ದೇವರಾಜ ಅರಸು ಆಡಳಿತಾವಧಿ ಸುವರ್ಣಯುಗ: ಸಿದ್ದರಾಮಯ್ಯ

Update: 2016-08-20 14:18 GMT

ಬೆಂಗಳೂರು, ಆ.20: ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಪ್ಪತ್ತರ ದಶಕವು ಸುವರ್ಣಯುಗವಾಗಿದ್ದು, ಎಲ್ಲ ಕಾಲಕ್ಕೂ ಸ್ಫೂರ್ತಿಯಾಗುವಂತಹದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೇವರಾಜ ಅರಸು 101ನೆ ಜನ್ಮ ದಿನಾಚರಣೆ ಮತ್ತು ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ 1972ರಿಂದ 80ರವರೆಗಿನ ಕಾಲವು ಎಂದೂ ಮರೆಯಲಾಗದ ಸ್ಮರಣೀಯ ವರ್ಷಗಳು. ಭೂ ಸುಧಾರಣೆ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಶೋಷಿತರು, ಕೂಲಿ ಕಾರ್ಮಿಕರು ಭೂ ಒಡೆಯರಾಗುವಂತೆ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
 ಭೂ ಸುಧಾರಣೆ ಕಾಯ್ದೆ ಜಾರಿಯಾಗುವ ಮುನ್ನ ರಾಜ್ಯದ ಭೂ ಒಡೆತನ ಮೇಲ್ಜಾತಿ ಸಮುದಾಯಗಳಿಗೆ ಮಾತ್ರ ಮೀಸಲಾಗಿತ್ತು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಸಾವಿರಾರು ವರ್ಷಗಳಿಂದಲೂ ಜೀತ ಮಾಡುತ್ತಲೆ ಜೀವನ ಸಾಗಿಸಿದ್ದವು. ಇಂತಹ ತಬ್ಬಲಿ ಸಮುದಾಯಗಳಿಗೆ ದೇವರಾಜ ಅರಸರು ಭೂಮಿಯನ್ನು ಒದಗಿಸುವ ಮೂಲಕ ಸ್ವಾಭಿಮಾನದ ಬದುಕನ್ನು ಕಲ್ಪಿಸಿದರು ಎಂದು ಅವರು ಸ್ಮರಿಸಿದರು.
ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿಯೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಹೀಗಾಗಿ ಇಂದಿರಾ ಗಾಂಧಿ ಬಡವರ ಅಭಿವೃದ್ಧಿಗಾಗಿ ಬ್ಯಾಂಕ್‌ಗಳ ರಾಷ್ಟ್ರೀಕರಣ, ಗರೀಬಿ ಹಠಾವೋ ಮುಂತಾದ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಯಾಗಿದ್ದು ಕರ್ನಾಟಕದಲ್ಲಿ ಮಾತ್ರವಾಗಿದೆ. ಇದರ ಯಶಸ್ಸು ದೇವರಾಜ ಅರಸುರವರಿಗೆ ಸಲ್ಲಬೇಕು ಎಂದು ಅವರು ಹೇಳಿದರು.
ದಲಿತ ಹಾಗೂ ಹಿಂದುಳಿದವರ ಸರ್ವತೋಮುಖ ಅಭಿವೃದ್ಧಿಗಾಗಿ ಹಾವನೂರು ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತಂದರು. ಇವತ್ತು ದಲಿತ, ಹಿಂದುಳಿದ ಸಮುದಾಯದಲ್ಲಿ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳಾಗಿರುವುದಕ್ಕೆ ದೇವರಾಜ ಅರಸುರವರು ಹಾಕಿಕೊಟ್ಟ ಅಭಿವೃದ್ಧಿ ಕಾರ್ಯಕ್ರಮಗಳೆ ಮೂಲ ಪ್ರೇರಣೆ ಎಂದು ಅವರು ತಿಳಿಸಿದರು.
  ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಮಾತನಾಡಿ, ರಾಜ್ಯದ ಕಂಡ ಅಪರೂಪದ ಜನಪ್ರತಿನಿಧಿ ದೇವರಾಜ ಅರಸು. ಇವರ ಹಾಕಿಕೊಟ್ಟ ಕಾರ್ಯಕ್ರಮಗಳಿಂದಾಗಿ ದಲಿತ, ಹಿಂದುಳಿದ ಸಮುದಾಯದ ಜನತೆ ಇಂದು ಸ್ವಾಭಿಮಾನದ ಬದುಕನ್ನು ನಡೆಸುವಂತಾಗಿದೆ. ಹೀಗಾಗಿ ಅವರ ಚಿಂತನೆ, ಆದರ್ಶವನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಎ.ಮೊಹಿದ್ದೀನ್‌ಗೆ ದೇವರಾಜ ಅರಸು ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ದೇವರಾಜ ಅರಸುರಿಗೆ ಸಂಬಂಧಿಸಿದ 13ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಲೋಕಸಭಾ ಸದಸ್ಯ ವೀರಪ್ಪ ಮೊಯ್ಲಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಹಿರಿಯ ರಾಜಕಾರಣಿಗಳು ಹಾಗೂ ರಾಜಕಾರಣಿಗಳು ಉಪಸ್ಥಿತರಿದ್ದರು.

* ರಾಜ್ಯದ 2,408 ವಿದ್ಯಾರ್ಥಿನಿಲಯಗಳಿಗೆ ದೇವರಾಜ ಅರಸು ವಿದ್ಯಾರ್ಥಿನಿಲಯ ಎಂದು ನಾಮಕಾರಣ.
* ಪಿಎಚ್‌ಡಿ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ‘ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ’ ಯೋಜನೆಯಡಿ ಪ್ರತೀ ತಿಂಗಳು 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು.
* ಶತಮಾನೋತ್ಸವದ ಅಂಗವಾಗಿ ದೇವರಾಜ ಅರಸು ಹುಟ್ಟೂರಾದ ಬೆಟ್ಟದತುಂಗಕ್ಕೆ 10 ಕೋಟಿ ರೂ. ಹಾಗೂ ಅವರು ವಿದ್ಯಾಭ್ಯಾಸ ಮಾಡಿದ ಗ್ರಾಮವಾದ ಕಲ್ಲಹಳ್ಳಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕೈಗೊಂಡು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News