ದುಬೈ ಯಲ್ಲಿ ಜೀವಂತ ಕೋಳಿಗಳನ್ನು ಗ್ರೈಂಡ್ ಮಾಡಿ ಚಿಕನ್ ನಗೆಟ್ ಮಾಡಲಾಗುತ್ತಿದೆಯೇ ?

Update: 2016-08-30 06:38 GMT

ನಗೆಟ್ಸ್ ಗಳನ್ನು ತಯಾರಿಸಲು ಜೀವಂತ ಕೋಳಿಯನ್ನು ಗ್ರೈಂಡ್ ಮಾಡಲಾಗುತ್ತಿದೆ ಎನ್ನುವುದನ್ನು ದುಬೈ ಮಹಾನಗರಪಾಲಿಕೆ ನಿರಾಕರಿಸಿದೆ. ವಾಟ್ಸ್‌ಆ್ಯಪ್ ವೀಡಿಯೊವೊಂದು ದುಬೈನಲ್ಲಿ ಜೀವಂತ ಕೋಳಿಗಳನ್ನು ಗ್ರೈಂಡ್ ಮಾಡಿ ಚಿಕನ್ ನಗೆಟ್ಸ್ ಮಾಡಲಾಗುತ್ತಿದೆ ಎಂದು ತೋರಿಸಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ.

ದುಬೈ ಮಹಾನಗರಪಾಲಿಕೆಯ ಆಹಾರ ಸುರಕ್ಷಾ ಇಲಾಖೆಯ ನಿರ್ದೇಶಕರಾಗಿರುವ ಖಾಲಿದ್ ಮುಹಮ್ಮದ್ ಶರೀಫ್ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಅಧಿಕೃತವಲ್ಲ ಎಂದಿದ್ದಾರೆ. ಜಿಸಿಸಿ, ಯುರೋಪಿಯನ್ ಮತ್ತು ಅಮೆರಿಕದ ಕಾನೂನುಗಳು ಮತ್ತು ಪ್ರಾಣಿ ಹಕ್ಕುಗಳ ಅನುಸಾರ ಚಿಕನ್ ನಗೆಟ್ಸ್ ತಯಾರಿಸಲು ಜೀವಂತ ಕೋಳಿಗಳು ಸಣ್ಣದಾಗಿದ್ದರೂ ಅಥವಾ ದೊಡ್ಡದಾಗಿದ್ದರೂ ಸಹ ಬಳಸುವುದು ತಪ್ಪಾಗುತ್ತದೆ ಎಂದೂ ಅವರು ಹೇಳಿದ್ದಾರೆ.

"ವಾಸ್ತವದಲ್ಲಿ ಇಂತಹ ಅನಾರೋಗ್ಯಕರ ಅಭ್ಯಾಸ ಉತ್ತಮವಲ್ಲ. ಏಕೆಂದರೆ ರೆಕ್ಕೆಗಳು, ಒಳಾಂಗಗಳು ಮತ್ತು ಕಾಲುಗಳಂತಹ ಕೆಲವು ಭಾಗಗಳು ದೊಡ್ಡ ಪ್ರಮಾಣದಲ್ಲಿ ಮೈಕ್ರೋಬ್‌ಗಳನ್ನು ಹೊಂದಿರುತ್ತವೆ. ಇವು ಉತ್ಪನ್ನಕ್ಕೆ ಹರಡಿ ಗ್ರಾಹಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಯುಎಇಯ ಸ್ಥಳೀಯ ಕಾರ್ಖಾನೆಗಳಲ್ಲಿ ತಯಾರಿಸಲಾಗಿರುವ ಎಲ್ಲಾ ವಿಧದ ನಗೆಟ್ಸ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಹೀಗಾಗಿ ನಿತ್ಯವೂ ತಪಾಸಣೆಗೆ ಒಳಗಾಗುವ ಆಹಾರ ಸಂಸ್ಥೆಗಳು ಅಂತಹ ವಿಧಾನವನ್ನು ಅನುಸರಿಸಲು ಸಾಧ್ಯವೇ ಇಲ್ಲ" ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. "ಕೋಳಿ ಮಾಂಸವಿಟ್ಟಿರುವ ಜಾಗದಲ್ಲಿ ರೆಕ್ಕೆಗಳನ್ನು ಹರಿದು ಹಾಕಲು ಯಂತ್ರವನ್ನು ಇಟ್ಟಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಮಾಂಸವು ಕೆಂಪು ಬಣ್ಣದಲ್ಲಿದೆ. ರೆಕ್ಕೆ ಅಥವಾ ಇತರ ಅಂಗಾಗದ ಅವಶೇಷಗಳು ಉಳಿದಿರುವುದು ಕಾಣುವುದಿಲ್ಲ. ಜೀವಂತ ಕೋಳಿಯನ್ನು ಗ್ರೈಂಡ್ ಮಾಡಿದಲ್ಲಿ ಉತ್ಪನ್ನದ ಬಣ್ಣ ಬಿಳಿಯಾಗಿರಬೇಕು. ಹಾಗೆಯೇ ಮಾರುಕಟ್ಟೆಯಲ್ಲಿ ಸಿಗುವ ಚಿಕನ್ ನಗೆಟ್‌ಗಳ ಬಣ್ಣವೂ ಬಿಳಿಯಾಗಿರಬೇಕು" ಎಂದು ಶರೀಫ್ ಹೇಳಿದ್ದಾರೆ.

ಆಹಾರ ಮತ್ತು ಸುರಕ್ಷಾ ಇಲಾಖೆಯನ್ನು ಪ್ರತಿನಿಧಿಸುವ ಪಾಲಿಕೆಯು ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಆಹಾರ ಉತ್ಪನ್ನಗಳ ಶಾಶ್ವತ ಮತ್ತು ಉತ್ತಮ ನಿಯಂತ್ರಣ ಹಾಗೂ ಈ ಉತ್ಪನ್ನಗಳ ಸುರಕ್ಷತೆಯೇ ಆದ್ಯತೆಯೆಂದು ತಿಳಿದಿದೆ ಎಂದು ಅವರು ಹೇಳಿದ್ದಾರೆ. ಇದೇ ಕಾರಣದಿಂದ ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ಊಹಾಪೋಹಗಳು ಮತ್ತು ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ದುಬೈ ಪಾಲಿಕೆಯ ಅಧಿಕೃತ ವೆಬ್‌ತಾಣವು ತನ್ನ ಪ್ರತಿಕ್ರಿಯೆಯನ್ನು ಪ್ರಕಟಿಸಿದೆ.

ಕೃಪೆ:www.khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News