ಮಹಾನ್ ಮಾನವತಾವಾದಿ ನಾರಾಯಣಗುರು
ಶಾಲೆಗಳಲ್ಲಿ ನಂಬೂದಿರಿಗಳು, ನಾಯರ್‌ಗಳಿಗಷ್ಟೇ ಪ್ರವೇಶವಿತ್ತು. ಈಳವರಿಗೂ ಶಾಲೆಯಲ್ಲಿ ಪ್ರವೇಶ ಇರಲಿಲ್ಲ. ತಿರುವಾಂಕೂರು ಸಂಸ್ಥಾನದ ಎಲ್ಲ ಸರಕಾರಿ ನೌಕರಿಯಲ್ಲಿ ಈ 2 ಜಾತಿಯ ಜನರೇ 100 ರಷ್ಟು ತುಂಬಿದ್ದರು. ಉಸಿರು ಕಟ್ಟಿಸುವಂತಹ ವಾತಾವರಣದಲ್ಲಿ ಕೆಳಜಾತಿಗಳು ಜೈಲು ಬಂದಿಗಳಂತೆ ಬದುಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಕೇರಳ ರಾಜ್ಯದ ತಿರುವನಂತಪುರದಿಂದ 10 ಮೈಲಿ ದೂರದ ಚೆಂಬಳಾಂದಿ ಗ್ರಾಮದಲ್ಲಿ ಈಡಿಗ ಜಾತಿಗೆ ಸೇರಿದ (ಈಳವ) ಮಾಧವ ಆಶಾನ್ ಮತ್ತು ಕುಟ್ಟಿಯಮ್ಮ ಇವರ ಪುತ್ರನಾಗಿ 1856ರಲ್ಲಿ ನಾರಾಯಣಗುರುಗಳು ಜನ್ಮ ತಾಳಿದರು.
ಜಾತೀಯತೆಯ ಪೂರ್ವಾಗ್ರಹ ಮತ್ತು ಧಾರ್ಮಿಕ ಭೇದ ಭಾವಗಳ ಮಾತ್ಸರ್ಯಗಳಿಂದ ಮುಕ್ತರಾದ ಮಾನವರು ಸೋದರರಂತೆ ಬದುಕುವ ಆದರ್ಶದ ನೆಲೆವೀಡು ಇಲ್ಲಿದೆ- ನಾರಾಯಣ ಗುರು
ನಾರಾಯಣಗುರುಗಳು ತಮ್ಮ 15ನೆ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. 1879ರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಈ ಸಮಾಜದಲ್ಲಿ ಅಸಮಾನತೆಗೆ ಏನು ಮಾಡಬೇಕೆಂದು ಚಿಂತಿಸಿದರು. ಇಂತಹ ಸಂದರ್ಭದಲ್ಲಿ ತಂದೆ ಒತ್ತಾಯದಿಂದ ಮದುವೆ ಮಾಡುತ್ತಾರೆ. ಆಗ ಹೆಂಡತಿ ಮನೆಗೆ ತೆರಳಿದ ನಾರಾಯಣಗುರು, ‘‘ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಸ್ವಂತ ಸುಖಕ್ಕಿಂತ ಸಂಕಷ್ಟದಲ್ಲಿರುವ ಜನರ ಸೇವೆ ಮಾಡಿ ನನ್ನ ಜನ್ಮ ಸಾರ್ಥಕಗೊಳಿಸಲು ಉದ್ದೇಶಿಸಿದ್ದೇನೆ. ನನ್ನ ಹಾಗೆಯೇ ನೀನು ನನ್ನ ಹಾದಿಯಲ್ಲಿ ನಡೆದು ಯಶಸ್ಸು ಕಂಡುಕೊಳ್ಳಬೇಕು’’ ಎಂದು ಹೇಳಿ ಮನೆಯಿಂದ ಹೊರನಡೆದ ಗುರುಗಳು ಮತ್ತೆಂದೂ ಆ ಮನೆಯ ಕಡೆ ಸುಳಿಯಲಿಲ್ಲ.
18ನೆ ಶತಮಾನದಲ್ಲಿ ಭಾರತದಲ್ಲಿ ಹಲವಾರು ರಾಜರು ಬ್ರಿಟಿಷರ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದರೂ ದೇಶದಲ್ಲಿ ಸಾಕ್ಷರತೆ ಶೇ.10ರಷ್ಟು ಮಾತ್ರವೇ ಇತ್ತು. ಹಾಗೂ ಶಾಲೆಗಳ ಸಂಖ್ಯೆ ಇಡೀ ದೇಶದಲ್ಲಿ 1,000 ಕೂಡ ಇರಲಿಲ್ಲ. ಕೆಲವೇ ವರ್ಗದ ಅದರಲ್ಲೂ ವೈದಿಕ ಪುರುಷರಷ್ಟೇ ಶಿಕ್ಷಣ ಪಡೆಯುತ್ತಿದ್ದರು. ವೈದಿಕ ವರ್ಗದ ಮಹಿಳೆಯರಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. ಇನ್ನು ಶೋಷಿತ ಶೂದ್ರರು ಮತ್ತು ಅಸ್ಪಶ್ಯರು ಇಬ್ಬರು ಸೇರಿ ದೇಶದ ಜನಸಂಖ್ಯೆಯ ಶೇ.85 ಭಾಗದಷ್ಟು ಜನರು ಅನಕ್ಷರಸ್ಥರಾಗಿಯೇ ಇದ್ದರು. ಇವರಿಗೆ ಯಾವ ದೈವವು ಶಿಕ್ಷಣ ನೀಡಿರಲಿಲ್ಲ. ವೈದಿಕ ವ್ಯವಸ್ಥೆಯು, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಬಲಾಢ್ಯವಾಗಿದ್ದು ಶೂದ್ರರನ್ನು ತನ್ನ ಗುಲಾಮಗಿರಿಯಲ್ಲಿಟ್ಟುಕೊಂಡು ತನ್ನ ಅಧಿಕಾರಕ್ಕೆ ಧಕ್ಕೆಯಾಗದಂತೆ ಅವರೆಲ್ಲರನ್ನು ಅನಕ್ಷರಸ್ಥರನ್ನಾಗಿಯೇ ಇಟ್ಟಿತ್ತು. ಹಿಂದೆ ತಿರುವನಂತಪುರ ಸಂಸ್ಥ್ಧಾನವಾಗಿದ್ದು ಇಂದು ಕೇರಳ ರಾಜ್ಯ ಆಗಿರುವ ಪ್ರದೇಶದಲ್ಲೂ ಜಾತಿ ವ್ಯವಸ್ಥೆಯು ಕ್ರೂರವಾಗಿತ್ತು. ಶೂದ್ರರನ್ನು ಅಕ್ಷರಶಃ ಕುರಿಗಳಂತೆ ತಮ್ಮ ಗುಲಾಮರಾಗಿಟ್ಟುಕೊಂಡಿದ್ದರು.
ನಂಬೂದಿರಿಗಳಿಗೆ ಹಾಗೂ ಅವರ ದಬ್ಬಾಳಿಕೆಗೆ ರಕ್ಷಣೆ ನೀಡುತ್ತಿದ್ದವರು ಶೂದ್ರ ನಾಯರ್ ಜಾತಿಯವರಾಗಿದ್ದರು. ನಾಯರ್‌ಗಳು ನಂಬೂದಿರಿಗಳಿಗಿಂತ ಕೀಳಾಗಿದ್ದರೂ, ತಮಗಿಂತ ಕೆಳಜಾತಿಯವರೆನಿಸಿಕೊಂಡಿದ್ದ ಪೊಲಯ, ಪರಯ ಮತ್ತು ಈಳವರನ್ನು ಕೀಳಾಗಿ ಕಾಣುತ್ತಿದ್ದರು. ನಾಯರ್‌ಗಳನ್ನು ಕೀಳಾಗಿ ಕಾಣುತ್ತಿದ್ದ ನಂಬೂದಿರಿಗಳ ವಿರುದ್ಧ ಹೋರಾಡ ಬೇಕಾದುದು ನಾಯರ್‌ಗಳ ಕರ್ತವ್ಯವಾಗಿತ್ತು. ಆದರೆ ದುರಂತವೇನೆಂದರೆ ನಾಯರ್‌ಗಳು ತಮಗಿಂತಲೂ ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿದ್ದ ಈಳವರನ್ನು, ಪೊಲಯ, ಪರಯರ ಮೇಲೆ ದಬ್ಬಾಳಿಕೆ ಮಾಡುತ್ತ ಕೀಳಾಗಿ ಕಾಣುತ್ತಿದ್ದರು. ನಂಬೂದಿರಿಗಳು, ನಾಯರ್‌ಗಳು ನಡೆದಾಡುವ ರಸ್ತೆಗಳಲ್ಲಿ ಈಳವರು, ಪರಯರು ನಡೆದಾಡುವಂತಿರಲಿಲ್ಲ. ಪೂಲಯರು, ಪರಯರು, ಈಳವರ ಹೆಂಗಸರು ರವಿಕೆ ಧರಿಸುವಂತಿರಲಿಲ್ಲ.
ಮಳೆ ಬಂದರೆ ಈಳವರು ಕೊಡೆ ಹಿಡಿಯುವಂತಿರಲಿಲ್ಲ. ಆಭರಣ ಧರಿಸುವಂತಿರಲಿಲ್ಲ. ಚಪ್ಪಲಿ ಹಾಕುವಂತಿರಲಿಲ್ಲ. ಕಾಣಿಕೆಗಳನ್ನು ದೇವಾಲಯದ ಕಾಂಪೌಂಡ್ ಒಳಗೆ ಆಚೆಯಿಂದ ಎಸೆಯಬಹುದಾಗಿತ್ತು. ಶಾಲೆಗಳಲ್ಲಿ ನಂಬೂದಿರಿಗಳು, ನಾಯರ್‌ಗಳಿಗಷ್ಟೇ ಪ್ರವೇಶವಿತ್ತು. ಈಳವರಿಗೂ ಶಾಲೆಯಲ್ಲಿ ಪ್ರವೇಶ ಇರಲಿಲ್ಲ. ತಿರುವಾಂಕೂರು ಸಂಸ್ಥಾನದ ಎಲ್ಲ ಸರಕಾರಿ ನೌಕರಿಯಲ್ಲಿ ಈ 2 ಜಾತಿಯ ಜನರೇ 100 ರಷ್ಟು ತುಂಬಿದ್ದರು. ಉಸಿರು ಕಟ್ಟಿಸುವಂತಹ ವಾತಾವರಣದಲ್ಲಿ ಕೆಳಜಾತಿಗಳು ಜೈಲು ಬಂದಿಗಳಂತೆ ಬದುಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಕೇರಳ ರಾಜ್ಯದ ತಿರುವನಂತಪುರದಿಂದ 10 ಮೈಲಿ ದೂರದ ಚೆಂಬಳಾಂದಿ ಗ್ರಾಮದಲ್ಲಿ ಈಡಿಗ ಜಾತಿಗೆ ಸೇರಿದ (ಈಳವ) ಮಾಧವ ಆಶಾನ್ ಮತ್ತು ಕುಟ್ಟಿಯಮ್ಮ ಇವರ ಪುತ್ರನಾಗಿ 1856ರಲ್ಲಿ ನಾರಾಯಣಗುರುಗಳು ಜನ್ಮ ತಾಳಿದರು.
ತಂದೆ ಶಿಕ್ಷಕರಾಗಿದ್ದರು. ಮಾವನವರು ಡಾಕ್ಟರ್ ಆಗಿದ್ದರು. ಆದ್ದರಿಂದ ಮಗುವನ್ನು ಶಾಲೆಗೆ ಕಳುಹಿಸಲಾರಂಭಿಸಿದರು. 6 ವರ್ಷ ವಯಸ್ಸಿನವನಾಗಿದ್ದಾಗ ನಡೆದ ಘಟನೆಯು ನಾರಾಯಣಗುರುವಿನ ವಿದ್ವತ್ತನ್ನು ಪರಿಚಯಿಸುತ್ತದೆ. ನಾರಾಯಣಗುರುಗಳ ಮನೆಯಲ್ಲಿ ಒಂದು ಸಾವು ಸಂಭವಿಸಿ ಎಲ್ಲರು ಗೋಳಾಡುತ್ತಿ ರುತ್ತಾರೆ. ಮೂರು ದಿನಗಳು ಕಳೆದ ನಂತರ ಮಾಮೂಲಿನಂತೆ ನಗುತ್ತಾ ಯಥಾ ಸ್ಥಿತಿಯಲ್ಲಿರುತ್ತಾರೆ. ಇದನ್ನು ಕಂಡ ಬಾಲಕನಿಗೆ ಮನೆಯವರ ನಡವಳಿಕೆ ವಿಚಿತ್ರವಾಗಿ ಕಾಣುತ್ತದೆ. ಬಾಲಕನು ಮನೆಯಿಂದ ಕಾಣೆಯಾಗುತ್ತಾನೆ. ಕೆಲವು ದಿನಗಳ ನಂತರ ಕಾಡಿನಿಂದ ಬಾಲಕನನ್ನು ಕರೆತಂದ ಪೋಷಕರು ಕಾಡಿಗೆ ಹೋದ ಕಾರಣ ಕೇಳುತ್ತಾರೆ. ಸಾವಿನ ದಿನ ಅಳುತ್ತಿದ್ದ ನೀವು ಮೂರು ದಿನದ ನಂತರ ನಗುತ್ತಾ ಮಾಮೂಲಿನಂತೆ ಸಂತೋಷವಾಗಿದ್ದೀರಲ್ಲ. ಈ ವಿಚಿತ್ರಕ್ಕೆ ಕಾರಣ ಹುಡುಕಲು ಕಾಡಿಗೆ ಹೋಗಿದ್ದೆ ಎಂದು ಆತ ಉತ್ತರಿಸುತ್ತಾನೆ. ಈ ಪ್ರಶ್ನೆಗೆ ಉತ್ತರಿಸಲು ಹಿರಿಯರು ತಡಕಾಡಿದರು. ಗೌತಮಬುದ್ಧನಿಗೆ ಉದ್ಭವಿಸಿದ ಪ್ರಶ್ನೆಗಳಂತೆ ಬಾಲಕ ನಾರಾಯಣಗುರುವಿಗೆ ಮಾನವನ ನಿಗೂಢ ಜನನ-ಮರಣದ ರಹಸ್ಯದ ಬಗ್ಗೆ ಯೋಚಿಸುವಂತೆ ಮಾಡಿತು.
ನಾರಾಯಣಗುರುಗಳು ತಮ್ಮ 15ನೆ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. 1879ರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಈ ಸಮಾಜದಲ್ಲಿ ಅಸಮಾನತೆಗೆ ಏನು ಮಾಡಬೇಕೆಂದು ಚಿಂತಿಸಿದರು. ಇಂತಹ ಸಂದರ್ಭದಲ್ಲಿ ತಂದೆ ಒತ್ತಾಯದಿಂದ ಮದುವೆ ಮಾಡುತ್ತಾರೆ. ಆಗ ಹೆಂಡತಿ ಮನೆಗೆ ತೆರಳಿದ ನಾರಾಯಣಗುರು, ‘‘ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಸ್ವಂತ ಸುಖಕ್ಕಿಂತ ಸಂಕಷ್ಟದಲ್ಲಿರುವ ಜನರ ಸೇವೆ ಮಾಡಿ ನನ್ನ ಜನ್ಮ ಸಾರ್ಥಕಗೊಳಿಸಲು ಉದ್ದೇಶಿಸಿದ್ದೇನೆ. ನನ್ನ ಹಾಗೆಯೇ ನೀನು ನನ್ನ ಹಾದಿಯಲ್ಲಿ ನಡೆದು ಯಶಸ್ಸು ಕಂಡುಕೊಳ್ಳಬೇಕು’’ ಎಂದು ಹೇಳಿ ಮನೆಯಿಂದ ಹೊರನಡೆದ ಗುರುಗಳು ಮತ್ತೆಂದೂ ಆ ಮನೆಯ ಕಡೆ ಸುಳಿಯಲಿಲ್ಲ.
ಬುದ್ಧನಂತೆ ಸಂಸಾರ ತೊರೆದು ತಾಮ್ರದ ಪಾತ್ರೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಕಾಡು ಮೇಡು ಸುತ್ತಿ ಧ್ಯಾನ, ಜಪ, ತಪಗಳಲ್ಲಿ ತೊಡಗಿಕೊಂಡು ಬದುಕಿನ ಸತ್ಯದರ್ಶನದ ಸಾಕ್ಷಾತ್ಕಾರದಲ್ಲಿ ನಿರತರಾದರು. ತಾವು ಕಂಡುಕೊಂಡ ಸತ್ಯಗಳನ್ನು ಜನರಿಗೆ ಹೇಳುವ ಕಾಯಕದಲ್ಲಿ ತೊಡಗಿದರು.
ಒಂದು ದಿನ ತಂದೆಯವರ ಅನಾರೋಗ್ಯದ ವಿಷಯ ಅರಿತ ನಾರಾಯಣಗುರುಗಳು ತಂದೆಯನ್ನು ಕಾಣಲು ಚೆಂಬಲಾಂದಿಗೆ ಬರುತ್ತಾರೆ. ಲೋಕದ ಉದ್ಧಾರಕ್ಕಾಗಿ ದುಡಿಯುತ್ತಿರುವ ಮಗನನ್ನು ಕಂಡು ತಂದೆ ಸಂತೋಷಗೊಂಡರು. ತಮ್ಮ ಮಗನಿಂದ ಜಲವನ್ನು ಸ್ವೀಕರಿಸಿ ಕೊನೆಯುಸಿರೆಳೆದರು. ತಂದೆಯ ಸಾವಿನೊಂದಿಗೆ ಇದ್ದ ಕೊನೆಯ ಸಂಸಾರದ ಬೇಡಿಯಿಂದ ಮುಕ್ತರಾದರು. ಭವಬಂಧನಗಳಲ್ಲಿದ್ದ ನಾರಾಯಣಗುರುಗಳು ಹಗಲು ರಾತ್ರಿಗಳ ಪರಿವಿಲ್ಲದೆ ಕಾಡು ಮೇಡುಗಳಲ್ಲಿ ಅಲೆಯುತ್ತ ನಿರಂತರವಾಗಿ ಧ್ಯಾನ ಮಾಡತೊಡಗಿದರು. ಈ ಮಧ್ಯೆ ಕೈಕಾಟ್ಟು ಆಯ್ಯೆವು ಎಂಬ ಗುರುಗಳಿಂದ ಧ್ಯಾನವನ್ನು ಕಲಿತು ಚಂಚಲ ಮನಸ್ಸನ್ನು ಅಂಕೆಯಲ್ಲಿಡುವುದನ್ನು ಅಭ್ಯಾಸ ಮಾಡಿದರು. ಪಿಲ್ಲತಾಡಂ ಎಂಬ ಗುಹೆಯಲ್ಲಿ ಸುದೀರ್ಘ ಧ್ಯಾನದಲ್ಲಿ ತೊಡಗಿದ್ದಾಗ ಗುರುಗಳಿಗೆ ಜ್ಞಾನೋದಯವಾಗುತ್ತದೆ.
‘‘ಪರೋಪಕಾರ ಮಾಡಿ ಬದುಕಿದರೆ ಮಾತ್ರ ಹುಟ್ಟಿದ ಜೀವನ ಸಾರ್ಥಕ’’ ಎಂಬ ಸತ್ಯವನ್ನು ಕಂಡುಕೊಂಡು ಅಲ್ಲೆ ಕೆಲವು ದಿನ ಇರುತ್ತಾರೆ.
ಗುರುಗಳು ಒಂದು ದಿನ ಗುಹೆಯ ಕಡೆ ನಡೆದು ಹೋಗುತ್ತಿರುವುದನ್ನು ಕಂಡು ದಾರಿಹೋಕನೊಬ್ಬ ಹಿಂಬಾಲಿಸಿಕೊಂಡು ಹೋಗುತ್ತಾನೆ. ಬೆಟ್ಟದ ಮೇಲೆ ಹತ್ತಿ ಗುಹೆಯ ಹತ್ತಿರದ ದೃಶ್ಯ ನೋಡಿ ದಾರಿಹೋಕನು ಬೆಚ್ಚಿಬಿದ್ದನು. ಗುರುಗಳ ಅಕ್ಕಪಕ್ಕ ಹುಲಿಗಳು ನಾಯಿಗಳಂತೆ ಕುಳಿತಿರುತ್ತವೆ. ಇದನ್ನು ನೋಡಿ ದಾರಿ ಹೋಕನು ನಡುಗುತ್ತಾನೆ. ಇವನ ಅವಸ್ಥೆಯನ್ನು ಕಂಡ ನಾರಾಯಣಗುರುಗಳು ಹುಲಿಗಳಿಗೆ ಸನ್ನೆ ಮಾಡಿದಾಗ ಅವು ಪಕ್ಕಕ್ಕೆ ಎದ್ದು ಹೋಗುತ್ತವೆ. ನಾರಾಯಣ ಗುರುಗಳ ಅಸಾಧಾರಣ ಶಕ್ತಿಯನ್ನು ಕಂಡ ದಾರಿಹೋಕನು ಈ ಘಟನೆಯನ್ನು ಹತ್ತಿರದ ಹಳ್ಳಿಗಳಲ್ಲಿ ಹೇಳುತ್ತಾನೆ. ಗುರುಗಳನ್ನು ಕಾಣಲು ತಂಡೋಪತಂಡವಾಗಿ ಜನರು ಬರಲಾರಂಭಿಸುತ್ತಾರೆ. ನಂತರ ಗುರುಗಳು ಅಲ್ಲಿಂದ ಹೊರಬಂದು ದೇಶಪರ್ಯಟನೆ ಮಾಡುತ್ತಾರೆ.
ಅಗಾಧವಾದ ಧ್ಯಾನಶಕ್ತಿಯಿಂದ ಬುದ್ಧನಂತೆ ಕಂಗೊಳಿಸುತ್ತಿದ್ದ ಗುರುಗಳು ಜನರ ಅದರಲ್ಲೂ ಕೆಳಜಾತಿಗಳ ಆಕರ್ಷಣೆಯ ಕೇಂದ್ರ ಬಿಂದುವಾದರು. ತಾವು ಗಳಿಸಿದ ಅಪಾರವಾದ ಜ್ಞಾನ ಭಂಡಾರದಿಂದ ಜನರಿಗೆ ಆತ್ಮಸ್ಥೈರ್ಯ ತುಂಬಿ ಸಿದ್ಧ ಪುರುಷರಾಗುತ್ತಾರೆ. ಹಲವಾರು ವರ್ಷಗಳ ನಂತರ ಕೇರಳದ ನೆಯ್ಯಾರ್ ನದಿಯ ಹತ್ತಿರದ ಪ್ರಕೃತಿ ಸೌಂದರ್ಯದ ರಾಶಿಯ ಮಧ್ಯೆ ಇರುವ ಅರುವಿಪ್ಪುರಂನಲ್ಲಿ ನೆಲೆಸುತ್ತಾರೆ. ಗುರುಗಳನ್ನು ಕಾಣಲು ಅಪಾರವಾದ ಜನಸ್ತೋಮ ಆಗಮಿಸುತ್ತಿರುವುದರಿಂದ ಅದೊಂದು ಯಾತ್ರಾಸ್ಥಳವಾಗುತ್ತದೆ. ತಮ್ಮನ್ನು ಆರಾಧಿಸುವ ಜನಸ್ತೋಮಕ್ಕಾಗಿ ಶಿವಾಲಯ ನಿರ್ಮಿಸಲು ಗುರುಗಳು ಮುಂದಾಗುತ್ತಾರೆ. 1888ರ ಫೆಬ್ರವರಿ 10 ರಂದು ಶಿವರಾತ್ರಿಯ ದಿನ ಶಿವಲಿಂಗವನ್ನು ಹೋಲುವ ಕಲ್ಲೊಂದನ್ನು ತಂದು ತಡಿಕೆಗಳ ಮಂಟಪದಲ್ಲಿ ಪ್ರತಿಷ್ಠಾಪಿಸಿ ಜಾತಿಗಳ ಬೇಲಿಗಳಲ್ಲಿ ಸಿಕ್ಕಿ ಬಂದಿಗಳಾಗಿ ದಾರಿ ಕಾಣದಾಗಿದ್ದ ಕೆಳ ಜಾತಿಗಳಿಗೆ ವೈದಿಕ ತನದಿಂದ ಮುಕ್ತವಾದ ದಾರಿಯೊಂದನ್ನು ತೋರಿಸುತ್ತಾರೆ.
ಆ ಶಿವನ ದೇಗುಲದಲ್ಲಿ ಅವರು ಮಂತ್ರವನ್ನು ಹೇಳುತ್ತಾರೆ. ಇದು ಜನ ಸಾಮಾನ್ಯರ ಆಡು ಭಾಷೆಯಲ್ಲಿಯೇ ಹೇಳುತ್ತಾರೆ. (ಬುದ್ಧನು ಸಹ ಜನರಿಗೆ ಅರ್ಥವಾಗದ ಸಂಸ್ಕೃತ ಭಾಷೆಯಲ್ಲಿ ಧರ್ಮವನ್ನು ಬೋಧಿಸದೆ ಅಂದಿನ ಆಡುಭಾಷೆ ಪಾಳಿಯಲ್ಲಿ ಧರ್ಮ ಬೋಧಿಸಿದನು.)
ನಾರಾಯಣ ಗುರುಗಳು ಹೇಳಿದ ಮಂತ್ರ ಯಾವುದು ಬಲ್ಲಿರಾ ‘‘ಹೊಟ್ಟೆಗಿಲ್ಲದೆ ಪರಿತಪಿಸುವ ಬಡಜನರು ನೆಮ್ಮದಿಯಾಗಿ ಬದುಕುವಂತಾಗಲಿ’’ ಎಂಬುದು. ಆ ಶಿವಲಿಂಗದ ಕಲ್ಲಿನಲ್ಲಿ ಗುರುಗಳು ಸಂದೇಶವನ್ನು ಬರೆಯಿಸಿದರು. ಅದು ಹೀಗಿದೆ ‘‘ಜಾತೀಯತೆಯ ಪೂರ್ವಾಗ್ರಹ ಮತ್ತು ಧಾರ್ಮಿಕ ಭೇದ ಭಾವಗಳ ಮಾತ್ಸರ್ಯಗಳಿಂದ ಮುಕ್ತರಾದ ಮಾನವರು ಸೋದರರಂತೆ ಬದುಕುವ ಆದರ್ಶದ ನೆಲೆವೀಡು ಇಲ್ಲಿದೆ’’
ಕೇರಳದಲ್ಲಿ ಕೆಳಜಾತಿಯ ನಾರಾಯಣಗುರುಗಳು ಶಿವಾಲಯವನ್ನು ಕಟ್ಟಿದ ವಿಚಾರ ಸವರ್ಣೀಯರಲ್ಲಿ ಸಂಚಲನ ಸೃಷ್ಟಿಸಿದರೆ, ಈಳವ ಪರಯ್ಯ ಜಾತಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿತು. ಅದುವರೆಗೆ ದೇವರುಗಳನ್ನು ಗುತ್ತಿಗೆ ಪಡೆದಿದ್ದ ನಂಬೂದಿರಿಗಳಿಗೆ ಕಣ್ಣುರಿ ಉಂಟಾಯಿತು. ಕೆಲವು ನಂಬೂದಿರಿ ಬ್ರಾಹ್ಮಣರು ‘‘ಕೆಳಜಾತಿಯ ಈಳವನಾಗಿ ಶಿವಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ನಿಮಗೇನು ಅರ್ಹತೆ ಹಾಗೂ ಹಕ್ಕಿದೆ’’ ಎಂದು ಗುರುಗಳನ್ನು ಕೇಳುತ್ತಾರೆ. ಅದಕ್ಕೆ ನಾರಾಯಣ ಗುರುಗಳು, ‘‘ನಾನು ಸ್ಥಾಪಿಸಿದ್ದು ನಿಮ್ಮ ಶಿವನಲ್ಲ ಈಳವ ಶಿವನನ್ನು’’ ಎಂದು ಉತ್ತರಿಸುತ್ತಾರೆ. ಸಾರಾಯಿ, ಸೇಂದಿ ಸೇವಿಸಿ ಪ್ರಾಣಿಬಲಿ ನೀಡುತ್ತಿದ್ದ ಈಳವರು ಹಾಗೂ ಕೆಳಜಾತಿಯ ಜನರು ಗುರುಗಳ ಬೋಧನೆಯಿಂದ ತಮ್ಮ ದುಶ್ಚಟಗಳನ್ನು ಕಳಚಿಕೊಂಡು ಮೇಲ್ಮುಖವಾಗಿ ಬೆಳೆಯುತ್ತಾರೆ. ಅರವಿಪ್ಪುರಂ ನಂತರ 30 ಶಿವಾಲಯಗಳನ್ನು ಕೇರಳದಲ್ಲೂ ಕರ್ನಾಟಕ, ತಮಿಳುನಾಡು ಮತ್ತು ಶ್ರೀಲಂಕದಲ್ಲೂ ಸ್ಥಾಪಿಸುತ್ತಾರೆ.
ಪ್ರಾರಂಭದಲ್ಲಿ ವೈದಿಕರ ದೇವಾಲಯಗಳಂತೆ ಶಿವಾಲಯಗಳನ್ನು ನಿರ್ಮಿಸುತ್ತ ಕೆಳಜಾತಿಯ ಜನರನ್ನು ಸೆಳೆದುಕೊಂಡ ನಾರಾಯಣಗುರುಗಳು ಅವರನ್ನು ಜ್ಞಾನವಂತರನ್ನಾಗಿ ಪರಿವರ್ತನೆಗೊಳಿಸಲು ತಮ್ಮ ಮಾರ್ಗ ಬದಲಾಯಿಸಿಕೊಳ್ಳುತ್ತಾರೆ. ಗುರುಗಳ ಅಂತರಾಳದ ಮರ್ಮವರಿಯದ ಕೆಲವು ವಿಚಾರವಂತರು ವೈದಿಕಶಾಹಿಯಂತೆ ಮೂರ್ತಿ ಪೂಜೆಯನ್ನು ಹರಡುತ್ತಿರುವುದು ತಪ್ಪಲ್ಲವೇ ಎಂದು ಟೀಕಿಸುತ್ತಾರೆ. ಅದಕ್ಕೆ ಗುರುಗಳು, ‘‘ಮೂರ್ತಿ ಪೂಜೆ ಆವಶ್ಯಕತೆಯಿಲ್ಲ ನಿಜ. ಆದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಜ್ಞಾನ ನೀಡಲು ಅದನ್ನು ಮೆಟ್ಟಿಲನ್ನಾಗಿ ಉಪಯೋಗಿಸಿಕೊಂಡಿದ್ದೇನೆ’’ ಎಂದು ಹೇಳುತ್ತಾರೆ. ನಂತರ ಪ್ರಾರಂಭಿಸಿದ ಕೆಲವು ಶಿವಾಲಯಗಳಲ್ಲಿ ಲಿಂಗಕ್ಕೆ ಬದಲು ಜ್ಯೋತಿಯನ್ನು ಇಡುತ್ತಾರೆ. ಇದರ ಅರ್ಥ ‘‘ಕತ್ತಲೆಯಿಂದ ಬೆಳಕಿನಡೆಗೆ’’ ಎಂದು. ಮುರುಕಂಪಳದ ದೇವಾಲಯದ ಜ್ಯೋತಿಯ ಜೊತೆ ಶಿಲೆಯಲ್ಲಿ ಸತ್ಯ, ಧರ್ಮ, ದಯೆ, ಅನುಕಂಪ ಎಂಬ ಬರಹ ಕೆತ್ತಿಸುತ್ತಾರೆ.
ಕಲವಂಕೋಡಂನಲ್ಲಿ ಸ್ಥಾಪಿಸಿದ ಶಿವಾಲಯದಲ್ಲಿ ಲಿಂಗ ಅಥವಾ ಜ್ಯೋತಿಯ ಬದಲಿಗೆ ಕನ್ನಡಿಗಳನ್ನು ಇಡುತ್ತಾರೆ. ವ್ಯಕ್ತಿ ವಿಗ್ರಹ ದರ್ಶನ ಮಾಡಲು ಮುಂದೆ ನಿಂತಾಗ ಸ್ವತಃ ಆತನ ಪ್ರತಿಬಿಂಬ ಕಾಣುವಂತಾಗಬೇಕು. ಇದರ ಅರ್ಥ ನಿನ್ನ ವಿಮೋಚನೆಗೆ ನೀನೇ ಪ್ರಯತ್ನಿಸಬೇಕು ವಿನಃ ಇತರರನ್ನು ನಂಬಬಾರದು ಎಂಬುದಾಗಿತ್ತು.
ಇವರು ಸ್ಥಾಪಿಸಿದ ದೇವಾಲಯಗಳಲ್ಲಿ ಕೆಲವು ಕಡೆ ಪರಯರನ್ನು ಅರ್ಚಕರನ್ನಾಗಿ ನೇಮಿಸಿದರು. ದೇವಾಲಯಗಳ ಬಳಿ ಶಾಲೆ, ಗ್ರಂಥಾಲಯ ತೆರೆದರು. ಇದರ ಬಳಿ ವಿದ್ಯಾರ್ಥಿನಿಲಯಗಳು ಸಹ ಇರುತ್ತಿದ್ದವು. ವೈದಿಕಶಾಹಿ ವ್ಯವಸ್ಥೆಗೆ ಗುಲಾಮರಾಗಿದ್ದ ಶೂದ್ರರನ್ನು ವಿಮೋಚನೆಗೊಳಿಸಲು ನಾರಾಯಣಗುರುಗಳು ವೈದಿಕ ಪರಂಪರೆಯಂತೆ ದೇಗುಲ ನಿರ್ಮಿಸಿದರೂ ಅಲ್ಲಿಗೆ ಬರುತ್ತಿದ್ದ ಶೂದ್ರರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅವರಲ್ಲಿದ್ದ ವೈದಿಕ ಶಿಷ್ಟಾಚಾರ ನಾಶಮಾಡಿ ಶಿಕ್ಷಣ ನೀಡಿ ಕೊಳೆತು ನಾರುತ್ತಿದ್ದ ಕೆಳಜಾತಿ ಜನರಿಗೆ ಆಧ್ಯಾತ್ಮಿಕ ನೆಲೆ ತೋರಿಸುತ್ತ ವಿದ್ಯೆಯ ಮೂಲಕ ಜ್ಞಾನ ನೀಡುತ್ತಾ ವೈದಿಕ ಸರಪಳಿಯಿಂದ ಬಿಡುಗಡೆಗೊಳಿಸಿದರು. 1912ರಲ್ಲಿ ಶಾರದಾ ಮಠ ಉದ್ಘಾಟಿಸಿದ ನಾರಾಯಣಗುರುಗಳು ‘‘ಇಲ್ಲಿ ಯಾವ ಸಾಂಪ್ರದಾಯಿಕ ಬ್ರಾಹ್ಮಣರ ಪೂಜೆಗೂ ಅವಕಾಶವಿಲ್ಲ. ಇದು ಕೇವಲ ಜ್ಞಾನಾರ್ಜನೆಯ ಮಠವೇ ಹೊರತು ದೇವಾಲಯವಲ್ಲ’’ ಎಂದು ಹೇಳಿದರು.
ಶೂದ್ರರಲ್ಲಿ ಇದ್ದ ಬಾಲ್ಯವಿವಾಹ, ಆಡಂಬರದ ಮದುವೆ, ಹಬ್ಬಗಳನ್ನು ನಿಲ್ಲಿಸುತ್ತಾರೆ. ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸುತ್ತಾರೆ.
ಅಸ್ಪಶ್ಯರಂತೆ ಇದ್ದ ಈಳವ (ಈಡಿಗ) ಜಾತಿಗೆ ಮಾನ್ಯತೆ ತಂದು ಕೊಡುತ್ತಾರೆ. ಜೊತೆಗೆ ಇತರ ಕೆಳಜಾತಿಯವರನ್ನು ಸಹ ಮೇಲಕ್ಕೆತ್ತಿ ನಿಲ್ಲಿಸುವ ಕಾಯಕದಲ್ಲಿ ನಿರತರಾಗುತ್ತಾರೆ. ಕೇರಳದಲ್ಲಿ ಕೆಳಜಾತಿಗಳಿಗೆ ವಿದ್ಯೆಯನ್ನು ನೀಡಿ, ಸ್ವಾಭಿಮಾನ ತುಂಬಿ ಅಸಮಾನತೆಯ ಬ್ರಾಹ್ಮಣ ವ್ಯವಸ್ಥೆಗೆ ಮೌನವಾಗಿ ಸವಾಲು ಒಡ್ಡಿ ಅದನ್ನು ನಾಶ ಮಾಡಿದ ನಾರಾಯಣಗುರುಗಳು ಶೂದ್ರರ ಬಾಳಲ್ಲಿ ಬೆಳಕಿನ ಜ್ಯೋತಿಯಾದರು.
1. ಪ್ರಪಂಚದಲ್ಲಿ ಜನಿಸಿದ ಪ್ರತಿಯೊಬ್ಬ ಮಾನವ ಜೀವಿಯು ಒಂದೇ.
2. ಅವರಲ್ಲಿ ಮೇಲು ಕೀಳು ನೂರೆಂಟು ಜಾತಿಯಿಲ್ಲ.
3. ನೂರೆಂಟು ದೇವರಿಲ್ಲ, ಹಲವಾರು ಧರ್ಮಗಳಿಲ್ಲ.
4. ಇರುವುದೆಲ್ಲ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು.
5. ಪ್ರತಿಯೊಬ್ಬ ಮಾನವನು ಜಾತಿ, ಕುಲ ಮತಗಳ ವ್ಯತ್ಯಾಸವಿಲ್ಲದೇ ನೆಮ್ಮದಿಯಿಂದ ಬದುಕಬೇಕು.
6. ಜಾತಿ ಯಾವುದೆಂದು ಕೇಳಬೇಡ, ಹೇಳಬೇಡ, ಆಲೋಚಿಸಬೇಡ.
7. ಶಿಕ್ಷಣದಿಂದ ಜ್ಞಾನದ ಬೆಳಕು, ಒಗ್ಗಟ್ಟಿನಲ್ಲಿ ಬಲ, ಕೈಗಾರಿಕೆಗಳಿಂದ ಸಂಪತ್ತು ಸೃಷ್ಟಿ.
8. ಸತ್ಯವೇ ದೇವರು, ಜ್ಞಾನವೇ ದೇವರು, ಶಾಂತಿಯೇ ದೇವರು, ಜಾತಿ ರಹಿತ ಸಮಾಜ ನಿರ್ಮಾಣವೇ ಗುರಿ ಎಂದು ಬೋಧಿಸಿದರು.
ನಾರಾಯಣಗುರುಗಳ ಆಶಯದಂತೆ ಶೂದ್ರರನ್ನು ಮೇಲೆತ್ತಲು ಮತ್ತು ಗುರುಗಳ ತತ್ವಗಳನ್ನು ಜನರಿಗೆ ತಲುಪಿಸಲು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾಗಿದ್ದ ಜನರನ್ನು ಮೇಲೆತ್ತಲು ಅವರ ಶಿಷ್ಯರಾದ ಕುಮಾರನ್ ಆಶಾನ್, ಟಿ. ಮಾಧವನ್, ಎಂ. ಗೋವಿಂದನ್, ನಟರಾಜ್, ಡಾ. ಪಲ್ಯು ಮುಂತಾದವರು 1903ರಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ಎಂಬ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆಯು ಕೇರಳದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಶೂದ್ರಾತಿ ಶೂದ್ರರಿಗೆ ದೇವಾಲಯ ಪ್ರವೇಶ, ರಸ್ತೆಗಳಲ್ಲಿ ಓಡಾಡಲು ಸ್ವಾತಂತ್ರ್ಯ, ಸರಕಾರಿ ನೌಕರಿ ಹಕ್ಕು ಮೀಸಲಾತಿ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಕೆಳಜಾತಿ (ಈಡಿಗ) ಯಲ್ಲಿ ಜನಿಸಿ ಜ್ಞಾನವಂತರಾಗಿ ಬುದ್ಧನಂತೆ ಸುಖ ಸಂತೋಷ ತ್ಯಜಿಸಿ ಕಾಲ್ನಡಿಗೆಯಲ್ಲಿ ಕಾಡು ಮೇಡು ಬೆಟ್ಟ ಗುಡ್ಡ ಹಳ್ಳಿ ನಗರಗಳನ್ನು ಅಲೆದು ನೊಂದವರ ಕಣ್ಣೀರು ಒರೆಸಿ ಅವರನ್ನು ಅಜ್ಞಾನದ ಕತ್ತಲಿಂದ ಬೆಳಕಿನ ದಾರಿ ತೋರಿಸುತ್ತಾ ತಮ್ಮ ಪೂರ್ತಿ ಜೀವನವನ್ನು ಶೂದ್ರರ ಉದ್ಧಾರಕ್ಕಾಗಿ ಹಗಲಿರುಳು ದುಡಿದು ಜಾತಿ ವ್ಯವಸ್ಥೆಯ ವಿರುದ್ಧ ಮೌನ ಕ್ರಾಂತಿ ನಡೆಸಿ, ಶೂದ್ರರನ್ನು ದಡ ಮುಟ್ಟಿಸಿದ ಮಹಾನುಭಾವ ನಾರಾಯಣಗುರುಗಳು ತಮ್ಮ ನಿರಂತರ ಕಾರ್ಯದಲ್ಲಿ ಜೀವ ಸವೆಸಿ ಹಣ್ಣಾಗಿ ನಿತ್ರಾಣರಾದರು. ಈ ಮಹಾಚೇತನವು ತಮ್ಮ 72ನೆ ವಯಸ್ಸಿನಲ್ಲಿ 1928, ಅಕ್ಟೋಬರ್ 20ರಂದು ಶೂದ್ರರನ್ನು ತಬ್ಬಲಿ ಮಾಡಿ ಅಗಲಿದರು. ದುರಂತ ಏನೆಂದರೆ, ಆರ್ಯರ (ಬ್ರಾಹ್ಮಣರ) ವರ್ಣ ವ್ಯವಸ್ಥೆಯ ವಿರುದ್ಧ ಮೌನ ಹೋರಾಟ ಮಾಡಿ ಈಡಿಗ ಮತ್ತು ಕೆಳ ಜಾತಿಗಳನ್ನು ಉದ್ಧಾರ ಮಾಡಿದಂತಹ ನಾರಾಯಣಗುರುಗಳ ಅನುಯಾಯಿಗಳಾದ ಕರ್ನಾಟಕದ ಈಡಿಗರು ತಮ್ಮ ಒಣ ಶ್ರೇಷ್ಠತೆ ತೋರಿಸಲು ‘ಕರ್ನಾಟಕ ಆರ್ಯ ಈಡಿಗರ ಸಂಘ’ ಎಂದು ಹೆಸರಿಟ್ಟುಕೊಂಡಿದ್ದಾರೆ. ಇಂತಹ ಮತಿಹೀನರನ್ನು ಪ್ರಜ್ಞಾವಂತರನ್ನಾಗಿ ಮಾಡಲು ನಾರಾಯಣ ಗುರುಗಳು ಮತ್ತೆಷ್ಟು ಸಾರಿ ಹುಟ್ಟಿ ಬರಬೇಕೊ?
ನಾರಾಯಣಗುರುಗಳು ಯಾವ ವ್ಯವಸ್ಥೆಯ ವಿರುದ್ಧ ಹೋರಾಡಿದ್ದರೊ ಅಂತಹವರ ಸಂಘಟನೆಗಳೊಂದಿಗೆ ಈಡಿಗ ಯುವಕರು ಸೇರಿಕೊಂಡು ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗೆ ಬಲಿಯಾಗುತ್ತಿದ್ದಾರೆ. ಆದರೆ ಇವರನ್ನು ಸಂಘಟನೆಗೆ ಸೇರಿಸಿಕೊಂಡ ವೈದಿಕರ ಮಕ್ಕಳು ಮಾತ್ರ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಸಂಬಳ ಪಡೆದು ಆರಾಮವಾಗಿ ಬದುಕುತ್ತಿದ್ದಾರೆ. ಆದರೆ ಶೂದ್ರ ತರುಣರು ಮಾತ್ರ ಪೊಲೀಸ್, ಕೋರ್ಟುಗಳಿಗೆ ಅಲೆದಾಡುತ್ತ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ಈಡಿಗ ಯುವಕರು ವೈದಿಕರ ಗುಲಾಮರಾಗದೆ ನಾರಾಯಣಗುರುಗಳನ್ನು ಅನುಸರಿಸಬೇಕಾಗಿದೆ.