×
Ad

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಬಿಜೆಪಿಯ ಮಾಜಿ ಕಾರ್ಪೊರೇಟರ್ ಗಂಗಭೈರಯ್ಯ ಬಂಧನ

Update: 2016-07-27 20:07 IST

ಬೆಂಗಳೂರು, ಜು. 27: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋರಿಕೆ ಮಾಡಿದ ಪ್ರಮುಖ ಆರೋಪಿಗಳೊಂದಿಗೆ ನುಂಟು ಹೊಂದಿದ್ದ ಆರೋಪದ ಮೇಲೆ ಬಿಜೆಪಿ ಹಿರಿಯ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಗಂಗಭೈರಯ್ಯನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
  ಬುಧವಾರ ಮಧ್ಯಾಹ್ನ ನಗರದ ಅಗ್ರಹಾರ ದಾಸರಹಳ್ಳಿಯ ನಿವಾಸದಲ್ಲಿ ಬಿಬಿಎಂಪಿ ಡಾ.ರಾಜ್‌ಕುಮಾರ್ ವಾರ್ಡ್‌ನ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಗಂಗಭೈರಯ್ಯನನ್ನು ಬಂಧಿಸಿದ ಸಿಐಡಿ ತಂಡ, ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದರು.
ಬಿಜೆಪಿ ಮುಖಂಡ ಮನೆಯಲ್ಲಿಯೇ ಸೋರಿಕೆ: ಬಸವೇಶ್ವರನಗರದಲ್ಲಿರುವ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಗಂಗಭೈರಯ್ಯ ನಿವಾಸದಲ್ಲಿಯೇ ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದರು ಎಂಬ ಆತಂಕದ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
 ಅದೇ ರೀತಿ, ಗಂಗಭೈರಯ್ಯನ ಮೊಮ್ಮಗ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಾರಣ ಮೊಮ್ಮಗನಿಗೆ ಪರೀಕ್ಷೆಯಲ್ಲಿ ಅನುಕೂಲವಾಗಬೇಕೆನ್ನುವ ದುರಾಸೆಯಿಂದ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
  ರೂವಾರಿ ಜೊತೆ ನಿಕಟ ಸಂಪರ್ಕ?: ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖರ ರೂವಾರಿ ಶಿವಕುಮಾರಯ್ಯ ಯಾನೆ ಗುರೂಜಿ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯ ಮೊದಲೇ ಬಿಜೆಪಿ ಮುಖಂಡ ಗಂಗಭೈರಯ್ಯ ಹಾಗೂ ಶಿವಕುಮಾರಯ್ಯ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆ ಸಂಬಂಧ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿ ಮಾ.21 ರಂದು ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಈಗಾಗಲೇ ಸಿಐಡಿ ಅಧಿಕಾರಿಗಳು ಪ್ರಮುಖ ರೂವಾರಿ ಶಿವಕುಮಾರಯ್ಯ ಸೇರಿ 11 ಮಂದಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News