ಭಯೋತ್ಪಾದನೆ ಹತ್ತಿಕ್ಕಲು ಎನ್‌ಡಿಎ ಸರಕಾರ ವಿಫಲ

Update: 2016-07-25 18:30 GMT

ಮುಂಬೈ, ಜು.25: ಕೇಂದ್ರದ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿರುವ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಭಯೋತ್ಪಾದನೆಯ ಪಿಡುಗನ್ನು ಕಟುನಿಟ್ಟಾಗಿ ನಿಗ್ರಹಿಸುವ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಈ ಸರಕಾರವು ವಿಫಲಗೊಂಡಿದೆ, ಆದರೂ ನರೇಂದ್ರ ಮೋದಿ ಸರಕಾರವು ದೇಶದ ‘ಕೊನೆಯ ಆಶಾಕಿರಣ’ವಾಗಿರುವುದರಿಂದ ಅದು ‘ಪ್ರತಿಯೊಂದನ್ನೂ ಸರಿ ಪಡಿಸಲಿದೆ’ ಎಂದು ತಾನು ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಸೋಮವಾರ ತನ್ನ ಸಂದರ್ಶನದ ಎರಡನೆಯ ಭಾಗದಲ್ಲಿ, ಸರಕಾರವು ಭಯೋತ್ಪಾದನೆ ಕುರಿತಂತೆ ಮೃದು ನಿಲುವು ತಳೆದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ತಾನು ಈ ವಿಷಯದಲ್ಲಿ ತಜ್ಞನಲ್ಲ...ಆದರೆ ಜನತೆ ಮತ್ತು ದೇಶದ ನಾಡಿಮಿಡಿತವನ್ನು ಗ್ರಹಿಸಬಲ್ಲೆ ಎಂದು ಹೇಳಿದ್ದಾರೆ.
 ಸರಕಾರವು ಅಧಿಕಾರದಲ್ಲಿ ತನ್ನ ಎರಡು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಭಯೋತ್ಪಾದನೆ ಅಥವಾ ಉಗ್ರವಾದದ ಹೆಸರಿನಲ್ಲಿ ಹೆಡೆಯೆತ್ತುತ್ತಿರುವ ಚಟುವಟಿಕೆಗಳನ್ನು ಸಮರ್ಥವಾಗಿ ನಿಗ್ರಹಿಸಬಹುದಿತ್ತು. ಆದರೆ ಹಾಗೆ ಆಗಿಲ್ಲ. ಆದರೆ ಮೋದಿಯವರು ಎಲ್ಲವನ್ನೂ ಸರಿಮಾಡುತ್ತಾರೆ ಎಂಬ ಆಶಾವಾದವನ್ನು ಹೊಂದಿದ್ದೇನೆ ಎಂದರು.
 ಕಾಶ್ಮೀರದಲ್ಲಿಯ ಬೆಳವಣಿಗೆಗಳು ಮತ್ತು ಭಾರತದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನದ ಹೆಚ್ಚುತ್ತಿರುವ ಹಸ್ತಕ್ಷೇಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಹಿಂದಿರುವ ಕಾರಣಗಳು ಎಲ್ಲರಿಗೂ ಗೊತ್ತು. ಈ ಹಂತದಲ್ಲಿ ನೀವು ಏನನ್ನು ಬೋಧಿಸುತ್ತಿರೋ ಅದನ್ನು ಆಚರಿಸಿ ಎಂಬ ನಮ್ಮ ಸಂತರ ಮಾತು ನನಗೆ ನೆನಪಾಗುತ್ತಿದೆ. ಹಾಗೆ ಮಾಡುವವರು ಆರಾಧಿಸಲ್ಪಡುತ್ತಾರೆ. ಆದರೆ ದುರದೃಷ್ಟವಶಾತ್ ಭಯೋತ್ಪಾದನೆಯನ್ನು ಅಳಿಸುವ ಭರವಸೆಯನ್ನು ಪೂರೈಸುವ ಆಡಳಿತಗಾರ ಭಾರತಕ್ಕೆ ಇನ್ನೂ ದೊರಕಿಲ್ಲ ಎಂದರು.
ನಿಮ್ಮ ಪಕ್ಷವು ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವಾಗ ಸರಕಾರವನ್ನು ಟೀಕಿಸುವ ನಿಮ್ಮ ಪಕ್ಷದ ಉದ್ದೇಶವೇನು ಎಂಬ ಪ್ರಶ್ನೆಗೆ, ಈ ಸರಕಾರದ ಕುರಿತು ನಮ್ಮ ನಿಲುವು ಅತ್ಯಂತ ಪ್ರಾಮಾಣಿಕವಾಗಿದೆ. ಈ ದೇಶದ ಜನರಿಗೆ ನೀಡಿರುವ ಭರವಸೆಗಳು ಈಡೇರುವಂತಾಗಲು ಈ ಸರಕಾರವು ಸುಗಮವಾಗಿ ನಡೆಯಬೇಕೆಂದು ನಾವು ಬಯಸಿದ್ದೇವೆ. ಆದರೆ ಸರಕಾರವು ದಾರಿ ತಪ್ಪಿದ ಸಂದರ್ಭಗಳಲ್ಲಿ ಎಚ್ಚರಿಕೆ ಗಂಟೆಯನ್ನು ಬಾರಿಸುವ ಎಲ್ಲ ಹಕ್ಕನ್ನು ನಾವು ಹೊಂದಿದ್ದೇವೆ ಎಂದು ಅವರು ಉತ್ತರಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವ ಖಾತೆಗಳ ಹಂಚಿಕೆ ಕುರಿತಂತೆ ಶಿವಸೇನೆ ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವುದನ್ನು ಉದ್ಧವ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News