ರ‍್ಯಾಗಿಂಗ್ ನಲ್ಲಿ ಯಾವ ರಾಜ್ಯಕ್ಕೆ ಯಾವ ಸ್ಥಾನ ?
ಬೆಂಗಳೂರು, ಸೆ.2: ರಾಷ್ಟ್ರೀಯ ರ‍್ಯಾಗಿಂಗ್ ವಿರೋಧಿ ಸಹಾಯವಾಣಿಯಲ್ಲಿ ದಾಖಲಾದ ದೂರುಗಳ ಆಧಾರದಲ್ಲಿ ಕರ್ನಾಟಕ ಅತೀ ಹೆಚ್ಚು ರ‍್ಯಾಗಿಂಗ್ ಘಟನೆಗಳು ನಡೆದ ಹತ್ತು ರಾಜ್ಯಗಳಲ್ಲಿ ಒಂದಾಗಿದೆ.
ರಾಜ್ಯದಲ್ಲಿ 2009 ರಿಂದ ಒಟ್ಟು 141 ರ‍್ಯಾಗಿಂಗ್ ಪ್ರಕರಣಗಳು ದಾಖಲಾಗಿವೆ. ಆತಂಕಕಾರಿ ಅಂಶವೆಂದರೆ ವರ್ಷ ಕಳೆದಂತೆ ರಾಜ್ಯದಲ್ಲಿ ರ‍್ಯಾಗಿಂಗ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 2009ರಲ್ಲಿ 18 ರ‍್ಯಾಗಿಂಗ್ ಪ್ರಕರಣಗಳು ದಾಖಲಾಗಿದ್ದರೆ, 2013 ರಲ್ಲಿ 23, 2014 ರಲ್ಲಿ 20 ಹಾಗೂ 2015 ರಲ್ಲಿ 23 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇಲ್ಲಿಯ ತನಕ 15 ಪ್ರಕರಣಗಳು ವರದಿಯಾಗಿವೆಯೆಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ದೇಶದಾದ್ಯಂತ 3,639 ರ‍್ಯಾಗಿಂಗ್ ಬಗೆಗಿನ ದೂರುಗಳು ದಾಖಲಾಗಿದ್ದು 2013 ರಲ್ಲಿ ಅತೀ ಹೆಚ್ಚು ಪ್ರಕರಣಗಳು (640) ದಾಖಲಾಗಿವೆ. ಈ ವರ್ಷ 301 ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿಯೇ ಅತ್ಯಧಿಕ ರ‍್ಯಾಗಿಂಗ್ ಪ್ರಕರಣಗಳು ಉತ್ತರ ಪ್ರದೇಶದಲ್ಲಿ (646) ದಾಖಲಾಗಿದ್ದರೆ, ನಂತರದ ಸ್ಥಾನಗಳು ಪಶ್ಚಿಮ ಬಂಗಾಳ (444), ಮಧ್ಯ ಪ್ರದೇಶ (382), ಒಡಿಶಾ (321), ಮಹಾರಾಷ್ಟ್ರ (201) ರಾಜ್ಯಕ್ಕೆ ಹೋಗಿವೆ.
ಈ ವರ್ಷದಲ್ಲಿ ದಾಖಲಾದ ರ‍್ಯಾಗಿಂಗ್ ದೂರುಗಳನ್ನು ಪರಿಶೀಲಿಸಿದರೆ ಕರ್ನಾಟಕ ಏಳನೆ ಸ್ಥಾನದಲ್ಲಿದೆ. ಉತ್ತರ ಪ್ರದೇಶದಿಂದ 47 ಪ್ರಕರಣಗಳು ವರದಿಯಾಗಿದ್ದು ಅದು ಪ್ರಥಮ ಸ್ಥಾನದಲ್ಲಿದ್ದರೆ, ಮಧ್ಯ ಪ್ರದೇಶ 38 ಪ್ರಕರಣಗಳೊಂದಿಗೆ ಎರಡನೆ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಹೆಚ್ಚಿನ ರ‍್ಯಾಗಿಂಗ್ ಪ್ರಕರಣಗಳು ಹುಡುಗರಿಗೆ ಸಂಬಂಧ ಪಟ್ಟಿದ್ದಾಗಿದೆ. ಡಿಸೆಂಬರ್ 2015 ರ ತನಕ 116 ಪ್ರಕರಣಗಳು ಹುಡುಗರಿಗೆ ಸಂಬಂಧ ಪಟ್ಟಿದ್ದಾಗಿದ್ದರೆ, 10 ಪ್ರಕರಣಗಳು ಹುಡುಗಿಯರಿಗೆ ಸಂಬಂಧ ಪಟ್ಟಿದ್ದಾಗಿದೆ. ಈ ವರ್ಷ ದಾಖಲಾದ ಪ್ರಕರಣಗಳಲ್ಲಿ 12 ಹುಡುಗರಿಗೆ ಹಾಗೂ ಮೂರು ಹುಡುಗಿಯರಿಗೆ ಸಂಬಂಧ ಪಟ್ಟ ಪ್ರಕರಣಗಳಾಗಿವೆ. ರಾಷ್ಟ್ರೀಯ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಡಿಸೆಂಬರ್ 2015 ರ ತನಕ ಒಟ್ಟು 2,969 ಹುಡುಗರು ರ‍್ಯಾಗಿಂಗ್ನಿಂದ ಬಾಧಿತರಾಗಿದ್ದರೆ, ಈ ವರ್ಷ ಈ ಸಂಖ್ಯೆ 264 ಆಗಿದೆ.