×
Ad

ಕಾಶ್ಮೀರ, ಮಣಿಪುರ ಜನತೆಗೆ ಆಫ್ ಸ್ಪಾ ದಿಂದ ಮುಕ್ತಿ ಎಂದು?

Update: 2016-08-21 13:04 IST

ಕಾಶ್ಮೀರದಲ್ಲಿ ಕಳೆದ 26 ವರ್ಷಗಳಿಂದ ಆಫ್‌ಸ್ಪಾ ಎಂಬ ಕರಾಳ ಕಾಯ್ದೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸಾವಿರಾರು ಮಂದಿ ಅಮಾಯಕರು ಅಂಗಹೀನರಾಗಿದ್ದಾರೆ; ಹತ್ಯೆಯಾಗಿದ್ದಾರೆ; ಕಣ್ಮರೆಯಾಗಿದ್ದಾರೆ. ಅಧಿಕೃತವಾಗಿ ಖಚಿತಪಡಿಸದ ಹಲವು ಗೋರಿಗಳಿವೆ; ಮೇಲ್ನೋಟಕ್ಕೆ ಕಾಣುವ ವಿಕಾರ ಮುಖಗಳಿವೆ.

ಬ್ರಿಟಿಷ್ ದಾಸ್ಯದ ಸಂಕೋಲೆಯಿಂದ ಮುಕ್ತಿ ಪಡೆದ ದಿನದ 70ನೆ ವರ್ಷಾಚರಣೆಯನ್ನು ಇತ್ತೀಚೆಗೆ ಸಡಗರ-ಸಂಭ್ರಮದಿಂದ ಇಡೀ ದೇಶ ಆಚರಿಸಿಕೊಂಡಿತು. ಆದರೆ ಸಾಮ್ರಾಜ್ಯಶಾಹಿ ಆಡಳಿತದ ಪ್ರತಿರೂಪವಾದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ-1958ರಿಂದ ಜಮ್ಮು- ಕಾಶ್ಮೀರ ಹಾಗೂ ಮಣಿಪುರ ಜನತೆಗೆ ಸ್ವಾತಂತ್ರ್ಯ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಭಾರತದಲ್ಲಿ ವ್ಯಾಪಕವಾಗಿ ಹರಡಿದ್ದ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ ಸ್ಪಷ್ಟ ರೂಪ ಪಡೆದ ಈ ಕಾಯ್ದೆಯನ್ನು ಮೊತ್ತಮೊದಲ ಬಾರಿಗೆ 1958ರಲ್ಲಿ ದೇಶದಲ್ಲಿ ಜಾರಿಗೆ ತರಲಾಯಿತು. ನಾಗಾ ಹಿಲ್ಸ್ ಪ್ರದೇಶದಲ್ಲಿ ಸರಕಾರಕ್ಕೆ ಸಡ್ಡುಹೊಡೆದು ಭಯೋತ್ಪಾದಕ ಗುಂಪುಗಳ ರಚಿಸಿದ ಪರ್ಯಾಯ ಸರಕಾರವನ್ನು ಮಟ್ಟಹಾಕುವ ಸಲುವಾಗಿ ಈ ಅಸ್ತ್ರ ಬಳಸಲಾಯಿತು. ಯುದ್ಧದಂಥ ಪರಿಸ್ಥಿತಿಯಲ್ಲಿ ಭದ್ರತಾ ಪಡೆಗಳಿಗೆ ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಸಲುವಾಗಿ ಆಂತರಿಕ ಶತ್ರುಗಳ ವಿರುದ್ಧ ಹೋರಾಡಲು ವಿಶೇಷ ಅಸ್ತ್ರವಾಗಿ ಈ ಕಾಯ್ದೆ ಜಾರಿಗೆ ಬಂತು. ಆದರೆ ಇಂದು ಜಮ್ಮು- ಕಾಶ್ಮೀರ ಹಾಗೂ ಮಣಿಪುರದಲ್ಲಿ ಚುನಾಯಿತ ಸರಕಾರಗಳಿವೆ. ಇಂಥ ಸನ್ನಿವೇಶದಲ್ಲಿ, ನಾಗರಿಕ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಬಳಕೆಗೆ ಮೇಲ್ನೋಟಕ್ಕೆ ಸಮರ್ಥನೆ ಸಿಗುವುದಿಲ್ಲ.

ಆಫ್‌ಸ್ಪಾ ಅತ್ಯಂತ ಕ್ರೂರ ಕಾಯ್ದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದು ಕಾರ್ಯಾಚರಣೆಯಲ್ಲಿರುವಾಗ ಆ ಪ್ರದೇಶದ ಜನ ಸದಾ ಭದ್ರತಾ ಪಡೆ ಸಿಬ್ಬಂದಿಯ ಭೀತಿಯ ನೆರಳಲ್ಲೇ ಜೀವನ ಸಾಗಿಸಬೇಕಾಗುತ್ತದೆ. ತಮ್ಮ ದೈನಂದಿನ ಚಟುವಟಿಕೆಗಳಾದ ಕಚೇರಿ ವ್ಯವಹಾರ ಅಥವಾ ಸ್ನೇಹಿತರನ್ನು ಭೇಟಿ ಮಾಡುವಾಗಲೂ ಇಂಥ ಭಯದ ನೆರಳೇ ಆವರಿಸಿರುತ್ತದೆ. ಈ ಪ್ರದೇಶವನ್ನು ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಿರುವುದರಿಂದ ಭದ್ರತಾ ಪಡೆಯ ಸಿಬ್ಬಂದಿ ಯಾರನ್ನು ಬೇಕಾದರೂ ಹಿಡಿದು ಪ್ರಶ್ನಿಸಲು ಅಧಿಕಾರ ಇರುತ್ತದೆ. ಇದು ಕೆಲ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ದುಷ್ಟ ಕ್ರಮವಾಗಿರುತ್ತದೆ ಎಂದರೆ, ಜನರನ್ನು ದೈಹಿಕವಾಗಿ ಗಾಯಗೊಳಿಸುವ, ಅತ್ಯಾಚಾರ ಎಸಗುವ ಕೆಲವೊಮ್ಮೆ ಹತ್ಯೆ ಮಾಡುವಂತಹ ಮಟ್ಟದಲ್ಲೂ ಇರುತ್ತದೆ. ಇಷ್ಟಾಗಿಯೂ ಯಾವುದೇ ಶಿಕ್ಷೆ ಇಲ್ಲದೇ ಬಚಾವ್ ಆಗುತ್ತಾರೆ. ಏಕೆಂದರೆ ಭದ್ರತಾ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ಸುರಕ್ಷೆ ಪಡೆಯುತ್ತಾರೆ.

ಹದಿನಾರು ವರ್ಷಗಳ ಹಿಂದೆ ಅಂದರೆ 2000ನೆ ಇಸ್ವಿ ನವೆಂಬರ್‌ನಲ್ಲಿ, ಮಲೋಮ್ ಹತ್ಯಾಕಾಂಡ ನಡೆಯಿತು. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಹದಿನೆಂಟು ವರ್ಷದ ಯುವಕ ಸೇರಿದಂತೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಹತ್ತು ಮಂದಿಯನ್ನು ನಿರ್ದಯವಾಗಿ ಹತ್ಯೆ ಮಾಡಲಾಯಿತು. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಸಜ್ಜಾಗಿದ್ದ 10 ಮಂದಿ ಅಮಾಯಕರ ವಿರುದ್ಧ ಪ್ರತೀಕಾರದ ಕ್ರಮವಾಗಿ ಭದ್ರತಾ ಪಡೆ ಸಿಬ್ಬಂದಿ ದಾಳಿ ಮಾಡಿದರು. ಎಎಫ್‌ಎಸ್‌ಪಿಎ ಹೆಸರಿನಲ್ಲಿ ಅಮಾಯಕರನ್ನು ಶಿಕ್ಷಿಸಿದ ಈ ಹೇಯ ಕೃತ್ಯಕ್ಕೆ ಯಾವ ಶಿಕ್ಷೆಯೂ ಆಗಲಿಲ್ಲ.

ಕಾಶ್ಮೀರದಲ್ಲಿ ಕಳೆದ 26 ವರ್ಷಗಳಿಂದ ಈ ಕರಾಳ ಕಾಯ್ದೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸಾವಿರಾರು ಮಂದಿ ಅಮಾಯಕರು ಅಂಗಹೀನರಾಗಿದ್ದಾರೆ; ಹತ್ಯೆಯಾಗಿದ್ದಾರೆ; ಕಣ್ಮರೆಯಾಗಿದ್ದಾರೆ. ಅಧಿಕೃತವಾಗಿ ಖಚಿತಪಡಿಸದ ಹಲವು ಗೋರಿಗಳಿವೆ; ಮೇಲ್ನೋಟಕ್ಕೆ ಕಾಣುವ ವಿಕಾರ ಮುಖಗಳಿವೆ. ಪಾಲೆಟ್ ಬಂದೂಕುಗಳಿಂದ ಗಾಯಗೊಂಡ ಸಾವಿರಾರು ಯುವಕರು ದೈಹಿಕ ಹಾಗೂ ಮಾನಸಿಕವಾಗಿ ಭೀತಿ ಎದುರಿಸುತ್ತಿದ್ದಾರೆ. ಕಾಶ್ಮೀರದ ನೀತಿಗೆ ಪರ್ಯಾಯವಾಗಿ ಈ ಕಾಯ್ದೆಯನ್ನು ಸರಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಬರುತ್ತದೆ. ಹಾಗಿದ್ದಲ್ಲಿ ಸರಕಾರ ದೊಡ್ಡ ಪ್ರಮಾದ ಎಸಗುತ್ತಿದೆ.

ಆದರೆ ಭದ್ರತಾ ಪಡೆಗಳ ವಿಶೇಷ ಕಾಯ್ದೆ ಒಂದು ನೀತಿಯಾಗಿ ಎಂದೂ ಯಶಸ್ವಿಯಾಗಿಲ್ಲ. ಏಕೆಂದರೆ ದುರಾಡಳಿತದ ಕಾನೂನು, ಆ ಪ್ರದೇಶದ ಜನಸಾಮಾನ್ಯರನ್ನು ದೂರ ಇಡುವ ಪ್ರಯತ್ನ ಮಾಡುತ್ತದೆ. ಈ ಮೂಲಕ ಜನರ ಅಸಮಾಧಾನವನ್ನು ಹೆಚ್ಚಿಸಲು ಕಾರಣವಾಗಿ, ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುತ್ತದೆ.

ಎರಡನೆಯದಾಗಿ, ಇಂಥ ಕಾಯ್ದೆಯಡಿ ಭದ್ರತಾ ಪಡೆಗಳಿಗೆ ಸುರಕ್ಷೆ ಒದಗಿಸುವುದರಿಂದ, ಸಾಮೂಹಿಕ ಹತ್ಯೆ, ಅತ್ಯಾಚಾರ, ಕಣ್ಮರೆ, ಚಿತ್ರಹಿಂಸೆಯಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ. ಇದರ ಮೂಲಕ ಸರಕಾರ ಆಡಳಿತ ನಡೆಸಲು ನೈತಿಕ ಮತ್ತು ಕಾನೂನುಬದ್ಧ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಕಾಶ್ಮೀರದಲ್ಲಿ ವಾಸ್ತವವಾಗಿ ಆಗಿರುವುದು ಇದೇ. ರಾಜ್ಯದ ಚುನಾಯಿತ ಮುಖ್ಯಮಂತ್ರಿಗೆ ತನ್ನದೇ ರಾಜ್ಯದ ಜನರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.

ಕುತೂಹಲದ ಅಂಶವೆಂದರೆ, ಭದ್ರತಾ ಪಡೆಗಳ ವಿಶೇಷಾಧಿಕಾರ ಕಾಯ್ದೆ ಬಗ್ಗೆ ನ್ಯಾಯಾಂಗ ವ್ಯವಸ್ಥೆ ಹಲವು ಬಾರಿ ಅಪಸ್ವರ ಎತ್ತಿದೆ. 2004ರಲ್ಲಿ ಜೀವನ್ ರೆಡ್ಡಿ ಸಮಿತಿ ಹಾಗೂ 2013ರಲ್ಲಿ ಸಂತೋಷ್ ಹೆಗ್ಡೆ ಸಮಿತಿ ಈ ಕಾಯ್ದೆಯ ಅಂಶಗಳು ಹಾಗೂ ಕಾರ್ಯಾಚರಣೆಯನ್ನು ಪ್ರಶ್ನಿಸಿವೆ. ಇರೋಮ್ ಶರ್ಮಿಳಾ, ಈ ಕರಾಳ ಕಾಯ್ದೆ ವಿರುದ್ಧ ವಿಶ್ವದ ಸುದೀರ್ಘ ಉಪವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡಾ, ಈ ಕಾಯ್ದೆಯಡಿ ಭದ್ರತಾ ಸಿಬ್ಬಂದಿ ಎಸಗುವ ಎಲ್ಲ ಕೃತ್ಯಗಳಿಗೂ ಸುರಕ್ಷೆ ಪಡೆಯಲಾಗದು ಎಂದು ಸ್ಪಷ್ಟಪಡಿಸಿದೆ. ಇಷ್ಟಾಗಿಯೂ ಭಾರತ ಸರಕಾರ ಮಾತ್ರ ಏಕೆ ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಹಾಗೂ ತನ್ನದೇ ನಾಗರಿಕರನ್ನು ಶತ್ರುಗಳಂತೆ ಏಕೆ ಕಾಣುತ್ತಿದೆ?

ಬಹುಶಃ ಇಂಥ ಕಾನೂನು, ಆಡಳಿತಶಾಹಿಗೆ ಒಗ್ಗುತ್ತದೆ. ಇರೋಮ್ ಶರ್ಮಿಳಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದಂತೆ, ಸರಕಾರಹಾಗೂ ಸೇನೆ ಜನರನ್ನು ವಂಚಿಸುವಲ್ಲಿ ಒಂದಾಗುತ್ತವೆ. ಇದರಿಂದ ಎರಡು ಕೂಡಾ ಪ್ರಕ್ಷುಬ್ಧ ಪ್ರದೇಶಗಳ ಫಲಾನುಭವಿಗಳು ಎಂಬ ಭಾವನೆ ಮೂಡುತ್ತದೆ. ಸರಕಾರದ ಅನುದಾನಕ್ಕೆ ಯಾವ ಹಣಕಾಸು ಅಥವಾ ಆಡಳಿತಾತ್ಮಕ ಹೊಣೆಗಾರಿಕೆಯೂ ಇರುವುದಿಲ್ಲ

ಕಾಶ್ಮೀರದಲ್ಲಿ ಕೂಡಾ, ಭಯೋತ್ಪಾದನೆ ಎನ್ನುವುದು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಇದು ಉಳ್ಳವರಿಗೆ ಪೂರಕವಾಗಿದೆ. ಆದರೆ ಜನಸಮುದಾಯ ಮಾತ್ರ ಬಂದೂಕಿಗೆ ಆಹಾರವಾಗುತ್ತಿದೆ. ಭದ್ರತಾ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಮುಂದುವರಿಸುವುದರಿಂದ ಸೇನೆ, ರಾಜಕೀಯ ನಾಯಕತ್ವ, ಪೊಲೀಸ್ ಹಾಗೂ ನಾಗರಿಕ ಆಡಳಿತ ಹಾಗೂ ಪ್ರತ್ಯೇಕತಾವಾದಿಗಳು ಸೇರಿದಂತೆ ಹಲವರಿಗೆ ಲಾಭ ಇದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ದೇಶದ ಕಡುಭ್ರಷ್ಟ ರಾಜ್ಯವಾಗಿ ಮುಂದುವರಿಯುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದರ ಜತೆಗೆ ಸಂತ್ರಸ್ತ ಜನ ಸಮುದಾಯವನ್ನು ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟುವ ಹುನ್ನಾರಕ್ಕೂ ಇದು ಪೂರಕವಾಗುತ್ತದೆ. ಇದರ ಮೂಲಕ ದೇಶದ ಇತರ ಭಾಗಗಳಲ್ಲಿ ಇಂಥ ಹತ್ಯೆಯ ವಿರುದ್ಧ ಪ್ರತಿಭಟನೆಯ ಅಲೆ ಏಳದಂತೆ ಶಿಕ್ಷೆ ವಿಧಿಸಲು ಕೂಡಾ ಇದು ಅಸ್ತ್ರವಾಗುತ್ತದೆ.

ಕಾಶ್ಮೀರ ಹಾಗೂ ಮಣಿಪುರದ ಪ್ರಕ್ಷುಬ್ಧತೆ ಸೃಷ್ಟಿಯಾಗಿರುವುದು ನ್ಯಾಯಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಕಾನೂನು ಮತ್ತು ಹಕ್ಕು ಪ್ರತಿಪಾದನೆಗಾಗಿ. ಈ ಅನಿಷ್ಟ ಕೊನೆಗಾಣಿಸಲು ಇರುವ ಏಕೈಕ ಮಾರ್ಗವೆಂದರೆ ರಾಜೀವ್‌ಗಾಂಧಿಯವರು ನಾಗಾಲ್ಯಾಂಡ್ ವಿಚಾರದಲ್ಲಿ ಕೈಗೊಂಡಂತೆ, ಅಟಲ್ ಬಿಹಾರಿ ವಾಜಪೇಯಿ ಸರಕಾರ ಕಾಶ್ಮೀರದ ಜನರ ಭಾವನೆಗಳನ್ನು ಪುರಸ್ಕರಿಸಲು ನಡೆಸಿದ ಪ್ರಯತ್ನದಂತೆ ಪ್ರಯತ್ನಕ್ಕೆ ಮುಂದಾಗುವುದು. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟವಾಗಿ ನಿರೂಪಿಸಿರುವ ವೌಲ್ಯಗಳನ್ನು ಗೌರವಿಸುವುದು. ನಮ್ಮದೇ ಜನರನ್ನು ಸ್ವತಂತ್ರ್ಯ ಭಾರತದ ಅವಿಭಾಜ್ಯ ಅಂಗ ಎಂದು ಪರಿಗಣಿಸುವುದು ಇಂದಿನ ತುರ್ತು ಅಗತ್ಯ. ನಾವು ಹಾಗೆ ಮಾಡದಿದ್ದರೆ, ಸ್ವಾತಂತ್ರ್ಯ ದಿನಾಚರಣೆ ಎನ್ನುವುದು ಕಾಶ್ಮೀರ ಹಾಗೂ ಮಣಿಪುರ ಜನತೆಗೆ ಅರ್ಥಹೀನ ಕಸರತ್ತು.

ಕೃಪೆ: ಕೌಂಟರ್ ಕರೆಂಟ್ಸ್

Writer - ಪುಷ್ಕರ್ ರಾಜ್

contributor

Editor - ಪುಷ್ಕರ್ ರಾಜ್

contributor

Similar News