ಮಳೆ ಅಂದ್ರೆ ಎಲ್ಲರಿಗೂ ಇಷ್ಟ...
ಸುರಿಯುವ ಸೋನೆ ಮಳೆಯಲ್ಲಿ ನೆನೆಯುವ ಆಸೆ. ನೀಲಿ, ಕೆಂಪು, ಹಸಿರು ನಾನಾ ತರಹದ ಬಣ್ಣ ಬಣ್ಣದ ಹಾಳೆಗಳಿಂದ ಕಾಗದದ ದೋಣಿಗಳನ್ನು ತೇಲಿಬಿಡುವ ಆಸೆ. ಮನೆಯ ಮಾಳಿಗೆಯ ಕಿಂಡಿಯಲ್ಲಿ ಸುರಿಯುವರಭಸದ ನೀರಿಗೆ ಬೆತ್ತಲೆಯಾಗಿ ಮೈಯೊಡ್ಡುವ ಆಸೆ. ಮೊಣಕಾಲವರೆಗೂ ನಿಂತ ನೀರಿನ ಜೊತೆ ಚೆಲ್ಲಾಟವಾಡುವ ಆಸೆ.
ಸಂಜೆ ಸಮಯ. ಭೂಮಿಯನ್ನು ಅಪ್ಪಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ನಾಮುಂದು ತಾ ಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣು ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ.
ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತವೆ ತುದಿಗಾಲ ಮೇಲೆ ಬೊಗಸೆಗಣ್ಣನ್ನು ಅರಳಿಸುತ್ತಾ.
ಎಲ್ಲೆಲ್ಲೂ ಅಣಬೆಗಳು ಜಡಿಮಳೆಗೆ ಭೂಮಿ ನನೆಯುವುದನ್ನು ತಪ್ಪಿಸಲು ಕ್ಷಣ ಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿಚಾಮರ ಕಂಡಂತೆ. ಪುಟು ಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಫುಟ್‌ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ.
ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದುರಿ ಮುದುಡಿಕೊಂಡ ಗಿಡಗಳು ಮೆಲ್ಲನೆಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ.
ಕೊಟ್ಟಿಗೆಯಲ್ಲಿ ಧೂಳು ಬಡಿದುಕೊಂಡ ನೇಗಿಲು, ಬಾರುಕೋಲು, ಕೆಲಸವಿಲ್ಲದೆ ಮಲಗಿದ್ದರಾಮ-ಲಕ್ಷಣ ಹೆಸರಿನ ಎತ್ತುಗಳು ತಯಾರಾಗಿ ನಿಲ್ಲುತ್ತವೆ ಭೂಮಿಯ ಉದರಕ್ಕೆ ಕಾಳು ಹರಡಲು. ಕಾಳು ಬಸಿರೊಡೆದು ಸಸಿಯಾಗಲು ಜಡಿದು ಬರುವ ಮಳೆ ನೆರವಾಗಲು ಹವಣಿಸುತ್ತದೆ.
ಮಳೆ ಅಂದ್ರೆ ಎಲ್ಲರಿಗೂ ಇಷ್ಟ.
ನನಗೂ....
ಹೃದಯಕ್ಕೆ ಬರಗಾಲ ಬಿದ್ದ ಸಮಯದಲ್ಲಿ ಸುರಿದ ಸೋನೆ ಮಳೆಯೊಂದಿಗೆ ಮುನಿಸಿಕೊಳ್ಳುತ್ತಲೆ, ಅಪ್ಪಿಕೊಳ್ಳುತ್ತಾ, ಮುದ್ದಾಡುತ್ತಾ, ತನುಮನವನ್ನು ಅರ್ಪಿಸಿಕೊಳ್ಳಲು ತುದಿಗಾಲ ಮೇಲೆ ನಿಂತ ಸಮಯ. ನೋಡ ನೋಡುತ್ತಲೇ ಸುರಿದ ಮಳೆಗೆ ಮೈಯೊಡ್ಡಿ ಆಲಿಕಲ್ಲುಗಳನ್ನು ಬೊಗಸೆಗಟ್ಟಲೆ ಹೆಕ್ಕಿ ನನ್ನವಳಿಗೆ ಕೊಡುತ್ತಿದ್ದ ದಿನಗಳಿಗೆ ಕಾತರಿಸುತ್ತಿದ್ದ ಸಮಯದಲ್ಲಿ ಬಿರುಸಾಗಿ ಸುರಿದ ಮಳೆಯಲ್ಲಿ ಪುಟ್ಟ ಪೋರನಂತೆ ಅಲೆದಾಡಿ ಶೀತ, ಜ್ವರ ಬಂದು ಅಪ್ಪನ ಕೈಲಿ ಹೊಡೆಸಿಕೊಂಡ ಆ ದಿನಗಳು ನಿಜಕ್ಕೂ ಚಂದ.
ಹಿತ್ತಲ ಮನೆಯ ಬಾಗಿಲಿನಿಂದ ತಪ್ಪಿಸಿಕೊಂಡು ‘‘ಬಾರೋ ಬಾರೋ ಮಳೆರಾಯ’’ ಹಾಡನ್ನು ಗುನುಗುತ್ತಾ ನೆನೆದು ಒಬ್ಬರಿಗೊಬ್ಬರು ಸಕ್ಕಸ್‌ಸುರಗಿ ಆಟವಾಡುವಾಗ ಶಾಲೆಯಲ್ಲಿ ಕೊಟ್ಟ ಹೋಂವರ್ಕ್, ಮನೆ ಯಾವುದು ನೆನಪಾಗುತ್ತಿರಲಿಲ್ಲ. ಎಲ್ಲಿಂದಲೋ ಬಂದ ಅವ್ವ ಬೆನ್ನಿಗೆಗುದ್ದಿದ ಮೇಲೆಯೇ ಮಳೆಯಾಟ ಬಂದ್...! ಅವತ್ತು ಮನೆಯಲ್ಲಿ ಬರೀ ಬೈಗುಳಗಳ ಮಳೆ..!
ಮೂಲೆ ಸೇರಿಏಕಾಂಗಿಯಾಗಿ ಬಸವಳಿದು ಬಿದ್ದಕೊಡೆಯೊಂದು ಹೂವಿನಂತೆ ಅರಳಿ ನಿಲ್ಲಲು ಮಳೆ ಬೇಕೆ ಬೇಕು.ಅಲ್ಲಲ್ಲಿ ತೂತು ಬಿದ್ದು ಹಾಳಾಗಿದ್ದರೆ ಕೆಂಪು ಬಟ್ಟೆಯ ತುಣುಕಿನಿಂದ ಹೊಲಿಗೆ ಹಾಕಿದಾಗ ಮಧುವಣಗಿತ್ತಿಯಂತೆ ಸಿಂಗಾರಗೊಳುತ್ತದೆ. ಅಜ್ಜನ ಸಂಗಾತಿಯಾಗಿರುವ ಛತ್ರಿಯಂತೂ ದುರಸ್ತಿಯಿಂದ ಕೂಡಿ ಕೋಲಿನ ಕೆಲಸಕ್ಕೆ ರಾಜೀನಾಮೆ ನೀಡಲು ರೆಡಿಯಾಗುತ್ತದೆ.ತಲೆಗೊಂದರಂತೆ ಕೊಡೆ ಕೊಳ್ಳಲು ಚಿಕ್ಕಪ್ಪ ಶನಿವಾರದ ಸಂತೆಗೆ ಹಾಜರಾಗುತ್ತಾನೆ ಸುರಿಯುವ ಮೊಂಡು ಮಳೆಯಲ್ಲಿ ಕೊಡೆ ಹಿಡಿದುಕೊಂಡು.
ಮಳೆಯ ಸಂಗಡ ಹರಿದು ಬಂದ ನೀರು ಹಳ್ಳದಲ್ಲಿ ಕೂಡಿ, ನದಿಯಾಗಿ, ಸಾಗರದಲ್ಲಿ ಲೀನವಾಗಿ ಆವಿಯಾಗಿ ಮತ್ತೆ ಭೂಮಿಗೆ ಬರಲು ತುದಿಗಾಲಿನಲ್ಲಿ ನಿಂತಿರುತ್ತದೆ.
ಮಳೆ ಯಾರಿಗೆ ಯಾಕೆ ಇಷ್ಟ:
ಚಿಕ್ಕಮಕ್ಕಳಿಗೆ: ಸುರಿಯುವ ಸೋನೆ ಮಳೆಯಲ್ಲಿ ನೆನೆಯುವ ಆಸೆ. ನೀಲಿ, ಕೆಂಪು, ಹಸಿರು ನಾನಾ ತರಹದ ಬಣ್ಣ ಬಣ್ಣದ ಹಾಳೆಗಳಿಂದ ಕಾಗದದ ದೋಣಿಗಳನ್ನು ತೇಲಿಬಿಡುವ ಆಸೆ. ಮನೆಯ ಮಾಳಿಗೆಯ ಕಿಂಡಿಯಲ್ಲಿ ಸುರಿಯುವರ ಭಸದ ನೀರಿಗೆ ಬೆತ್ತಲೆಯಾಗಿ ಮೈಯೊಡ್ಡುವ ಆಸೆ. ಮೊಣಕಾಲವರೆಗೂ ನಿಂತ ನೀರಿನ ಜೊತೆ ಚೆಲ್ಲಾಟವಾಡುವ ಆಸೆ. ಮರಳಿನ ಮೇಲೆ ಗುಬ್ಬಿಗೂಡು ಕಟ್ಟಿಚಂದದ ಪುಟ್ಟ ಅಣೆಕಟ್ಟು ಕಟ್ಟಿ ಎಲ್ಲಿಂದಲೋ ಹಿಡಿದುತಂದ ಮಳೆಹುಳುವಿನ ಮರಿ, ಕಪ್ಪೆಮರಿ ತಂದು ಕಣ್ಣರಳಿಸಿ ನೋಡುವ ಆಸೆ. ಇದ್ಯಾವುದಕ್ಕೂ ಬಿಡದೆಕಾಡಿಸುವ ಅಪ್ಪನ ಮೇಲೆ ಆಗಾಗ ಉಚಿತವಾಗಿ ಸಿಟ್ಟಾಗುವ ಸಂದರ್ಭ ತಾನಾಗೆ ಒಲಿದು ಬರುತ್ತದೆ.
ಇನ್ನು ಪ್ರೇಮಿಗಳಿಗೆ: ನಲ್ಲೆಯ ಕಿರುಬೆರಳನ್ನು ಹಿಡಿದು ಸಾಲುಮರದ ದಾರಿಗುಂಟ ಮೈಚಳಿ ಬಿಟ್ಟು ಒಬ್ಬರಿಗೊಬ್ಬರು ಅಂಟಿಕೊಂಡು ಅಪ್ಪಿಕೊಂಡು ಮುತ್ತಿನ ಮಳೆ ಸುರಿಸುವ ಆಟ ಇಷ್ಟ.ದಾರಿಯಲ್ಲಿ ಸಿಗುವ ಗುಲ್‌ಮೊಹರ್‌ಗಿಡದ ಕೆಳಗೆ ಕುಳಿತು ಕಣ್ಣಲ್ಲಿ ಕಣ್ಣುಸೇರಿಸಿ ವೌನವಾಗಿ ನೋಡುವಾಗ ದಢಲ್‌ಎಂದು ಬಂದಪ್ಪಳಿಸಿದ ಸಿಡಿಲಿನ ಸದ್ದಿಗೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಕಡೆಗೆ ನಾಚಿಕೆಯಿಂದ ನಕ್ಕು ಸುಮ್ಮನಾಗುವ ಆಟ ಇಷ್ಟ. ಹಾದಿಗುಂಟ ನಡೆಯುವಾಗ ಕೆಂಪು ಬಣ್ಣದ ಕೊಡೆಯನ್ನು ತಿರುಗಿಸುತ್ತಾ ಹನಿಗಳ ಜೊತೆ ಚೆಲ್ಲಾಟವಾಡುವ ಆಟ ಇಷ್ಟ. ಮಳೆಯಿಂದ ನನೆದು ಚಳಿಯಾಗಿ ಬಿಸಿಯುಸಿರ ಬಯಕೆ ಕಟ್ಟೆಯೊಡೆಯುವ ಸಮಯದಲ್ಲಿ ಜಗದ ಪರಿವೆಯಿಲ್ಲದೆ ಒಂದಾಗುವ ಆಟದಲ್ಲಿ ದೂರದಲ್ಲೆಲ್ಲೋ ಅಣಕಿ ನೋಡುವ ಕಾಮನ ಬಿಲ್ಲನ್ನು ಮರೆತು ಬಣ್ಣಬಣ್ಣಗಳ ಭಾವದಲ್ಲಿ ಮಿಂದು ಬೆಚ್ಚಗಾಗುವ ಆಸೆ.
ದೊಡ್ಡವರಿಗೆ: ಮಳೆಸುರಿಯುವಾಗ ಬಿಸಿಬಿಸಿ ಗರಿಗರಿ ಹಪ್ಪಳ, ಸಂಡಿಗೆ ಮಾಡಿ ಮಕ್ಕಳಿಗೆ ಉಣಬಡಿಸುವ ಆಸೆ. ತುಟಿ ಸುಡುವಚಹಾ ಕುಡಿಯುವ ಆಸೆ. ಬಿಡದೆ ‘ಧೋ’ ಎಂದು ಸುರಿಯುವ ಮಳೆಗೆ ಮನೆಯ ಹೆಂಚು ಸರಿಮಾಡಿಕೊಂಡು ಮನೆಯನ್ನು ಬೆಚ್ಚಗಾಗಿ ಇಡುವ ಕೆಲಸ. ಹಿತ್ತಲಿನಲ್ಲಿನ ಕಟ್ಟಿಗೆಗಳು ನನೆಯದಂತೆ ಇಡಲು ತೆಂಗಿನ ಗರಿಗಳನ್ನು ಜೋಡಿಸುವ ಎಡೆಬಿಡೆಯಿಲ್ಲದ ಕೆಲಸ. ಅಕ್ಕನಿಗಂತೂ ತನ್ನ ಜರಿತಾರಿ ಲಂಗಗಳನ್ನು ಒಣಗಿಸುವುದು ಹೇಗೆ ಎಂಬ ಚಿಂತೆಕಾಡತೊಡಗುತ್ತದೆ.
ಅದಕ್ಕೆ ಮಳೆ ಅಂದರೆ ಎಲ್ಲರಿಗೂ ಇಷ್ಟ...
ಬಾ ಮಳೆಯೆ ಬಾ....