ಚಳವಳಿ ನೆಪದಲ್ಲಿ ಪಕ್ಷಗಳ ಮೇಲಾಟ! ‘ಮುಂಬೈ ದರ್ಶನ್’ಗೆ ಹೊಸ ಪ್ಯಾಕೇಜ್

Update: 2016-08-15 18:18 GMT

 ‘ಚಲೇ ಜಾವೋ ಭಾಗ - 2’

ಮುಂಬೈಯ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನವು ಆಗಸ್ಟ್ 9 ರಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಶಕ್ತಿ ಪರೀಕ್ಷಣಾ ಸ್ಥಳವಾಗಿ ಕಾಣಿಸಿಕೊಂಡಿತು. 1942ರಲ್ಲಿ ಮಹಾತ್ಮ ಗಾಂಧೀಜಿಯವರು ಈ ಮೈದಾನದಿಂದ ಸ್ವಾತಂತ್ರ್ಯಕ್ಕಾಗಿ ಮಾಡು ಇಲ್ಲವೇ ಮಡಿ ಹೋರಾಟದ ಕಿಡಿ ಹಾರಿಸಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣೆ ಹಾಕಿದ್ದರು. ಈ ನೆನಪಿನಲ್ಲಿ ಪ್ರತೀವರ್ಷ ಕಾಂಗ್ರೆಸ್ ಇಲ್ಲಿ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ಬಿಜೆಪಿಯೂ ಚಲೇ ಜಾವೋ ಪಾರ್ಟ್-2 ಘೋಷಣೆ ಹಾಕಿ ಇಲ್ಲಿ ತನ್ನ ಧ್ವಜ ಊರಿ ಕಾರ್ಯಕ್ರಮ ಆಯೋಜಿಸಿತು.

ಪರಿಣಾಮವಾಗಿ ಪ್ರತೀವರ್ಷ ಶಾಂತ ರೀತಿಯಿಂದ ನಡೆಯುತ್ತಿದ್ದ ಕಾಂಗ್ರೆಸ್‌ನ ಕಾರ್ಯಕ್ರಮವು ಈ ಬಾರಿ ಕಾವೇರಿದ್ದು, ಮೈದಾನದಲ್ಲಿ ಬೆಳಗ್ಗಿನಿಂದಲೇ ಭಾರೀ ಪೊಲೀಸ್ ಕಾವಲು ದಟ್ಟವಾಗಿತ್ತು. ಆದರೂ ಇಬ್ಬರ ಕಾರ್ಯಕ್ರಮಗಳೂ ಶಾಂತಿಪೂರ್ಣವಾಗಿ ಜರಗಿತು.

 ಆಗಸ್ಟ್ 8, 1942ರಂದು ಸ್ವಾತಂತ್ರ್ಯ ಹೋರಾಟವು ಅಂತಿಮ ಹಂತ ತಲುಪಿತ್ತು. ಮಹಾತ್ಮಗಾಂಧಿಯವರು ಮುಂಬೈಯ ಆಗಸ್ಟ್ ಕ್ರಾಂತಿ ಮೈದಾನದಿಂದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನ ಆರಂಭಿಸಿದ್ದರು. ಇದೇ ಮಾದರಿಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಈ ವರ್ಷ ‘ಚಲೇ ಜಾವೋ ಪಾರ್ಟ್-2, ಸ್ವರಾಜ್ ಸೆ ಸ್ವರಾಜ್ ತಕ್’ ಆಂದೋಲನ ಆರಂಭಿಸಿತು. ಇದರಲ್ಲಿ ಬಡತನ, ಜಾತಿವಾದ, ಭೇದಭಾವ, ಅನಕ್ಷರತೆ, ಆತಂಕವಾದ, ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಚಲೇ ಜಾವೋ ಘೋಷಣೆಗಳನ್ನು ಹಾಕಿತ್ತು. ಬಿಜೆಪಿ ಮತ್ತು ಸರಕಾರ ಭವ್ಯ ಕಾರ್ಯಕ್ರಮ ವನ್ನು ಆಯೋಜಿಸಿತ್ತು. ಕೇಂದ್ರ ಮಂತ್ರಿಗಳೂ ಬಂದಿದ್ದರು. ಎಲ್ಲರೂ ಗಾಂಧೀ ಸ್ಮತಿ ಸ್ತಂಭಕ್ಕೆ ಹೂಹಾರ ಅರ್ಪಿಸಿದರು.

ಆದರೆ, ಬಿಜೆಪಿ ಈ ಸಲ ಮೈದಾನಕ್ಕೆ ಇಳಿದಿದ್ದರಿಂದ ಕಾಂಗ್ರೆಸ್‌ನವರು ಕೂಡಾ ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ಅಕ್ಕಪಕ್ಕಗಳಲ್ಲಿನ ಕಂಬಗಳಲ್ಲಿ ಎರಡೂ ಪಕ್ಷಗಳ ಧ್ವಜ ಹಾರಾಡುತ್ತಿತ್ತು. ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ ನಿರುಪಮ್ ಅವರು, ‘‘ಇತಿಹಾಸ ಒಂದೇ ಇರುತ್ತದೆ. ನಾಣ್ಯದಂತೆ ಎರಡು ಮುಖ ಇರುವುದಿಲ್ಲ. ಕಳೆದ 74 ವರ್ಷಗಳಿಂದ ಬಿಜೆಪಿ ಎಂದೂ ಈ ಐತಿಹಾಸಿಕ ದಿನವನ್ನು ಆಚರಿಸುವ ಯಾವುದೇ ಕಾರ್ಯಕ್ರಮ ಈ ಮೈದಾನದಲ್ಲಿ ಮಾಡಿಲ್ಲ. ಇಂದು ‘ಚಲೇ ಜಾವೋ ಪಾರ್ಟ್-2’ ಘೋಷಣೆ ಹಾಸ್ಯಾಸ್ಪದ’’ ಎಂದು ಕುಟುಕಿದರು.

 ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1942ರ ಚಲೇ ಜಾವೋ ಆಂದೋಲನ ಬಹು ಮಹತ್ವ ಪಡೆದಿದೆ. ಈ ಆಂದೋಲನದ ನೆನಪಿಗೆ ಪ್ರತೀ ವರ್ಷ ಕಾಂಗ್ರೆಸ್ ಆಗಸ್ಟ್ 9ರಂದು ಮುಂಬೈಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಒಂದು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಇದರಲ್ಲಿ ಮಹಾರಾಷ್ಟ್ರದ ದಿಗ್ಗಜ ಕಾಂಗ್ರೆಸ್ ನಾಯಕರೆಲ್ಲ ಬರುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಕಾರ್ಯಕ್ರಮ ಆಯೋಜನೆಗೆ ಮೊದಲಿಗೆ ಅನುಮತಿ ಸಿಕ್ಕಿರಲಿಲ್ಲ. ರಾಜ್ಯದ ಬಿಜೆಪಿ ಸರಕಾರ ಮತ್ತು ಮಹಾನಗರ ಪಾಲಿಕೆ ಮೊದಲಿಗೆ ಅನುಮತಿ ನೀಡದ್ದರಿಂದ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ತೀವ್ರ ಬೇಸರಗೊಂಡಿದ್ದರು. ‘‘ರಾಜ್ಯದ ಬಿಜೆಪಿ ಸರಕಾರ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಘಟನೆಗಳ ಮಹತ್ವ ಕಡಿಮೆ ಮಾಡಲು ಇಚ್ಛಿಸುತ್ತಿದೆ’’ ಎಂದು ಅವರು ಟೀಕಿಸಿ ಆಂದೋಲನದ ಎಚ್ಚರಿಕೆ ನೀಡಿದ್ದರು. ನಂತರ ಅನುಮತಿ ಸಿಕ್ಕಿತ್ತು.

* * *

ಹೊಸ ಪ್ಯಾಕೇಜ್‌ನಲ್ಲಿ ಬೆಸ್ಟ್‌ನ ಮುಂಬೈ ದರ್ಶನ್

  ಮುಂಬೈ ಪೂರ್ತಿ ದರ್ಶನ ಮುಂಬೈಗೆ ಬರುವ ಪ್ರವಾಸಿಗರ ಕನಸು. ಸಮಯದ ಅಭಾವ ಇರುವವರು ಒಂದು ದಿನದಲ್ಲಿ ಮುಂಬೈಯ ಪ್ರಮುಖ ಸ್ಥಳಗಳನ್ನು ವೀಕ್ಷಿಸುತ್ತಾರೆ ಈ ಮುಂಬೈ ದರ್ಶನ್ ಬಸ್ಸುಗಳಲಿ.್ಲ ಅದಕ್ಕಾಗಿಯೇ ಪ್ರತೀದಿನ ನೂರಾರು ಖಾಸಗಿ ವಿಶೇಷ ಬಸ್ಸುಗಳು ಓಡಾಡುತ್ತವೆ. ಇದೀಗ ವಾತಾನುಕೂಲಿತ ಬಸ್ಸುಗಳನ್ನೂ ಮುಂಬೈ ದರ್ಶನದಲ್ಲಿ ಸೇರಿಸಲಾಗಿದೆ. ಮುಖ್ಯಮಂತ್ರಿ ಫಡ್ನವೀಸ್ ಅವರು ಆಗಸ್ಟ್ 11 ರಂದು ಇದನ್ನು ಉದ್ಘಾಟಿಸಿದರು. ಈ ಸೇವೆಯನ್ನು ಮಹಾರಾಷ್ಟ್ರ ಪರ್ಯಟನಾ ವಿಕಾಸ ನಿಗಮ (ಎಂ.ಟಿ.ಡಿ.ಸಿ.) ಮತ್ತು ಬೆಸ್ಟ್ ಸಾರಿಗೆ ಜಂಟಿಯಾಗಿ ಸೇರಿ ಶುರುಮಾಡಿದೆ. ‘‘ದೇಶ ವಿದೇಶಗಳ ಪ್ರವಾಸಿಗರಿಗೆ ಮಹಾರಾಷ್ಟ್ರ ಮೊದಲ ಇಷ್ಟದ ಪ್ರವಾಸ ತಾಣ ಆಗುವಂತೆ ಮಾಡುವುದು ಸರಕಾರದ ಗುರಿ’’ ಎಂದರು ಮುಖ್ಯಮಂತ್ರಿ. ಎಂ.ಟಿ.ಡಿ.ಸಿ.ಯ ಸಂಯುಕ್ತ ಮಹಾನಿರ್ದೇಶಕ ಸತೀಶ್ ಸೋನಿ ಅವರು ‘ಆಯಿಯೇ ಮಹಾರಾಷ್ಟ್ರ - 2017’ ಕ್ಯಾಂಪೇನ್‌ನ ಘೋಷಣೆ ಮಾಡಿದ್ದಾರೆ. ರಾಜ್ಯದ ಪರ್ಯಟನಾ ಮಂತ್ರಿ ಜಯ್‌ಕುಮಾರ್ ರಾವಲ್, ಬೆಸ್ಟ್ ಕಮಿಟಿಯ ಅಧ್ಯಕ್ಷ ಮೋಹನ್ ಮಿಠ್ ಬಾವ್ಕರ್, ನಟಿ ಜೂಹಿ ಚಾವ್ಲಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ‘ಮುಂಬೈ ದರ್ಶನ್’ ವಾತಾನುಕೂಲಿತ ಬಸ್ಸು ಬೆಸ್ಟ್‌ನ ವಿಶೇಷ ರೂಪದ ಬಸ್ಸು ಆಗಿದೆ. ಈ ಬಸ್ಸು ದಾದರ್ ಪೂರ್ವದ ಎಂ.ಟಿ.ಡಿ.ಸಿ. ಕೌಂಟರ್ ಮತ್ತು ಸಿ.ಎಸ್.ಟಿ. ಸ್ಟೇಷನ್ ಹೊರಗಡೆ ಬೆಸ್ಟ್ ಡಿಪೋದಿಂದ ಹೊರಡುತ್ತದೆ. ಸದ್ಯಕ್ಕೆ ಈ ಸೇವೆ ಶನಿವಾರ ಮತ್ತು ರವಿವಾರ ಮಾತ್ರ ಲಭ್ಯವಿರುತ್ತದೆ. ಅಕ್ಟೋಬರ್ ಸಮಯ ದೀಪಾವಳಿ ರಜೆಯಲ್ಲಿ ಈ ಮುಂಬೈ ದರ್ಶನ್ ಬಸ್ಸು ಪ್ರತೀದಿನ ಹೊರಡುವಂತೆ ಯೋಜನೆ ಮಾಡಲಾಗಿದೆ.ಆಗಸ್ಟ್ 13 ರಿಂದ ಶುರುವಾಗಿರುವ ಈ ಬಸ್ಸು ಮುಂಬೈ ಸುತ್ತಮುತ್ತ 9 ಗಂಟೆ ಸಂಚರಿಸುತ್ತದೆ. ಪ್ರವಾಸಿಗರು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರ ತನಕ ಮುಂಬೈಯ ಪ್ರಮುಖ ದರ್ಶನೀಯ ಸ್ಥಳಗಳನ್ನು ವೀಕ್ಷಿಸಬಹುದು. ಪ್ರವಾಸಿಗರಿಗೆ ಇಲ್ಲಿ ಗೋಲ್ಡ್ ಮತ್ತು ಸಿಲ್ವರ್ ಎನ್ನುವ ಎರಡು ಪ್ಯಾಕೇಜ್‌ಗಳಿವೆ. ಗೋಲ್ಡ್ ಪ್ಯಾಕೇಜ್ ವಯಸ್ಕರಿಗಾಗಿ 735 ರೂ. ಮತ್ತು 3 ವರ್ಷದ ಮಕ್ಕಳಿಗಾಗಿ 667 ರೂ. ಇರುತ್ತದೆ. ಇದರಲ್ಲಿ ಎಲ್ಲಾ ತೆರಿಗೆ ಮತ್ತು ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಕೂಡಾ ಸೇರಿದೆ. ಸಿಲ್ವರ್ ಪ್ಯಾಕೇಜ್ 499 ರೂ. ಆಗಿದ್ದು ಇದರಲ್ಲಿ ಪ್ರವೇಶ ಶುಲ್ಕ ಸೇರಿಲ್ಲ. ಎರಡೂ ಪ್ಯಾಕೇಜ್‌ಗಳಲ್ಲಿ ಪ್ರವಾಸಿಗರಿಗೆ ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಮಾತನಾಡುವ ಗೈಡ್‌ಗಳ ಸೇವೆ ಉಚಿತ ಇರುತ್ತದೆ. ಇನ್ನು ಮುಂಬೈ ಪ್ರವಾಸಿಗರ ಖುಶಿ ಹೆಚ್ಚಬಹುದು.

* * *

ಶೇ. 65ರಷ್ಟು ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕೀಟ್ ಕಾರಣ?

ಮುಂಬೈ ನಗರದಲ್ಲಿ ಸಂಭವಿಸುತ್ತಿರುವ ಬೆಂಕಿ ದುರ್ಘಟನೆಗಳಲ್ಲಿ 65 ಶೇಕಡಾ ಘಟನೆಗಳು ಶಾರ್ಟ್ ಸರ್ಕೀಟ್ ನಿಂದಲೇ ಸಂಭವಿಸುತ್ತದೆ ಎಂದು ಸರಕಾರದ ವತಿಯಿಂದ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಮಹಾರಾಷ್ಟ್ರ ಸರಕಾರವು ಮಳೆಗಾಲದ ಅಧಿವೇಶನದ ಸಮಯ ಸದನದಲ್ಲಿ ತಿಳಿಸಿದಂತೆ 2015-16ರಲ್ಲಿ ಮುಂಬೈಯಲ್ಲಿ 5,212 ದುರ್ಘಟನೆಗಳು ನಡೆದಿತ್ತು. ಇದರಲ್ಲಿ 3,714 ಆಗ್ನಿ ದುರಂತಗಳು ಶಾರ್ಟ್ ಸರ್ಕೀಟ್ ಕಾರಣದಿಂದಲೇ ಸಂಭವಿಸಿದೆಯಂತೆ. ಇದಕ್ಕೆ ಕಳಪೆ ವಿದ್ಯುತ್ ಉಪಕರಣಗಳು ಕಾರಣ ಎನ್ನಲಾಗಿದ್ದು, ವಿದ್ಯುತ್ ವಿತರಣಾ ಕಂಪೆನಿಗಳು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸುವಂತೆಯೂ, ಹಳೆಯ ತಂತಿಗಳನ್ನು ಬದಲಿಸಿ ಹೊಸ ತಂತಿಗಳನ್ನು ಹಾಕುವ ಜವಾಬ್ದಾರಿ ವಿದ್ಯುತ್ ಕಂಪೆನಿಗಳದ್ದಾಗಿವೆ ಎಂದೂ ಸರಕಾರ ಸದನದಲ್ಲಿ ಹೇಳಿದೆ.

ಮಹಾರಾಷ್ಟ್ರ ಬೆಂಕಿ ಪ್ರತಿಬಂಧಕ ಮತ್ತು ಜೀವನ್ ಸಂರಕ್ಷಕ್ ಉಪಯೋಜನಾ ಕಾನೂನು 2006ರ ಅನ್ವಯ ಬೆಂಕಿ ಸುರಕ್ಷಾ ಕ್ರಮ ಗಳನ್ನು ಕೈಗೊಳ್ಳುವುದು ಕಟ್ಟಡ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಮತ್ತು ಮಾಲ್‌ಗಳ ಜವಾಬ್ದಾರಿಯಾಗಿದೆ ಎಂದೂ ಹೇಳಿದೆ. ಈ ಬಾರಿ 4 ಸಾವಿರ ಪ್ರೈವೇಟ್ ಏಜನ್ಸಿಗಳಿಗೆ ಬೆಂಕಿ ಸುರಕ್ಷಾ ಕ್ರಮ ಅಳವಡಿಕೆಗಾಗಿ ಪರವಾನಿಗೆ ನೀಡಲಾಗಿದೆ.

* * *

ವರದಿ ತರಿಸಲು 8 ವಾರಗಳ ಗಡುವು

ಬಾಂಬೆ ಹೈಕೋರ್ಟ್ ಆಗಸ್ಟ್ ಮೊದಲವಾರದಲ್ಲಿ ಸಿಬಿಐಗೆ 8 ವಾರಗಳೊಳಗೆ ಅಂಧಶ್ರದ್ಧಾ ನಿರ್ಮೂಲನಾ ಆಂದೋಲನದ ನಾಯಕ ನರೇಂದ್ರ ದಾಭೋಲ್ಕರ್, ಕಮ್ಯುನಿಸ್ಟ್ ನಾಯಕ ಗೋವಿಂದ ಪಾನ್ಸರೆ ಮತ್ತು ಧಾರವಾಡದ ಸಂಶೋಧಕ ಎಂ. ಎಂ. ಕಲಬುರ್ಗಿ ಅವರ ಹತ್ಯೆಗೆ ಸಂಬಂಧಿಸಿದ ರಿಪೋರ್ಟ್‌ನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.ರಿಪೋರ್ಟ್ ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಫಾರೆನ್ಸಿಕ್ ಸಯನ್ಸ್ ಲ್ಯಾಬೊರೆಟರಿಯಲ್ಲಿ ರೆಡಿಯಾಗುತ್ತಿದೆ. ಸ್ಕಾಟ್‌ಲ್ಯಾಂಡ್ ಯಾರ್ಡ್‌ನಿಂದ ಈ ರಿಪೋರ್ಟ್ ಶೀಘ್ರವೇ ಪ್ರಾಪ್ತಿಯಾಗಿಸಲು ವಿದೇಶ ಮಂತ್ರಾಲಯ ಮತ್ತು ಕೇಂದ್ರ ಗೃಹ ಮಂತ್ರಾಲಯ ಮತ್ತು ಅಗತ್ಯವಿರುವ ವಿಭಾಗಗಳ ನಡುವೆ ಸಮನ್ವಯ ಇರಿಸುವಂತೆಯೂ ರಿಪೋರ್ಟ್ ಪಡೆಯಲು ಎಲ್ಲಾ ಮಂಜೂರುಗಳನ್ನು ಸಮಯದ ಮೊದಲೇ ಪಡೆಯುವಂತೆಯೂ ಸಿಬಿಐಗೆ ಬಾಂಬೆ ಕೋರ್ಟ್ ಸೂಚಿಸಿದೆ.

ತನಿಖೆಯ ಸಮಯ ಈ ಮೂರೂ ಹತ್ಯೆಗಳಲ್ಲಿ ಸಾಮ್ಯತೆ ಗೋಚರಿಸಿದ್ದು ಒಂದೇ ಗುಂಪು ಈ ಹತ್ಯಾಕಾಂಡವನ್ನು ಮಾಡಿರುವ ಸಾಧ್ಯತೆಗಳಿವೆ ಎಂದು ಸಿಬಿಐ ನಂಬಿದೆ. ಹಾಗಿದ್ದೂ ದಾಭೋಲ್ಕರ್ ಹತ್ಯಾಕಾಂಡದ ತನಿಖೆ ಸಿಬಿಐ ಮಾಡುತ್ತಿದೆ. ಪನ್ಸಾರೆ ಹತ್ಯಾಕಾಂಡದ ತನಿಖೆ ಮಹಾರಾಷ್ಟ್ರ ಪೊಲೀಸರ ಎಸ್.ಐ.ಟಿ. ಮಾಡುತ್ತಿದೆ. ಆಗಸ್ಟ್ ಮೊದಲ ವಾರ ಈ ಎರಡೂ ತನಿಖಾ ಏಜನ್ಸಿಗಳು ತಮ್ಮ ತಮ್ಮ ಕೇಸ್‌ನ ತನಿಖಾ ಪ್ರಗತಿಯ ವರದಿಯನ್ನು ಬಾಂಬೆ ಹೈಕೋರ್ಟ್‌ಗೆ ನೀಡಿದೆ. ದಾಭೋಲ್ಕರ್ ಹತ್ಯಾಕಾಂಡದಲ್ಲಿ ಯಾರ ಮೇಲಾದರೂ ಸಂಶಯ ಬಂದರೆ ಅವರನ್ನು 10 ದಿನಗಳೊಳಗೆ ಬಂಧಿಸುವಂತೆಯೂ ಕೋರ್ಟ್ ಸಿಬಿಐಗೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News