ರಾಷ್ಟ್ರಪತಿ ಭವನ ಮ್ಯೂಸಿಯಂ: ಹತ್ತು ಆಕರ್ಷಣೆಗಳು

Update: 2016-08-02 10:50 GMT

ರಾಷ್ಟ್ರಪತಿ ಭವನದ ಬಹು ನಿರೀಕ್ಷಿತ ಮ್ಯೂಸಿಯಂನ ಎರಡನೆ ಹಂತ ಸಾರ್ವಜನಿಕರ ಸ್ವಾಗತಕ್ಕೆ ಸಜ್ಜಾಗಿದೆ. ಭಾರತದ ರಾಷ್ಟ್ರಪತಿಗಳ ಪರಂಪರೆ, ಸ್ವಾತಂತ್ರ್ಯ ಹೋರಾಟದ ಅಧ್ಯಾಯಗಳು ಹೀಗೆ ಪ್ರತಿಯೊಂದೂ ಒಂದೇ ಸೂರಿನಡಿ ವೀಕ್ಷಣೆಗೆ ಲಭ್ಯ. ಇನ್ನೇನು ಬೇಕು? ವಿಶ್ವದ ಎರಡನೆ ಅತೀ ದೊಡ್ಡ ರಾಷ್ಟ್ರಪತಿ ಎಸ್ಟೇಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಪಕ್ಷಿನೋಟ ಇಲ್ಲಿ ಸಿಗಲಿದೆ.

ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ಮ್ಯೂಸಿಯಂ ನಿರ್ಮಾಣವಾಗಿದ್ದು, 19 ತಿಂಗಳ ಕಾಮಗಾರಿ ಮುಗಿದಿದೆ. ಬಹುಶಃ ಇದು ದೇಶದ ಏಕೈಕ ಭೂಗತ ಮ್ಯೂಸಿಯಂ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದೆ. ಈ ಮ್ಯೂಸಿಯಂನ ಸಣ್ಣ ಭಾಗ ವರ್ಷದ ಹಿಂದೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿತ್ತು. ಇದೀಗ ಸಂಪೂರ್ಣ ಸುಸಜ್ಜಿತ ಮ್ಯೂಸಿಯಂ ಗಾಂಧಿಜಯಂತಿಯಂದು ವೀಕ್ಷಣೆಗೆ ಮುಕ್ತವಾಗಲಿದೆ.

‘‘ಇತಿಹಾಸದ ಮರುಸೃಷ್ಟಿಯ ಪ್ರಯತ್ನ ಇಲ್ಲಿ ನಡೆದಿದೆ. ಸಾಕಷ್ಟು ಮಹತ್ವದ ಘಟನಾವಳಿಗಳ ಚಿತ್ರಣ ಇಲ್ಲಿದೆ. ರಾಷ್ಟ್ರಪತಿಗಳು ಸ್ವೀಕರಿಸಿದ ಉಡುಗೊರೆಗಳು ಇಲ್ಲಿ ಪ್ರದರ್ಶನಕ್ಕಿವೆ; ಜತೆಗೆ ರಾಷ್ಟ್ರಪತಿ ಭವನದ ದೈನಂದಿನ ಕಾರ್ಯ ನಿರ್ವಹಣೆಯ ಪಕ್ಷಿನೋಟವೂ ವೀಕ್ಷಣೆಗೆ ಲಭ್ಯ’’ ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ಒಮಿತಾ ಪಾಲ್ ವಿವರಿಸುತ್ತಾರೆ.

ಮ್ಯೂಸಿಯಂ ತಜ್ಞ ಸರೋಜ್ ಘೋಷ್ ಮೇಲ್ವಿಚಾರಣೆಯಲ್ಲಿ ನಿರ್ಮಾಣವಾದ ಈ ವಸ್ತು ಸಂಗ್ರಹಾಲಯ, 1.30 ಲಕ್ಷ ಚದರ ಅಡಿಯ ವಿಶಾಲ ಆವರಣದಲ್ಲಿ ಸುಮಾರು 20 ಸಾವಿರ ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸುತ್ತದೆ. ಬ್ರಿಟಿಷ್ ಆಡಳಿತಾ ವಧಿಯ ಅಪೂರ್ವ ಚಿತ್ರಕಲೆಗಳು ಕೂಡಾ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿವೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ಸೋಮವಾರ ರಾಷ್ಟ್ರಪತಿ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ಇದನ್ನು ಉದ್ಘಾಟಿಸಿದರು.

‘‘ಭಾರತದ ಇತರ ವಸ್ತುಸಂಗ್ರಹಾಲಯಗಳಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ವಸ್ತುಗಳನ್ನು ಪ್ರದರ್ಶಿಸಿದರೆ, ಇದಕ್ಕಿಂತ ಭಿನ್ನವಾಗಿ, ಈ ವಸ್ತುಸಂಗ್ರಹಾಲಯ ಘಟನೆಗಳನ್ನು ಆಧರಿಸಿದ ಕಥೆ ಅನಾವರಣಗೊಳಿಸುತ್ತಾ ಹೋಗುತ್ತದೆ’’ ಎಂದು ಘೋಷ್ ವಿವರಿಸುತ್ತಾರೆ.

ಇದರ ವಿವರಗಳನ್ನು ವೀಕ್ಷಕರು ರಾಷ್ಟ್ರಪತಿ ಭವನದ ವೆಬ್‌ಸೈಟ್ ಮೂಲಕವೂ ವೀಕ್ಷಿಸಬಹುದು. ದಿಲ್ಲಿ ಕಿರೀಟದ ಹೊಸ ರತ್ನ ಎನಿಸಿಕೊಂಡಿರುವ ಈ ಮ್ಯೂಸಿಯಂನ ಹತ್ತು ವಿಶೇಷ ಆಕರ್ಷಣೆಗಳು ಇಲ್ಲಿವೆ ನೋಡಿ.

1. ಗಾಂಧಿ ವಾಕ್: ಒಂದು ಕೊಠಡಿಯಲ್ಲಿ ನಿಂತು ಮಹಾತ್ಮ ಗಾಂಧಿಯವರು ಲಾರ್ಡ್ ಇರ್ವಿನ್ ಅವರ ಜತೆ ಮಾತನಾಡುವುದನ್ನು ಪರದೆಯಲ್ಲಿ ವೀಕ್ಷಿಸಬಹುದು. ಬಳಿಕ ಗಾಂಧೀಜಿ ರಾಷ್ಟ್ರಪತಿ ಭವನದಿಂದ (ಅಂದಿನ ವೈಸ್‌ರಾಯ್ ಹೌಸ್) ಹೊರಹೋಗುವ ಚಿತ್ರಣದಲ್ಲಿ ನೀವು ಕೂಡಾ ಅವರೊಂದಿಗೆ ಸೇರುವ ಅವಕಾಶವನ್ನು ವರ್ಚ್‌ವಲ್ ರಿಯಾಲಿಟಿ ಕಲ್ಪಿಸಿಕೊಟ್ಟಿದೆ. ಇಲ್ಲಿ ಮುಕ್ತವಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು, ಕೈಬೀಸಲು, ನಮಸ್ಕಾರ ಮಾಡಲು ಅವಕಾಶವಿದೆ.

2. ಕೈ ನೆರಳು ಪ್ರದರ್ಶನ: ರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕಾದರೆ, ನೀವು ಮಾಡಬೇಕಾದ್ದು ಇಷ್ಟೇ. ಕೇವಲ ಕೈ ನೆರಳಿನ ಪ್ರದರ್ಶನ ವೀಕ್ಷಿಸಿ, ಆ ವೀಕ್ಷಕ ವಿವರಣೆ ಕೇಳಿದರೆ ಸಾಕು. ಇದು ಇಡೀ ಚುನಾವಣಾ ಪ್ರಕ್ರಿಯೆ, ಸಂಸತ್ ಭವನ, ರಾಷ್ಟ್ರಪತಿ ಭವನ, ಭಾರತದ ಗ್ರಾಮಗಳು ಹಾಗೂ ಅಶೋಕ ಸ್ತಂಭ ಹೀಗೆ ಅಪೂರ್ವ ಚಿತ್ರಣವನ್ನು ಕೇವಲ ಕೈಗಳ ಚಲನೆಯ ನೆರಳಿನ ಮೂಲಕ ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ.
3. ರಾಷ್ಟ್ರಪತಿ ಅಧ್ಯಯನ: ರಾಷ್ಟ್ರಪತಿಗಳು ತಮ್ಮ ನಿವಾಸದಲ್ಲಿ ಸಂದರ್ಶಕರನ್ನು ಭೇಟಿ ಮಾಡುವುದರ ಪ್ರತಿಕೃತಿಯೂ ಇಲ್ಲಿ ವೀಕ್ಷಣೆಗೆ ಲಭ್ಯ.
4. ಪ್ರೈವಲೈಟ್ ಪ್ರಾಜೆಕ್ಷನ್: ಇದು ಬಹುಶಃ ಸರಳ ಗಾಜಿನಂತೆ ಕಾಣುತ್ತದೆ. ಆದರೆ ಪ್ರಾಜೆಕ್ಟರ್ ಲೈವ್ ವೀಡಿಯೊ ಬಿಂಬಿಸುತ್ತಿದ್ದರೆ, ಇದು ದೈನಿಕ ಸುದ್ದಿಯನ್ನು ಬಿತ್ತರಿಸುವ ಟಿವಿಯಾಗುತ್ತದೆ. ಸ್ಕ್ರೀನ್ ಹಿಂದುಗಡೆ ಹೋಗಿ ಕೂಡ ವೀಕ್ಷಕರು ಈ ಶೋ ವೀಕ್ಷಿಸಲು ಅವಕಾಶ ಇರುತ್ತದೆ.
5. ರಾಷ್ಟ್ರಪತಿ ಭೇಟಿ: ಭಾರತದ ಪ್ರಥಮ ಪ್ರಜೆಯನ್ನು ಎಂದೂ ಭೇಟಿ ಮಾಡಿಲ್ಲವೇ? ಅಡ್ಡಿಯಿಲ್ಲ. ಈ ಚಿಕ್ಕ ಚಚ್ಚೌಕಕ್ಕೆ ಹೋಗಿ ಒಂದು ಗುಂಡಿ ಅದುಮಿ. ದೊಡ್ಡ ಪರದೆಯಲ್ಲಿ ಸಂದರ್ಶಕ ಹಾಗೂ ರಾಷ್ಟ್ರಪತಿ ಪರಸ್ಪರ ಮಾತನಾಡುವ ಚಿತ್ರ ಪ್ರದರ್ಶನಗೊಳ್ಳುತ್ತದೆ.
6. ವೈಯಕ್ತಿಕ ಸಾಮಗ್ರಿ: ಈ ಮ್ಯೂಸಿಯಂ ಪ್ರತ್ಯೇಕ ಗವಾಕ್ಷಿಗಳಲ್ಲಿ, ಎಲ್ಲ 13 ರಾಷ್ಟ್ರಪತಿಗಳ ವೈಯಕ್ತಿಕ ಸಾಮಗ್ರಿಗಳನ್ನು ಪ್ರದರ್ಶಿಸುತ್ತದೆ. ಇದು ಅವರ ಬಟ್ಟೆ ಬರೆ ಆಯ್ಕೆ, ಹವ್ಯಾಸ, ಜೀವನಶೈಲಿಯ ಚಿತ್ರಣ ನೀಡುತ್ತದೆ.
7. 3 ಡಿ ಹಾಲೊಗ್ರಾಫಿಕ್ ಪ್ರಾಜೆಕ್ಷನ್ ಮೂಲಕ ನೇರ ಭಾಷಣ: ಒಂದು ವಿಶೇಷವಾದ ಚೌಕಾಕಾರದ ಪೆಟ್ಟಿಗೆಯು, ಒಬ್ಬರ ಮೇಲೊಬ್ಬರಂತೆ ರಾಷ್ಟ್ರಪತಿಗಳ ಚಿತ್ರವನ್ನೂ ಒಳಗೊಂಡ ಭಾಷಣಗಳ 3 ಡಿ ಹಾಲೊಗ್ರಾಫಿಕ್ ಚಿತ್ರಗಳನ್ನು ಬಿಂಬಿಸುತ್ತದೆ. ಅವರು ಪ್ರತ್ಯಕ್ಷವಾಗಿ ನಿಂತು ಭಾಷಣ ಮಾಡುವಂತೆ ಭಾಸವಾಗುತ್ತದೆ.

8. ಉಡುಗೊರೆ ಕೌಂಟರ್: ಒಂದು ಹಜಾರದ ತುಂಬೆಲ್ಲ ಅಪೂರ್ವ ಉಡುಗೊರೆಗಳ ಆಕರ್ಷಕ ಪ್ರದರ್ಶನವಿದೆ. ಭಾರತದ ಇದುವರೆಗಿನ ರಾಷ್ಟ್ರಪತಿಗಳು ಸ್ವೀಕರಿಸಿದ ಉಡುಗೊರೆಗಳ ಸಂಗ್ರಹ ಅಪೂರ್ವ ಆಕರ್ಷಣೆ.
9. ಸಂವಾದಕ್ಕೆ ಡಿಜಿಟಲ್ ವೇದಿಕೆ: ರಾಷ್ಟ್ರಪತಿ ಭವನದ ವಿಶೇಷ ಚಿತ್ರಗಳು ಹಾಗೂ ಸ್ವಾತಂತ್ರ್ಯ ಚಳವಳಿಯ ವಿಶೇಷ ಚಿತ್ರಣಗಳು ಇಲ್ಲಿ ಲಭ್ಯ. ಇಲ್ಲಿ ಇತಿಹಾಸದ ತುಣುಕುಗಳು ಮೇಜಿನ ಮೇಲೆ ಹರಡಿರುತ್ತವೆ. ಇವುಗಳನ್ನು ತಿರುಗಿಸಿ, ತಿರುಚಿ ಇತಿಹಾಸದ ಮೇಲೆ ಕಣ್ಣಾಡಿಸಬಹುದು.

10. ರಾಷ್ಟ್ರಪತಿ ವಾಹನ: ಒಂದು ಹಳೆಯ ಅಧ್ಯಕ್ಷೀಯ ಬಂಡಿಯನ್ನು ಕುದುರೆ ಎಳೆಯುತ್ತಿರುವ ದೊಡ್ಡ ಚಿತ್ರ, ಅದರ ಬಳಿಯಲ್ಲಿ, ಜೋರ್ಡಾನ್‌ನ ದೊರೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರಿಗೆ ಉಡುಗೊರೆಯಾಗಿ ನೀಡಿದ್ದ ಮರ್ಸಿಡೆಸ್ ಇದೆ. ಇದನ್ನು ರಾಜೀವ್‌ಗಾಂಧಿ ರಾಷ್ಟ್ರಪತಿ ಭವನಕ್ಕೆ ನೀಡಿದ್ದರು.

Writer - ಸೌಭದ್ರ ಚಟರ್ಜಿ

contributor

Editor - ಸೌಭದ್ರ ಚಟರ್ಜಿ

contributor

Similar News