ತಮಿಳುನಾಡಿಗೆ ನೀರು ಬಿಡುವುದು ಕಷ್ಟ: ಸಚಿವ ಜಯಚಂದ್ರ
ಬೆಂಗಳೂರು, ಆ. 22: ನಿರೀಕ್ಷಿತ ಪ್ರಮಾಣದ ಮಳೆ ಬೀಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಕಷ್ಟದ ಸ್ಥಿತಿ ಸೃಷ್ಟಿಯಾಗಿದ್ದು, ‘ಸಂಕಷ್ಟ ಸೂತ್ರ’ದನ್ವಯವೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಲ್ಲಿ ನೀರಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ 40ರಿಂದ 45 ಟಿಎಂಸಿ ನೀರು ಬೇಕು. ಆದರೆ, ಕುಡಿಯಲು ರಾಜ್ಯದಲ್ಲಿ ನೀರಿಲ್ಲ, ಇಂತಹ ಸ್ಥಿತಿಯಲ್ಲಿ ತಮಿಳುನಾಡು ಬೆಳೆಗೆ ನೀರು ಕೇಳುತ್ತಿರುವುದು ಸರಿಯಲ್ಲ ಎಂದರು.
ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದರೆ ಮಳೆ ಆಗುವ ಮುನ್ಸೂಚನೆಯಿಲ್ಲ. ಹೀಗಾಗಿ ಕೆಆರ್‌ಎಸ್ ಭರ್ತಿಯಾಗುವುದು ಕಷ್ಟಸಾಧ್ಯ. ಆದುದರಿಂದ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಜಯಚಂದ್ರ ತಿಳಿಸಿದರು.
ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ: ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಕಾಂಗ್ರೆಸ್ ಪಕ್ಷ ಬಿಜೆಪಿ, ಆರೆಸೆಸ್ಸ್‌ನಿಂದ ದೇಶಪ್ರೇಮದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಜಯಚಂದ್ರ, ‘ಗೋ ರಕ್ಷಣೆ’ಯೆಷ್ಟೇ ದೇಶಪ್ರೇಮ ಖಂಡಿತ ಅಲ್ಲ ಎಂದು ಟೀಕಿಸಿದರು.
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಮಾನವ ಹಕ್ಕುಗಳ ಸಂಘಟನೆ. ಕಾಶ್ಮೀರದಲ್ಲಿನ ಹಿಂಸಾಚಾರ ಸಂಬಂಧ ಸಂವಾದ ಏರ್ಪಡಿಸಿದ್ದು, ಸಣ್ಣ ವಿಚಾರವನ್ನು ಬಿಜೆಪಿ, ಎಬಿವಿಪಿಯವರು ದೊಡ್ಡದು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಸಲ್ಲ ಎಂದು ಆಕ್ಷೇಪಿಸಿದರು.
‘ಆಝಾದಿ’ ಘೋಷಣೆ ಕೂಗಿದರೆನ್ನಲಾದ ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಿಜೆಪಿಯವರಿಗೆ ಇದೀಗ ದೇಶಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಲೇವಡಿ ಮಾಡಿದರು.