ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಅವಹೇಳನ: ಈ ‘ಮಾನಸಿಕ ಅಸ್ವಸ್ಥ’ರಿಗೆ ಹಾಕಬೇಕಿದೆ ಕಡಿವಾಣ

Update: 2016-08-30 16:27 GMT

‘ಜಬ್ಬಾರ್ ಬಿ.ಸಿ.ರೋಡ್‘ ಎಂಬ ಹೆಸರಿನ ಫೇಸ್‌ಬುಕ್ ಐಡಿಯಲ್ಲಿ ಹಿಂದೂ ದೇವರು, ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆದದ್ದನ್ನು ಗಮನಿಸಿದ ಬಂಟ್ವಾಳ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ಸಂಘರ್ಷಕ್ಕೆ ಆಸ್ಪದವಾಗಬಾರದೆಂಬ ಎಸ್ಸೈ ಅವರ ಸಮಯೋಚಿತ ನಿಲುವು ಮತ್ತು ನಡೆ ಸ್ತುತ್ಯರ್ಹ.

ಆದರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾವಿರಾರು ಅಹಿತಕರ ಮೆಸೇಜ್‌ಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಕಳವಳಕಾರಿ ಬೆಳವಣಿಗೆ. ಧರ್ಮ, ಜಾತಿಯ ಮಧ್ಯೆ ವೈಷಮ್ಯ ಉಂಟು ಮಾಡುವ, ಸಂಘರ್ಷಕ್ಕೆ ಎಡೆ ಮಾಡಿಕೊಡುವ, ವ್ಯಂಗ್ಯವಾಗಿ ಚಿತ್ರೀಕರಿಸುವ ‘ಮಾನಸಿಕ ಅಸ್ವಸ್ಥರು’ ಸಮಾಜಕ್ಕೆ ಕಂಟಕರಾಗಿದ್ದಾರೆ. ಇಲ್ಲೊಬ್ಬ ಫೇಕ್ ಜಬ್ಬಾರ್ ಪೊಲೀಸರ ಕಣ್ಣಿಗೆ ಬಿದ್ದರೂ ಇಂತಹ ಧರ್ಮನಿಂದನೆಯ ಮೆಸೇಜ್‌ಗಳು ಜಾತಿ, ಮತ, ಧರ್ಮದ ಎಲ್ಲೆ ಮೀರಿದ ಯುವಕರಿಂದ/ಫೇಕುಗಳಿಂದ ನಿರಂತರವಾಗಿ ಹರಿದು ಬರುತ್ತಿದೆ. ಬಂಟ್ವಾಳ ಎಸ್ಸೈಯ ಮುನ್ನೆಚ್ಚರಿಕೆಯ ನಡೆಯಂತೆ ಎಲ್ಲರೂ ಎಲ್ಲೆಡೆಯೂ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳ ಟ್ರೆಂಡ್ ಬೆಳೆದ ಬಳಿಕ ಹೀಯಾಳಿಸುವ, ಗಾಳಿಸುದ್ದಿ ಹಬ್ಬಿಸುವ, ಮಾನಸಿಕ ಕಿರುಕುಳ ನೀಡುವ ‘ಮಾನಸಿಕ ಅಸ್ವಸ್ಥ’ರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಜಾತಿ, ಧರ್ಮ ಎಂಬುವುದಿಲ್ಲ. ಇದು ಅವರದ್ದೇ ಆದ ಸ್ವಧರ್ಮ ಸಾಮ್ರಾಜ್ಯ. ಈ ಸಾಮ್ರಾಜ್ಯಕ್ಕೆ ಕಡಿವಾಣ ಹಾಕಿದರೆ ನೆಮ್ಮದಿ ಸಿಗಬಹುದು.

ಯಾವುದೇ ಧರ್ಮವು ಇನ್ನೊಂದು ಧರ್ಮ, ಜಾತಿ, ವ್ಯಕ್ತಿಯನ್ನು ದೂಷಿಸಿ ಅಂತ ಹೇಳಿಲ್ಲ. ಇತರರ ಜೊತೆ ಸಹೋದರತೆಯಿಂದ, ಅನ್ಯೋನ್ಯತೆಯಿಂದ ಬಾಳಿರಿ ಎಂದು ಕಲಿಸಿಕೊಟ್ಟಿದೆ. ಭಗವದ್ಗೀತೆಯ ‘ಸರ್ವೇ ಜನಾಃ ಸುಖಿನೋ ಭವಂತು‘ ಎಂಬ ಸಾರದಲ್ಲಿ ಕೇವಲ ಹಿಂದೂಗಳು ಸುಖವಾಗಿರಲಿ ಎಂದು ಹೇಳಿಲ್ಲ. ಸರ್ವರೂ ನೆಮ್ಮದಿಯಿಂದಿರಲಿ ಎಂಬ ಆಶಯವಿದೆ. ಪ್ರವಾದಿ ಮಹಮ್ಮದ್ (ಸ.ಅ.) ಅವರು ‘ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ’ ಎಂದಿದ್ದಾರೆ. ನೆರೆಮನೆಯ ಮುಸ್ಲಿಮನು ಮಾತ್ರ ಎಂದು ಅವರು ಹೇಳಿಲ್ಲ. ಬೈಬಲ್ ‘ಎಲ್ಲೆಡೆ ಶಾಂತಿ ನೆಲೆಸಲಿ’ ಎಂದು ಆಶಿಸುತ್ತದೆಯೇ ಹೊರತು ಕೇವಲ ಕ್ರೈಸ್ತರಿರುವಲ್ಲಿ ಮಾತ್ರ ಶಾಂತಿ ಬೇಕು ಅಂತ ಕೇಳಿಕೊಂಡಿಲ್ಲ. ಈ ಎಲ್ಲಾ ಧರ್ಮಗಳ ಒಟ್ಟು ಸಾರವೇನೆಂದರೆ ಸಾಮರಸ್ಯದ, ಐಕ್ಯತೆಯ ಜೀವನ ನಮ್ಮದಾಗಬೇಕೆಂಬುದು.

ನಾನೊಬ್ಬ ಮುಸ್ಲಿಂ ಧರ್ಮದವ. ಇದರಲ್ಲಿ ಎರಡು ಮಾತಿಲ್ಲ. ನನಗೆ ಇಸ್ಲಾಂ ಶ್ರೇಷ್ಠವೇ. ಅದು ನನ್ನ ಮನ, ಮನೆ, ಮಂದಿರದಲ್ಲಿರಬೇಕೇ ವಿನಃ ಬೀದಿಗೆ ತರುವುದು ತಪ್ಪು. ಆದರೆ ನಾನು ಸಹೋದರ ಧರ್ಮದ ಆಚಾರ, ವಿಚಾರಗಳನ್ನು ಗೌರವಿಸುವ ಮುಸ್ಲಿಮನಾಗಿದ್ದೇನೆ. ಅದು ನನಗೆ ಇಸ್ಲಾಂ ಧರ್ಮ ಕಲಿಸಿಕೊಟ್ಟ ಪಾಠ. ನನ್ನ ಗುರುಗಳು, ಹೆತ್ತವರು ಇದನ್ನೇ ಹೇಳಿದ್ದಾರೆ ಕೂಡಾ. ಆದ್ದರಿಂದ ‘ಮಾನಸಿಕ ಅಸ್ವಸ್ಥ ಧರ್ಮ’ದ ವಾದವನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಮತ್ತು ಖಂಡಿಸುತ್ತೇನೆ. ಅಂತಹವರನ್ನು ನಾವು ಹೆಸರು ನೋಡಿ ಆ ಧರ್ಮದ ಅಥವಾ ಜಾತಿಯ ವ್ಯಕ್ತಿಯೆಂದು ತಿಳಿಯುವುದು ಕೂಡಾ ಸರಿಯಲ್ಲ.

ರಶೀದ್ ವಿಟ್ಲ

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News