ಹೆಣ್ಣು ಮಕ್ಕಳಿಗಾಗಿ ವಿಶೇಷ ಯೋಜನೆ! ಸುಳ್ಳು ಜಾತಿ ಪ್ರಮಾಣಪತ್ರ ವಿರುದ್ಧ ಕ್ರಮ

Update: 2016-08-22 18:05 GMT

ಹೊಂಡ ಮುಚ್ಚುವ ಆಧುನಿಕ ಮಿಡಾಸ್-ಟಚ್

 ಮುಂಬೈ ರಸ್ತೆಗಳ ಹೊಂಡಗಳನ್ನು ಮುಚ್ಚಲು ಈಗ ಆಸ್ಟ್ರಿಯಾ ದೇಶದ ಮಿಡಾಸ್-ಟಚ್ ತಾಂತ್ರಿಕ ಶೈಲಿಯನ್ನು ಬಳಸಲಾಗಿದೆ. ಹೊಂಡ ಮುಚ್ಚುವ ಸಮಯ ಟ್ರಾಫಿಕ್ ತಡೆಯಾಗುವ ದೃಶ್ಯಗಳು ಇಲ್ಲಿ ಕಾಣಲಾರದು. ವಾಹನಗಳು ಓಡಾಡುತ್ತಿದ್ದಂತೆಯೇ ಇಲ್ಲಿ ಹೊಂಡವನ್ನು ಮುಚ್ಚಲಾಗುತ್ತದೆ.
 ಮುಂಬೈಯಲ್ಲಿ ಇದುವರೆಗೆ ರಸ್ತೆಗಳನ್ನು ಎಷ್ಟೇ ರಿಪೇರಿ ಮಾಡಿದರೂ ಮತ್ತೆ ಅಲ್ಲಿ ಹೊಂಡಗಳು ಸೃಷ್ಟಿಯಾಗುತ್ತಲೇ ಇರುತ್ತಿದ್ದವು. ದಾದರ್‌ನ ಒಂದು ಹೊಂಡವನ್ನು ಈ ತನಕ 27 ಬಾರಿ ರಿಪೇರಿ ಮಾಡಿದ್ದರೂ ಮತ್ತೆ ಆ ಹೊಂಡ ಬಾಯಿತೆರೆದುಕೊಂಡಿರುವ ಬಗ್ಗೆ ಚರ್ಚೆ ನಡೆದಿತ್ತು. ಸಾಂತಾಕ್ರೂಜ್-ಚೆಂಬೂರ್ ಲಿಂಕ್ ರೋಡ್ ಆರಂಭ ಆಗಿ ಕೇವಲ ಎರಡು ವರ್ಷಗಳಾದರೂ ಅಲ್ಲಿ ಈಗಾಗಲೇ ಲೆಕ್ಕವಿಲ್ಲದಷ್ಟು ಹೊಂಡಗಳು ಬಾಯ್ತೆರೆದುಕೊಂಡಿವೆ. ಬಾಂಬೆ ಹೈಕೋರ್ಟ್ ಅನೇಕ ಸಲ ರಸ್ತೆಗಳ ಹೊಂಡಗಳನ್ನು ಮುಂದಿಟ್ಟು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

ಮಹಾನಗರ ಪಾಲಿಕೆಯ ಚೀಫ್ ಇಂಜಿನಿಯರ್ (ರಸ್ತೆ) ಎಸ್.ಎಸ್. ಕೋರಿ ಸಾಂತಾಕ್ರೂಜ್-ಚೆಂಬೂರ್ ಲಿಂಕ್ ರೋಡ್‌ನ ಹೊಂಡಗಳನ್ನು ಮುಚ್ಚಲು ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. 3 ನಿಮಿಷದಲ್ಲಿ ಹೊಂಡ ಮುಚ್ಚುವ ಈ ತಾಂತ್ರಿಕತೆ ಇಕೋ ಗ್ರೀನ್ ಇನ್ಫ್ರಾಸ್ಟಕ್ಚರ್ ಆ್ಯಂಡ್ ಡೆವಲಪ್‌ಮೆಂಟ್ ಪ್ರೈ.ಲಿ. ಕಂಪೆನಿ ಅದರ ಕೊಡುಗೆ. ಇಲ್ಲಿ ದೊಡ್ಡ ಹೊಂಡ ಮುಚ್ಚಲು ಮಿಡಾಸ್-ಟಚ್‌ನ್ನು ಬಳಸಲಾಗುತ್ತದೆ. ಒಂದು ಹೊಂಡ ರಿಪೇರಿಗಾಗಿ 2 ಸಾವಿರ ರೂಪಾಯಿ ಖರ್ಚು ಬರಲಿದೆ. ಕಂಪೆನಿಯು ಹೊಂಡ ಮುಚ್ಚಿದ ನಂತರ ನಾಲ್ಕರಿಂದ ಐದು ವರ್ಷದ ತನಕ ಗ್ಯಾರಂಟಿ ನೀಡಿದೆ. ಮಿಡಾಸ್-ಟಚ್ ಮೂಲಕ ಹೊಂಡ ತುಂಬಿಸುವ ಕಾಮಗಾರಿಯನ್ನು ವೀಕ್ಷಿಸುವಂತೆ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರಿಗೆ ಆಮಂತ್ರಣ ನೀಡಲಾಗಿತ್ತು. * * *
ಹೆಚ್ಚು ಹುಡುಗಿಯರಿರುವ ಹಳ್ಳಿಗೆ ಸರಕಾರದಿಂದ 5 ಲಕ್ಷ ರೂ.
‘‘ಯಾವ ಹಳ್ಳಿಯಲ್ಲಿ ಹುಡುಗ-ಹುಡುಗಿಯರ ಅನುಪಾತದಲ್ಲಿ ಹುಡುಗಿಯರ ಸಂಖ್ಯೆ ಅಧಿಕ ಇದೆಯೋ ಆ ಊರಿಗೆ ಐದು ಲಕ್ಷ ರೂ.ಗಳನ್ನು ಪುರಸ್ಕಾರ ನೀಡಿ ರಾಜ್ಯ ಸರಕಾರ ಗೌರವಿಸುತ್ತದೆ.’’ ಎಂದು ಮಹಿಳಾ ಮತ್ತು ಬಾಲ ಕಲ್ಯಾಣ ವಿಕಾಸ ಮಂತ್ರಿ ಪಂಕಜಾ ಮುಂಢೆ ಹೇಳಿದ್ದಾರೆ.
ಮಹಾರಾಷ್ಟ್ರ ಸರಕಾರದ ‘ಮಾಝೀ ಕನ್ಯಾ ಭಾಗ್ಯಶ್ರೀ ಯೋಜನಾ’ ಅನ್ವಯ ಸಮಾಜದ ಕಟ್ಟಕಡೆಯ ವ್ಯಕ್ತಿಯ ತನಕ ಯೋಜನೆಯನ್ನು ತಲುಪಿಸುವ ಸರಕಾರದ ಗುರಿಯನ್ನು ತಿಳಿಸಿದ ಅವರು ಹುಡುಗಿಯರ ಜನನ ಪ್ರಮಾಣ ವೃದ್ಧಿಯಾಗುವುದಕ್ಕೆ ಹುಡುಗಿಯರಿಗೆ ಶಿಕ್ಷಣ, ಆರೋಗ್ಯದ ದರ್ಜೆ ಸುಧಾರಿಸಲು ಸರಕಾರ ಈ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸುತ್ತಿದೆ. ಈ ಯೋಜನೆಯಂತೆ ಮೊದಲು ಜನಿಸಿದ ಮಗು ಹುಡುಗಿಯಾಗಿದ್ದರೆ ಸ್ವಾಗತದ ರೂಪದಲ್ಲಿ ಸರಕಾರದಿಂದ 5 ಸಾವಿರ ರೂ. ಎರಡನೇ ಮಗು ಕೂಡಾ ಹುಡುಗಿ ಆದರೆ ಸ್ವಾಗತದ ರೂಪದಲ್ಲಿ ಎರಡೂವರೆ ಸಾವಿರ ರೂಪಾಯಿಗಳ ವರೆಗೆ ನೀಡಲಾಗುತ್ತದೆ. ಇದಲ್ಲದೆ ಹಳ್ಳಿಗಳಲ್ಲಿ ಹುಡುಗಿಯರ ಪಾಲನೆ ಪೋಷಣೆಗೆ ಪ್ರತೀ ವರ್ಷ ಒಂದು ಸಾವಿರದಿಂದ ಮೂರು ಸಾವಿರ ರೂಪಾಯಿ 18 ವರ್ಷ ಪ್ರಾಯವಾಗುವ ತನಕ ನೀಡಲಾಗುತ್ತದೆ ಹುಡುಗಿಗೆ 18 ವರ್ಷ ಪೂರ್ಣಗೊಂಡ ನಂತರ ಒಂದು ಲಕ್ಷ ರೂ. ವಿಮೆ ಸಿಗಲಿದೆ ಎಂದು ಪಂಕಜಾ ಮುಂಢೆ ತಿಳಿಸಿದ್ದಾರೆ.

* * *

ದತ್ತು ಪಡೆಯುವಲ್ಲಿ ಮಹಾರಾಷ್ಟ್ರ ಮುಂದೆ

ಮಹಾರಾಷ್ಟ್ರ ಮಕ್ಕಳನ್ನು ದತ್ತು ಪಡೆಯುವ ಪ್ರಕರಣದಲ್ಲಿ ದೇಶದಲ್ಲೇ ಇತರ ರಾಜ್ಯಗಳಿಗಿಂತ ಮುಂದಿದೆ. ಭಾರತದಲ್ಲಿ ದತ್ತು ಪಡೆಯುವುದಕ್ಕಾಗಿ ಸೆಂಟ್ರಲ್ ಏಜನ್ಸಿ, ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಯಿಂದ ಜಾರಿಗೊಳಿಸಲಾದ ಅಂಕಿ ಅಂಶದ ಅನುಸಾರ, ಈ ವರ್ಷ 2016ರಲ್ಲಿ ಎಪ್ರಿಲ್‌ನಿಂದ ಜೂನ್ ತನಕ ಭಾರತೀಯ ಪಾಲಕರು 800 ಮಕ್ಕಳನ್ನು ದತ್ತು ಪಡೆದಿದ್ದಾರೆ. ಮತ್ತು 102 ಮಕ್ಕಳನ್ನು ವಿದೇಶೀಯರು ದತ್ತು ಪಡೆದಿದ್ದಾರೆ. ಇಲ್ಲಿ ದೇಶದ ರಾಜ್ಯಗಳಲ್ಲಿ ಎಲ್ಲಕ್ಕಿಂತ ಮುಂದೆ ಮಹಾರಾಷ್ಟ್ರ ಇದೆ. ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ 159 ಮಕ್ಕಳನ್ನು ದತ್ತು ಪಡೆಯಲಾಗಿದೆ. ಇವರಲ್ಲಿ 26 ಮಕ್ಕಳನ್ನು ವಿದೇಶದಿಂದ ಪಡೆಯಲಾಗಿದೆ.

ಮಹಾರಾಷ್ಟ್ರದಲ್ಲಿ ದತ್ತು ಪಡೆದ ಮಕ್ಕಳ ಸಂಖ್ಯೆ 2013-2014ರಲ್ಲಿ 1,068 ಇತ್ತು. 2014 -2015ರಲ್ಲಿ 947 ಮತ್ತು 2015-2016ರಲ್ಲಿ 724 ಆಗಿರುತ್ತದೆ. 2015ರ ಆಗಸ್ಟ್ ನಂತರ ದತ್ತು ಪ್ರಕ್ರಿಯೆಯ ತಿದ್ದುಪಡಿ ಮಾಡಲಾದ ನಿರ್ದೇಶನಗಳು ಪೂರ್ಣ ರೂಪದಿಂದ ಆನ್‌ಲೈನ್ ಆಗಿದೆ.

* * *

ಮನಪಾದಿಂದ ಗಣೇಶ ಮಂಡಲಗಳಿಗೆ ಶುಲ್ಕ ಹಿಂದೆಗೆತ

ಮುಂಬೈ ಮಹಾನಗರ ಪಾಲಿಕೆ ಒಂದು ಸುತ್ತೋಲೆ ಜಾರಿಗೊಳಿಸಿತ್ತು ಹಾಗೂ ಸಾರ್ವಜನಿಕ ಗಣೇಶ ಮಂಡಲಗಳಿಂದ ಶುಲ್ಕದ ರೂಪದಲ್ಲಿ 500 ರಿಂದ ಒಂದು ಸಾವಿರ ರೂಪಾಯಿ ಕಟ್ಟಲು ಸೂಚಿಸಿತ್ತು. ಆದರೆ ಶಿವಸೇನೆ ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಗಣೇಶ ಮಂಡಲಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತವೆ, ಇದರಲ್ಲಿ ಸಾರ್ವಜನಿಕ ಸಂದೇಶವಿರುತ್ತದೆ. ಹೀಗಿರುವಾಗ ಬೇರೆ ಕಾರ್ಯಕ್ರಮಗಳಂತೆ ಶುಲ್ಕ ವಸೂಲಿ ಮಾಡೋದು ತಪ್ಪುಎಂದಿತು. ಅನಂತರ ಈ ಸುತ್ತೋಲೆಯನ್ನು ವಾಪಸ್ ಪಡೆಯುವ ಬೇಡಿಕೆಗೆ ಆಡಳಿತ ಒಪ್ಪಿಗೆ ನೀಡಿತು.

* * *

ಟ್ರಾಫಿಕ್ ಪೊಲೀಸರಿಗೆ ವಿದ್ಯಾರ್ಥಿಗಳ ನೆರವು

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಈಗಾಗಲೇ ದೊಡ್ಡ ದೊಡ್ಡ ಗಣೇಶ ಪ್ರತಿಮೆಗಳನ್ನು ಪರೇಲ್‌ನ ಗಣೇಶನ ವಿಗ್ರಹ ತಯಾರಿಸುವ ಕಾರ್ಖಾನೆಗಳಿಂದ ಆಯಾಯ ಪೆಂಡಾಲ್‌ಗಳಿಗೆ ತರಲಾಗಿದೆ. ಅಂಧೇರಿಯಲ್ಲಿ ಪೊಲೀಸರು ಒಂದು ದೊಡ್ಡ ಮಂಡಳಿಗೆ ನಮ್ಮ ವ್ಯಾಪ್ತಿಯಲ್ಲಿ ಮೆರವಣಿಗೆ ಬೇಡ. ಹೈವೇಯಲ್ಲಿ ಹೋಗಿ ಅಲ್ಲಿಂದ ತಿರುಗಿಸಿ ಎಂದದ್ದು ಈಗ ವಿವಾದವಾಗಿದೆ. ನವಿಮುಂಬೈ ಪೊಲೀಸರು ಟ್ರಾಫಿಕ್ ಮಿತ್ರ ಹೆಸರಿನ ಯೋಜನೆಯೊಂದು ಪ್ರಕಟಿಸಿದ್ದಾರೆ. ಇದಕ್ಕಾಗಿ ಇಚ್ಛಿತ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಕೂಡಾ ನೀಡಲಾಗುತ್ತಿದೆ. ಪ್ರಥಮ ಚಿಕಿತ್ಸೆ ಉಪಚಾರ ಕೂಡಾ ತರಬೇತಿಯಲ್ಲಿ ಸೇರಿದೆ. ಪನ್ವೇಲ್‌ನಲ್ಲಿ ಈಗಾಗಲೇ 300 ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ಪನ್ವೇಲ್ ಪರಿಸರದಲ್ಲಿ ಹೈವೇ ಹಾದು ಹೋಗುವ ಕಾರಣ ಅಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತದೆ. ಜೆಎನ್‌ಪಿಡಿ ಬಂದರಿಗೆ ಹೋಗುವ ವಾಹನಗಳ ದೊಡ್ಡ ಸಾಲು ಇರುತ್ತದೆ. ಹಬ್ಬಗಳ ಕಾರಣ ಇನ್ನಷ್ಟು ಟ್ರಾಫಿಕ್ ನಿಭಿಡತೆ ಇರುತ್ತದೆ. ಇದಲ್ಲದೆ ನವಿ ಮುಂಬೈಯಲ್ಲಿ ಟ್ರಾಫಿಕ್ ಪೊಲೀಸರ ಸಂಖ್ಯೆಯೂ ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡಿ ಅವರ ಸಹಾಯ ಪಡೆಯಲಾಗುತ್ತಿದೆ.

* * *
ಸುಳ್ಳು ಜಾತಿ ಸರ್ಟಿಫಿಕೇಟ್ ನೀಡಿದವರ ವಿರುದ್ಧ ಎಫ್‌ಐಆರ್

ಮುಂಬೈಯ ಜೆ.ಜೆ. ಪೊಲೀಸ್ ಠಾಣೆಯಲ್ಲಿ ಪ್ರಖ್ಯಾತ ಜೆ.ಜೆ. ಆಸ್ಪತ್ರೆಗೆ ಸಂಬಂಧಿಸಿದ ಗ್ರ್ಯಾಂಟ್ ಮೆಡಿಕಲ್ ಕಾಲೇಜ್‌ನ 9 ಮೆಡಿಕಲ್ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಜಾತಿ ಸರ್ಟಿಫಿಕೇಟ್ ನೀಡಿ ಪ್ರವೇಶ ಪಡೆದಿರುವ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿ.ಪಿ. (ಆಪರೇಶನ್) ಅಶೋಕ್ ದುಧೆ ತಿಳಿಸಿದಂತೆ ಈ ಎಫ್‌ಐಆರ್ ಐಪಿಸಿ ಯ ಕಲಂ 420, 457 ಮತ್ತು 468ರ ಅನ್ವಯ ದಾಖಲಿಸಲಾಗಿದೆ. ಇದು ವಂಚನೆಗೆ ಸಂಬಂಧಿಸಿದ್ದಾಗಿದೆ. ಪೊಲೀಸರಿಗೆ ಅನ್ಯ ಸರಕಾರಿ ಮೆಡಿಕಲ್ ಕಾಲೇಜ್‌ಗಳಲ್ಲೂ ಇಂತಹ ವಂಚನೆ ನಡೆಸಿ ಪ್ರವೇಶ ಪಡೆದಿರುವವರು ಇರುವುದಾಗಿ ಸಂಶಯ ಬಂದಿದೆ.
ನಕಲಿ ಜಾತಿ ಸರ್ಟಿಫಿಕೇಟ್‌ನಿಂದ ಪ್ರವೇಶ ಪಡೆದಿರುವ ಮೆಡಿಕಲ್ ವಿದ್ಯಾರ್ಥಿಗಳ ವಿಷಯವಾಗಿ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಈ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಸಮೀಕ್ಷೆ ನಡೆಸುವ ಘೋಷಣೆ ಮಾಡಿದೆ. ಎಸ್ಸಿ ಮತ್ತು ಎಸ್ಟಿ ಕೋಟಾದಡಿ ಪ್ರವೇಶ ಪಡೆದಿರುವವರು ಈಗ ತನಿಖೆ ಎದುರಿಸಲಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಸರಕಾರವು ಈ ರೀತಿಯಲ್ಲಿ ಪ್ರವೇಶ ಪಡೆದಿರುವ 19 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕಾಲೇಜ್‌ನಿಂದ ಹೊರಹಾಕಿದೆ. ಇವರಲ್ಲಿ 9 ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗಾಗಿ ಪ್ರತೀ ಮೆಡಿಕಲ್ ಕಾಲೇಜ್‌ಗಳಲ್ಲಿ ಅನೇಕ ಸೀಟು ಮೀಸಲಿರುತ್ತವೆ. ಇದರ ಲಾಭವನ್ನು ಎತ್ತಿ ಕೆಲವರು ನಕಲಿ ಜಾತಿ ಸರ್ಟಿಫಿಕೇಟ್ ನೀಡಿ ಪ್ರವೇಶ ಗಿಟ್ಟಿಸಿಕೊಳ್ಳುವುದು ಕಂಡು ಬಂದಿದೆ.

* * *
ಹೈಕೋರ್ಟ್ ಆದೇಶದ ಹೊರತೂ ಪ್ಲ್ಯಾಸ್ಟಿಕ್ ಧ್ವಜ ಮಾರಾಟ

ಬಾಂಬೆ ಹೈಕೋರ್ಟ್ 2015ರಲ್ಲಿ ಪ್ಲ್ಯಾಸ್ಟಿಕ್‌ನ ರಾಷ್ಟ್ರಧ್ವಜಗಳ ಮಾರಾಟವನ್ನು ನಿಷೇಧಿಸಲು ಆದೇಶ ನೀಡಿತ್ತು. ಆದರೆ ಈ ಬಾರಿಯೂ ಮುಂಬಯಿ ನಗರ-ಉಪನಗರಗಳ ಸಹಿತ ಅನೇಕ ಕಡೆ ಪ್ಲ್ಯಾಸ್ಟಿಕ್‌ನ ಧ್ವಜಗಳನ್ನು ಮಾರಾಟ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈಗಲೂ ದೊಡ್ಡ ಪ್ರಮಾಣದಲ್ಲಿ ಪ್ಲ್ಯಾಸ್ಟಿಕ್‌ನ ಧ್ವಜ ಸ್ಟಾಕ್ ಇವೆ. ಮಾರ್ಚ್ 2015ರಲ್ಲಿ ಪ್ಲ್ಯಾಸ್ಟಿಕ್‌ನ ರಾಷ್ಟ್ರೀಯ ಧ್ವಜವನ್ನು ಮಾರುವುದಕ್ಕೆ ನಿಷೇಧ ಹೇರಿತ್ತು. ರಾಜ್ಯ ಸರಕಾರಕ್ಕೂ ಈ ದಿಕ್ಕಿನಲ್ಲಿ ಕಠಿಣ ಕಾನೂನು ರಚನೆಗೆ ಆದೇಶಿಸಿತ್ತು. ಆದರೆ ಆದೇಶದ ಪಾಲನೆ ಮಾಡಿರುವುದು ಕಂಡು ಬಂದಿಲ್ಲ. 10 ರೂಪಾಯಿ, 20 ರೂಪಾಯಿಗೆ (ವಾಹನಗಳಲ್ಲಿ ತಾಗಿಸಲು) ಪ್ಲ್ಯಾಸ್ಟಿಕ್ ಧ್ವಜಗಳನ್ನು ಮಾರುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂದಿತ್ತು. ಪ್ಲ್ಯಾಸ್ಟಿಕ್ ಧ್ವಜ ಸ್ವಾತಂತ್ರ್ಯ ದಿನದ ನಂತರ ಅಲ್ಲಲ್ಲಿ ರಸ್ತೆ ಬದಿ ಬಿದ್ದಿದ್ದು ಜನರು ಅದನ್ನು ತುಳಿದುಕೊಂಡು ಹೋಗುವ ಸ್ಥಿತಿ ಇರುತ್ತದೆ.

* * *
ಹಣ ಸಿಕ್ಕಿದ್ದಿದ್ದರೆ ಕಿಡ್ನಿಕಾಂಡ ಬೆಳಕಿಗೆ ಬರುತ್ತಿರಲಿಲ್ಲ!

ಮುಂಬೈಯ ಪ್ರಸಿದ್ಧ ಹೀರಾನಂದಾನಿ ಆಸ್ಪತ್ರೆಯಲ್ಲಿನ ಅಕ್ರಮ ಕಿಡ್ನಿ ಕಸಿ ಜಾಲದ ನಂತರ ಈ ಪ್ರತಿಷ್ಠಿತ ಆಸ್ಪತ್ರೆ ಕೂಡಾ ಭ್ರಷ್ಟಾಚಾರ ನಡೆಸುತ್ತಿರು ವುದು ಬಹಿರಂಗವಾಗಿದೆ. ಈಗಾಗಲೇ ಐವರು ವೈದ್ಯರುಗಳನ್ನೂ ಬಂಧಿಸಲಾ ಗಿದೆ. ಸರಕಾರ ಈಗಾಗಲೇ ತ್ರಿಸದಸ್ಯ ತನಿಖಾ ಸಮಿತಿಯನ್ನೂ ನೇಮಿಸಿದೆ.
ಒಂದೊಮ್ಮೆ 23 ವರ್ಷದ ಯುವಕನೊಬ್ಬನಿಗೆ ಹೇಳಿದಷ್ಟು ಹಣ ಕೊಟ್ಟಿದ್ದರೆ ಬಹುಶ: ಈ ಪ್ರಕರಣ ಇನ್ನೂ ಬಹಿರಂಗಕ್ಕೆ ಬರುತ್ತಲೆ ಇರಲಿಲ್ಲವೇನೋ! ಯುವಕ ಜುಲೈ 6ರಂದು ತನ್ನ ಒಬ್ಬ ಸ್ನೇಹಿತನಿಗೆ ತಾನು ಕಿಡ್ನಿ ನೀಡಿದ್ದರೂ ಇನ್ನೂ ಹೇಳಿದ ಹಣ ಬಂದಿಲ್ಲ ಎಂದು ಗೋಳು ತೋಡಿಕೊಂಡದ್ದು, ಅನಂತರ ಅವರಿಬ್ಬರೂ ಒಬ್ಬ ಸಮಾಜ ಸೇವಕನ ಸಹಾಯದಿಂದ ಹೀರಾನಂದಾನಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಕ್ರಮ ಕಿಡ್ನಿ ಕಸಿ ರ್ಯಾಕೆಟ್ ಕಾಂಡ ಬಹಿರಂಗ ಪಡಿಸಿದ್ದರಿಂದ ಈ ಭಯಂಕರ ಕೃತ್ಯ ಬೆಳಕಿಗೆ ಬರುವಂತಾಯಿತು ಎಂದು ತಿಳಿದುಬಂದಿದೆ. ನಂತರ ಐವರು ಡಾಕ್ಟರ್‌ಗಳ ಸಹಿತ ಈ ತನಕ 14 ಜನರನ್ನು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News