×
Ad

ಮಹದಾಯಿ: ರಾಜ್ಯಕ್ಕೆ ಅನ್ಯಾಯ

Update: 2016-07-27 19:42 IST
ತೀರ್ಪಿನ ವಿರುದ್ಧ ಉತ್ತರಕರ್ನಾಟಕದಲ್ಲಿ ತೀವ್ರ ಜನಾಕ್ರೋಶ, ನವಲಗುಂದ ಸೇರಿದಂತೆ ವಿವಿಧೆಡೆ ಅಘೋಷಿತ ಬಂದ್

ಬೆಂಗಳೂರು/ಹೊಸದಿಲ್ಲಿ, ಜು.27: ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಕೋರಿದ್ದ ಕರ್ನಾಟಕದ ಅರ್ಜಿ ತಿರಸ್ಕೃತವಾಗಿದೆ. ಮಹಾದಾಯಿ ನ್ಯಾಯಾಧೀಕರಣವು ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ.

ಸೋಮವಾರ ನ್ಯಾಯಾಧೀಶರಾದ ಜೆ.ಎಂ.ಪಾಂಚಾಲ್ ಅವರ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪುನ್ನು ಇಂದಿಗೆ ಕಾಯ್ದಿರಿಸಿತ್ತು. ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಕರಣವು ರಾಜ್ಯದ ಅರ್ಜಿಯನ್ನು ತಿರಸ್ಕರಿಸಿದೆ.
7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿಕೊಂಡು ಹುಬ್ಬಳ್ಳಿ- ಧಾರವಾಡ, ಗದಗ ಮುಂತಾದ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರಕಾರ ವಿರೋಧ ವ್ಯಕ್ತಪಡಿಸಿತ್ತು. ಆದುದರಿಂದ, ರಾಜ್ಯ ಸರಕಾರವು ನ್ಯಾಯಾಧೀಕರಣದ ಮೊರೆ ಹೋಗಿತ್ತು.
ನವಲಗುಂದದಲ್ಲಿ ಅಘೋಷಿತ ಬಂದ್ ವಾತಾವರಣ: ಮಹದಾಯಿ ನ್ಯಾಯಾಧೀಕರಣವು ರಾಜ್ಯ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಿತಗೊಂಡಿರುವ ಧಾರವಾಡ ಜಿಲ್ಲೆಯ ಜನತೆ, ಕೇಂದ್ರ ಸರಕಾರ ಹಾಗೂ ಗೋವಾ ಸರಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಕೊಡಲಿ, ಕೋಲುಗಳನ್ನು ಹಿಡಿದುಕೊಂಡು ಬೀದಿಗಿಳಿದಿರುವ ಸಾವಿರಾರು ಜನರು, ಸರಕಾರಿ ಕಚೇರಿಗಳು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಕೇಂದ್ರ ಹಾಗೂ ಗೋವಾ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಗದಗದಲ್ಲಿರುವ ಸಂಸದ ಶಿವಕುಮಾರ್ ಉದಾಸಿ ಕಚೇರಿಗೆ ನುಗ್ಗಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಭಾವಚಿತ್ರ ಹಾಗೂ ಹೆಸರನ್ನು ಹೊಂದಿದ್ದ ಬೋರ್ಡ್‌ನ್ನು ಕಿತ್ತು ಹಾಕಿದ ಕಾರ್ಯಕರ್ತರು ಕಚೇರಿ ಎದುರು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ನವಲಗುಂದದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ನೀರಾವರಿ ಇಲಾಖೆಯ ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಕಿಟಕಿ ಗಾಜುಗಳು, ಪಿಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ಒಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನವಲಗುಂದದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಯಿಂದಾಗಿ ಎಲ್ಲ ಸರಕಾರಿ ನೌಕರರು ಹಾಗೂ ಸಿಬ್ಬಂದಿಗಳಿಗೆ ಮನೆಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಅಲ್ಲದೆ, ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಗದಗ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಬೆಳಗಾವಿಯ ಗಾಂಧಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್ ಮಾಡಲು ಮುಂದಾದ ನೂರಾರು ರೈತರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬುಧವಾರ ಬೈಲಹೊಂಗಲ ತಾಲೂಕು ಬಂದ್ ಮಾಡಲು ರೈತ ಮುಖಂಡರು ಕರೆ ನೀಡಿದ್ದಾರೆ.
ಬೆಳಗಾವಿಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಬಳಿ ನಡೆಯುತ್ತಿರುವ ಕಳಸಾ-ಬಂಡೂರಿ ನಾಲ ಕಾಮಗಾರಿ ಬಳಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ರಾಜ್ಯದ ಜನತೆಗೆ ಅನ್ಯಾಯ
ಮಹಾದಾಯಿ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶೀಘ್ರವೆ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
-ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ

‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಲು ಬಿಎಸ್‌ವೈ ಆಗ್ರಹ

ಬೆಂಗಳೂರು/ಹೊಸದಿಲ್ಲಿ, ಜು.27: ಮಹದಾಯಿ ನ್ಯಾಯಾಧೀಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಶ್ನಿಸಲು ರಾಜ್ಯ ಸರಕಾರ ಅರ್ಜಿ ಸಲ್ಲಿಸಬೇಕು. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಶಾಂತಿಯುತವಾಗಿ ಹೋರಾಟ ಮಾಡಬೇಕು. ರಾಜ್ಯದ ಪರವಾಗಿ ನ್ಯಾಯಾಧೀಕರಣದ ಎದುರು ಖ್ಯಾತ ವಕೀಲರಾದ ಫಾಲಿ ನಾರಿಮನ್ ಹಾಗೂ ಮೋಹನ್‌ಕಾತರಕಿ ವಾದ ಮಂಡಿಸಿದ್ದರು ಎಂದರು.
 ರಾಜ್ಯ ಸರಕಾರವು 7.56 ಟಿಎಂಸಿ ನೀರಿಗಾಗಿ ಬೇಡಿಕೆಯಿಟ್ಟಿತ್ತು. ಈ ಪೈಕಿ ಕನಿಷ್ಠ 3-4 ಟಿಎಂಸಿ ನೀರು ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ರಾಜ್ಯದ ಅರ್ಜಿಯನ್ನೆ ನ್ಯಾಯಾಧೀಕರಣ ತೀರಸ್ಕರಿಸಿದೆ. ಸರಕಾರ ಮುಂದೆ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News