×
Ad

ಐದು ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

Update: 2016-08-23 23:55 IST

ಬೆಂಗಳೂರು, ಆ. 23: ಭ್ರಷ್ಟಾಚಾರದ ದೂರು ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಎರಡು ಮತ್ತು ಮೂರು ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ರೂ. 1.36 ಲಕ್ಷಕ್ಕೂ ಅಧಿಕ ಮೊತ್ತದ ಅಕ್ರಮ ಹಣವನ್ನು ಪತ್ತೆ ಮಾಡಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ನಿರ್ದೇಶನದಂತೆ ಬೆಂಗಳೂರು ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್, ಬೆಂ.ಗ್ರಾಮಾಂತರ ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ಮೈಸೂರು ಲೋಕಾಯುಕ್ತ ಎಸ್ಪಿ ರವಿಕುಮಾರ್, ಹಾಸನ ಎಸ್ಪಿ ಪವನ್ ನೆಜ್ಜೂರು ನೇತೃತ್ವದ ತಂಡಗಳು ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಪರಿಶೀಲನೆ ಕಾರ್ಯ ಕೈಗೊಂಡಿದ್ದವು.ಂಧ್ರಪ್ರದೇಶದ ಗಡಿ ಭಾಗದ ಬಾಗೇಪಲ್ಲಿಯ ನಂಗಲಿ, ಬಳ್ಳಾರಿ ಜಿಲ್ಲೆಯ ಹಗರಿ, ಹೊಸಪೇಟೆ ಟಿ.ಬಿ.ಡ್ಯಾಂನ ವಾಣಿಜ್ಯ ತೆರಿಗೆ ಇಲಾಖೆ-2 ಹಾಗೂ 3 ಆರ್‌ಟಿಒ ಚೆಕ್ ಪೋಸ್ಟ್‌ಗಳ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿತ್ತು.
ಬಾಗೇಪಲ್ಲಿ ಸಾರಿಗೆ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ ಒಟ್ಟು 1,70,980 ರೂ. ನಗದು ಪತ್ತೆಯಾಗಿದ್ದು, ದಾಖಲೆಗಳನ್ವಯ-76,041ರೂ. ಇರಬೇಕಿತ್ತು. ಹೆಚ್ಚುವರಿಯಾಗಿ 94,936 ರೂ. ಪತ್ತೆಯಾಗಿದ್ದು, ಓರ್ವ ಖಾಸಗಿ ಏಜೆಂಟ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಂಗಲಿ ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ನಲ್ಲಿ ಒಟ್ಟು 16,185 ರೂ.ಪತ್ತೆಯಾಗಿದ್ದು, ದಾಖಲೆಗಳನ್ವಯ 10,580 ರೂ., ಹೆಚ್ಚುವರಿಯಾಗಿ 5,605 ರೂ. ಪತ್ತೆಯಾಗಿದೆ. ಅದೇ ರೀತಿ ಹೊಸಪೇಟೆ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ 22,790 ರೂ. ಪತ್ತೆಯಾಗಿದ್ದು, ಅಷ್ಟು ಮೊತ್ತವೂ ಅನಧಿಕೃತ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇದರಲ್ಲಿ ಐದು ಮಂದಿ ಖಾಸಗಿ ಏಜೆಂಟ್‌ಗಳಿರುವುದು ತಿಳಿದುಬಂದಿದೆ.
ಬಳ್ಳಾರಿಯ ಹಗರಿ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ 54,410 ರೂ. ಪತ್ತೆಯಾಗಿದ್ದು, ದಾಖಲೆಗಳ ಪ್ರಕಾರ- 44,800 ರೂ. ಇರಬೇಕು. 11,610 ರೂ. ಹೆಚ್ಚುವರಿ ಮೊತ್ತ ಇರುವುದು ಕಂಡು ಬಂದಿದೆ. ಅದೇ ರೀತಿ ವಾಣಿಜ್ಯ ಚೆಕ್‌ಪೋಸ್ಟ್‌ನಲ್ಲಿ ಒಟ್ಟು 16,890 ರೂ. ಪತ್ತೆಯಾಗಿದ್ದು, ದಾಖಲೆಗಳ ಪ್ರಕಾರ 15,300 ರೂ., ಹೆಚ್ಚುವರಿಯಾಗಿ 1,590 ರೂ. ಇರುವುದು ಬೆಳಕಿಗೆ ಬಂದಿದೆ.
ವಾಣಿಜ್ಯ ತೆರಿಗೆ ಮತ್ತು ಆರ್‌ಟಿಒ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಹಾಗೂ ಭಾರೀ ವಾಹನ ಚಾಲಕರ ಮಧ್ಯೆ ಅಪವಿತ್ರ ಮೈತ್ರಿಯಿರುವುದು ಲೋಕಾಯುಕ್ತ ಅಧಿಕಾರಿಗಳ ತನಿಖೆಯಿಂದ ಬಯಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ಖಚಿತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News