×
Ad

ಮಹಾದಾಯಿಗಾಗಿ ಹೆಚ್ಚಿದ ಕಿಚ್ಚು

Update: 2016-07-28 20:26 IST

ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ - ಸರಕಾರಿ ಕಚೇರಿಗಳು, ಕೋರ್ಟ್‌ಹಾಲ್ ಬೆಂಕಿಗಾಹುತಿ - ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ರೈತರು - ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಗಳು

ಬೆಂಗಳೂರು, ಜು.28: ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘ ಕರೆ ನೀಡಿದ್ದ ಬಂದ್‌ಗೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿ, ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಂದ್ ತೀವ್ರ ಸ್ವರೂಪ ಪಡೆದಿದ್ದು ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬೆಂಕಿಯ ಕೆನ್ನಾಲಿಗೆಗಳು ಕಾಣುತ್ತಿವೆ. ಶಾಲಾ-ಕಾಲೇಜುಗಳು ಹಾಗೂ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

 ನವಲಗುಂದದಲ್ಲಿರುವ ಸರಕಾರಿ ಕಚೇರಿಗಳು, ಬಿಎಸ್ಸೆನ್ನೆಲ್, ಲೋಕೋಪಯೋಗಿ, ನೀರಾವರಿ ಇಲಾಖೆಯ ಕಚೇರಿಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರಲ್ಲದೆ, ಕಚೇರಿಗಳಲ್ಲಿದ್ದ ಪೀಠೋಪಕರಣಗಳು ಹಾಗೂ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ರಸ್ತೆಗಳು, ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ಆಸ್ಪತ್ರೆ ಬಳಿ ಮಚ್ಚು, ಲಾಂಗುಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಅವರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷ ಸೇವಿಸಿದ ವಿದ್ಯಾರ್ಥಿಗಳು: ಮಹಾದಾಯಿ ನ್ಯಾಯಾಧಿಕರಣವು ರಾಜ್ಯದ ಮಧ್ಯಾಂತರ ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಬೇಸತ್ತು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆಯುತ್ತಿದ್ದ ಧರಣಿ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಂದೀಶ್‌ಮಠ ಹಾಗೂ ಚನ್ನಬಸಪ್ಪ ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರಗಿತು.

ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ದೇಹದಿಂದ ದ್ರವ್ಯಾಂಶವನ್ನು ಹೊರತೆಗೆಯಲಾಗಿದ್ದು, ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ಪ ತಿಳಿಸಿದ್ದಾರೆ.

ಉದ್ರಿಕ್ತರ ಮೇಲೆ ಲಾಠಿ ಚಾರ್ಜ್: ಗದಗ ನಗರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ರ್ಯಾಲಿ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಆದರೂ, ಪ್ರತಿಭಟನಾನಿರತರು ರ್ಯಾಲಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿ ಉದ್ರಿಕ್ತರನ್ನು ಚದುರಿಸಿದರು. ಅಲ್ಲದೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾನಿರತರು, ಸ್ಟೇಶನ್ ರಸ್ತೆಯಲ್ಲಿ ತೆರೆದಿದ್ದ ಹೊಟೇಲ್‌ವೊಂದಕ್ಕೆ ನುಗ್ಗಿ ಪಾತ್ರೆಗಳನ್ನು ರಸ್ತೆಗೆ ಎಸೆದಿದ್ದಲ್ಲದೆ ಹೊಟೇಲ್ ಮಾಲಕನೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಬೇಕರಿಯೊಂದರ ಗಾಜುಗಳನ್ನು ಪುಡಿ ಮಾಡಿದರು. ಆನಂತರ ಅಂಚೆ ಕಚೇರಿಗೆ ನುಗ್ಗಿದ ಪ್ರತಿಭಟನಾನಿರತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಲಿಸುತ್ತಿದ್ದ ಆಟೋಗಳನ್ನು ತಡೆದು ಚಕ್ರದ ಗಾಳಿಯನ್ನು ತೆಗೆಯುತ್ತಿದ್ದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು.
 
ನವಲಗುಂದ ಕೋರ್ಟ್‌ನಲ್ಲಿ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದ್ದು, ಮಹಾತ್ಮ ಗಾಂಧಿಯ ಭಾವಚಿತ್ರಕ್ಕೂ ಹಾನಿ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ: ಕುಡಿಯುವ ನೀರು ಕೊಡಲು ರಾಜ್ಯದ ಕುರಿತು ತಾರತಮ್ಯ ಅನುಸರಿಸುತ್ತಿರುವ ಕೇಂದ್ರ ಸರಕಾರ, ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಕೂಡಲೆ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಹಾವೇರಿಯ 20ಕ್ಕೂ ಹೆಚ್ಚು ರೈತರು ರಕ್ತದಿಂದ ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದಿದ್ದು, ಅದನ್ನು ತಹಶೀಲ್ದಾರ್ ಮೂಲಕ ಪ್ರಧಾನಿಗೆ ರವಾನಿಸಿದ್ದಾರೆ.

ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿ: ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, 54 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಾಳೆ ಸಂಜೆಯವರೆಗೆ ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಬೈಯಿಂದ ಆರ್‌ಎಎಫ್ ತುಕಡಿ ಆಗಮಿಸಿದೆ. ಎರಡು ಸಶಸ್ತ್ರ ಮೀಸಲು ಪಡೆ ತುಕಡಿಗಳಿಂದಲೂ ಭದ್ರತೆ ಕೈಗೊಳ್ಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ.

-ಡಾ.ಕೆ.ರಾಮಚಂದ್ರರಾವ್, ಐಜಿಪಿ, ಉತ್ತರ ವಲಯ ಲಾಠಿ ಚಾರ್ಜ್ ಖಂಡಿಸಿ ಧರಣಿ: ನವಲಗುಂದದಲ್ಲಿ ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಕ್ರಮವನ್ನು ಖಂಡಿಸಿ ಜೆಡಿಎಸ್ ಶಾಸಕ ಕೋನರೆಡ್ಡಿ, ಬಿಎಸ್ಸಾರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಹಾಗೂ ರೈತ ಮುಖಂಡರು ವಿಧಾನಸೌಧದ ಎದುರಿರುವ ಕೆಂಗಲ್‌ಹನುಮಂತಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು.

ಗೋವಾದಿಂದ ಬಸ್ ಸೇವೆ ಸ್ಥಗಿತ

ಮಹಾದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರಕಾರವು ಕರ್ನಾಟಕಕ್ಕೆ ಬರುವ ತನ್ನ ಅಂತಾರಾಜ್ಯ ಬಸ್ ಸೇವೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News