ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ಪ್ರಣಬ್ ಮೊಹಾಂತಿಗೆ ಕ್ಲೀನ್‌ಚಿಟ್?
ಬೆಂಗಳೂರು, ಆ.22: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರೆಸಿರುವ ಸಿಐಡಿ ಅಧಿಕಾರಿಗಳ ತಂಡ, ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿಗೆ ಕ್ಲೀನ್‌ಚಿಟ್ ನೀಡಿದೆ ಎಂದು ಗೊತ್ತಾಗಿದೆ.
ಡಿವೈಎಸ್ಪಿ ಎಂ.ಕೆ.ಗಣಪತಿ ಅವರಿಗೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅಲ್ಲದೆ, ಗಣಪತಿಗೆ ಕಿರುಕುಳ, ತೊಂದರೆ ನೀಡಿರುವ ಬಗ್ಗೆ ಲಿಖಿತ ದಾಖಲೆಗಳಾಗಲಿ, ನೋಟಿಸ್‌ಗಳಾಗಲಿ ಎಲ್ಲೂ ದೊರೆತಿಲ್ಲ. ಅದೇ ರೀತಿ, ಗಣಪತಿ ಅವರಿಗೆ ಬಡ್ತಿ ನೀಡುವ ವೇಳೆಯಲ್ಲೂ ಮೊಹಾಂತಿ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಡಿವೈಎಸ್ಪಿ ಗಣಪತಿ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಮಾಜಿ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ, ಎ.ಎಂ.ಪ್ರಸಾದ್ ಅವರು ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಈ ಸಂಬಂಧ ಸಿಐಡಿ ತನಿಖೆ ಮುಂದುವರೆಸಿದ್ದಾರೆ.