ಚುನಾವಣೆ ಸೋಲಿನ ಭೀತಿಯಿಂದ ದಲಿತರ ಜಪ

Update: 2016-08-14 18:54 GMT

ಬೆಂಗಳೂರು, ಆ.14: ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಕುರಿತು ತಮ್ಮ ವೌನ ಮುರಿದಿದ್ದಾರೆ ಎಂದು ರಾಜ್ಯ ಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಕಿಡಿಕಾರಿದ್ದಾರೆ.

ರವಿವಾರ ನಗರದ ತಿರುಮೇನಹಳ್ಳಿಯಲ್ಲಿ ರಾಜ್ಯ ಸರಕಾರದಿಂದ ನಿರ್ಮಿಸುತ್ತಿರುವ ಹಜ್‌ಘರ್ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಅದೇ ರೀತಿ, ಗುಜರಾತ್‌ನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮೇಲಿನ ಹಲ್ಲೆ, ದೌರ್ಜನ್ಯದ ಬಗ್ಗೆ ಮಾತನಾಡಿರುವ ನರೇಂದ್ರಮೋದಿ, ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರು ಹಾಗೂ ಮುಸ್ಲಿಮರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿದರು.
ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿದ್ದೆ. ಅಲ್ಲದೆ, ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಆರೆಸ್ಸೆಸ್ ಕಾರ್ಯಕರ್ತರು ವಾಹನವೊಂದಕ್ಕೆ ಬೆಂಕಿ ಹಚ್ಚಿದ್ದರು. ಈ ವೇಳೆ ಮುಸ್ಲಿಮ್ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಗುಲಾಂ ನಬಿ ಆರೋಪಿಸಿದರು.
 ನಿಷೇಧಾಜ್ಞೆ ಹೇರಿರುವ ಕಾಶ್ಮೀರದ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ. ಅಲ್ಲದೆ, ರಾಜ್ಯ ಸಭೆ ಕಲಾಪ ನಡೆಯುತ್ತಿದ್ದರೂ, ಸದನದ ಪ್ರಶ್ನೆಗಳಿಗೆ ಹಾಗೂ ಕಾಶ್ಮೀರದ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡದ ಮೋದಿ ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಅಗತ್ಯವಾದರೂ ಏನಿತ್ತು ಎಂದು ಅವರು ಪ್ರಶ್ನಿಸಿದರು.
ಸದನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಮಾತ್ರ ಮೋದಿ ಮೌನ ತಾಳುತ್ತಾರೆ. ಆದರೆ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮಾತ್ರ ಕಾಶ್ಮೀರದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ ಗುಲಾಂ ನಬಿ ಆಝಾದ್ ಟೀಕಿಸಿದರು.
ಶಿಕ್ಷಣಕ್ಕೆ ಅನ್ಯಾಯ: ಕೇಂದ್ರದಲ್ಲಿ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡಿದ್ದಲ್ಲದೆ, ವಿದ್ಯಾರ್ಥಿ ವೇತನ ಸೇರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಆದರೆ, ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
 ಈ ವೇಳೆ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಶನ್‌ಬೇಗ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಾಲ್ಕೀಸ್ ಬಾನು, ಮುಖಂಡರಾದ ಮುಹಮ್ಮದ್ ಉಬೇದುಲ್ಲಾ ಶರೀಫ್, ಸುಲ್ತಾನ್ ಆಗಾ ಸೇರಿದಂತೆ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News