ವಿದೇಶಿ ಪತ್ರಕರ್ತರಿಗೆ ವೀಸಾ ನಿರಾಕರಣೆ
ವಿದೇಶಿ ಪತ್ರಕರ್ತರಿಗೆ ವೀಸಾ ನಿರಾಕರಿಸಿರುವುದು ಭಾರತದ ಹೊಸ ನಡೆಯೇನಲ್ಲ. ಭಾರತ ಸರಕಾರಕ್ಕೆ ಮುಜುಗರವನ್ನುಂಟು ಮಾಡುವಂತಹ ವರದಿಗಳನ್ನು ಬರೆದ ಕೆಲವು ವಿದೇಶಿ ಪತ್ರಕರ್ತರನ್ನು ಈ ಮೊದಲು ಕೂಡಾ ನಿಷೇಧಿಸಲಾಗಿತ್ತು.
ಮಾಧ್ಯಮಗಳಿಗೆ ಕೆಲಸ ಮಾಡಲು ಯಾವ ರೀತಿ ಅವಕಾಶ ನೀಡಲಾಗುತ್ತಿದೆ ಎಂಬುದನ್ನು ಆಧರಿಸಿ ಆಯಾ ದೇಶದ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ತೀರ್ಮಾನಿಸಬಹುದಾಗಿದೆಯೆಂದು ಹೀನ್‌ಮ್ಯಾನ್ ತಿಳಿಸಿದ್ದಾರೆ. ವೌಲ್ಯಯುತವಾದುದೆಂದು ತೋರುವ ವಿಷಯವನ್ನು, ಅದು ಯಾವುದೇ ಇರಲಿ ವರದಿ ಮಾಡಲು ಅವಕಾಶ ನೀಡುವಷ್ಟರ ಮಟ್ಟಿಗೆ ನಮ್ಮ ಪ್ರಜಾಪ್ರಭುತ್ವವು ಬಲಶಾಲಿಯಾಗಿರಬೇಕು.
ಚೀನಾ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ‘ಕ್ಸಿನುವಾ’ಕ್ಕಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಚೀನಿ ಪತ್ರಕರ್ತರ ವಾಸ್ತವ್ಯದ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರಕಾರ ನಿರಾಕರಿಸಿದೆ. ಕ್ಸಿನುವಾದ, ದಿಲ್ಲಿ ಬ್ಯೂರೋ ಮುಖ್ಯಸ್ಥ ವೂ ಕಿಯಾಂಗ್ ಹಾಗೂ ಮುಂಬೈ ವರದಿಗಾರರಾದ ಟಾಂಗ್ ಲು ಹಾಗೂ ಮಾ ಕಿಯಾಂಗ್ ಅವರು ತಮ್ಮ ಉತ್ತರಾಧಿಕಾರಿಗಳು ಬರುವ ತನಕ ಕೆಲವು ತಿಂಗಳುಗಳವರೆಗೆ ವಾಸ್ತವ್ಯದ ಅವಧಿಯನ್ನು ವಿಸ್ತರಿಸುವಂತೆ ಕಾಲಾವಕಾಶ ಕೋರಿದ್ದರು. ಇವರ ವೀಸಾಗಳು ಈ ತಿಂಗಳ ಅಂತ್ಯದಲ್ಲಿ ಕೊನೆಗೊಳ್ಳಲಿವೆ. ಪರಮಾಣು ಪೂರೈಕೆದಾರರ ಗುಂಪಿಗೆ ಭಾರತದ ಸೇರ್ಪಡೆಯನ್ನು ಬೆಂಬಲಿಸಲು ಬೀಜಿಂಗ್ ನಿರಾಕರಿಸಿರುವುದು, ವೀಸಾ ಅವಧಿವಿಸ್ತರಿಸದಿರಲು ಕಾರಣವಾಗಿದ್ದಲ್ಲಿ, ಅದರ ಪರಿಣಾಮ ಗಂಭೀರವಾಗಲಿದೆಯೆಂದು ಚೀನಾದ ಸರಕಾರಿ ಒಡೆತನದ ಸುದ್ದಿಪತ್ರಿಕೆಯೊಂದು ಎಚ್ಚರಿಕೆಯನ್ನು ನೀಡಿದೆ.
ಈ ವಿವಾದದ ಹೊರತಾಗಿಯೂ, ವಿದೇಶಿ ಪತ್ರಕರ್ತರಿಗೆ ವೀಸಾ ನಿರಾಕರಿಸಿರುವುದು ಭಾರತದ ಹೊಸ ನಡೆಯೇನಲ್ಲ. ಭಾರತ ಸರಕಾರಕ್ಕೆ ಮುಜುಗರವನ್ನುಂಟು ಮಾಡುವಂತಹ ವರದಿಗಳನ್ನು ಬರೆದ ಕೆಲವು ವಿದೇಶಿ ಪತ್ರಕರ್ತರನ್ನು ಈ ಮೊದಲು ಕೂಡಾ ನಿಷೇಧಿಸಲಾಗಿತ್ತೆಂಬ ವಿಷಯವನ್ನು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‌ಎಸ್‌ಎಫ್) ಹಾಗೂ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಎಂಬ ಜಾಗತಿಕ ಮಾಧ್ಯಮ ಕಣ್ಗಾವಲು ಸಂಘಟನೆಗಳು ಬಹಿರಂಗಪಡಿಸಿವೆ.
2008ರಲ್ಲಿ ಮನಮೋಹನ್‌ಸಿಂಗ್ ಸರಕಾರವು ಸ್ವೀಡನ್ ದೇಶದ ಇಬ್ಬರು ಪತ್ರಕರ್ತರ ವೀಸಾ ಅರ್ಜಿಯನ್ನು ತಿರಸ್ಕರಿಸಿತ್ತು. ಜಗತ್ತಿನಾದ್ಯಂತದ ಹಲವು ಭಾರತೀಯ ರಾಯಭಾರಿ ಕಚೇರಿಗಳು ಕೂಡಾ ಹಲವಾರು ವಿದೇಶಿ ಪತ್ರಕರ್ತರಿಗೆ ವೀಸಾ ನಿರಾಕರಿಸಿದ್ದವೆಂದು ಆರ್‌ಎಸ್‌ಎಫ್‌ನ ವರದಿಯೊಂದು ತಿಳಿಸಿದೆ.
ಇದಾದ ಒಂದು ವರ್ಷದ ಬಳಿಕ ಜರ್ಮನಿಯ ವಾರಪತ್ರಿಕೆ ಡೆರ್ ಸ್ಪಿಗೆಲ್‌ನ ದಿಲ್ಲಿ ವರದಿಗಾರರಾಗಿ ನಿಯೋಜಿತರಾಗಿದ್ದ ಹಸ್‌ನೈನ್ ಕಾಝಿಂ ಅವರಿಗೆ ವೀಸಾ ನೀಡಲು ಭಾರತ ನಿರಾಕರಿಸಿತ್ತು. ಸುಮಾರು ಐದು ತಿಂಗಳುಗಳ ಕಾಲ ಅವರ ಅರ್ಜಿಯನ್ನು ನನೆಗುದಿಯಲ್ಲಿರಿಸಲಾಗಿತ್ತು. ಆನಂತರ ವೀಸಾ ಸಿಗದಿರಲು ಕಾರಣವೇನೆಂಬುದನ್ನು ರಾಜತಾಂತ್ರಿಕರು ಕಾಝಿಂ ಅವರಿಗೆ ವಿವರಿಸಿದರು. ತಮ್ಮ ಲೇಖನಗಳು ಅತಿಯಾಗಿ ಟೀಕಾತ್ಮಕವಾಗಿದ್ದವು ಹಾಗೂ ಪೂರ್ವಾಗ್ರಹ ಪೀಡಿತವಾಗಿದ್ದರಿಂದ ವೀಸಾ ನೀಡಲು ಸರಕಾರ ನಿರಾಕರಿಸಿದೆಯೆಂದು ಅವರು ತಿಳಿಸಿದರು.
‘‘ಕೆಲವು ನಿರ್ದಿಷ್ಟ ವಿದೇಶಿ ಪತ್ರಕರ್ತರು ದೇಶವನ್ನು ಸಂದರ್ಶಿಸುವುದನ್ನು ನಿಷೇಧಿಸುವ ಹಳೆಯ ಕಾಲದ ಪದ್ಧತಿಯನ್ನು ಸರಕಾರವು ತುರ್ತಾಗಿ ರದ್ದುಪಡಿಸುವ ಅಗತ್ಯವಿದೆ. ಭಾರತದಲ್ಲಿ ಡಝನ್‌ಗಟ್ಟಲೆ ವಿದೇಶಿ ಪತ್ರಕರ್ತರು ಈ ಸಮಸ್ಯೆಯನ್ನು ಎದುರಿಸಿದ್ದಾರೆ’’ ಎಂದು ಆರ್‌ಎಸ್‌ಎಫ್ 2009ರ ಸೆಪ್ಟಂಬರ್‌ನಲ್ಲಿ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿತ್ತು.
2010ರಲ್ಲಿ ಜಪಾನ್‌ನ ಸರಕಾರಿ ಸುದ್ದಿವಾಹಿನಿ ಎನ್‌ಎಚ್‌ಕೆಯ ಹೊಸದಿಲ್ಲಿ ಬ್ಯೂರೋ ಮುಖ್ಯಸ್ಥ ಶೋಗೊ ಟಾಕಾಹಾಶಿ ಅವರ ವೀಸಾ ಅವಧಿಯನ್ನು ವಿಸ್ತರಿಸಲು ಭಾರತ ನಿರಾಕರಿಸಿತ್ತು. ಟಾಕಾಹಾಶಿ ಅವರ ವರದಿಗಳು ಇಲ್ಲಿನ ಬಡತನದ ಬಗ್ಗೆಯೇ ಅತಿಯಾಗಿ ಕೇಂದ್ರೀಕರಿಸಲ್ಪಟ್ಟಿರುವುದರಿಂದ ಅವರಿಗೆ ವೀಸಾ ನೀಡಲು ಸಾಧ್ಯವಿಲ್ಲವೆಂದು ಭಾರತ ಸಮಜಾಯಿಷಿ ನೀಡಿತ್ತು.
‘‘ಪ್ರಸ್ತುತ ಹಲವು ಡಝನ್ ವಿದೇಶಿ ಪತ್ರಕರ್ತರಿಗೆ ಭಾರತದಲ್ಲಿ ವರದಿಗಾರಿಕೆಯನ್ನು ನಿಷೇಧಿಸಲಾಗಿದೆ. ಯಾಕೆಂದರೆ ಅಧಿಕಾರಿಗಳು ಅವರಿಗೆ ವೀಸಾ ನೀಡಲು ನಿರಾಕರಿಸಿದ್ದಾರೆ’’ ಎಂದು ಆರ್‌ಎಸ್‌ಎಫ್ ತಿಳಿಸಿದೆ.
ಡ್ಯಾನಿಶ್ ಚಿತ್ರ ನಿರ್ಮಾಣಕಾರರಾದ ಟಾಮ್ ಹೀನ್‌ಮಾನ್ ಹಾಗೂ ಅವರ ಪತ್ನಿ ಲೊಟೆ ಲಾ ಕೊರ್ ಕೂಡಾ ಭಾರತದಲ್ಲಿ ನಿಷೇಧಿಸಲ್ಪಟ್ಟ ವಿದೇಶಿ ಪತ್ರಕರ್ತರ ಸಾಲಿನಲ್ಲಿದ್ದಾರೆ. 2005ರಲ್ಲಿ ಭಾರತದಲ್ಲಿ ಕೆಲವು ಸ್ಕಾಂಡಿನೇವಿಯಾ ವಲಯದ ರಾಷ್ಟ್ರಗಳು (ಡೆನ್ಮಾರ್ಕ್, ನಾರ್ವೆ, ಸ್ವೀಡನ್) ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವ ಬಗ್ಗೆ ಈ ದಂಪತಿಯು ಸಾಕ್ಷಚಿತ್ರವನ್ನು ನಿರ್ಮಿಸಿದ್ದುದೇ ಹೊಸದಿಲ್ಲಿಯ ಕೆಂಗಣ್ಣಿಗೆ ಕಾರಣವಾಯಿತೆಂದು ಹೀನ್‌ಮಾನ್ ತಿಳಿಸಿದ್ದಾರೆ.ಇದರ ಪರಿಣಾಮವಾಗಿ ತಮಗೆ ಮತ್ತೊಮ್ಮೆ ಭಾರತ ಪ್ರವೇಶಿಸಲು ವೀಸಾ ದೊರೆಯಲಿಲ್ಲವೆಂದು ಅವರು ಹೇಳಿದ್ದಾರೆ.
‘‘ಭಾರತದಲ್ಲಿ ಸಾಕ್ಷಚಿತ್ರವೊಂದನ್ನು ನಿರ್ಮಿಸಲು ಪತ್ರಕರ್ತನಿಗೆ ವೀಸಾ ಪಡೆಯಬೇಕಾದರೆ ಆತ ಕನಿಷ್ಠ ಆರು ವಾರಗಳ ಕಾಲ ಕಾಯಬೇಕಾಗುತ್ತಿದೆ. ನೀವು ಏನು ಮಾಡಹೊರಟಿರುವಿರಿ, ನೀವು ಯಾರೊಂದಿಗೆ ಮಾತನಾಡಲಿರುವಿರಿ, ಸಾಕ್ಷಚಿತ್ರವನ್ನು ಯಾವಾಗ ಹಾಗೂ ಎಲ್ಲಿ ನಿರ್ಮಿಸಲಿದ್ದೀರಿ ಎಂಬೆಲ್ಲಾ ವಿವರಗಳನ್ನು ಮುಂಚಿತವಾಗಿ ನೀಡಬೇಕಾಗುತ್ತದೆ. ಜೊತೆಗೆ ಯೋಜನೆಯ ರೂಪುರೇಖೆಯನ್ನು ಕೂಡಾ ನೀಡಬೇಕಾಗುತ್ತದೆ. ಈ ರೀತಿಯ ನಿರ್ಬಂಧಗಳು ನಿರ್ಣಾಯಕ ಹಾಗೂ ತನಿಖಾತ್ಮಕ ಪತ್ರಿಕೋದ್ಯಮ ನಡೆಸುವುದನ್ನು ಅಸಾಧ್ಯಗೊಳಿಸುತ್ತದೆ’’ ಎಂದವರು ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಮಾಧ್ಯಮಗಳಿಗೆ ಕೆಲಸ ಮಾಡಲು ಯಾವ ರೀತಿ ಅವಕಾಶ ನೀಡಲಾಗುತ್ತಿದೆಯೆಂಬುದನ್ನು ಆಧರಿಸಿ ಆಯಾ ದೇಶದ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ತೀರ್ಮಾನಿಸಬಹುದಾಗಿದೆಯೆಂದು ಹೀನ್‌ಮ್ಯಾನ್ ತಿಳಿಸಿದ್ದಾರೆ. ವೌಲ್ಯಯುತವಾದುದೆಂದು ತೋರುವ ವಿಷಯವನ್ನು, ಅದು ಯಾವುದೇ ಇರಲಿ ವರದಿ ಮಾಡಲು ಅವಕಾಶ ನೀಡುವಷ್ಟರ ಮಟ್ಟಿಗೆ ನಮ್ಮ ಪ್ರಜಾಪ್ರಭುತ್ವವು ಬಲಶಾಲಿಯಾಗಿರಬೇಕು. 2002ರಲ್ಲಿ ಟೈಮ್ ಮ್ಯಾಗಝಿನ್‌ನ ಭಾರತ ಪ್ರತಿನಿಧಿ ಅಲೆಕ್ಸ್ ಪೆರ್ರಿ, ಆಗಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಲೇಖನವನ್ನು ಪ್ರಕಟಿಸಿದ ಬೆನ್ನಲ್ಲೇ, ಅವರ ವಾಸ್ತವ್ಯ ಪರವಾನಿಗೆ ಕ್ರಮಬದ್ಧವಾಗಿಲ್ಲವೆಂಬ ನೆಪದಲ್ಲಿ ಅವರನ್ನು ಕರೆಸಿಕೊಂಡು ಪ್ರಶ್ನಿಸಲಾಗಿತ್ತು.
‘‘ನನಗೀಗ ನಿರಾಳವಾಗಿರುವ ಭಾವನೆಯುಂಟಾಗಿದೆ’’ ಎಂದು ಬ್ರಿಟಿಷ್ ಪ್ರಜೆಯಾದ ಅಲೆಕ್ಸ್ ಪೆರ್ರಿ, ವೀಸಾ ಅಸಮರ್ಪಕತೆಗೆ ಸಂಬಂಧಿಸಿ ಅಧಿಕಾರಿಗಳು ತನ್ನನ್ನು ಎರಡನೆ ಬಾರಿ ಪ್ರಶ್ನಿಸಿದ ಬಳಿಕ ಸಮಾಧಾನದ ನಿಟ್ಟುಸಿರು ಬಿಡುತ್ತಾ ಹೇಳಿದ್ದರೆ. ನಾನೀಗ ಹೊರ ತೆರಳಲು ಸ್ವತಂತ್ರನಾಗಿದ್ದೇನೆ. ನನ್ನ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ’’ ಎಂದವರು ಹೇಳಿದ್ದರು.
2002ರಲ್ಲಿ ಟೈಮ್ಸ್ ಪತ್ರಿಕೆಯ ಏಶ್ಯ ಆವೃತ್ತಿಯಲ್ಲಿ ಪ್ರಕಟವಾದ ಅಸ್ಲೀಪ್ ಎಟ್ ದಿ ವೀಲ್ (ಗಾಲಿಕುರ್ಚಿಯಲ್ಲಿ ಮಲಗಿರುವರೇ?) ಎಂಬ ತಲೆಬರಹದ ಲೇಖನದಲ್ಲಿ ವರದಿಗಾರ ಅಲೆಕ್ಸ್ ಪೆರ್ರಿ ಅವರು ಅಣ್ವಸ್ತ್ರಶಕ್ತ ರಾಷ್ಟ್ರವಾದ ಪಾಕ್ ಜೊತೆ ಬಿಕ್ಕಟ್ಟು ಉಲ್ಬಣಿಸಿರುವ ಸಂದರ್ಭದಲ್ಲಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ದೇಶದ ಆಡಳಿತ ನಡೆಸಲು ಯೋಗ್ಯರಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು.
ಟೈಮ್ ಪತ್ರಿಕೆ ಕೂಡಾ, ಪೆರ್ರಿ ಅವರ ಲೇಖನಕ್ಕೆ ಬದ್ಧವಾಗಿರುವುದಾಗಿ ತಿಳಿಸಿತ್ತು. ಆಗ 77 ವರ್ಷ ವಯಸ್ಸಾಗಿದ್ದ ವಾಜಪೇಯಿ, ಸಂಪುಟ ಸಭೆಗಳಲ್ಲಿ ನಿದ್ರಿಸುತ್ತಿದ್ದರು ಹಾಗೂ ರಾತ್ರಿ ವಿಸ್ಕಿ ಸೇವನೆಯಲ್ಲಿ ತಲ್ಲೀನರಾಗಿರುತ್ತಿದ್ದರು ಎಂದು ಆ ಲೇಖನದಲ್ಲಿ ಬರೆಯಲಾಗಿತ್ತು.
ಕೃಪೆ: ‘ದಿ ವೈರ್’