×
Ad

ಜು.30 ರಂದು ಕರ್ನಾಟಕ ಬಂದ್

Update: 2016-07-28 20:38 IST

ಬೆಂಗಳೂರು, ಜು. 28: ಮಹಾದಾಯಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪು ಕನ್ನಡಿಗರಿಗೆ ಮರಣಶಾಸನವಾಗಿದ್ದು, ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡಪರ, ರೈತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಕನ್ನಡ ಒಕ್ಕೂಟದ ಸದಸ್ಯರು ಕೇಂದ್ರ ಸರಕಾರ ಹಾಗೂ ಗೋವಾ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಿದರು. ಅದೇ ರೀತಿ, ಮೈಸೂರು ಬ್ಯಾಂಕ್, ಆನಂದರಾವ್ ವೃತ್ತ ಹಾಗೂ ಫ್ರೀಡಂ ಪಾರ್ಕ್‌ನಲ್ಲೂ ಸಂಘಟನೆಗಳು ಬೆಂಕಿ ಹಾಕಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, ಮಹಾದಾಯಿ ಮಧ್ಯಂತರ ತೀರ್ಪಿನಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ. ಈ ತೀರ್ಪು ರಾಜ್ಯಕ್ಕೆ ಹಿನ್ನಡೆಯಾಗಿದ್ದು, ಸಂಸದರು ಪ್ರಧಾನಿಯವರ ಮೇಲೆ ಒತ್ತಡ ತರಬೇಕು. ಇಲ್ಲವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಹಿತಾಸಕ್ತಿಗಿಂತ ಜನಪ್ರತಿನಿಧಿಗಳಿಗೆ ತಮ್ಮ ಸ್ಥಾನ ಮುಖ್ಯವಲ್ಲ ಎಂದು ಕಿಡಿಕಾರಿದರು.

ದಂಗೆ ಏಳಲಿದ್ದಾರೆ

ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಂಸದರು ಒತ್ತಡ ತರುತ್ತಾರೊ ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೊ ಎಂಬುದನ್ನು ಅವರೇ ನಿರ್ಧರಿಸಲಿ ಎಂದ ಅವರು, ಪ್ರಧಾನಿ ನರೇಂದ್ರಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯದ ಜನ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.

ಇನ್ನು ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಕನ್ನಡ ಒಕ್ಕೂಟದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್‌ನಾಗರಾಜ್, ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹಾದಾಯಿ ಮೂಲಕ ನೀಗಿಸುವ ಕರ್ನಾಟಕ ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯ ಮಂಡಳಿ ನೀಡಿರುವ ತೀರ್ಪು ಮರಣಶಾಸನವಾಗಿದೆ. ಅಲ್ಲದೆ, ಈ ಗೊಂದಲಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣವಾಗಿದ್ದು, ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಮಹಾದಾಯಿ ನದಿ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಆದರೆ, ಪ್ರಧಾನಿ ಮೋದಿ ಆಗಲಿ, ರಾಜ್ಯದ ಸಂಸದರಾಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಾದಾಯಿ ನೀರಿಗೆ ನ್ಯಾಯ ದೊರೆಯವರೆಗೂ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.

ಜು.30ರಂದು ಬಂದ್

ಮಹಾದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪಿನಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಜು.30ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ನಗರದ ಪುರಭವನದಿಂದ ಫ್ರೀಡಂಪಾರ್ಕ್‌ವರೆಗೂ ಬೃಹತ್ ರ್ಯಾಲಿ ಏರ್ಪಡಿಸಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿ ಪ್ರಮುಖರು ಹಾಜರಿದ್ದರು.

ಅದೇ ರೀತಿ, ಮೈಸೂರು ವೃತ್ತದ ಬಳಿ ಜೆಡಿಯು ಪಕ್ಷದ ಕಾರ್ಯಕರ್ತರು ಮಹಾದಾಯಿ ಯೋಜನೆ ತೀರ್ಪು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಅಶ್ವತ್‌ನಾರಾಯಣ್, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡು ರಾಜಕೀಯ ಮಾಡುವ ಮೂಲಕ ಕರ್ನಾಟಕ ಜನತೆಗೆ ತೊಂದರೆಯನ್ನು ನೀಡುತ್ತಿವೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಗೋವಾ ಮುಖ್ಯಮಂತ್ರಿಗಳೊಂದಿಗೆ ಇದುವರೆಗೂ ಯಾಕೆ ಮಾತುಕತೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

ಬಿಎಸ್‌ವೈ ಮುಂದಾಗಲಿ

ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಅಧ್ಯಕ್ಷರು ಮತ್ತು ಸಂಸದರಾಗಿದ್ದರೂ ಕೂಡ ರಾಜ್ಯದ ಹಿತಕ್ಕಿಂತ ತಮ್ಮ ರಾಜಕೀಯ ಲಾಭಕ್ಕೋಸ್ಕರ ಕೆಲಸ ಮಾಡುತ್ತಾರೆ. ಬಿಜೆಪಿಯವರು ಅವರನ್ನೇ ಮುಂದಿಟ್ಟುಕೊಂಡು ಪ್ರಧಾನಿಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಏರ್ಪಡಿಸಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಅವರು, ತಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ನೈತಿಕತೆಯಿದ್ದರೆ ಪ್ರಧಾನಮಂತ್ರಿಯವರು ಮಧ್ಯ ಪ್ರವೇಶಿಸುವಂತೆ ಒತ್ತಡ ಹೇರಲು ರಾಜ್ಯದಲ್ಲಿರುವ ಸಂಸದರು ಮುಂದಾಗಬೇಕೆಂದರು.

ಆರ್‌ಪಿಐ ಪ್ರತಿಭಟನೆ

ಮಹಾದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ ಆರ್‌ಪಿಐ ಕಾರ್ಯಕರ್ತರು ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಆರ್‌ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಉತ್ತರ ಕರ್ನಾಟಕ ಜನರಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ಯೋಜನೆ ಸಂಬಂಧ ನ್ಯಾಯಾಧಿಕರಣದ ತೀರ್ಪು ಅವೈಜ್ಞಾನಿಕವಾಗಿದೆ. ಮಾನವೀಯತೆ ದೃಷ್ಟಿಯಿಂದ ಕುಡಿಯುವ ನೀರನ್ನು ಬಿಡಬೇಕಾಗಿತ್ತು. ಆದರೆ, ನ್ಯಾಯಾಧಿಕರಣದ ತೀರ್ಪು ಸಮಂಜಸವಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಕಚೇರಿಗೆ ಮುತ್ತಿಗೆ

ಮಹಾದಾಯಿ ಯೋಜನೆ ವಿಷಯದಲ್ಲಿ ಕೇಂದ್ರ ಸರಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಇಲ್ಲಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಯತ್ನ ನಡೆಸಿದರು. ಆದರೆ, ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದನ್ನು ಪೊಲೀಸರು ವಿಫಲಗೊಳಿಸಿದರು.

ಮಹಾದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಮಂಡಳಿ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ತೀವ್ರ ಆಘಾತವುಂಟಾಗಿದೆ. ಕೇಂದ್ರದ ಬಿಜೆಪಿ ಸಚಿವರು, ಸಂಸದರು ರಾಜಕೀಯ ನಾಟಕ ಬಿಟ್ಟು ಮಹಾದಾಯಿ ವಿಷಯದ ಬಗ್ಗೆ ಪ್ರಧಾನಿ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.

ಸಂಚಾರ ದಟ್ಟಣೆ

ವಿವಿಧ ಸಂಘಟನೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣ ರಸ್ತೆಯಲ್ಲಿ 1 ಗಂಟೆಗೂ ಅಧಿಕ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News