ಕಾಂಗ್ರೆಸ್ ಸರಕಾರ ದಲಿತ ಸಮುದಾಯಕ್ಕೆ ಶಕ್ತಿ ತುಂಬಲಿ: ಬಿ.ಎ.ಮೊಯಿದಿನ್

Update: 2016-08-20 14:08 GMT

ಬೆಂಗಳೂರು, ಆ.20: ರಾಜ್ಯದಲ್ಲಿರುವ ದಲಿತ ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲಿಯು ಶಕ್ತಿ ಕೊಡುವುದರ ಮೂಲಕ ದೇವರಾಜ ಅರಸುರವರ ಕನಸನ್ನು ನನಸು ಮಾಡುವುದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮುಖ್ಯ ಧ್ಯೇಯವಾಗಬೇಕು ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಬಿ.ಎ.ಮೊಯಿದಿನ್ ಆಶಿಸಿದ್ದಾರೆ.
ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೇವರಾಜ ಅರಸು 101ನೆ ಜನ್ಮ ದಿನಾಚರಣೆ ಮತ್ತು ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ದಲಿತರ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಇದನ್ನು ತಡೆಯಬೇಕಾದರೆ ದಲಿತ ಸಮುದಾಯ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯನ್ನು ಸಾಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ದಲಿತರಿಗಾಗಿಯೆ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಡಿ.ದೇವರಾಜ ಅರಸು ಸ್ನೇಹ ಜೀವಿಯಾಗಿದ್ದರು. ಯಾರೊಂದಿಗೂ ದ್ವೇಷವನ್ನು ಬೆಳೆಸುತ್ತಿರಲಿಲ್ಲ. ವಿರೋಧಿಗಳೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದರು. ಆದರೆ, ಇಂದು ರಾಜಕಾರಣದಲ್ಲಿ ಸ್ವಾರ್ಥತೆ ಹೆಚ್ಚಿದ್ದು, ಜನಪ್ರತಿನಿಧಿಗಳು ದೇವರಾಜ ಅರಸರ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೇವರಾಜ ಅರಸು ಸಮಾಜಕ್ಕೆ ಕೊಟ್ಟ ಕೊಡುಗೆ ಬಹಳಷ್ಟಿವೆ. ಮುಖ್ಯವಾಗಿ ನಿರ್ಲಕ್ಷಿತ ಸಮುದಾಯವನ್ನು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಂಡರು. ಅವರ ಯೋಜನೆಗಳು ಇವತ್ತಿಗೂ ಪ್ರಸ್ತುತವಾಗಿವೆ ಎಂದು ಅವರು ಸ್ಮರಿಸಿದರು.
ನನ್ನಂತಹ ಸಾಮಾನ್ಯನಿಗೆ ದೇವರಾಜ ಅರಸು ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಾಗಿದೆ. ಅರಸು ಮಾಡಿರುವ ಕೆಲಸಗಳನ್ನು ಹೋಲಿಸಿದರೆ ನನ್ನದು ತೃಣ ಮಾತ್ರವೆ. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನನಗೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯೆಂದು ಅವರು ಹರ್ಷ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News