ಸ್ಥಳಾಂತರಿಸಬಲ್ಲ ಮನೆ ನಿರ್ಮಿಸಿದ ಶಾಹುಲ್ ಹಮೀದ್!

Update: 2016-09-01 17:46 GMT

ರಾಫ್ಟ್ ಫೌಂಡೇಶನ್ ತಂತ್ರಜ್ಞಾನವನ್ನು ಬಳಸಿ ಸ್ಥಳಾಂತರಿಸಬಲ್ಲ ಮನೆ ಕಟ್ಟುತ್ತೇನೆ ಎಂದು 65 ವರ್ಷದ ಎಂ ಶಾಹುಲ್ ಹಮೀದ್ ಹೊರಟಾಗ ಅವರ ಕುಟುಂಬವೇ ವಿರೋಧಿಸಿತ್ತು. ಬಹಳಷ್ಟು ಮಂದಿ ಅವರು ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ ಎಂದೇ ತಿಳಿದಿದ್ದರು. ಐದನೇ ತರಗತಿ ಡ್ರಾಪ್ ಔಟ್ ಆಗಿರುವ ತಿರುಪುಲನಿಯ ಮೇಲಾಪುದುವಕ್ಕುಡಿಯ ಹಮೀದ್ ಸೌದಿ ಅರೇಬಿಯದಲ್ಲಿ ಎರಡು ದಶಕಗಳ ಕಾಲ ಕಟ್ಟಡ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡಿ ಪ್ರಿ-ಫ್ಯಾಬ್ರಿಕೇಟೆಡ್ (ಮೊದಲೇ ಸಿದ್ಧಪಡಿಸಿದ) ಕಟ್ಟಡಗಳು ಮತ್ತು ವಿವಿಧ ಫೌಂಡೇಶನ್ ತಂತ್ರಜ್ಞಾನಗಳನ್ನು ಬಳಸಿ ಮನೆ ಕಟ್ಟುವುದನ್ನು ಕಲಿತಿದ್ದರು. ಅವರು ಕೆಲ ವರ್ಷಗಳ ಹಿಂದೆ ತವರಿಗೆ ವಾಪಾಸಾದಾಗ ದೃಢವಾದ ಫೌಂಡೇಶನ್ ತಂತ್ರಜ್ಞಾನವಿರುವ ಮನೆ ಕಟ್ಟಲು ಬಯಸಿದ್ದರು. ಆದರೆ ಅವರ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರು ಇದಕ್ಕೆ ತೀವ್ರವಾಗಿ ವಿರೋಧಿಸಿದ್ದರು. ಬಹಳಷ್ಟು ಮಂದಿ ಈ ಮನೆ ಬೀಳಲಿದೆ ಎಂದು ಹೇಳಿದರೂ ತಮ್ಮ ರೂ.25 ಲಕ್ಷ ಯೋಜನೆಯಿಂದ ಅವರು ಹಿಂದೆ ಸರಿಯಲಿಲ್ಲ.

ಈಗ ಮೇಲಾಪುದುವಕ್ಕುಡಿಯಲ್ಲಿ 1,080 ಚದರ ಅಡಿಯ ನೆಲ ಮತ್ತು ಮೊದಲ ಮಹಡಿಯ ಮನೆ ದೃಢವಾಗಿ ನಿಂತಿದೆ. ಆರು ವರ್ಷಗಳ ಹಿಂದೆ 1,000ದಷ್ಟು ಚದರ ಅಡಿಯ 90 ಸೆಂ.ಮೀ ದಪ್ಪದ ಕಾಂಕ್ರೀಟ್ ಸ್ಲಾಬನ್ನು ಹಾಕಿ ಅದರಲ್ಲಿ ಮನೆಯ ಮುಖ್ಯ ಭಾಗಕ್ಕೆ ಕಂಬಗಳನ್ನು ನಿರ್ಮಿಸಿದಾಗ ಗ್ರಾಮಸ್ಥರು ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದೇ ಟೀಕಿಸಿದ್ದರು. "ಆದರೆ ನಾನು ಅವರ ಟೀಕೆಗೆ ಉತ್ತರಿಸಿದ್ದೇನೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ ಹಮೀದ್. ಅವರ ಪತ್ನಿ ಮತ್ತು ಮಕ್ಕಳಿಗೂ ಈ ಯೋಜನೆಯಲ್ಲಿ ನಂಬಿಕೆಯಿರಲಿಲ್ಲ. ಸ್ವತಃ ಇಂಜಿನಿಯರ್ ಆಗಿರುವ ಮೂವರು ಮಕ್ಕಳು ವಿರೋಧ ವ್ಯಕ್ತಪಡಿಸಿದಾಗಲೂ ಹಮೀದ್ ಜಗ್ಗಲಿಲ್ಲ. "ಕಟ್ಟಡ ಗಟ್ಟಿಯಾಗಿ ನಿಲ್ಲುವುದೇ ನಮಗೆ ಸಂಶಯವಾಗಿತ್ತು. ಆದರೆ ನನ್ನ ಪತಿ ಅದು ದೃಢವಾಗಿರುತ್ತದೆ" ಎಂದಿದ್ದರು. ಈಗ ಅದು ನಿಜಕ್ಕೂ ಸದೃಢವಾಗಿದೆ ಎಂದು ಪತ್ನಿ ಸರಿಗತುಲ್ ಬೇಗಂ ಅಭಿಪ್ರಾಯಪಡುತ್ತಾರೆ. ನಂತರ ಹಮೀದ್ ತಮ್ಮ ಮನೆಯ ಪಕ್ಕವೇ ಮತ್ತೊಂದು ಮನೆಯನ್ನು ಕುಟುಂಬದ ಒಪ್ಪಿಗೆಯ ಮೇರೆಗೆ ಅದೇ ತಂತ್ರಜ್ಞಾನದಲ್ಲಿ ಕಟ್ಟಿದರು. ನೆಲ ಮಹಡಿಯಲ್ಲಿ ಮೂರು ಮಲಗುವ ಕೋಣೆ ಮತ್ತು ಮೊದಲ ಮಹಡಿಯಲ್ಲಿ ಎರಡು ಕೋಣೆಗಳಿರುವ ಈ ಮನೆಯನ್ನು ಸ್ಲಾಬ್ ಅಡಿಯಲ್ಲಿ ಕಬ್ಬಿಣದ ರೋಲರ್‌ಗಳನ್ನು ಬಳಸಿ ಅತ್ತಿತ್ತ ಸರಿಸಬಹುದು. ಆದರೆ ಅದನ್ನು ಸರಿಸುವ ಉದ್ದೇಶದಿಂದ ಏನೂ ಅವರು ಮನೆ ಕಟ್ಟಿಲ್ಲ. ಏನೋ ಹೊಸದನ್ನು ನಿರ್ಮಿಸುವ ಉದ್ದೇಶದಿಂದ ಚಲಿಸುವ ಮನೆ ನಿರ್ಮಿಸಿದ್ದಾರೆ. ಈ ತಂತ್ರಜ್ಞಾನವು ಮರಳಿನಿಂದ ಕೂಡಿದ ಭಾಗಗಳಿಗೆ ಸೂಕ್ತವಾಗಿದ್ದು, ಆಸಕ್ತರೊಂದಿಗೆ ಹಂಚಿಕೊಳ್ಳಲೂ ಅವರು ಸಿದ್ಧರಿದ್ದಾರೆ. ಹಮೀದ್ ಅವರು ತಮ್ಮ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆಗೆ ಈ ಹೊಸ ತಂತ್ರಜ್ಞಾನದ ಬಗ್ಗೆ ಚರ್ಚಿಸಿದ್ದಾರೆ. ಮದುರೈ, ದೇವಕೊಟ್ಟೈ, ರಾಮೇಶ್ವರಂ ಮತ್ತು ಇತರ ಸ್ಥಳಗಳ ಇಂಜಿನಿಯರ್‌ಗಳು ಅವರ ಮನೆಗೆ ಭೇಟಿ ನೀಡಿ ಈ ಹೊಸ ರೀತಿಯ ವಿನ್ಯಾಸವನ್ನು ಕೊಂಡಾಡಿದ್ದಾರೆ. ಇಂತಹುದೇ ತಂತ್ರಜ್ಞಾನ ಬಳಸಿ ತಿರುಗಿಸಬಲ್ಲ ಮನೆಗಳನ್ನು ಕಟ್ಟಬಹುದು. ಆದರೆ ಶಾಲಾ ಡ್ರಾಪ್ ಔಟ್ ಆಗಿರುವ ಕಾರಣ ತಮ್ಮ ಕಲ್ಪನೆಗಳಿಗೆ ಜನರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಹಮೀದ್ ಬೇಸರದ ಮಾತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News