×
Ad

ರಾಷ್ಟ್ರ ಗೀತೆಯ ಹಾಡುಪಾಡು

Update: 2016-08-14 12:01 IST

1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದಾಗ ಧ್ವಜಾರೋಹಣದ ಆನಂತರ ಜವಾಹರಲಾಲ್ ನೆಹರೂ ಅವರು ‘ವಂದೇ ಮಾತರಂ’ ಅನ್ನು ರಾಷ್ಟ್ರಗೀತೆಯಾಗಿ ನುಡಿಸಲಿಲ್ಲ. ‘ಜನಗಣಮನ’ ಆಗ ಇನ್ನೂ ಭಾರತದ ರಾಷ್ಟ್ರಗೀತೆಯಾಗಿ ಆಯ್ಕೆಯಾಗಿರಲಿಲ್ಲ, ಅದು ಆಯ್ಕೆಯಾದುದು 1950ರ ಜನವರಿ 24ರಂದು. ಅದನ್ನು ಸುಭಾಶ್ಚಂದ್ರ ಬೋಸರು ಅನುವಾದಿಸಿ ಐಎನ್‌ಎ ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದ ‘ಶುಭ್ ಸುಖ್ ಚೈನ್’ ಅನ್ನು ನುಡಿಸುವಂತೆ ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಅವರನ್ನು ಅವರ ತಂಡವನ್ನು ಕೆಂಪು ಕೋಟೆಯ ಮೇಲೆ ಆಹ್ವಾನಿಸಿದರು. ‘ಜನಗಣಮನ’ ರವೀಂದ್ರರ ಕೃತಿ ಮಾತ್ರವಲ್ಲ ಸುಭಾಶರ ಮೆಚ್ಚಿನ ರಾಷ್ಟ್ರಗೀತೆ ಯೂ ಆಗಿದೆ.

ಒಬ್ಬನೇ ಕವಿಯ ಹಾಡುಗಳು ಎರಡು ದೇಶಗಳ ರಾಷ್ಟ್ರಗೀತೆಗಳಾಗಿರುವುದೇ ವಿಶೇಷ. ಇದರ ಜೊತೆಗೆ ಶ್ರೀಲಂಕಾದ ರಾಷ್ಟ್ರಗೀತೆ ‘ಶ್ರೀಲಂಕಾ ಮಾತಾ’ ಮೇಲೆಯೂ ರವೀಂದ್ರರ ಪ್ರಭಾವವಿದೆ. 1940ರಲ್ಲಿ ರವೀಂದ್ರರೇ ಈ ಗೀತೆಯನ್ನು ಬಂಗಾಳಿಯಲ್ಲಿ ಬರೆದು ಸಂಗೀತ ಸಂಯೋಜಿಸಿದರೆಂದೂ, ರವೀಂದ್ರರ ವಿದ್ಯಾರ್ಥಿಯಾಗಿದ್ದ ಶ್ರೀಲಂಕಾದ ಆನಂದ ಸಮರಕೂನ್ ಅದನ್ನು ಸಿಂಹಳಿ ಭಾಷೆಗೆ ಅನುವಾದಿಸಿದರೆಂದೂ, 1951ರಲ್ಲಿ ಅದನ್ನು ಶ್ರೀಲಂಕಾದ ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಯಿತೆಂದೂ ಒಂದು ವಾದವಿದೆ.

1911ರ ಡಿಸೆಂಬರ್ 11ರಂದು ಭಾರತದ ಹೊಸ ರಾಜಧಾನಿಯಾಗಿ ಘೋಷಿಸಿದ್ದ ದೆಹಲಿಯಲ್ಲಿ ಬ್ರಿಟಿಷ್ ಚಕ್ರವರ್ತಿಯ ದರ್ಬಾರ್ ಏರ್ಪಡಿಸಲಾಗಿತ್ತು. ರವೀಂದ್ರನಾಥ್ ಠಾಕೂರರ ಮಿತ್ರನಾಗಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ಚಕ್ರವರ್ತಿಯನ್ನು ಸ್ವಾಗತಿಸುವ ಗೀತೆಯನ್ನು ಬರೆಯುವಂತೆ ಅವರನ್ನು ಪತ್ರ ಬರೆದು ಕೋರಿದ್ದ. ಸ್ವಾತಂತ್ರ್ಯ ಹೋರಾಟ ಮತ್ತು ಬಂಗಾಳ ವಿಭಜನೆಯ ವಿರುದ್ಧದ ಹೋರಾಟಗಳಲ್ಲಿ ತೊಡಗಿದ್ದ ರವೀಂದ್ರರಿಗೆ ಅದು ಅಪಮಾನವೆನಿಸಿತು. ರವೀಂದ್ರರು ಅದನ್ನು ನಿರಾಕರಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಚೈತನ್ಯ ತುಂಬುವ ಹೊಸಗೀತೆಯನ್ನು ಬರೆಯಲು ನಿರ್ಧರಿಸಿದರು. ಅದರ ಪರಿಣಾಮವೇ ‘ಜನಗಣಮನ’ ಗೀತೆ. ಅದನ್ನು ಅವರು ಮೊದಲು ಹಾಡಿದ್ದು 1911ರ ಡಿಸೆಂಬರ್ 27ರಂದು ಕೊಲ್ಕತ್ತಾದಲ್ಲಿ. ಡಿಸೆಂಬರ್ 26-28ರವರೆಗೆ ನಡೆದ ಕಾಂಗ್ರೆಸ್‌ನ 26ನೆ ವಾರ್ಷಿಕ ಮಹಾಧಿವೇಶನದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಿದ ಆನಂತರ, ರವೀಂದ್ರನಾಥ್ ಠಾಕೂರರು ತಾವು ಹೊಸದಾಗಿ ರಚಿಸಿ, ಸಂಗೀತ ಸಂಯೋಜನೆ ಮಾಡಿದ ‘ಜನಗಣಮನ’ವನ್ನು ಹಾಡಿದರು. ಅವರ ಜೊತೆ ಅವರ ಅಕ್ಕನ ಮಗಳು ಸರಳಾದೇವಿ ಚೌಧುರಾಣಿ ದನಿಗೂಡಿಸಿದ್ದರು. ಆನಂತರ ಸರಳಾದೇವಿಯವರು ತಮ್ಮ ಪತಿ ರಾಮ್ ಭುಜ್ ಚೌಧುರಿಯವರು ವೈಸ್ ರಾಯರನ್ನು ಕುರಿತು ಬರೆದ ‘ಬಾದ್ ಶಾ ಹಮಾರಾ’ ಗೀತೆಯನ್ನೂ ಹಾಡಿದರು. ಮುಂಬೈ ಪ್ರಾಂತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಘಟಿಸಲು ಬ್ರಿಟಿಷ್ ಸರಕಾರ ಅಡ್ಡಿಮಾಡಿದಾಗ 1894ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶನ ಪೂಜೆಯನ್ನು ಪ್ರಾರಂಭಿಸಿದ್ದರು. 1898ರಲ್ಲಿ ಬ್ರಿಟಿಷ್ ಸರಕಾರ ತಿಲಕರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿದಾಗ ರವೀಂದ್ರರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ತಿಲಕರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದರು. ರವೀಂದ್ರರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(1901). ಇದನ್ನು ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಬೆಂಗಳೂರು 2007). ಇದರಲ್ಲಿರುವ ಒಂದು ನೂರು ದೇಶಭಕ್ತಿಗೀತೆಗಳು ರವೀಂದ್ರರ ಉಜ್ವಲ ಸ್ವಾಭಿಮಾನ, ದೇಶಾಭಿಮಾನಗಳಿಗೆ ನಿದರ್ಶನಗಳಾಗಿವೆ.

ಬಂಕಿಮಚಂದ್ರ ಮತ್ತು ತಿಲಕರು ಜನಜಾಗೃತಿಗಾಗಿ ಮತಧಾರ್ಮಿಕ ಕಾಳಿ ಮತ್ತು ಗಣೇಶರನ್ನು ಆಶ್ರಯಿಸಿದರು. ಬ್ರಹ್ಮಸಮಾಜದ ಹಿನ್ನೆಲೆ ಇದ್ದ ರವೀಂದ್ರರು ಸಾಂಪ್ರದಾಯಿಕ ಮತಧರ್ಮ ಮತ್ತು ದೇವತೆಗಳ ಬದಲು ಮತಧರ್ಮ ನಿರಪೇಕ್ಷವಾಗಿ ಸಾರ್ವಜನಿಕ ಜನ ಸಮೂಹದ ಮನದ ಅಧಿನಾಯಕನಾಗಿ ಭಾರತದ ಭಾಗ್ಯವಿಧಾತನನ್ನು ಕಲ್ಪಿಸಿ ಗೌರವಿಸಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕೆ ಅರ್ಧಶತಮಾನದಷ್ಟು ಮೊದಲೇ ರವೀಂದ್ರರು ಭವಿಷ್ಯ ಭಾರತವನ್ನು ಮತಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ದೇಶವಾಗಿ ಕಂಡಿರುವುದು ವಿಶೇಷ.

‘ಭಾರತದ ಉದಯದ ಹಾಡು’ ಎಂಬ ಹೆಸರಿನ ಈ ಕವಿತೆಯಲ್ಲಿ ಐದು ಭಾಗಗಳಿವೆ. ಅದರಲ್ಲಿ ಮೊದಲನೆಯ ಭಾಗವನ್ನು ಮಾತ್ರ ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಗಿದೆ. ಇಡೀ ಪದ್ಯವನ್ನು ರಾಷ್ಟ್ರಗೀತೆಯಾಗಿ ಹಾಡಲು ಸಾಧ್ಯವಿಲ್ಲದಿದ್ದರೂ ಅದರಲ್ಲಿರುವ ಚಿಂತನೆಯನ್ನು ಎಲ್ಲರೂ ತಿಳಿಯುವ ಅಗತ್ಯವಿದೆ. ಅದನ್ನು ಎಲ್ಲ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿ ವಿದ್ಯಾರ್ಥಿಗಳಿಗೆ ಒದಗಿಸಬೇಕು. ನಾಗರಾಜನ್ ಅವರೇ ಈ ಗೀತೆಯನ್ನೂ ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ರವೀಂದ್ರರ ಕಾವ್ಯಕೃತಿಗಳನ್ನು ಸಮಗ್ರವಾಗಿ ಇಂಗ್ಲಿಷ್‌ನಿಂದ ಕಾವ್ಯಾತ್ಮಕವಾಗಿ ಅನುವಾದಿಸಿರುವ ಬಿ.ರಾಮನಾಥ ಭಟ್ ಅವರ ‘ರವೀಂದ್ರ ಕಾವ್ಯ ಸಂಚಯ’ (ಗೀತಾ ಬುಕ್ ಹೌಸ್ ಮೈಸೂರು 2014) ದಲ್ಲಿಯೂ ಇದರ ಪೂರ್ಣರೂಪ ಲಭ್ಯವಿದೆ. ಜೊತೆಗೆ ಅಮೂಲ್ಯವಾದ ಪ್ರಸ್ತಾವನೆ ಮತ್ತು ‘ಜನಗಣಮನ- ಒಂದು ಅವಲೋಕನ’ ಎಂಬ ಲೇಖನ ಸೇರಿ ಐದು ಅನುಬಂಧಗಳಿವೆ. ಅವನ್ನೂ ಅಧ್ಯಯನ ಮಾಡಬೇಕು.

ಇಲ್ಲಿ ಎಂ.ಆರ್.ಸಿ. ನಾಗರಾಜನ್ ಅವರು ಮಾಡಿರುವ ‘ಜನಗಣಮನ’ ಬಂಗಾಳಿ ಮೂಲದ ಅನುವಾದ ಇಲ್ಲಿದೆ

(ಓದುವ ಸೌಲಭ್ಯಕ್ಕಾಗಿ ಅಲ್ಲಲ್ಲಿ ಮಾರ್ಪಡಿದೆ):

ಜನಗಣಗಳ ಮನದ ಅಧಿನಾಯಕ ಭಾರತ ಭಾಗ್ಯ ವಿಧಾತನೆ, ನಿನಗೆ ಜಯವಾಗಲಿ.

ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಚಲ ಜಲಧಿ ತರಂಗ

ನಿನ್ನ ನೆನೆಯುತ ಎಚ್ಚೆತ್ತು, ನಿನ್ನ ಹರಕೆಯ ಬಯಸಿ, ಹಾಡುತಿವೆ ನಿನ್ನ ಜಯಕಥನ.

ಜನಗಣಗಳಿಗೆ ಮಂಗಳ ನೀಡುವ ಭಾರತ ಭಾಗ್ಯವಿಧಾತನೆ, ನಿನಗೆ ಜಯವಾಗಲಿ.

ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ನಿನ್ನ ಪ್ರೇಮದ ಕರೆಯ ಆಹ್ವಾನ ಕೇಳಿ ಪ್ರತಿದಿನ

ಹಿಂದು ಬೌದ್ಧ ಸಿಖ್ ಜೈನ ಪಾರಸಿಕ ಮುಸಲ್ಮಾನ ಕ್ರೈಸ್ತರು

ಪೂರ್ವ ಪಶ್ಚಿಮಗಳಿಂದ ಬಂದು ನಿನ್ನಾಸನದ ಬಳಿ ನಿಂತು ಪ್ರೇಮಮಾಲೆ ಹೆಣೆದಿದ್ದಾರೆ.

ಜನಗಣಗಳ ಐಕ್ಯ ವಿದಾಯಕನಾದ ಭಾರತ ಭಾಗ್ಯವಿಧಾತನೆ, ನಿನಗೆ ಜಯವಾಗಲಿ.

ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ಏಳುಬೀಳುಗಳ ಕಠಿಣ ದಾರಿಯಲಿ ಯುಗ ಯುಗ ಚಲಿಸಿದೆ ಯಾತ್ರೆ.

ಹೇ ಚಿರಸಾರಥಿ, ನಿನ್ನ ರಥಚಕ್ರವೇ ತೋರಿದೆ ದಾರಿ ದಿನ ರಾತ್ರಿ.

ಘೋರ ಹಿಂಸೆ ನಡೆದಿರುವಾಗ ನಿನ್ನ ಶಂಖಧ್ವನಿ ಮೊಳಗಿ ದುಃಖ ಸಂಕಟಗಳ ಕಳೆದು

ಜನಗಣಕೆಲ್ಲ ದಾರಿ ತೋರಿದೆ. ಭಾರತ ಭಾಗ್ಯವಿಧಾತ, ನಿನಗೆ ಜಯವಾಗಲಿ.

ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ಘನ ಘೋರ ಕವಿದ ಕತ್ತಲಿನಲ್ಲಿ ಪೀಡಿತ ದೇಶ ಮೂರ್ಛೆ ಹೋಗಿರುವಾಗ

ನಿನ್ನ ಸಂತತ ಮಂಗಳಕರವಾದ ನೋಟ ಎವೆಯಿಕ್ಕದೆ ಜಾಗೃತವಾಗಿದೆ.

ದುಃಸ್ವಪ್ನ, ಆತಂಕಗಳಿಂದ ನಮ್ಮನ್ನು ನಿನ್ನ ತೊಡೆಯಲಿಟ್ಟು ರಕ್ಷಿಸಿದ ನೀನೆ ಸ್ನೇಹಮಯಿ ಮಾತೆ

ಜನಗಣಗಳ ದುಃಖ ಪರಿಹರಿಸುವ ಭಾರತ ಭಾಗ್ಯವಿಧಾತ, ನಿನಗೆ ಜಯವಾಗಲಿ.

ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ರಾತ್ರಿ ಕಳೆದಿದೆ, ಪೂರ್ವದ ಉದಯಗಿರಿ ಹಣೆಯಲ್ಲಿ ಇದೊ ಉದಯಿಸಿದ್ದಾನೆ.

ಹಕ್ಕಿಗಳು ಹಾಡುತ್ತಿವೆ, ಪುಣ್ಯ ಮಾರುತ ಸುರಿಸುತಿದೆ ನವ ಜೀವನ ರಸ.

ನಿನ್ನ ಕರುಣೆಯ ಅರುಣರಾಗದಿಂದ ಮಲಗಿರುವ ಭಾರತ ಎಚ್ಚರಗೊಳ್ಳಲಿ. ನಿನ್ನ ಪಾದದಲ್ಲಿ ಹಣೆಯಿರಿಸಿದ್ದೇವೆ.

ಜಯ ಜಯ ಜಯ ಭಾರತ ಭಾಗ್ಯವಿಧಾತ, ರಾಜೇಶ್ವರ, ನಿನಗೆ ಜಯವಾಗಲಿ.

ಜಯವಾಗಲಿ, ಜಯವಾಗಲಿ, ಜಯವಾಗಲಿ, ಜಯ ಜಯ ಜಯ ಜಯವಾಗಲಿ.

ರವೀಂದ್ರರು ತಮ್ಮ ದೇಶಭಕ್ತಿ ಗೀತೆಗಳಲ್ಲಿ ಜನಗಣಮನದ ಈ ಅಧಿನಾಯಕನನ್ನು ‘ಜೀವನಸ್ವಾಮಿ’, ‘ಪ್ರಭು’, ‘ರಾಜೇಂದ್ರ’, ‘ರಾಜೇಶ್ವರ’ ಮೊದಲಾಗಿ ಕಲ್ಪಿಸಿಕೊಂಡಿರುವುದನ್ನು ‘ನೈವೇದ್ಯ’ ಸಂಕಲನದಲ್ಲಿ ನೋಡಬಹುದು. ಸ್ವಾತಂತ್ರ್ಯ ಹೋರಾಟ ಇನ್ನೂ ನಡೆಯುತ್ತಿರುವಾಗಲೇ ಗೆಲುವಿನ ಆಶಯವನ್ನೂ ಮತಧರ್ಮ ನಿರಪೇಕ್ಷ ಹೊಸ ಭಾರತದ ಉದಯದ ವಿಶ್ವಾಸವನ್ನೂ ರವೀಂದ್ರರು ಈ ಗೀತೆಯಲ್ಲಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬ್ರಿಟಿಷ್ ಸರಕಾರ ಎರಡೇ ವಾರಗಳಲ್ಲಿ ಪ್ರತಿಕ್ರಿಯಿಸಿತು: ಅಸ್ಸಾಂ ಸೇರಿದಂತೆ ಅಂದಿನ ಪೂರ್ವ ಬಂಗಾಳ ಸರಕಾರವು ತನ್ನ ಅಧಿಕಾರಿಗಳು ಹಾಗೂ ಬ್ರಿಟಿಷ್ ಸರಕಾರಕ್ಕೆ ವಿಧೇಯರಾಗಿರುವ ಪ್ರಜೆಗಳು ತಮ್ಮ ಮಕ್ಕಳನ್ನು ರವೀಂದ್ರರ ಶಾಂತಿನಿಕೇತನದಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಿತು! ಆಗ ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದ ಅಮೆರಿಕದ ಪ್ರಸಿದ್ಧ ವಕೀಲರು ಅಲ್ಲಿನ ಶಿಕ್ಷಣಕ್ರಮವನ್ನು ಹೊಗಳಿ ಅಮೆರಿಕದ ಪತ್ರಿಕೆಗಳಲ್ಲಿ ಬರೆದಾಗ ಬ್ರಿಟಿಷ್ ಸರಕಾರ ತನ್ನ ಸುತ್ತೋಲೆಯನ್ನು ರದ್ದುಪಡಿಸಿ ಮುಖವನ್ನುಳಿಸಿಕೊಂಡಿತು.

‘ಜನಗಣಮನ’ದ ಬಗ್ಗೆ ಅಪಪ್ರಚಾರಗಳೂ ಇದ್ದುವು. ಅದನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೆಂದೂ ಆದ್ದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂದೂ ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ರವೀಂದ್ರರು ಬೆಲೆಕೊಡಲಿಲ್ಲ. ತಮ್ಮ ಆತ್ಮೀಯರೊಬ್ಬರಿಗೆ ಬರೆದ ಪತ್ರದಲ್ಲಿ ‘‘ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್‌ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ’’ ಎಂದು ಅವರು ಹೇಳಿದ್ದಾರೆ. ಪ್ರೊ. ಹುಮಾಯೂನ್ ಕಬೀರ್ ಅವರು ‘ಜನಗಣಮನ’ದಲ್ಲಿರುವ ‘ಭಾರತ’ ಪದವನ್ನು ಬದಲಿಸಿದರೆ ಜಗತ್ತಿನ ಯಾವುದೇ ದೇಶಕ್ಕೆ ಸಲ್ಲುವ ಗೀತೆ ಇದಾಗಿದೆ ಎಂದಿದ್ದಾರೆ.

ಬಂಗಾಳಿ ಭಾಷೆಯಲ್ಲಿರುವ ‘ಜನಗಣಮನ’ವನ್ನು ಸುಭಾಶ್ಚಂದ್ರ ಬೋಸ್ ಅವರ ಆಝಾದ್ ಹಿಂದ್ ಸೇನೆಯ ಸರಕಾರ ‘ಶುಭ್ ಸುಖ್ ಚೈನ್’ ಎಂದು ಹಿಂದೂಸ್ಥಾನಿ ಭಾಷೆಗೆ ಅನುವಾದಿಸಿ ರಾಷ್ಟ್ರಗೀತೆಯಾಗಿ ಅಂಗೀಕರಿಸಿ (1943) ಬರ್ಲಿನ್‌ನಿಂದ ಆಝಾದ್ ಹಿಂದ್ ರೇಡಿಯೋದಲ್ಲಿ ಪ್ರಸಾರಮಾಡಿತು. ಅದನ್ನು ಮುಮ್ತಾಝ್ ಹುಸೈನ್ ಮತ್ತು ಕರ್ನಲ್ ಆಬಿದ್ ಹುಸೈನ್ ಸರ್ಫ್‌ರಾನಿ ಅನುವಾದಿಸಿದ್ದಾರೆ. ಅದಕ್ಕೆ ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಸಂಗೀತವನ್ನು ಒದಗಿಸಿದ್ದಾರೆ. ‘ಶುಭ್ ಸುಖ್ ಚೈನ್ ಬರಖಾ ಬರಸೇ, ಭಾರತ್ ಭಾಗ್ ಹೈ ಜಾಗ’ ಎಂದು ಆರಂಭವಾಗುವ ಗೀತೆ ‘ಜನಗಣಮನ’ವನ್ನು ನಿಕಟವಾಗಿ ಅನುಸರಿಸಿದೆ. ಜಗತ್ತಿನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಐಎನ್‌ಎ ಕಾರ್ಯಕ್ರಮಗಳಲ್ಲಿ ಇದನ್ನು ‘ವಂದೇ ಮಾತರಂ’ಗೆ ಬದಲಾಗಿ ಹಾಡುತ್ತಿದ್ದರು.

ಶುಭ ಸುಖ ಸಂತೋಷಗಳ ಮಳೆ ಸುರಿದಿದೆ, ಭಾರತದ ಭಾಗ್ಯ ಉದಯಿಸಿದೆ.

ಪಂಜಾಬ್ ಸಿಂಧ್ ಗುಜರಾತ್ ಮರಾಠಾ ದ್ರಾವಿಡ ಉತ್ಕಲ್ ವಂಗಾ.

ಚಂಚಲ್ ಸಾಗರ್ ವಿಂಧ್ಯ ಹಿಮಾಚಲ್ ನೀಲಾ ಜಮುನಾ ಗಂಗಾ.

ನಿನ್ನ ಗುಣವನ್ನು ಹಾಡುವೆವು, ನಿನ್ನಿಂದಲೇ ಬದುಕನ್ನು ಪಡೆದೆವು, ಪ್ರತಿಯೊಬ್ಬರ ಆಸೆ ಈಡೇರಿತು.

ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,

ಜಯವಾಗಲಿ ಜಯವಾಗಲಿ ಜಯವಾಗಲಿ, ಜಯ ಜಯ ಜಯವಾಗಲಿ.

ನಿನ್ನ ಮಧುರ ಮಾತು ಎಲ್ಲರ ಹೃದಯಗಳಲ್ಲಿ ಪ್ರೀತಿ ನೆಲೆಸುವಂತೆ ಮಾಡಲಿ,

ನಿನ್ನ ತೊಡೆ ಏರಿದ ಎಲ್ಲ ಪ್ರಾಂತಗಳ ನಿವಾಸಿಗಳು, ಎಲ್ಲ ಮತಧರ್ಮಗಳವರ

ಎಲ್ಲ ಭೇದ ವ್ಯತ್ಯಾಸಗಳು ಅಳಿಸಿಹೋಗಲಿ. ಪ್ರೇಮಮಾಲೆಯಲ್ಲಿ ಸೇರಿಹೋಗಲಿ.

ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,

ಜಯವಾಗಲಿ ಜಯವಾಗಲಿ ಜಯವಾಗಲಿ, ಜಯ ಜಯ ಜಯವಾಗಲಿ.

ಬೆಳಗಿನಲ್ಲಿ ಪಕ್ಷಿಗಳು ನಿನ್ನ ಗುಣಗಾನಮಾಡಲಿ.

ಬೀಸುವ ಗಾಳಿ ಬದುಕಿನಲ್ಲಿ ಋತುಗಳನ್ನು ತರಲಿ.

ಎಲ್ಲರೂ ಸೇರಿ ಹಿಂದ್ ಎನ್ನೋಣ,

ಜಯ ಆಝಾದ್ ಹಿಂದ್ ಘೋಷಣೆ ಕೂಗೋಣ.

ಭಾರತದ ಭಾಗ್ಯ ಸೂರ್ಯನಾಗಿ ಜಗದಲ್ಲಿ ಹೊಳೆಯಲಿ,

ಜಯವಾಗಲಿ ಜಯವಾಗಲಿ ಜಯವಾಗಲಿ,

ಜಯ ಜಯ ಜಯವಾಗಲಿ.

1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದಾಗ ಧ್ವಜಾರೋಹಣದ ಆನಂತರ ಜವಾಹರಲಾಲ್ ನೆಹರೂ ಅವರು ‘ವಂದೇ ಮಾತರಂ’ ಅನ್ನು ರಾಷ್ಟ್ರಗೀತೆಯಾಗಿ ನುಡಿಸಲಿಲ್ಲ. ‘ಜನಗಣಮನ’ ಆಗ ಇನ್ನೂ ಭಾರತದ ರಾಷ್ಟ್ರಗೀತೆಯಾಗಿ ಆಯ್ಕೆಯಾಗಿರಲಿಲ್ಲ, ಅದು ಆಯ್ಕೆಯಾದುದು 1950ರ ಜನವರಿ 24ರಂದು. ಅದನ್ನು ಸುಭಾಶ್ಚಂದ್ರ ಬೋಸರು ಅನುವಾದಿಸಿ ಐಎನ್‌ಎ ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದ ‘ಶುಭ್ ಸುಖ್ ಚೈನ್’ ಅನ್ನು ನುಡಿಸುವಂತೆ ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಅವರನ್ನು ಅವರ ತಂಡವನ್ನು ಕೆಂಪು ಕೋಟೆಯ ಮೇಲೆ ಆಹ್ವಾನಿಸಿದರು. ‘ಜನಗಣಮನ’ ರವೀಂದ್ರರ ಕೃತಿ ಮಾತ್ರವಲ್ಲ ಸುಭಾಶರ ಮೆಚ್ಚಿನ ರಾಷ್ಟ್ರಗೀತೆಯೂ ಆಗಿದೆ.

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ‘ಆನಂದಮಠ’ (1882) ಮುಸ್ಲಿಂ ದೊರೆಯ ದಬ್ಬಾಳಿಕೆಯ ವಿರುದ್ಧ ಹಿಂದೂ ಸನ್ಯಾಸಿಗಳು ನಡೆಸುವ ಸ್ವಾತಂತ್ರ್ಯ ಹೋರಾಟದ ವಸ್ತುವುಳ್ಳ ಕಾದಂಬರಿ. ಅದರಲ್ಲಿರುವ ‘ವಂದೇ ಮಾತರಂ’ ಗೀತೆಯನ್ನು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಹಾಡುತ್ತಿದ್ದರು. ‘ವಂದೇಮಾತರಂ’ ಬಂಗಾಳ ವಿಭಜನೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದ ಸಮಯಗಳಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಗೀತೆಯ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ವಹಿಸಿತ್ತು. 1896ರಲ್ಲಿ ರವೀಂದ್ರರು ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿ ಕೋಲ್ಕತ್ತದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಹಾಡಿದ್ದರು. ಸ್ವಾತಂತ್ರ್ಯ ಬಂದಾಗ ಮತಧರ್ಮದ ಆಧಾರದ ಮೇಲೆ ನಡೆದ ದೇಶದ ವಿಭಜನೆಗೆ ಮುನ್ನುಡಿಯಾಗಿ ಬಂಗಾಳ ವಿಭಜನೆಯಾದಾಗಲೂ ‘ವಂದೇ ಮಾತರಂ’ ಗೀತೆಯನ್ನು ಎಲ್ಲರೂ ಹಾಡುತ್ತಿದ್ದರು. 1930ರ ಅನಂತರ ಅದರಲ್ಲಿ ಮೂರ್ತಿಪೂಜೆಯ ಪ್ರಸ್ತಾಪವಿರುವುದರಿಂದ ಅದನ್ನು ಹಾಡಲು ಮುಸ್ಲಿಮರು ನಿರಾಕರಿಸಿದರು. ರವೀಂದ್ರರು ಅದನ್ನು ಗಮನಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಸ್ಫೂರ್ತಿಯುತ ಪ್ರಭಾವ ಬೀರಿದ್ದ ‘ವಂದೇಮಾತರಂ’ ಗೀತೆಯಿಂದ ಹಾಡುವುದಕ್ಕೆ ಉಚಿತವಾದ ಸಾಲುಗಳನ್ನು ಆರಿಸಿದರು. ಅದರಲ್ಲಿ ಯಾವುದೇ ಮತಧರ್ಮದ ಅಂಶವಿಲ್ಲದಿರುವುದನ್ನು ಸ್ಪಷ್ಟಪಡಿಸಿದರು. ಸ್ವತಃ ರವೀಂದ್ರರಿಗೆ ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಬೇಕೆಂಬ ಆಸೆ ಇತ್ತು. ಆದರೆ ಸುಭಾಶರು ಮತ್ತು ನೆಹರೂ ಜನಗಣಮನವನ್ನೇ ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದು ಗಮನಾರ್ಹ. ‘ವಂದೇ ಮಾತರಂ’ಅನ್ನು ‘ರಾಷ್ಟ್ರೀಯ ಹಾಡಾ’ಗಿಯೂ ಅಂಗೀಕರಿಸಲಾಯಿತು. ಬಂಗಾಳ ವಿಭಜನೆಯ ಸಮಯದಲ್ಲಿ ರಚಿತವಾದ ‘ಅಮಾರ್ ಸೊನಾರ್ ಬಾಂಗ್ಲಾ’ ರವೀಂದ್ರರ ಅತ್ಯಂತ ಜನಪ್ರಿಯವಾಗಿದ್ದ ಮತ್ತೊಂದು ಗೀತೆ. ಇದರಲ್ಲಿಯೂ ಯಾವುದೇ ಮತಧರ್ಮದ, ದೇವತೆಯ ಪ್ರಸ್ತಾಪವಿಲ್ಲ. ದೇಶವನ್ನು ತಾಯಿಯಂತೆ ಪ್ರೀತಿಸಿ ವರ್ಣಿಸುವ ಅತ್ಯಂತ ಸುಂದರವಾದ ಹಾಡು. ಆದ್ದರಿಂದ 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರವಾದಾಗ ಈ ಹಾಡನ್ನು ತನ್ನ ರಾಷ್ಟ್ರಗೀತೆಯಾಗಿ ಸ್ವೀಕರಿಸಿತು.

ಒಬ್ಬನೇ ಕವಿಯ ಹಾಡುಗಳು ಎರಡು ದೇಶಗಳ ರಾಷ್ಟ್ರಗೀತೆಗಳಾಗಿರುವುದೇ ವಿಶೇಷ. ಇದರ ಜೊತೆಗೆ ಶ್ರೀಲಂಕಾದ ರಾಷ್ಟ್ರಗೀತೆ ‘ಶ್ರೀಲಂಕಾ ಮಾತಾ’ ಮೇಲೆಯೂ ರವೀಂದ್ರರ ಪ್ರಭಾವವಿದೆ. 1940ರಲ್ಲಿ ರವೀಂದ್ರರೇ ಈ ಗೀತೆಯನ್ನು ಬಂಗಾಳಿಯಲ್ಲಿ ಬರೆದು ಸಂಗೀತ ಸಂಯೋಜಿಸಿದರೆಂದೂ, ರವೀಂದ್ರರ ವಿದ್ಯಾರ್ಥಿಯಾಗಿದ್ದ ಶ್ರೀಲಂಕಾದ ಆನಂದ ಸಮರಕೂನ್ ಅದನ್ನು ಸಿಂಹಳಿ ಭಾಷೆಗೆ ಅನುವಾದಿಸಿದರೆಂದೂ, 1951ರಲ್ಲಿ ಅದನ್ನು ಶ್ರೀಲಂಕಾದ ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಯಿತೆಂದೂ ಒಂದು ವಾದವಿದೆ.

‘ಶ್ರೀಲಂಕಾ ಮಾತಾ’ವನ್ನು ತಮಿಳು ಭಾಷೆಗೂ ಅನುವಾದಿಸಿ ತಮಿಳರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ತಮಿಳಿನಲ್ಲಿಯೇ ಹಾಡಲಾಗುತ್ತದೆ. ಇನ್ನೂ ಹಲವು ಭಾಷೆಗಳಲ್ಲಿ ಹಾಡುವುದು ಶ್ರೀಲಂಕಾದ ರಾಷ್ಟ್ರಗೀತೆಯ ವಿಶೇಷ. ಇದರಿಂದ ಭಾರತಕ್ಕೆ ಒಂದು ಪಾಠವಿದೆ. ಬಹುಭಾಷೆಗಳ ರಾಷ್ಟ್ರವಾದ ಭಾರತದ ರಾಷ್ಟ್ರಗೀತೆಯನ್ನೂ ಎಲ್ಲ ಭಾಷೆಗಳವರೂ ಬಂಗಾಳಿಯಲ್ಲಿಯೇ ಹಾಡಬೇಕಾದ ಅನಿವಾರ್ಯತೆ ಇಲ್ಲ. ‘ಜನಗಣಮನ’ದ ಇಡೀ ಹಾಡು, ಸಂಗೀತಗಳು ಯಾವುದೇ ಭಾರತೀಯ ಭಾಷೆಗೆ ಸುಲಭವಾಗಿ ಅನುವಾದಿಸಿ ಹಾಡಬಹುದಾದ ರೂಪದಲ್ಲಿವೆ. ಬಂಗಾಳಿ ಅರ್ಥವಾಗದೆ ಅದನ್ನು ಸುಮ್ಮನೆ ಹಾಡುವುದಕ್ಕಿಂತ ನಮ್ಮ ಭಾಷೆಯಲ್ಲಿ ಅರ್ಥ ಮಾಡಿಕೊಂಡು ಹಾಡುವುದು ಹೆಚ್ಚು ಪ್ರಯೋಜನಕರ. ಈ ಗೀತೆಯಲ್ಲಿಲ್ಲದ ರಾಜ್ಯಗಳ ಹೆಸರುಗಳನ್ನು ಈಗ ಸೇರಿಸಿಕೊಂಡು ಹಾಡಬಹುದು. ಉದಾ: ‘ದ್ರಾವಿಡ’ದ ಜಾಗದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳು ಎಂದು ಆಯಾ ರಾಜ್ಯಗಳವರು ಹಾಡಿ ಭಾರತದ ಒಕ್ಕೂಟ ಗಣರಾಜ್ಯವನ್ನು ಅರ್ಥಪೂರ್ಣವಾಗಿಸಬಹುದು.

ಭಾರತ ಸರ್ವತಂತ್ರ ಸ್ವತಂತ್ರ ಮತಧರ್ಮ ನಿರಪೇಕ್ಷ ಸಮಾಜವಾದಿ ಗಣರಾಜ್ಯ ಎನ್ನುವುದು ನಮ್ಮ ರಾಷ್ಟ್ರಗೀತೆಯ ಅಕ್ಷರ ಮತ್ತು ಆಶಯಗಳಲ್ಲಿದೆ ಎನ್ನುವುದು ಅತ್ಯಂತ ಸಮಾಧಾನದ ಅಭಿಮಾನದ ಸಂಗತಿ.

ರಾಷ್ಟ್ರಗೀತೆಯ ಕನ್ನಡ ಹಾಡು:

ಜನಗಣಮನ ಅಧಿನಾಯಕ(ನೇ) -ಜಯ ನಿನಗೆ- ಭಾರತ ಭಾಗ್ಯ ವಿಧಾತ. ಪಂಜಾಬ ಸಿಂಧು ಗುಜರಾತ ಮರಾಠ ಕರ್ನಾಟಕ - ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಚಲ ಜಲಧಿ ತರಂಗಗಳು

ನಿನ್ನ ನೆನೆಯುತ ಏಳುತ್ತಿವೆ

ನಿನ್ನ ಹರಕೆಯ ಕೋರುತ್ತಿವೆ

ಹಾಡುತ ನಿನ್ನ ಜಯಕಥನ.

ಜನಗಣ ಮಂಗಳದಾಯಕ -ಜಯ ನಿನಗೆ- ಭಾರತ ಭಾಗ್ಯವಿಧಾತ.

ಜಯ ನಿನಗೆ, ಜಯ ನಿನಗೆ, ಜಯ ನಿನಗೆ, ಜಯ ಜಯ ಜಯ ಜಯ ನಿನಗೆ.

Writer - ಪಂಡಿತಾರಾಧ್ಯ ಮೈಸೂರು

contributor

Editor - ಪಂಡಿತಾರಾಧ್ಯ ಮೈಸೂರು

contributor

Similar News