ರಾಹುಲ್ ಸ್ವಯಂ ಗುರಿ!

Update: 2016-08-13 18:21 GMT

ರಾಹುಲ್ ಸ್ವಯಂ ಗುರಿ!

ರಾಹುಲ್‌ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವ ದಿನ ದೂರವಿದ್ದರೂ, ಅವರ ಯೋಚನೆ ಏನು ಎಂಬ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಕಾಂಗ್ರೆಸ್ ನಾಯಕರದ್ದು. ವಾಸ್ತವ ರಾಜಕೀಯದ ಪರಿಸ್ಥಿತಿಯನ್ನು ನಿಭಾಯಿಸುವ ನೈಪುಣ್ಯ ಈ ಯುವ ಗಾಂಧಿಗೆ ಇಲ್ಲ ಎನ್ನುವುದು ಅವರಿಗೆ ಮನದಟ್ಟಾಗಿದೆ. ಇಂಥದ್ದೇ ಸಣ್ಣ ಘಟನೆ ಇತ್ತೀಚೆಗೆ ನಡೆಯಿತು. ರಾಹುಲ್‌ಗಾಂಧಿ ಪತ್ರಕರ್ತರ ಜತೆಗಿನ ಸಂವಾದದಲ್ಲಿ ಅವರನ್ನು ಉತ್ತರ ಪ್ರದೇಶ ಚುನಾವಣೆ ಬಗ್ಗೆ ಗಮನ ಸೆಳೆಯಲಾಯಿತು. ಆದರೆ ರಾಹುಲ್ ತಕ್ಷಣ ಅಮೆರಿಕ ಚುನಾವಣೆಯತ್ತ ಮಾತು ಹೊರಳಿಸಿ, ‘‘ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಟ್ರಂಪ್ ಜನಪ್ರಿಯರಾಗಿದ್ದು, ಹಿಲರಿ ಕ್ಲಿಂಟನ್ ಯಥಾಸ್ಥಿತಿಯಲ್ಲಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದರು. ಇದರ ಜತೆಗೆ ರಾಹುಲ್, ಉತ್ತರ ಪ್ರದೇಶದಲ್ಲಿ ಮಾಯಾವತಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನೂ ಹೊರಗೆಡಹಿದರು. ಆದ್ದರಿಂದ ಇದು ಅಂಥ ಸ್ಮಾರ್ಟ್ ತಂತ್ರಗಾರಿಕೆಯಲ್ಲ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ.

ಜಯಾಗೊಂದು ಪ್ರಶ್ನೆ

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರಕಾರ ಅತ್ಯುತ್ಸಾಹದಿಂದ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ಪಡೆಯಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಅಂದರೆ ಪ್ರತಿ ಸದಸ್ಯರನ್ನು ವೈಯಕ್ತಿಕವಾಗಿ ತಲುಪಲು ಯೋಜನೆ ಹಾಕಿಕೊಂಡಿತ್ತು. ಆದರೆ ಕೈಗೆ ಸಿಗದಿದ್ದ ರೇಖಾ ಅವರನ್ನು ಪತ್ತೆ ಮಾಡಲು ಹರಸಾಹಸ ಮಾಡಿದರು. ರಾಜ್ಯಸಭೆಗೆ ನಾಮಕರಣಗೊಂಡಿರುವ ಈ ಮಾಜಿ ಬಾಲಿವುಡ್ ತಾರೆಯ ಜಾಡು ಹಿಡಿಯಲು ವಿಫಲರಾದಾಗ ಕೆಲವರು ಜಯಾ ಬಚ್ಚನ್ ಅವರನ್ನು ಸಂಪರ್ಕಿಸಿ, ರೇಖಾರ ವೈಯಕ್ತಿಕ ದೂರವಾಣಿ ಸಂಖ್ಯೆ ಕೇಳಿದರು. ಜಯಾ ಸಾವಧಾನದಿಂದಲೇ ಕಾಂಗ್ರೆಸ್‌ನ ರಾಜೀವ್ ಶುಕ್ಲ ಅವರನ್ನು ಸಂಪರ್ಕಿಸುವಂತೆ ಸೂಚಿಸಿ, ಅವರೊಂದಿಗೆ ರೇಖಾ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು. ಇತರರಿಗೆ ಮುಖದ ಮೇಲಿನ ನಗುವನ್ನು ನಿಯಂತ್ರಿಸಿಕೊಳ್ಳುವುದು ಕಷ್ಟವಾದರೂ, ಜಯಾ ಮಾತ್ರ ನೇರವಾಗಿಯೇ ಎಲ್ಲವನ್ನೂ ಎದುರಿಸಿದರು.

ಜಾಣ ಉತ್ತರ

ಕೇಂದ್ರದ ಗೃಹ ನಿರ್ಮಾಣ ಮತ್ತು ನಗರ ಬಡತನ ನಿರ್ಮೂಲನೆ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರಿಂದ ಸಂಪುಟ ಪುನಾರಚನೆ ವೇಳೆ ಸಂಸದೀಯ ವ್ಯವಹಾರಗಳ ಖಾತೆಯನ್ನು ಕಿತ್ತುಕೊಂಡಿ ದ್ದರಿಂದ ಸ್ವಲ್ಪಮಟ್ಟಿಗೆ ಅವರ ಪ್ರಾಬಲ್ಯಕ್ಕೆ ಕತ್ತರಿ ಬಿದ್ದಿದೆ. ಆದರೆ ಆನ್‌ಲೈನರ್‌ಗಳ ಪೆನ್‌ಚಾಟ್ ಮಾತ್ರ ಕಳೆದುಕೊಂಡಿಲ್ಲ. ಕೆಲವೊಮ್ಮೆ ಇವು ತೀರಾ ಪ್ರಯೋಜನಕಾರಿ ಎನಿಸಿದರೆ ಬಹಳಷ್ಟು ಸಂದರ್ಭದಲ್ಲಿ ಹಾನಿಕಾರಕವೂ ಆಗುತ್ತದೆ. ಇತ್ತೀಚೆಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ಮೋದಿಗಾಗಿ ಕೆಲಸ ಮಾಡುವಂತೆ ನಾಯ್ಡು ಸೂಚಿಸಿದರು. ಬಹುತೇಕ ಎಲ್ಲರೂ, ನರೇಂದ್ರ ಮೋದಿಯ ಕುರಿತು ನಾಯ್ಡು ಹೇಳುತ್ತಿದ್ದಾರೆ ಎಂದುಕೊಂಡರು. ಆದರೆ ಅಂಥ ಯೋಚನೆಯ ಬಲೂನ್‌ಗೆ ನಾಯ್ಡು ಸೂಜಿ ಚುಚ್ಚಿದರು. ಎಂಒಡಿಐ ಎಂದರೆ ‘ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’ ಎಂದು ಸ್ಪಷ್ಟಪಡಿಸಿದರು. ಇದು ಒಳ್ಳೆಯದೋ, ಕೆಟ್ಟದ್ದೋ?

ಉದಿತ್ ಸಮಸ್ಯೆಗಳು

ಬಿಜೆಪಿಯ ದಿಲ್ಲಿ ಸಂಸದ ಹಾಗೂ ದಲಿತ ಮುಖಂಡ ಉದಿತ್ ರಾಜ್ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆಫ್ ದ ರೆಕಾರ್ಡ್ ಆಗಿ ಅವರು ಬಿಜೆಪಿಯ ಕೆಟ್ಟ ಮಾತುಗಳನ್ನು ಹಾಗೂ ದಲಿತರ ಬಗೆಗಿನ ಅವರ ಪ್ರವೃತ್ತಿಯ ಬಗ್ಗೆ ಅಸಮಾಧಾನ ಸೂಚಿಸಿದ್ದಾರೆ. ಆದರೆ ಅಧಿಕೃತವಾಗಿ ಅವರು ಪಕ್ಷವನ್ನು ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ರಾಜತಾಂತ್ರಿಕವಾಗಿ ಒಡೆದ ಹೃದಯದಿಂದ ಮಾತನಾಡುತ್ತಿದ್ದಾರೆ. ಈ ಮಾಜಿ ಅಧಿಕಾರಿ ಬಿಜೆಪಿಗೆ ಸೇರುವ ಮುನ್ನ ಬಿಜೆಪಿಯ ಹಿಂದುತ್ವವನ್ನು ಕಟುವಾಗಿ ಟೀಕಿಸುತ್ತಿದ್ದರು. ಜೆಎನ್‌ಯುನಲ್ಲಿ ನಡೆಯುವ ಮಹಿಷಾಸುರ ಹಬ್ಬಕ್ಕೆ ಹಾಜರಾಗಿ ಸುದ್ದಿ ಮಾಡಿದ್ದರು. ದಲಿತರ ವಿರುದ್ಧದ ದೌರ್ಜನ್ಯ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ದಲಿತ ಮುಖಂಡರಾಗಿ ನೋವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಗೊಂದಲಗಳು ಅಕ್ಷರಶಃ ಅವರ ಮನೆ ಹಾಗೂ ಕಚೇರಿಯ ಗೋಡೆಗಳಲ್ಲಿ ಕಂಡುಬರುತ್ತವೆ. ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಗಳ ನಡುವೆ ಅಂಬೇಡ್ಕರ್ ಅವರ ಭಾವಚಿತ್ರ ನೇತಾಡುತ್ತಿದೆ. ಹೀಗೆ ರಾಜ್ ಅವರ ಕಥೆಯೂ ತೂಗುಯ್ಯಿಲೆ.

ದೀದಿ ಗಿಫ್ಟ್!

ಬಾಲಿವುಡ್ ಗಾಯಕ ಮತ್ತು ಕೇಂದ್ರ ಸಚಿವ ಬಬೂಲ್ ಸುಪ್ರಿಯೊ ಗಗನಸಖಿ ರಚನಾ ಶರ್ಮಾ ಅವರ ಜತೆ ಆಗಸ್ಟ್ 9ರಂದು ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ. ದಿಲ್ಲಿಯ ಗಣ್ಯರು ಮತ್ತು ಬಾಲಿವುಡ್ ತಾರೆಯರು ಸಮಾರಂಭದಲ್ಲಿ ನೆರೆದಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡಾ ಇದಕ್ಕೆ ಸಾಕ್ಷಿಯಾದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸ್ವತಃ ಸುಪ್ರಿಯೊ ಆಹ್ವಾನಿಸಿದ್ದರು. ಆದರೆ ದೀದಿ ಇದರಲ್ಲಿ ಭಾಗವಹಿಸಿರಲಿಲ್ಲ. ದೀದಿಗೆ ಕರೆ ಮಾಡಿದ್ದಾಗ ಸುಪ್ರಿಯೊ, ದಿಲ್ಲಿಯ ಬಂಗಾಳ ಭವನದಲ್ಲಿ ಕೆಲ ಕೊಠಡಿಗಳನ್ನು ತಮ್ಮ ಅತಿಥಿಗಳಿಗಾಗಿ ಕಾಯ್ದಿರಿಸಬಹುದೇ ಎಂದು ಕೋರಿದ್ದರು. ದೀದಿ ಇದಕ್ಕೆ ಒಪ್ಪಿದರು. 14 ಕೊಠಡಿಗಳನ್ನು ದೀದಿ ಇವರಿಗಾಗಿ ಕಾಯ್ದಿರಿಸಿದರು. ಇದಕ್ಕೆ ಎಷ್ಟು ಹಣ ಎಂದು ಸುಪ್ರಿಯೊ ಕೇಳಿದಾಗ, ಇದು ಉಚಿತ ಎಂದು ದೀದಿ ಹೇಳಿದ್ದು ತಿಳಿದು ಸಂತೋಷಕ್ಕೆ ಪಾರವೇ ಇಲ್ಲ. ಬಂಗಾಳ ಚುನಾವಣೆ ಸಂದರ್ಭದಲ್ಲಿ ದೀದಿಯನ್ನು ಟೀಕಿಸುತ್ತಿದ್ದ ಸುಪ್ರಿಯೊ ಇದೀಗ ದೀದಿ ಅಭಿಮಾನಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News