ಓಟದ ಶೂ ಒದಗಿಸಿ: ಒಡಿಶಾ ಸರಕಾರಕ್ಕೆ ದ್ಯುತಿ ಚಂದ್ ಮನವಿ

Update: 2016-07-25 18:22 GMT

ಹೊಸದಿಲ್ಲಿ, ಜು.25: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದಲ್ಲಿ ಭಾಗವಹಿಸಿ 36 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲಿಸಿಕೊಡುವ ಉದ್ದೇಶದಿಂದ ಕಠಿಣ ಶ್ರಮಪಡುತ್ತಿರುವ ಭಾರತದ ಓಟಗಾರ್ತಿ ದ್ಯುತಿ ಚಂದ್ ತನಗೆ ಹೊಸ ಓಟದ ಶೂಗಳನ್ನು ಒದಗಿಸುವಂತೆ ಒಡಿಶಾ ಸರಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ತಿಂಗಳಾರಂಭದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ 20ರ ಹರೆಯದ ಒಡಿಶಾದ ಅಥ್ಲೀಟ್ ದ್ಯುತಿ ಚಂದ್ ಒಲಿಂಪಿಕ್ಸ್‌ನಲ್ಲಿ ಭಾರತದ ಯಾವ ಅಥ್ಲೀಟ್‌ಗಳು ಮಾಡದ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

ಸರಕಾರದಿಂದ ಸೌಲಭ್ಯದ ಕೊರತೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದ್ಯುತಿ, ‘‘ಒಡಿಶಾ ಮುಖ್ಯಮಂತ್ರಿ(ನವೀನ್ ಪಟ್ನಾಯಕ್) ಒಲಿಂಪಿಕ್ಸ್‌ಗೆ ಶುಭ ಹಾರೈಸಿದ್ದಾರೆ. ಅವರ ಹಾರೈಕೆ ಹಾಗೂ ಆಶೀರ್ವಾದದಿಂದ ಖಂಡಿತವಾಗಿಯೂ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಲು ಯತ್ನಿಸುವೆ. ಆದರೆ, ನನ್ನ ಮುಖ್ಯ ಚಿಂತೆ ಎಂದರೆ ಓಟಕ್ಕೆ ಶೂ. ನನ್ನ ಶೂ ಹರಿದುಹೋಗಿದ್ದು, ಹೊಸ ಸ್ಪೈಕ್ ಕಂಪೆನಿಯ ಶೂಗಳ ನಿರೀಕ್ಷೆಯಲ್ಲಿರುವೆ. ಓಟದ ಶೂಗಳು ತುಂಬಾ ದುಬಾರಿಯಾಗಿರುತ್ತವೆ. ಒಂದು ಸೆಟ್‌ನ ಟ್ರಾಕ್‌ಸೂಟ್ ಹಾಗೂ ರನ್ನಿಂಗ್ ಶೂಗಳನ್ನು ನೀಡುವಂತೆ ರಾಜ್ಯ ಸರಕಾರವನ್ನು ವಿನಂತಿಸುವೆ. ಇವುಗಳನ್ನು ಒದಗಿಸಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿದೆ ಎಂದು ದ್ಯುತಿ ಹೇಳಿದ್ದಾರೆ.

ಸರಕಾರದ ನೆರವು ಕೋರಲು ನನಗೆ ಬೇಸರವಾಗುತ್ತಿದೆ. ನಾನು ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತಂದಿರುವೆ. ಹಾಗಾಗಿ ಸಹಾಯಕ್ಕಾಗಿ ಅಂಗಲಾಚಲು ಇಷ್ಟವಿಲ್ಲ. ಸರಕಾರವೇ ಮುಂದೆ ನಿಂತು ನೆರವು ನೀಡಬೇಕು. ನಾನು ಈ ಹಿಂದೆಯೂ ಸಹಾಯಕ್ಕಾಗಿ ವಿನಂತಿಸಿಕೊಂಡಿದ್ದೆ ಎಂದು ದ್ಯುತಿ ತಿಳಿಸಿದರು.

 ‘‘ನಾನು ವಿಶ್ವದ ಶ್ರೇಷ್ಠ ಓಟಗಾರ್ತಿಯರೊಂದಿಗೆ ಸ್ಪರ್ಧಿಸಬೇಕಾಗಿದೆ. ಕಠಿಣ ತರಬೇತಿ ನಡೆಸುತ್ತಿದ್ದು, ಉತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸುವ ನಿಟ್ಟಿನಲ್ಲಿ ನನ್ನೆಲ್ಲಾ ಸಮಯವನ್ನು ಮುಡಿಪಾಗಿಟ್ಟಿರುವೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸುಲಭ ಸಾಧ್ಯವಲ್ಲ. ಶ್ರೇಷ್ಠ ಪ್ರದರ್ಶನ ನೀಡಲು ಶತಪ್ರಯತ್ನ ನಡೆಸುವೆ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ದ್ಯುತಿ ತಿಳಿಸಿದರು.

ಜೀವನದುದ್ದಕ್ಕೂ ಹೋರಾಟವನ್ನು ನಡೆಸುತ್ತಾ ಬಂದಿರುವ ಯುವ ಅಥ್ಲೀಟ್ ದ್ಯುತಿ ಇದೀಗ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದಿದ್ದಾರೆ. ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಗೋಪಾಲಪುರ ಹಳ್ಳಿಯೊಂದರಲ್ಲಿ ಬಡ ನೇಕಾರ ಕುಟುಂಬದಿಂದ ಬಂದಿರುವ ದ್ಯುತಿ ಎಲ್ಲ ಅಡೆ-ತಡೆಗಳನ್ನು ಮೆಟ್ಟಿನಿಂತು ಕ್ರೀಡೆಯ ಉತ್ತುಂಗಕ್ಕೆ ಏರಿದ್ದಾರೆ.

ದೇಹದಲ್ಲಿ ಪುರುಷ ಹಾರ್ಮೋನು ಜಾಸ್ತಿ ಇರುವುದು ಕಂಡು ಬಂದ ಕಾರಣ ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್)ಸೂಚನೆಯ ಮೇರೆಗೆ ದ್ಯುತಿ ಚಂದ್‌ಗೆ ಎರಡು ವರ್ಷಗಳ ಕಾಲ ಸಕ್ರಿಯ ಅಥ್ಲೀಟ್‌ನಿಂದ ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿತ್ತು.

ಪುರುಷ ಹಾರ್ಮೋನು ಜಾಸ್ತಿ ಇರುವ ಕಾರಣ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹರೆಂಬ ನೆಲೆಯಲ್ಲಿ ಭಾರತದ ಅಥ್ಲೆಟಿಕ್ ಫೆಡರೇಶನ್ ಕೊನೆಯ ಕ್ಷಣದಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದ್ಯುತಿ ಚಂದ್ ಹೆಸರನ್ನು ಹಿಂದಕ್ಕೆ ಪಡೆದಿತ್ತು. ಆಗ ದ್ಯುತಿ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕವನ್ನು ಜಯಿಸಿದ್ದರು.

ಕಳೆದ ವರ್ಷದ ಜುಲೈನಲ್ಲಿ ಸ್ವಿಸ್‌ನ ಕ್ರೀಡಾ ಪಂಚಾಯತಿ ನ್ಯಾಯಾಲಯದಲ್ಲಿ(ಸಿಎಎಸ್) ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ ದ್ಯುತಿ ಮತ್ತೊಮ್ಮೆ ಅಥ್ಲೆಟಿಕ್ ಕೂಟಗಳಲ್ಲಿ ಸ್ಪರ್ಧಿಸುವ ಹಕ್ಕು ಪಡೆದುಕೊಂಡಿದ್ದರು.

 ಕಝಕ್‌ಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ಒಲಿಂಪಿಕ್ಸ್ ಅರ್ಹತಾ ಗುರುತು 11.32 ಸೆಕೆಂಡ್‌ನ್ನು ತಲುಪಿದ ದ್ಯುತಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ದ್ಯುತಿ ಚಂದ್‌ಗಿಂತ ಮೊದಲು ಓಟದ ದಂತಕತೆ ಪಿ.ಟಿ. ಉಷಾ ಒಲಿಂಪಿಕ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1980ರ ಮಾಸ್ಕೊ ಗೇಮ್ಸ್‌ನಲ್ಲಿ ಉಷಾ 100 ಮೀ. ಹಾಗೂ 200 ಮೀ. ಓಟದಲ್ಲಿ ಸ್ಪರ್ಧಿಸಿದ್ದರು.

 1988ರ ಸಿಯೊಲ್ ಒಲಿಂಪಿಕ್ಸ್‌ನಲ್ಲಿ ಅರ್ಹತಾ ಮಾನದಂಡ ಪರಿಚಯಿಸಲ್ಪಟ್ಟ ಬಳಿಕ ದ್ಯುತಿ ಚಂದ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News