ಕಲಬುರಗಿಯಲ್ಲಿ ಮಿಲ್ಲಿಕೌನ್ಸಿಲ್ ರಾಷ್ಟ್ರೀಯ ಸಮಾವೇಶ: ಮುಫ್ತಿ ಅಶ್ರಫ್ ಅಲಿ
ಬೆಂಗಳೂರು, ಆ.23: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಸಮಾವೇಶವನ್ನು ಆ.27 ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದುಅಮೀರೆ ಶರಿಯತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ತಿಳಿಸಿದ್ದಾರೆ.
ಮಂಗಳವಾರ ನಗರದ ನಾಗವಾರದಲ್ಲಿರುವ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಸುದ್ದಿಗೋಷ್ಠಿಯ ನ್ನುದ್ದೇಶಿಸಿ ಅವರು ಮಾತನಾಡಿದರು.
ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಸಮಾವೇಶದಲ್ಲಿ ನೂತನ ಶಿಕ್ಷಣ ನೀತಿ, ಕಾಶ್ಮೀರದಲ್ಲಿನ ಸಮಸ್ಯೆಗಳು, ದೇಶದ ವಿವಿಧ ಭಾಗಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳು, ದೌರ್ಜನ್ಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಅವರು ಹೇಳಿದರು.
ದೇಶದಲ್ಲಿನ ಜನಸಾಮಾನ್ಯರು ಶಾಂತಿ, ಸಹೋದರತೆ ಹಾಗೂ ನೆಮ್ಮದಿಯಿಂದ ಜೀವನಸಾಗಿಸಲು ಬಯಸುತ್ತಾರೆ. ಆದರೆ, ಕೆಲವರು ಸಮಾಜದಲ್ಲಿನ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡಿಕೊಂಡು ಮುಂದುವರಿಯುವ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಅಶ್ರಫ್ ಅಲಿ ತಿಳಿಸಿದರು.
ಮಿಲ್ಲಿ ಕೌನ್ಸಿಲ್‌ನ ರಾಜ್ಯ ಉಪಾಧ್ಯಕ್ಷ ಸುಲೆಮಾನ್‌ಖಾನ್ ಮಾತನಾಡಿ, ಕಲಬುರಗಿಯ ರಂಗ ಮಂದಿರ ಮುಖ್ಯರಸ್ತೆಯಲ್ಲಿರುವ ಗ್ರಾಂಡ್ ಹೊಟೇಲ್‌ನಲ್ಲಿ ಮಾಜಿ ಸಚಿವ ಡಾ.ಖಮರುಲ್ ಇಸ್ಲಾಮ್ ಅಧ್ಯಕ್ಷತೆಯಲ್ಲಿ ಈ ಸಮಾವೇಶ ನಡೆಯಲಿದೆ ಎಂದರು.ತ್ತೀಚೆಗೆ ಕೆಲವು ರಾಜ್ಯಗಳಲ್ಲಿ ನಡೆದಂತಹ ವಿಧಾನಸಭಾ ಚುನಾವಣೆಗಳ ಫಲಿತಾಂಶ, ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಗಳ ಕುರಿತು ಸಮಾವೇಶದಲ್ಲಿ ಚರ್ಚೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಿಲ್ಲಿ ಕೌನ್ಸಿಲ್ ರಾಜ್ಯಾಧ್ಯಕ್ಷ ವೌಲಾನ ಎಜಾಝ್ ಅಹ್ಮದ್ ನದ್ವಿ, ಪ್ರಧಾನ ಕಾರ್ಯದರ್ಶಿ ಸೈಯದ್ ಶಾಹೀದ್ ಅಹ್ಮದ್, ಸಹಾಯಕ ಪ್ರಧಾನ ಕಾರ್ಯದರ್ಶಿ ಜಮೀಲ್ ಅಹ್ಮದ್, ಖಜಾಂಚಿ ಆಸೀಮ್ ಅಫ್ರೋಝ್ ಸೇಠ್ ಉಪಸ್ಥಿತರಿದ್ದರು.