ಡಯಟ್ ಮಾಡುವವರು ಆಲೂಗಡ್ಡೆ ತಿನ್ನಬೇಕೆ ? ಬೇಡವೇ ?
ನೀವು ಡಯಟ್ ಮಾಡುತ್ತಿದ್ದು, ಆಲೂಗಡ್ಡೆ ತಿನ್ನಬಹುದೇ? ತಿನ್ನಬಾರದೇ ಎಂಬ ಬಗ್ಗೆ ಗೊಂದಲದಲ್ಲಿದ್ದೀರಾ? ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ.
ಖಂಡಿತವಾಗಿಯೂ ತಿನ್ನಬಹುದು ಎನ್ನುತ್ತದೆ ವಿಜ್ಞಾನ. ಡಯಟ್ ಮಾಡುತ್ತಿದ್ದರೂ, ಈ ಕೆಳಗಿನ ಆರು ಕಾರಣಗಳಿಂದ ನೀವು ಆಲೂಗಡ್ಡೆ ಧಾರಾಳವಾಗಿ ಸೇವಿಸಬಹುದು.
ಅಧಿಕ ರಕ್ತದ ಒತ್ತಡ ಸಮಸ್ಯೆಗೆ ಉತ್ತಮ: ಸಾಮಾನ್ಯವಾಗಿ ಆಲೂ ಅಡುಗೆ ಮಾಡುವಾಗ ಸಿಪ್ಪೆಯನ್ನು ಬಿಸಾಕುತ್ತೇವೆ. ಆದರೆ ಬಟಾಟೆ ಸಿಪ್ಪೆ, ಅಧಿಕ ರಕ್ತದ ಒತ್ತಡ ಇರುವವರಿಗೆ ತೀರಾ ಪ್ರಯೋಜನಕಾರಿ. ಈ ಸಿಪ್ಪೆಯಲ್ಲಿ ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಕನಿಷ್ಠ 1600 ಮಿಲಿಗ್ರಾಂ ಪೊಟ್ಯಾಶಿಯಂ ಇರುತ್ತದೆ. ಇದು ದಿನದ ಬೇಡಿಕೆಯ ಶೇಕಡ 50ನ್ನು ಪೂರೈಸುತ್ತದೆ ಮತ್ತು ಇದು ನಾಲ್ಕು ಬಾಳೆಹಣ್ಣಿನಲ್ಲಿ ಇರುವ ಪ್ರಮಾಣಕ್ಕಿಂತ ನಾಲ್ಕು ಪಟ್ಟು.
ವಿಟಮಿನ್ ಸಿ ಮೂಲ: ವಿಟಮಿನ್ ಸಿ ಬೇಕು ಎಂದರೆ ಆಲೂ ಸೇವಿಸಿ. ಒಂದು ಮಧ್ಯಮಗಾತ್ರದ ಆಲೂಗಡ್ಡೆ ನಿಮ್ಮ ದೈನಂದಿನ ವಿಟಮಿನ್ ಸಿ ಅಗತ್ಯತೆಯ ಶೇಕಡ 45ನ್ನು ಪೂರೈಸುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ: ತೂಕ ಇಳಿಸಿಕೊಳ್ಳಲು ಆಲೂಗಡ್ಡೆ ಸಹಕಾರಿ. ಇದರ ಸಿಪ್ಪೆಯಲ್ಲಿ ನಾರಿನ ಅಂಶ ಅಧಿಕ ಇರುವುದರಿಂದ, ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇಡುವ ಜತೆಗೆ ಜೀರ್ಣ ವ್ಯವಸ್ಥೆಯನ್ನೂ ಸುಸ್ಥಿತಿಯಲ್ಲಿಡುತ್ತದೆ.
ಕೊಬ್ಬುರಹಿತ: ಇವೆಲ್ಲದರ ಜತೆಗೆ ಆಲೂಗಡ್ಡೆ ಕೊಬ್ಬುರಹಿತ, ಸೋಡಿಯಂ ಹಾಗೂ ಸಕ್ಕರೆ ಅಂಶವನ್ನೂ ತೀರಾ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತದೆ. ಒಂದು ಮಧ್ಯಮ ಗಾತ್ರದ ಆಲೂಗಡ್ಡೆ ಸ್ವಲ್ಪವೂ ಕೊಬ್ಬು ಹೊಂದಿರುವುದಿಲ್ಲ ಮತ್ತು ಇದರಲ್ಲಿನ ಸಕ್ಕರೆ ಪ್ರಮಾಣ ಕೇವಲ ಒಂದು ಗ್ರಾಂ.
ಮ್ಯಾಂಗನೀಸ್ ಖನಿಜ: ಈ ಪೋಷಕಾಂಶದ ಬಗ್ಗೆ ನಿಮಗೆ ತಿಳಿದಿರದು. ಆದರೆ ಇದು ಬೇಡ ಎಂಬ ಅರ್ಥವಲ್ಲ. ಪ್ರೊಟೀನ್, ಕಾರ್ಬೊಹೈಡ್ರೇಟ್ಸ್ ಹಾಗೂ ಕೊಲೆಸ್ಟ್ರಾಲ್ ಸಂಸ್ಕರಿಸಲು ಇದು ಅತ್ಯಗತ್ಯ. ಜತೆಗೆ ಎಲುಬು ರೂಪುಗೊಳ್ಳಲೂ ಇದು ಅಗತ್ಯ. ಒಂದು ದೊಡ್ಡ ಸಿಪ್ಪೆಸಹಿತ ಆಲೂಗಡ್ಡೆ, ನಿಮ್ಮ ಮ್ಯಾಂಗನೀಸ್ ಅಗತ್ಯತೆಯ ಶೇಕಡ 33ರಷ್ಟನ್ನು ಪೂರೈಸಬಲ್ಲದು.
ವಿಟಮಿನ್ ಬಿ6: ಆಲೂಗಡ್ಡೆಯಲ್ಲಿ ವಿಟಮಿನ್ ಬಿ 6 ಕೂಡಾ ಹೇರಳವಾಗಿರುತ್ತದೆ. ಇದು ಮೆದುಳಿನ ಹಾರ್ಮೋನ್ ಸ್ರಾವಕ್ಕೆ ಅಗತ್ಯ. ಒಂದು ಮಧ್ಯಮ ಗಾತ್ರದ ಸಿಪ್ಪೆಸಹಿತ ಆಲೂಗಡ್ಡೆಯಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಶೇಕಡ 46ರಷ್ಟು ಬಿ6 ವಿಟಮಿನ್ ಇರುತ್ತದೆ.