ವಡೋದರ: ಬಿಜೆಪಿ ನಾಯಕರು, ಡಿಸಿ ವಿರುದ್ಧ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಏಜೆಂಟ್

Update: 2016-07-30 03:10 GMT

ವಡೋದರ, ಜು.30: ಬಿಜೆಪಿ ನಾಯಕರು, ಡಿಸಿ ವಿರುದ್ಧ ಪತ್ರ ಬರೆದಿಟ್ಟು ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪತೇಹ್‌ಗಂಜ್‌ನಲ್ಲಿ ನಡೆದಿದೆ.

ಬಿಜೆಪಿ ಕಾರ್ಯಕರ್ತ ಎನ್ನಲಾದ ಕಪಿಲ್ ಪಾಂಡ್ಯ (58) ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಏಜೆಂಟ್. ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ವಾಡಿಕೊಂಡ ಅವರು, ತಮ್ಮ ಈ ನಿರ್ಧಾರಕ್ಕೆ ಬಿಜೆಪಿ ಮುಖಂಡರು ಹಾಗೂ ಜಿಲ್ಲಾಧಿಕಾರಿ ಕಾರಣ ಎಂದು ಟಿಪ್ಪಣಿ ಬರೆದಿಟ್ಟಿದ್ದಾರೆ. ಆದರೆ ಆತ ಬಿಜೆಪಿ ಕಾರ್ಯಕರ್ತನೇ ಎನ್ನುವುದು ಖಚಿತವಾಗಿ ತಿಳಿದಿಲ್ಲ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷೆ ಹಾಗೂ ಸಂಸದೆ ರಂಜನಾ ಭಟ್ ಹೇಳಿದ್ದಾರೆ.

ನನ್ನ ಕುಟುಂಬವನ್ನೂ ನಿರ್ಲಕ್ಷಿಸಿ ಹದಿನಾಲ್ಕು ವರ್ಷಗಳ ಕಾಲ ಬಿಜೆಪಿ ಹಾಗೂ ನರೇಂದ್ರ ಮೋದಿ ಪರವಾಗಿ ನಿಂತು ಜೀವನ ವ್ಯರ್ಥ ಮಾಡಿಕೊಂಡಿದ್ದೇನೆ ಎಂದು ಪಾಂಡ್ಯ ಪತ್ರದಲ್ಲಿ ಬರೆದಿಟ್ಟಿದ್ದಾರೆ. ಜಿಲ್ಲಾಧಿಕಾರಿ ಲೋಚನ್ ಸೆಹ್ರಾ ಸಹಿತ ಹಲವಾರು ಮಂದಿ ಜಿಲ್ಲಾ ಅಧಿಕಾರಿಗಳನ್ನು ಕೂಡಾ ತಮ್ಮ ಆತ್ಮಹತ್ಯೆಗೆ ಹೊಣೆ ಎಂದು ಪಾಂಡ್ಯ ದೂರಿದ್ದಾಗಿ ಪೊಲೀಸರು ಹೇಳಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡ ಮತ್ತು ಕೊಯಾಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಶ್ವಿನ್ ಪಟೇಲ್ ಅವರ ಹೆಸರನ್ನೂ ಪಾಂಡ್ಯ ಉಲ್ಲೇಖಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ಭೂ ಪರಿವರ್ತನೆ ವಿಷಯದಲ್ಲಿ ಭೂಮಾಲಕರಿಗೆ ಈತ ಸಹಕರಿಸುತ್ತಿದ್ದ ಎನ್ನಲಾಗಿದ್ದು, ತಮ್ಮದೇ ಸ್ವಂತ ಜಮೀನಿನ ಭೂ ಪರಿವರ್ತನೆ ಕಡತ 2014ರಿಂದಲೂ ಬಾಕಿ ಇದ್ದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿ, ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News