ನಿಯಮಾತೀತ ಮಿಶ್ರಾ!

Update: 2016-07-30 18:16 GMT

ನಿಯಮಾತೀತ ಮಿಶ್ರಾ!

ಕೆಲವೊಮ್ಮೆ ತೀರಾ ಕೆಟ್ಟ ಪ್ರತಿಕೂಲ ಪರಿಸ್ಥಿತಿಗಳೂ ರಾಜಕೀಯ ದಲ್ಲಿ ನೆರವಿಗೆ ಬರುತ್ತವೆ. ಪಕ್ಷ ನಿಮಗಾಗಿ ನಿಯಮ ಸಡಿಲಿಸುವಂಥ ವಿಚಿತ್ರ ಸನ್ನಿವೇಶ. ಉತ್ತರ ಪ್ರದೇಶದ ಪ್ರಮುಖ ಬ್ರಾಹ್ಮಣ ನೇತಾರ ಹಾಗೂ ಕೇಂದ್ರ ಸಚಿವ ಖಲ್‌ರಾಜ್ ಮಿಶ್ರಾ ಅವರಿಗೆ ಇಂಥ ಅನುಕೂಲತೆ ಸಿಕ್ಕಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಕಾಂಗ್ರೆಸ್ ಮೂಲದ ಮುಖಗಳ ಬಗ್ಗೆ ವಿಶೇಷ ಒಲವೇನೂ ಇರುವುದಿಲ್ಲ. ಆದರೆ ಮೊನ್ನೆಯಷ್ಟೇ 75 ವಸಂತ ಪೂರೈಸಿದ ಮಿಶ್ರಾ ಇದೀಗ ಪ್ರಧಾನಿಯವರ ವಿಶೇಷ ಪ್ರೀತಿಪಾತ್ರರು. ಬಿಜೆಪಿ ನಿಯಮಾವಳಿ ಪ್ರಕಾರ, 75 ವರ್ಷ ಮೀರಿದವರು ಸಂಪುಟದಲ್ಲಿ ಇರುವಂತಿಲ್ಲ. ಈ ಅಪಾಯದ ರೇಖೆಯಲ್ಲಿ ಮಿಶ್ರಾ ಹಾಗೂ ನಝ್ಮಾ ಹೆಫ್ತುಲ್ಲಾ ಇದ್ದರು. ಆದರೆ ಅಂತಿಮವಾಗಿ ಮಿಶ್ರಾ ಅವರಿಗೆ ಈ ನಿಯಮಾವಳಿಯಿಂದ ವಿನಾಯಿತಿ ಸಿಕ್ಕಿತು. ಉತ್ತರ ಪ್ರದೇಶ ಚುನಾವಣೆ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತಬುಟ್ಟಿಯಾದ ಬ್ರಾಹ್ಮಣ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮಿಶ್ರಾ ಅವರಿಗೆ ವಿನಾಯ್ತಿ ದೊರಕಿದೆ. ಕಾಂಗ್ರೆಸ್‌ನ ಯೋಜನೆಗಳಿಗೆ ತಿರುಗುಬಾಣವಾಗಿ ಮಿಶ್ರಾ ತಂತ್ರಗಳನ್ನು ಹೆಣೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು.

ಕಿಶೋರ್ ಸಮಸ್ಯೆಗೆ ಮುಕ್ತಿ?

ಉತ್ತರಪ್ರದೇಶದಲ್ಲಿ ಚುನಾವಣೆಯ ಕರೆಗಂಟೆ ಮೊಳಗಿದೆ. ಕಾಂಗ್ರೆಸ್ ಹೊಸ ಹುರುಪಿನಿಂದ ಪ್ರಚಾರಕಣಕ್ಕೆ ಧುಮುಕಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೊಸ ಭವಿಷ್ಯ ಬರೆಯುವ ಹೊಣೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹೆಗಲೇರಿದೆ. ರಾಜ್ಯದ ಪಕ್ಷ ವ್ಯವಹಾರಗಳಲ್ಲಿ ಅವರ ಮಾತು ಅಂತಿಮ. ಲಕ್ನೋ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಭಾಷಣ ಕಾಂಗ್ರೆಸ್‌ಗೆ ಮಹತ್ವದ ಘಟ್ಟ. ಪಂಜಾಬ್ ಹಾಗೂ ಉತ್ತರ ಪ್ರದೇಶ ಚುನಾವಣೆಯ ಹೊಣೆ ಹೆಗಲೇರಿದ ಬಳಿಕ ಪ್ರಶಾಂತ್, ಚುನಾವಣಾ ಸಿದ್ಧತೆಯಲ್ಲಿ ಪ್ರಿಯಾಂಕಾ ವಹಿಸಬೇಕಾದ ಮಹತ್ವದ ಪಾತ್ರವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಮುಖವನ್ನು ಜನಪ್ರಿಯಗೊಳಿಸುವ ಮೂಲಕ ರಾಜ್ಯ ರಾಜಕೀಯದ ಜಾತಿ ಲೆಕ್ಕಾಚಾರವನ್ನು ಕಾಂಗ್ರೆಸ್ ಪರವಾಗಿ ತಿರುಗಿಸುವುದು ಅವರ ರಣತಂತ್ರ. ಚುನಾವಣಾ ತಂತ್ರಗಾರಿಕೆಯ ಹಳೆ ಹುಲಿ ಶೀಲಾ ದೀಕ್ಷಿತ್ ಅವರನ್ನು ಈಗಾಗಲೇ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಪ್ರಿಯಾಂಕಾ ಸಕ್ರಿಯ ಪಾಲ್ಗೊಳ್ಳುವಿಕೆ ಇದಕ್ಕೆ ಪೂರಕವಾಗುತ್ತದೆ ಎಂಬ ಲೆಕ್ಕಾಚಾರ ಅವರದ್ದು. ಇಷ್ಟಾಗಿಯೂ ಪಕ್ಷದ ಒಂದು ವರ್ಗವನ್ನು ನಿಭಾಯಿಸುವುದು ಕಿಶೋರ್‌ಗೆ ಕಬ್ಬಿಣದ ಕಡಲೆಯಾಗಿದೆ ಎನ್ನಲಾಗುತ್ತಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಪ್ರತಿಪಾದನೆ ಎಂದರೆ, ಕಿಶೋರ್ ಕೇವಲ ಚುನಾವಣಾ ತಂತ್ರಗಾರಿಕೆಗೆ ಸೀಮಿತ. ಪಕ್ಷದ ವ್ಯವಹಾರಗಳನ್ನು ಸಮನ್ವಯಗೊಳಿಸಿ, ಈ ಬಗ್ಗೆ ರಾಜ್ಯದ ಉಸ್ತುವಾರಿ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಬೇಕು ಎನ್ನುವುದು. ಗುಲಾಂ ನಬಿ ಆಝಾದ್ ಹಾಗೂ ಪಂಜಾಬ್ ಮತ್ತು ಉತ್ತರಪ್ರದೇಶ ಪಕ್ಷಾಧ್ಯಕ್ಷರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕಿಶೋರ್ ಹೇಳಿದ್ದನ್ನು ಸೋನಿಯಾ ಗಾಂಧಿ ಕೇಳಿಸಿಕೊಳ್ಳುತ್ತಾರೆ. ಆದ್ದರಿಂದ ಸದ್ಯಕ್ಕೆ ಎಲ್ಲರೂ ತೆಪ್ಪಗಿದ್ದಾರೆ.

ನಾಯ್ಡು ಹಸಿರು ಸಲಹೆ!

ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಕ್ಷಿಪ್ರ ನಡೆಗೆ ಹೆಸರಾದವರು. ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಅನಿಲ್ ಮಾಧವ್ ದವೆ, ನಾಯ್ಡು ಅವರ ಈ ವಿಶೇಷತೆಯನ್ನು ಪತ್ತೆ ಮಾಡಿದರು. ಸಚಿವರಾಗಿರುವ ಕಾರಣದಿಂದ ದವೆ ಬಂಗಲೆಗೆ ಮನವಿ ಸಲ್ಲಿಸಿದಾಗ, ನಾಯ್ಡು ತಕ್ಷಣ, ಫ್ಲಾಟ್‌ನಲ್ಲಿ ವಾಸಿಸುವುದರ ಅನುಕೂಲತೆಗಳನ್ನು ವಿವರಿಸಿದರು. ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ದವೆ, ಸಂಸದರಿಗಾಗಿಯೇ ಇರುವ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ನಾಯ್ಡು ಅವರಿಗೆ ಒಂದಷ್ಟು ಸಲಹೆಗಳನ್ನೂ ನೀಡಿದರು. ಪರಿಸರ ಸ್ನೇಹಿ ಗಾಲ್ಫ್ ಬಂಡಿಗಳನ್ನು ತಮ್ಮ ನಿವಾಸದಿಂದ ಸಂಸತ್ತಿಗೆ ಬರಲು ಬಳಸುವ ಸಲಹೆ ಮುಂದಿಟ್ಟರು. ಪರಿಸರ ಸಂರಕ್ಷಣೆ ಬಗೆಗಿನ ನಿಮ್ಮ ಬದ್ಧತೆಯನ್ನು ನಿಸ್ಸಂದೇಹವಾಗಿ ಬಲಗೊಳಿಸುತ್ತದೆ ಎಂದು ಹುರಿದುಂಬಿಸಿದರು. ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನದ ಸನಿಹದಲ್ಲೇ ವಾಸ ಇರುವ ಸಂಸದರು ಇದನ್ನು ಧಾರಾಳವಾಗಿ ಬಳಸಬಹುದು ಎಂದು ಇತರರಿಗೂ ಸಲಹೆ ನೀಡಲು ಇದೀಗ ದವೆ ಮುಂದಾಗಿದ್ದಾರೆ!

ರಿಜಿಜುಗೆ ಪೈಪೋಟಿ

ಗೃಹ ಖಾತೆಯ ರಾಜ್ಯ ಸಚಿವರಲ್ಲಿ ಅಲ್ಪಪ್ರಮಾಣದ ಶೀತಲ ಸಮರ ಆರಂಭವಾಗಿದೆ ಎಂಬ ಗುಲ್ಲು ನಾರ್ತ್ ಬ್ಲಾಕ್‌ನಲ್ಲಿ ಹಬ್ಬಿದೆ. ಹರಿಭಾಯಿ ಚೌಧರಿ ಸ್ಥಾನಕ್ಕೆ ಹಂಸರಾಜ್ ಆಹಿರ್ ನೇಮಕಗೊಳ್ಳುವ ಮುನ್ನ ಕಿರಣ್ ರಿಜಿಜು ಮುಖವಾಣಿಯಾಗಿದ್ದರು. ಎಲ್ಲ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಜವಾಬ್ದಾರಿಯನ್ನು ರಾಜನಾಥ್ ಸಿಂಗ್ ರಿಜಿಜು ಅವರಿಗೆ ಬಿಟ್ಟಿದ್ದರು. ಹಲವಾರು ಮಹತ್ವದ ವಿಷಯಗಳನ್ನು ಕೂಡಾ ಅವರು ನಿರ್ವಹಿಸುತ್ತಿದ್ದರು. ರಿಜಿಜು ದುರಾದೃಷ್ಟವೆಂದರೆ, ಇದೀಗ ಆಹಿರ್ ತಮ್ಮ ಅಸ್ತಿತ್ವವನ್ನು ತೋರಿಸುತ್ತಿದ್ದಾರೆ. ಆಂತರಿಕ ಭದ್ರತೆ ಹಾಗೂ ಅಂತರ ಸರಕಾರಿ ಸಂಬಂಧದ ಹೊಣೆ ಹೊತ್ತಿರುವ ಆಹಿರ್, ಕೆಲ ಪ್ರಮುಖ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಅವಕಾಶ ಸಿಕ್ಕಿದಾಗಲೆಲ್ಲ ಮಾಧ್ಯಮದ ಜತೆ ಮಾತನಾಡಲು ಮುಂದಾಗುತ್ತಿದ್ದ ರಿಜಿಜು ಈಗ ಮಾಧ್ಯಮದಿಂದ ದೂರ ಉಳಿದು, ಹೆಚ್ಚು ಕೆಲಸ ಮಾಡುತ್ತಿದ್ದಾರೆ!

ಹೊಸ ವಿದ್ಯಾರ್ಥಿ ಸಾಹಿತ್ಯ ಮುಖಗಳು

ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಚಳವಳಿ ಹಲವು ಮಂದಿ ವಿದ್ಯಾರ್ಥಿ ಮುಖಂಡರನ್ನು ರಾಷ್ಟ್ರೀಯ ವೇದಿಕೆಗೆ ಪರಿಚಯಿಸಿದೆ. ಅವರಲ್ಲಿ ಕನ್ಹಯ್ಯಾ ಕುಮಾರ್ ಅಗ್ರಗಣ್ಯರು. ಇದೀಗ ಹಲವು ಮಂದಿ ಲೇಖಕರೂ ರೂಪುಗೊಂಡಿದ್ದಾರೆ. ಅದೂ ಗಣ್ಯ ಲೇಖಕರು. ಇದರಲ್ಲೂ ಕನ್ಹಯ್ಯಾ ಮೊದಲಿಗರು. ತಮ್ಮ ಜೀವನಗಾಥೆ ಬಗೆಗೆ ಪುಸ್ತಕ ಬರೆಯಲು ಕನ್ಹಯ್ಯಾ ಈಗಾಗಲೇ ಇಂಗ್ಲಿಷ್ ಪ್ರಕಾಶನ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕನ್ಹಯ್ಯಾ ಜೈಲಿನಲ್ಲಿದ್ದಾಗ ಮತ್ತು ಹಲವು ಮಂದಿ ಭೂಗತರಾಗಿದ್ದಾಗ ವಿದ್ಯಾರ್ಥಿ ಪ್ರತಿಭಟನೆಯ ಮುಖವಾಗಿದ್ದ ಶೆಹ್ಲಾ ರಶೀದ್ ತಮ್ಮ ಅನುಭವಕ್ಕೆ ಅಕ್ಷರರೂಪ ನೀಡಲು ನಿರ್ಧರಿಸಿದ್ದಾರೆ. ಭಾರತೀಯ ಕ್ಯಾಂಪಸ್‌ಗಳಲ್ಲಿ ತಾಂಡವವಾಡುತ್ತಿರುವ ಅಸಹನೆಯನ್ನು ಪುಸ್ತಕರೂಪದಲ್ಲಿ ಪ್ರಕಟಿಸಲು ಪೆಂಗ್ವಿನ್ ರ್ಯಾಂಡಮ್ ಹೌಸ್ ಮುಂದಾಗಿದೆ. ಮೂಲತಃ ಕಾಶ್ಮೀರದವರಾಗಿರುವ ಶೆಹ್ಲಾ ತಮ್ಮ ಚೊಚ್ಚಲ ಕೃತಿಯಲ್ಲಿ, ಕಳೆದ ಐದು ತಿಂಗಳಲ್ಲಿ ವಿವಿಧ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದಾಗ ವ್ಯಕ್ತವಾದ ಅಭಿಪ್ರಾಯಗಳ ಒಳನೋಟವನ್ನು ಬಿಂಬಿಸಲಿದ್ದಾರೆ. ಈ ವಿದ್ಯಾರ್ಥಿ ಚಳವಳಿಗೆ ಸರಕಾರದಿಂದ ತೀವ್ರ ಒತ್ತಡ ಇದ್ದರೂ ಹೇಗೆ ಸಂಘಟಿತವಾಗಿತ್ತು ಎಂಬ ಬಗೆಗಿನ ಒಳನೋಟಗಳು ಕೂಡಾ ಇದರಲ್ಲಿ ಸಿಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News