×
Ad

ಅಶಾಂತಿ ಸೃಷ್ಟಿಸಲು ಸಂಘಪರಿವಾರದಿಂದ ಹುನ್ನಾರ: ಉಗ್ರಪ್ಪಗಂಭೀರ ಆರೋಪ

Update: 2016-08-24 00:02 IST

ಬೆಂಗಳೂರು,ಆ. 23: ಕೇಂದ್ರ ಸರಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ರಾಷ್ಟ್ರೀಯತೆ, ದೇಶಭಕ್ತಿ ವಿಚಾರಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಆರೋಪಿಸಿರುವ ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ, ‘ಆಮ್ನೆಸ್ಟಿ’ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಘ ಪರಿವಾರ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಮ್ನೆಸ್ಟಿ’ ಇಂಟರ್ ನ್ಯಾಶನಲ್ ಸಂಸ್ಥೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ. ಆ ಸಂಘಟನೆ ತಪ್ಪು ಮಾಡಿದ್ದರೆ ಕೇಂದ್ರ ಸರಕಾರ ನಿಷೇಧ ಹೇರಲಿ. ಅದು ಬಿಟ್ಟು ಕ್ಷುಲ್ಲಕ ರಾಜಕೀಯ ಸಲ್ಲ ಎಂದು ಆಕ್ಷೇಪಿಸಿದರು.
ಮೋದಿ ಆಡಳಿತಕ್ಕೆ ಬರುವ ಮೊದಲು ದೇಶದ ಜನತೆಗೆ ಅಂಗೈಯಲ್ಲಿ ಸ್ವರ್ಗ ತೋರಿಸಿತ್ತು. ಆದರೆ, ಇದೀಗ ದೇಶದ ರೈತರು, ಸೈನಿಕರು, ಕಾಶ್ಮೀರ ಸಮಸ್ಯೆ ಇತ್ಯರ್ಥ ಸೇರಿದಂತೆ ನಾಗರಿಕರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ದೇಶಭಕ್ತಿ ಮತ್ತು ರಾಷ್ಟ್ರಪ್ರೇಮ ಆರೆಸೆಸ್ಸ್, ಬಿಜೆಪಿಯ ಗುತ್ತಿಗೆಯಲ್ಲ. ಸ್ವಾತಂತ್ರ ಹೋರಾಟದಲ್ಲಿ ತ್ಯಾಗ-ಬಲಿದಾನದ ಇತಿಹಾಸವುಳ್ಳ ಕಾಂಗ್ರೆಸ್, ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದ ಅವರು, ಎಬಿವಿಪಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದು, ಇದಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ದಿಕ್ಕು ತಪ್ಪಿಸುವ ಯತ್ನ: ದೇಶದಲ್ಲಿನ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿರುವ ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿಯ ಆಟ ನಡೆಯುವುದಿಲ್ಲ ಎಂದು ಶಾಸಕ ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.
ಶೈಕ್ಷಣಿಕ ವಿಚಾರಗಳಿಗೆ ಹೋರಾಟ ನಡೆಸುವುದನ್ನು ಕೈಬಿಟ್ಟಿರುವ ಎಬಿವಿಪಿ, ಅಮಾಯಕ ವಿದ್ಯಾರ್ಥಿಗಳನ್ನು ಪ್ರಚೋದನಾಕಾರಿ ಕೃತ್ಯಗಳಿಗೆ ದುರ್ಬಳಕೆ ಸಲ್ಲ. ‘ಆಮ್ನೆಸ್ಟಿ’ ಸಂವಾದದಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಎಚ್.ಎಂ.ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಲ್ಮನೆ ಸದಸ್ಯ ಅಬ್ದುಲ್ ಜಬ್ಬಾರ್ ಹಾಜರಿದ್ದರು.

‘ಭ್ರಷ್ಟಾಚಾರದ ಹಿನ್ನೆಲೆಯಲ್ಲಿ 2011ರಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು 2018ರ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯೆಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಘೋಷಿಸಿರುವುದು ಆ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ’
 ವಿ.ಎಸ್.ಉಗ್ರಪ್ಪ,
ಮೇಲ್ಮನೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News