×
Ad

ಸಿಎಂ ದಿಲ್ಲಿಪ್ರವಾಸ ರದ್ದು: ರಾಮಲಿಂಗಾರೆಡ್ಡಿ

Update: 2016-07-26 23:52 IST

ಬೆಂಗಳೂರು, ಜು.26: ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವ ನಿಗದಿಯಂತೆ ಜು.27ರಂದು ಹೊಸದಿಲ್ಲಿಗೆ ತೆರಳಬೇಕಿತ್ತು. ಆದರೆ, ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವುದರಿಂದ ಹೊಸದಿಲ್ಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೆಂಗಳೂರಿನಲ್ಲಿದ್ದು ಕೊಂಡೇ ಮುಷ್ಕರದ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಸಲಿದ್ದಾರೆ ಎಂದರು.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂತಹ ಸಂದರ್ಭದಲ್ಲಿ ಸರಕಾರದ ಪರವಾಗಿರಬೇಕು. ಆದರೆ, ಮುಷ್ಕರ ನಿರತರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿಯೂ ಸಾರಿಗೆ ನೌಕರರ ವೇತನವನ್ನು ಶೇ.10ರಷ್ಟೆ ಹೆಚ್ಚಳ ಮಾಡಲಾಗಿತ್ತು. ನಾವು ಅಷ್ಟೇ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ವೇತನವನ್ನು ಶೇ.10ರಷ್ಟು ಹೆಚ್ಚಳ ಮಾಡುವುದರಿಂದ ಸರಕಾರಕ್ಕೆ 1,550 ಕೋಟಿ ರೂ.ಹೊರೆಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆ ನಿಗಮಗಳು ಇಷ್ಟೊಂದು ಆರ್ಥಿಕ ಹೊರೆಯನ್ನು ಎದುರಿಸುವಷ್ಟು ಶಕ್ತವಾಗಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳಿಗೆ ರಜೆ
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲಾ, ಕಾಲೇಜುಗಳಿಗೆ ಬುಧವಾರ(ಜು.27)ವೂ ರಜೆಯನ್ನು ವಿಸ್ತರಿಸಿ ನಗರ ಜಿಲ್ಲಾಧಿಕಾರಿ ವಿ.ಶಂಕರ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News