×
Ad

ಮೇಕೆದಾಟು ಯೋಜನೆ ಅನುಷ್ಠಾನ : ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ - ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್

Update: 2016-08-25 19:58 IST

ಬೆಂಗಳೂರು, ಆ. 25: ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಯ ಬಹುನಿರೀಕ್ಷೆಯ 5,900 ಕೋಟಿ ರೂ.ವೆಚ್ಚದ 67ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ‘ಮೇಕೆದಾಟು ಯೋಜನೆ’ ಅನುಷ್ಠಾನ ಸಂಬಂಧ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ತಮ್ಮ ಆಡಳಿತಾವಧಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪಷ್ಟಣೆ ನೀಡಿದರು.
ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ತಮಿಳುನಾಡಿಗೆ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೆ, ಈ ಸಂಬಂಧದ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಿದಾಗಿದ್ದು, ಯಾವುದೇ ರೀತಿಯಲ್ಲಿಯೂ ಈ ಯೋಜನೆಗೆ ಹಣಕಾಸಿನ ಸಮಸ್ಯೆ ಇಲ್ಲ. ಕೆಆರ್‌ಎಸ್‌ನಷ್ಟೇ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಟೀಲ್ ತಿಳಿಸಿದರು.
ಆ.27ಕ್ಕೆ ಮುಖಂಡ ಸಭೆ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆ.27ರಂದು ವಿಧಾನ ಮಂಡಲ ಉಭಯ ಸದನದ ನಾಯಕರು, ಸಂಸದರ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು ಎಂದು ಪಾಟೀಲ್ ಇದೇ ವೇಳೆ ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹಣ ಪ್ರಮಾಣ ಅತಿ ಕಡಿಮೆಯಿದ್ದು, ಜಲಾಶಯದಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಷ್ಟೇ ಮೀಡಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೃಷ್ಣಾ ಮೇಲ್ದಂಡೆ ಮೂರನೆ ಹಂತದ ಯೋಜನೆ ಸೇರಿದಂತೆ ರಾಜ್ಯದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸುಮಾರು 1ಲಕ್ಷ ಕೋಟಿ ರೂ.ಗಳ ಅಗತ್ಯವಿದ್ದು, ಮುಂದಿನ ಎರಡು ಬಜೆಟ್‌ನಲ್ಲಿ ನೀರಾವರಿ ಯೋಜನೆಗೆ ಹೆಚ್ಚು ಹಣ ಮೀಸಲಿಡುವಂತೆ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ಡಂಡೆ ಮೂರನೆ ಹಂತ ಯೋಜನೆ ಹೊರತುಪಡಿಸಿ ಉಳಿದ ಎಲ್ಲ್ಲ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಮುಂಬರುವ ನವೆಂಬರ್ ತಿಂಗಳಲ್ಲಿ ಏಷ್ಯಾದಲ್ಲೇ ಅತಿದೊಡ್ಡ ‘ಹನಿ ನೀರಾವರಿ ಯೋಜನೆ’ಗೆ ಚಾಲನೆ ನೀಡಲಾಗುವುದು ಎಂದ ಅವರು ಮಾಹಿತಿ ನೀಡಿದರು.
 ರಾಜ್ಯದಲ್ಲಿರುವ ಜಲಾಶಯಗಳ ಸುರಕ್ಷತೆಗೆ ಆದ್ಯತಾ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ವಿಶ್ವಬ್ಯಾಂಕ್ ವತಿಯಿಂದ 443 ಕೋಟಿ ರೂ. ನೆರವು ಪಡೆಯಲಾಗಿದೆ ಎಂದ ಅವರು, ಅರ್ಕಾವತಿ ಯೋಜನೆ ಪುನಶ್ಚೇತನಕ್ಕೆ ಕರೆದಿದ್ದ ಅಂತಾರಾಷ್ಟ್ರೀಯ ಟೆಂಡರ್‌ನಲ್ಲಿ ಯಾವುದೇ ಸಂಸ್ಥೆ ಮುಂದೆಬಾರದ ಹಿನ್ನೆಲೆಯಲ್ಲಿ ಇಲಾಖೆ ಮೂಲಕವೆ ಪುನಶ್ಚೇತನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

 ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವ ‘ಎತ್ತಿನಹೊಳೆ ಯೋಜನೆ’ ನಮ್ಮ ಆಡಳಿತಾವಧಿಯಲ್ಲೇ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. 12,912 ಕೋಟಿ ರೂ.ವೆಚ್ಚ ಯೋಜನೆಗೆ ಅನುಮೋದನೆ ನೀಡಿದ್ದು, 3716.51 ಕೋಟಿ ರೂ. ಮೊತ್ತದ ಪ್ರಥಮ ಹಂತದ ಕಾಮಗಾರಿಗಳನ್ನು 5ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈವರೆಗೂ 1741.65 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ಯೋಜನೆಯ ಎರಡನೆ ಹಂತದ ವಿತರಣಾ ಜಾಲದ 50 ಕಿ.ಮೀ ಕಾಲುವೆ ಕಾಮಗಾರಿಯನ್ನು ಶೀಘ್ರದಲ್ಲೆ ಆರಂಭಿಸಲಾಗುವುದು’
-ಎಂ.ಬಿ.ಪಾಟೀಲ್ ಜಲಸಂನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News