×
Ad

ಜು.30ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್

Update: 2016-07-27 20:14 IST

ಬೆಂಗಳೂರು, ಜು.27: ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಜು.30 ಕರ್ನಾಟಕ ಬಂದ್ ಮಾಡಿ ಪ್ರತಿಭಟಿಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧೀಕರಣ ತೀರ್ಪನ್ನು ವಿರೋಧಿಸಿ ನಾಳೆಯಿಂದಲೆ ರಾಜ್ಯಾದ್ಯಂತ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ವೇಳೆ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದರು.
ಸಂಸದರ ಬಹಿರಂಗ ಹರಾಜು: ಮಹಾದಾಯಿ ಯೋಜನೆಯ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಹೀಗಾಗಿ ಜು.29ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊರತು ಪಡಿಸಿ, ಉಳಿದ ಸಂಸದರನ್ನು ಬಹಿರಂಗವಾಗಿ ಹರಾಜು ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಚಲನಚಿತ್ರೋದ್ಯಮ ಬಂದ್: ಮಹಾದಾಯಿ ನ್ಯಾಯಾಧೀಕರಣ ತೀರ್ಪನ್ನು ಖಂಡಿಸಿ ಜು.30ರಂದು ಕರ್ನಾಟಕ ಬಂದ್ ಮಾಡಿ, ಪ್ರತಿಭಟನೆ ಕೈಗೊಳ್ಳಲಾಗುವುದು. ಈ ಬಂದ್‌ಗೆ ಚಲನಚಿತ್ರ ನಟ, ನಟಿಯರು ಬೆಂಬಲ ವ್ಯಕ್ತಪಡಿಸಲಿದ್ದು, ಆ ದಿನ ಚಲನಚಿತ್ರೋದ್ಯಮ ಬಂದ್ ಆಗಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News