದಲ್ಲೇ ಎದುರಿಸುವುದಾಗಿ ಘೋಷಣೆ ಮಾಡಿದೆ. ಷಣ್ಮುಖಾನಂದ ಹಾಲ್‌ನಲ್ಲಿ ಆಯೋಜಿಸಲಾದ ಮುಂಬೈ ಬಿಜೆಪಿ ಸಮ್ಮೇಳನದಲ್ಲಿ ಈ ಘೋಷಣೆ ಕೇಳಿ ಬಂತು. ಇಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ, ಮಂತ್ರಿ ಚಂದ್ರಕಾಂತ ಪಾಟೀಲ್, ಸಂಸದ ಕಿರೀಟ್ ಸೋಮಯ್ಯ, ಗೋಪಾಲ ಶೆಟ್ಟಿ, ಪೂನಮ್ ಮಹಾಜನ್ ಸಹಿತ ಮುಂಬೈ ಬಿಜೆಪಿಯ ಎಲ್ಲಾ ಶಾಸಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಮ್ಮೇಳನದಲ್ಲಿ ಆಶೀಷ್ ಶೇಲಾರ್ ಮತ್ತೊಮ್ಮೆ ಎರಡು ವರ್ಷಗಳ ಅವಧಿಗಾಗಿ ಮುಂಬೈ ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಗೊಂಡರು. ಇತ್ತ ಶಿವಸೈನಿಕರು ಶೇಲಾರ್ ಪ್ರತಿಕೃತಿ ದಹನ ಮಾಡಿದ್ದು ಬಿಜೆಪಿ ಶಿವಸೇನೆ ಕಾರ್ಯಕರ್ತರ ಅಶಾಂತಿ ಹೆಚ್ಚುತ್ತಿದೆ. ಈ ವೇದಿಕೆಯಲ್ಲಿ ಮುಖ್ಯ ಮಂತ್ರಿಯವರು 2019ರೊಳಗೆ ಮುಂಬೈಯ ಚಿತ್ರಣ ಬದಲಾಗುವುದು ಎಂದಿದ್ದಾರೆ. ಮಹಾರಾಷ್ಟ್ರ ಕ್ಯಾಬಿನೆಟ್‌ನ ವಿಸ್ತಾರವನ್ನು ಮುಂದಿಟ್ಟು ಭಾರೀ ಚರ್ಚೆ ನಡೆದಿತ್ತು.. ಉದ್ಧವ್ ಠಾಕ್ರೆಯ ಮಾತೋಶ್ರೀ ಮತ್ತು ಮುಖ್ಯ ಮಂತ್ರಿಯ ವರ್ಷಾ ಬಂಗ್ಲೆಯಲ್ಲಿ ಬೈಠಕ್‌ಗಳು ನಡೆದಿತ್ತು. ಎರಡು ಮಂತ್ರಿ ಸ್ಥಾನಗಳೂ ಶಿವಸೇನೆಗೆ ಸಿಕ್ಕಿತ್ತು. ಆದರೆ ಮುಂದಿನ ಮನಪಾ ಚುನಾವಣೆ ಯಲ್ಲಿ ಮತ್ತೆ ಇವರು ಪರಸ್ಪರ ಕಚ್ಚಾಡುವುದು ನಿಶ್ಚಿತ. * * *
ಅಕ್ಟೋಬರ್ ಒಂದರಿಂದ ಅಕ್ರಮ ಜೋಪಡಿಗಳ ಧ್ವಂಸ ಆರಂಭ
ಮುಂಬೈ ಮಹಾನಗರ ಪಾಲಿಕೆಯು ನಾಲೆಗಳ ಸ್ವಚ್ಛತೆಗೆ ಅಡ್ಡಿ ತರುವ ಅಕ್ಕಪಕ್ಕದ ನಿರ್ಮಾಣಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಿಹಾಕಲು ಅಕ್ಟೋಬರ್ ಒಂದರಿಂದ ನಿರ್ಧರಿಸಿದೆ. ಕಾರಣ, ನಾಲೆಗಳ ಅಗಲೀಕರಣ ಕೆಲಸವನ್ನು ಅಕ್ಟೋಬರ್ 1ರಿಂದ ಮನಪಾ ಕೈಗೊಳ್ಳಲಿದೆ. ಮನಪಾ ಕಮಿಶನರ್ ಅಜಯ್ ಮೆಹ್ತಾ ಅವರು ಈ ವಿಷಯವಾಗಿ ಸ್ಪಷ್ಟ ನಿರ್ದೇಶನವನ್ನು ಡೆಪ್ಯುಟಿ ಮುನ್ಸಿಪಲ್ ಕಮಿಷನರ್‌ರ ಬೈಠಕ್‌ನಲ್ಲಿ ನೀಡಿದರು. ಈ ಸಂಬಂಧವಾಗಿ ಮಂಡಿಸಲಾದ ವರದಿಯಲ್ಲಿ ಸೆಪ್ಟಂಬರ್ ಕೊನೆಯೊಳಗೆ ನಾಲೆಗಳ ತೀರದಲ್ಲಿ ಅಕ್ರಮವಾಗಿ ಕಟ್ಟಲಾದ ಜೋಪಡಿ ಇತ್ಯಾದಿ ನಿರ್ಮಾಣಗಳ ತನಿಖೆ ನಡೆಸಿ ಅವರಿಗೆ ಪರ್ಯಾಯ ವ್ಯವಸ್ಥೆ ಉಪಲಬ್ದಗೊಳಿಸಲೂ ನಿರ್ದೇಶನ ನೀಡಿದರು.
ಮುಂಬೈ ಮನಪಾ ನೀರು ಪೂರೈಕೆಯ ಸಿಸ್ಟಮ್ ಸರಿಪಡಿಸುವುದಕ್ಕೆ ಬ್ರೀಮ್‌ಸ್ಟೊವಾಡ್ ಯೋಜನೆ ಆರಂಭಿಸಿದೆ. ಇದಕ್ಕೆ ಕೇಂದ್ರ ಸರಕಾರವು ನಿಧಿ ಉಪಲಬ್ದಗೊಳಿಸಿದೆ.
ನಾಲೆಗಳ ತೀರದಲ್ಲಿ ಅತಿಕ್ರಮಣವನ್ನು ಎಬ್ಬಿಸಲು ಕ್ಷೇತ್ರವನ್ನು ಎರಡು ಭಾಗಗಳಲ್ಲಿ ಹಂಚಲಾಗಿದೆ. ಬ್ರೀಮ್‌ಸ್ಟೊವಾಡ್ ಯೋಜನೆ -1ರ ಅನ್ವಯ 61.31 ಕಿ.ಮೀ. ನಾಲೆಯಲ್ಲಿ 19.70 ಕಿ.ಮೀ. ಅತಿಕ್ರಮಣ ಮಾಡಲಾಗಿದೆ. ಅದೇ ರೀತಿ ನಾನ್ ಬ್ರೀಮ್‌ಸ್ಟೋವಾಡ್-1ರಲ್ಲಿ 70.43 ಕಿ.ಮೀ. ನಾಲೆಯ ಉದ್ದದಲ್ಲಿ 19.66 ಕಿ.ಮೀ. ಭಾಗದಲ್ಲಿ ಅತಿಕ್ರಮಣವಾಗಿದೆ.
ಇದೇ ಸಮಯ 14 ಅಡಿಗಿಂತ ಎತ್ತರದ ಜೋಪಡಿಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲು ಆದೇಶವನ್ನು ಮನಪಾ ನೀಡಿದೆ.
***
ಮನಪಾ ಶಾಲಾ ಮಕ್ಕಳಿಗೂ ಐಎಎಸ್, ಐಪಿಎಸ್‌ನ ತರಬೇತಿ
ಮುಂಬೈ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಇದೀಗ ಯುಪಿಎಸ್‌ಸಿ ಮತ್ತು ಎಂಪಿಎಸ್‌ಸಿ. ಪರೀಕ್ಷೆಗಳ ಕುರಿತೂ ಮಾಹಿತಿ ತಿಳಿಸಲಾಗುತ್ತಿದೆ. ಆರಂಭದಿಂದಲೇ ಮನಪಾ ಶಾಲಾ ಮಕ್ಕಳಿಗೆ ಈ ಪರೀಕ್ಷೆಗಳಲ್ಲಿ ಆಸಕ್ತಿ ಹುಟ್ಟಿಸಲಿಕ್ಕಾಗಿ 8ನೆ, 9ನೆ ಮತ್ತು 10ನೆ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಸಲ 40-45 ನಿಮಿಷದ ಮಾರ್ಗದರ್ಶನ ಕ್ಲಾಸ್ ಉಪಲಬ್ದಗೊಳಿಸಲು ಮನಪಾ ನಿರ್ಧರಿಸಿದೆ. ಮಕ್ಕಳಿಗೆ ಆರಂಭದಲ್ಲೇ ಐಎಎಸ್, ಐಪಿಎಸ್ ಸಹಿತ ಇತರ ಸರಕಾರಿ ಸೇವೆಗಳ ವಿಷಯವಾಗಿಯೂ ಮಾಹಿತಿ ಒದಗಿಸಲಾಗುವುದು.
ಮಹಾನಗರ ಪಾಲಿಕೆಯ ಯಾವ ಶಾಲೆಗಳಲ್ಲಿ ವರ್ಚುವಲ್ ಕ್ಲಾಸ್ ರೂಮ್‌ನ ಸೌಲಭ್ಯಗಳಿವೆಯೋ ಅಲ್ಲಿ ಶಿವವಿದ್ಯಾ ಪ್ರಭೋದನ್ ಬಾಳಾ ಸಾಹೇಬ ಠಾಕ್ರೆ ಐಎಎಸ್ ಅಕಾಡಮಿ ತರಬೇತಿ ಕೇಂದ್ರದ ಮೂಲಕ ಮಾರ್ಗದರ್ಶನ ಕ್ಲಾಸ್ ಮಕ್ಕಳಿಗೆ ಉಪಲಬ್ದಗೊಳಿಸಲಾಗುವುದು ಎಂದು ಶಿಕ್ಷಣ ಸಮಿತಿಯ ಅಧ್ಯಕ್ಷೆ ಹೇಮಾಂಗಿ ವರ್ಲೀಕರ್ ಅವರು ತಿಳಿಸಿದ್ದಾರೆ.
* * *
ಎಸ್.ಟಿ. ಬಸ್ಸುಗಳ ದಾಖಲೆ ನಷ್ಟ!
ಮಹಾರಾಷ್ಟ್ರದ ರಾಜ್ಯ ಸರಕಾರದ ರಸ್ತೆ ಸಾರಿಗೆ ಮಹಾಮಂಡಲ (ಎಸ್.ಟಿ. ಮಹಾಮಂಡಲ) ನಷ್ಟದ ವಿಷಯದಲ್ಲಿ ಹೊಸ ದಾಖಲೆ ಮಾಡಿದೆ. ಮಹಾಮಂಡಲದ ನಷ್ಟದ ಮೊತ್ತ 2,076 ಕೋಟಿ ರೂಪಾಯಿ ತಲುಪಿದೆ. ಇನ್ನೊಂದೆಡೆ ಎಸ್.ಟಿ. ಮಹಾಮಂಡಲಕ್ಕೆ ಸರಕಾರದ ಇತರ ವಿಭಾಗಗಳ ಮೇಲೆ 2,568 ಕೋಟಿ ರೂಪಾಯಿ ನೀಡಲು ಬಾಕಿ ಇದೆ.
* * *
ಮಹಿಳಾ ಚಾಲಕರ ರಿಕ್ಷಾಗಳಿಗಿನ್ನು ಕಿತ್ತಳೆ ಬಣ್ಣ
ಮುಂಬೈ ಶಹರ ಮತ್ತು ಉಪನಗರಗಳಲ್ಲಿ ಓಡಾಡುತ್ತಿರುವ ರಿಕ್ಷಾಗಳಿಗೀಗ ಕಪ್ಪು-ಹಳದಿ ಬಣ್ಣಗಳಿವೆ. ಆದರೆ ಇನ್ನು ಮುಂದೆ ಮಹಿಳಾ ಚಾಲಕರ ರಿಕ್ಷಾಗಳ ಬಣ್ಣ ಬದಲಿಸಲಾಗುತ್ತದೆ. ಹೊಸ ನಿಯಮಗಳ ಅನುಸಾರ ಯಾವ ರಿಕ್ಷಾಗಳ ಚಾಲಕರು ಮಹಿಳೆಯರಿರುವರೋ ಅದರ ಬಣ್ಣ ಇನ್ನು ಮುಂದೆ ಕಡುಕಿತ್ತಳೆ ಇರುತ್ತದೆ.

31 ಮಾರ್ಚ್ 2016ರಂದು ರಾಜ್ಯ ಸರಕಾರವು ರಿಕ್ಷಾಗಳ ಬಣ್ಣ ಬದಲಿಸುವ ನಿಯಮ-ಕಾನೂನು ಪ್ರಸ್ತಾವ ಇರಿಸಿತ್ತು. ಹಾಗೂ ಜನರ ಸಲಹೆಗಳನ್ನು ಆಹ್ವಾನಿಸಿತ್ತು. ರಾಜಾರಾಮ ಬಾಪೂ ಪಾಟೀಲ್ ರಿಕ್ಷಾ ಸಂಘದ ಅಧ್ಯಕ್ಷ ಶಾಮರಾವ್ ಮೊಕಾಶಿ ಅವರು ಎಲ್ಲಾ ಮಹಿಳಾ ಚಾಲಕರ ರಿಕ್ಷಾಗಳನ್ನು ಕಿತ್ತಳೆ ಬಣ್ಣಕ್ಕೆ ಮಾರ್ಪಡಿಸಲು ಸಲಹೆ ಇತ್ತಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಓಡಾಡುವ ಪುರುಷರ ರಿಕ್ಷಾಗಳ ಬಣ್ಣ ಕಪ್ಪು-ಹಳದಿ ಮತ್ತು ಮಹಿಳಾ ಚಾಲಕರ ರಿಕ್ಷಾಗಳ ಬಣ್ಣ ಕಿತ್ತಳೆ ಇರುತ್ತದೆ ಎಂಬ ನಿರ್ಣಯ ಮಹಾರಾಷ್ಟ್ರ ಟ್ರಾಫಿಕ್ ವಿಭಾಗವು ತಳೆದಿದೆ.

* * *

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News